ಉದ್ಯೋಗಕ್ಕಾಗಿ ಭೂ ಹಗರಣ; ಬಿಹಾರ ಮಾಜಿ ಸಿಎಂ ರಾಬ್ರಿ ದೇವಿ ನಿವಾಸದ ಮೇಲೆ ಸಿಬಿಐ ದಾಳಿ

ಪಾಟ್ನಾ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದ ಹಾಲಿ ಶಾಸಕಿ ರಾಬ್ರಿ ದೇವಿ ನಿವಾಸದ ಮೇಲೆ ದಾಳಿ ನಡೆಸಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಮಾಜಿ ರೈಲ್ವೆ ಸಚಿವ ಹಾಗೂ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪತ್ನಿ ರಾಬ್ರಿ ದೇವಿ ಮತ್ತು ಮಗಳು ಮಿಸಾ ಅವರಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಪಾಟ್ನಾ, ಗೋಪಾಲ್‌ ಗಂಜ್ ಮತ್ತು ದೆಹಲಿಯ 13 ಕಡೆ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರ್ಬಳಕೆ ನಿಲ್ಲಿಸಿ; ಪ್ರಧಾನಿ ಮೋದಿಗೆ 8 ಪಕ್ಷಗಳ ಮುಖಂಡರ ಪತ್ರ

ಸಿಬಿಐ ಸಂಸ್ಥೆಯು ದಾಖಲಿಸಿರುವ ಪ್ರಕರಣದಲ್ಲಿ ಲಾಲು ಪ್ರಸಾದ್, ರಾಬ್ಡಿ ದೇವಿ, ಮಿಸಾ ಯಾದವ್, ಹೇಮಾ ಯಾದವ್ ಮತ್ತು ಕೆಲವು ಅಭ್ಯರ್ಥಿಗಳನ್ನು ಆರೋಪಿಗಳಾಗಿ ಹೆಸರಿಸಿದೆ. ಬಿಹಾರದ ವಿವಿಧ ಭಾಗಗಳಲ್ಲಿ ಆಸ್ತಿಗಳನ್ನು ಹೊಂದಿರುವ ಲಾಲು ಪ್ರಸಾದ್‌ ಯಾದವ್ ಕುಟುಂಬಕ್ಕೆ ಸೇರಿರುವ ಕಂಪನಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿವೆ ಎಂದು ಉಲ್ಲೇಖಿಸಲಾಗಿದೆ.

ಲಾಲು ಪ್ರಸಾದ್ ಯಾದವ್ ಅವರು 2004 ಮತ್ತು 2009 ರ ವರೆಗೆ ರೈಲ್ವೆ ಸಚಿವರಾಗಿದ್ದಾಗ ತಮ್ಮ ಕುಟುಂಬಕ್ಕೆ ಜಮೀನನ್ನು ಉಡುಗೊರೆಯಾಗಿ ನೀಡಿದವರು ಅಥವಾ ಮಾರಾಟ ಮಾಡಿದ ಕುಟುಂಬಗಳಿಗೆ ರೈಲ್ವೇಯಲ್ಲಿ ಉದ್ಯೋಗ ನೀಡಿದ್ದರು ಎಂದು ಆರೋಪದ ಪ್ರಕರಣ ಇದಾಗಿದೆ.  ರಾಬ್ರಿ ದೇವಿ, ಲಾಲು ಪ್ರಸಾದ್ ಯಾದವ್ ಮತ್ತು ಇತರ 14 ಮಂದಿಯೊಂದಿಗೆ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.

ಫೆಬ್ರವರಿ 27 ರಂದು ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಇತರ 14 ಜನರಿಗೆ ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಸಮನ್ಸ್ ನೀಡಿತ್ತು.

ಇದನ್ನು ಓದಿ: ಲಾಲೂ ಪ್ರಸಾದ್‌ ಯಾದವ್‌ ಗೆ ಜಾಮೀನು

ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಕೂಡ ಸಿಬಿಐ ದಾಳಿ ನಡೆಯುತ್ತಿರುವುದರಿಂದ ರಾಬ್ರಿ ದೇವಿ ನಿವಾಸದತ್ತ ತೆರಳಿದ್ದಾರೆ.

ಮೇವು ಹಗರಣದ ಇತರ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಈಗಾಗಲೇ ಆರೋಪಿಯಾಗಿದ್ದು, ಐದನೇ ಮತ್ತು ಅಂತಿಮ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಲಾಲು ಪ್ರಸಾದ್ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ಮತ್ತು ಒಟ್ಟು 60 ಲಕ್ಷ ರೂ.ದಂಡ ವಿಧಿಸಲಾಗಿತ್ತು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *