ಬೆಂಗಳೂರು: ಸಮಾಜಮುಖಿ ರಂಗಬಳಗ ಅರ್ಪಿಸುವ ಜಯರಾಮ್ ರಾಯಪುರ ನಾಟಕೋತ್ಸವ ಮಾರ್ಚ್ 6 ರಿಂದ 8ರ ವರೆಗೆ ನಡೆಯಲಿದೆ. ಮೂರು ದಿನ ಮೂರು ನಾಟಕಗಳ ಪ್ರದರ್ಶನವಿದ್ದು, ನಗರದ ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗ ಮಂದಿರದಲ್ಲಿ ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದೆ.
ನಾಟಕೋತ್ಸವವನ್ನು ಮಾರ್ಚ್ 6ರಂದು ಸಂಜೆ 6.30ಕ್ಕೆ ಪ್ರೊ. ಹಂಪನಾ ಅವರು ಉದ್ಘಾಟಿಸಲಿದ್ದು, ಹಿರಿಯ ರಂಗ ಸಂಘಟಕ ಶ್ರೀನಿವಾಸ್ ಜಿ ಕಪ್ಪಣ್ಣ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಹಾಗೂ ನಾಟಕಕಾರ ಜಯರಾಮ್ ರಾಯಪುರ ಭಾಗವಹಿಸಿದ್ದಾರೆ.
ಇದನ್ನು ಓದಿ: 19.20.21. ಬರೀ ಸಂಖ್ಯೆಯಲ್ಲ… ಅದು ಸಂವಿಧಾನದ ವಿಧಿ
ಜಯರಾಮ್ ರಾಯಪುರ
ಬೆಂಗಳೂರು ಮಹಾನಗರ ಪಾಲಿಕೆಯ ಹಣಕಾಸು ಆಯುಕ್ತರಾಗಿ ಹಾಗೂ ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯರಾಮ್ ರಾಯಪುರ ತಮ್ಮ ಕಾಲೇಜು ದಿನಗಳಿಂದಲೇ ನಾಟಕ ರಂಗದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಚಾರಿತ್ರಿಕ ವಸ್ತುಗಳನ್ನು ತಮ್ಮ ನಾಟಕಗಳ ಮೂಲಕ ವಿಶ್ಲೇಷಿಸಲು ಪ್ರಯತ್ನಿಸುವ ಇವರು ಸಿರಿಗೆ ಸೆರೆ, ವಾರಸುದಾರಾ ಹಾಗೂ ಚಾವುಂಡರಾಯ ನಾಟಕಗಳನ್ನು ಬರೆದಿದ್ದಾರೆ.
ಕನ್ನಡದ ಸಂದರ್ಭದಲ್ಲಿ ಐತಿಹಾಸಿಕ ವಸ್ತುಗಳನ್ನು ಹೊಸ ನೆಲೆಯಲ್ಲಿ ಅರ್ಥೈಸುವ ಪ್ರಯತ್ನದಲ್ಲಿ ಈ ನಾಟಕಗಳು ಮಹತ್ವವನ್ನು ಪಡೆದಿವೆ.
ಇದನ್ನು ಓದಿ: ಫೆ.19ರಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ; 4ದಿನ – 4ವೇದಿಕೆ – 6ನಾಟಕ – 5ಕಿರುಚಿತ್ರ – 5ಕಾರ್ಯಕ್ರಮ
ಮಾರ್ಚ್ 6ರಂದು ʻಚಾವುಂಡರಾಯʼ
ಸಮಾಜಮುಖಿ ರಂಗ ಬಳಗ ಪ್ರಸ್ತುತ ಪಡಿಸುವ ಚಾವುಂಡರಾಯ ನಾಟಕವನ್ನು ರಂಗಾಯಣ ಕಲಾವಿದ ಹುಲುಗಪ್ಪ ಕಟ್ಟೀಮನಿ ನಿರ್ದೇಶಿಸಿದ್ದಾರೆ. ಚಾವುಂಡರಾಯ ನಾಟಕ ಗಂಗರಸರ ಕಡೆಗಾಲದ ಹೃದ್ಯ ಚಿತ್ರಣವಿರುವ ಐತಿಹಾಸಿಕ ನಾಟಕವಾಗಿದೆ. ಚಾವುಂಡರಾಯ ಮಹಾರಾಜ ಮಾರಸಿಂಹನ ಸೇನಾಧಿಪತಿ, ಮುಖ್ಯ ಸಚಿವ, ನಿಷ್ಠಾವಂತ ಪ್ರಾಣಮಿತ್ರ. ಅಧಿಕಾರಕ್ಕಾಗಿ ಆದರ್ಶ ಜೀವನ ದೊಡ್ಡದೆಂದು ಬಾಳಿದವನು. ಚಾವುಂಡರಾಯ ತನ್ನ ಅಂತರಂಗದ ಕರೆಗೆ ಓಗೊಟ್ಟು ಲೌಕಿಕದಿಂದ ಬಿಡುಗಡೆಯತ್ತ ಹೆಜ್ಜೆ ಹಾಕುತ್ತಾನೆ. ಭಾವನಾತ್ಮಕ ಬೆಸುಗೆಯಿಂದ ಬಿಡಿಸಿಕೊಂಡು ವಸ್ತುನಿಷ್ಠವಾಗಿ ಹಾಗೂ ಇತಿಹಾಸದ ಔಕಟ್ಟಿಗೆ ಎರವಾಗದಂತೆ ರಚಿತವಾಗಿರುವ ನಾಟಕವಿದು.
ಮಾರ್ಚ್ 7ರಂದು ʻ ಸಿರಿಗೆ ಸೆರೆʼ
ಜನದನಿ ರಂಗತಂಡದಿಂದ ಪ್ರಸ್ತುತ ಪಡಿಸುವ ಸಿರಿಗೆ ಸೆರೆ ನಾಟಕವನ್ನು ಅಜಯ್ ನೀನಾಸಂ(ಶಿವಮೊಗ್ಗ) ನಿರ್ದೇಶನ ಮಾಡಿದ್ದಾರೆ. ಸಿರಿಗೆ ಸೆರೆ ನಾಟಕ ಕೆಂಪೇಗೌಡರ ಜೀವನ ಗಾಥೆ. ಹಾಗೆಯೇ ವಿಜಯನಗರದ ಪತನದ ಕಥೆಯೂ ಆಗಿದೆ. ಸ್ವಂತ ಕಾಲ ಮೇಲೆ ನಿಂತು ಪ್ರಜಾನುರಾಗಿಯಾದ ಮಾಂಡಳಿಕನೊಬ್ಬ ಆದರ್ಶ ರಾಜ್ಯ ಕಟ್ಟಬಯಸಿ, ದೊರೆಯ ದೌರ್ಜನ್ಯದ ಮುಂದೆ ನಿಲ್ಲಲಾಗದೆ ತನ್ನ ಆದರ್ಶಗಳಿಗೆ ತಾನೇ ಎರವಾದವನ ಕಥೆ. ಬದುಕಿನ ನಂಬಿಕೆ ನಿಷ್ಠೆ ತ್ಯಾಗಗಳಲ್ಲಿ ನೆಮ್ಮದಿ ಕಾಣುವ ಮಾಂಡಳಿಕ ರಾಜ್ಯದ ಸಂಸ್ಕೃತಿಯನ್ನು ಹೇಳುವ ನಾಟಕವಿದು.
ಇದನ್ನು ಓದಿ: ಸತ್ಯು ಸಂಭ್ರಮ
ಮಾರ್ಚ್ 8ರಂದು ʻವಾರಸುದಾರಾʼ
ಮೈಸೂರಿನ ನಿರಂತರ ರಂಗ ತಂಡದಿಂದ ಪ್ರಸ್ತುತ ಪಡಿಸುವ ವಾರಸುದಾರಾ ನಾಟಕವನ್ನು ಪ್ರಸಾದ್ ಕುಂದೂರು ಅವರು ನಿರ್ದೇಶನ ಮಾಡಿದ್ದಾರೆ. ಮೊಘಲರು, ಮೌರ್ಯರ ನಂತರ ಅಖಂಡ ಹಿಂದುಸ್ತಾನವನ್ನು ಆಳಿದವರು. ಸರ್ವ ಧರ್ಮಗಳ ಗೌರವಿಸಿ ಪೊರೆಯುವ ಅಕ್ಬರ್ ನ ಧಾರ್ಮಿಕ ಮತ್ತು ರಾಜಕೀಯ ಚಿಂತನೆಗಳು ಶಹಜಹಾನ್ ಮತ್ತು ಅವನ ಅತ್ಯಂತ ಪ್ರೀತಿಯ ಹಿರಿಯ ಮಗ ದಾರಶಿಕೋನ ಮರಣದಲ್ಲಿ ಪರ್ಯಾವಸನಗೊಳ್ಳುತ್ತದೆ. ಶಹಜಹಾನನ ನಾಲ್ಕು ಮಕ್ಕಳಾದ ದಾರಶಿಕೋ, ಮುರಾದ್, ಶೂಜ, ಔರಂಗಜೇಬನಿಗೆ ಮೊಘಲ್ ಹಾಗೂ ಹಿಂದುಸ್ತಾನದ ಬಾದಶಹ ಆಗಬೇಕಾದರೆ ತಮ್ಮ ಅಣ್ಣ ತಮ್ಮಂದಿರನ್ನೇ ಕೊಂದು ಗಾದಿ ಹಿಡಿಯಬೇಕು. ಇಲ್ಲವಾದರೆ ಪ್ರಾಣ ಕಳೆದುಕೊಂಡು ಪಟ್ಟ ಏರುವವನಿಗೆ ಮೆಟ್ಟಿಲಾಗಬೇಕು. ಹೀಗೆ ಮೊಘಲ್ ಸುಲ್ತಾನತ್ತಿಗಾಗಿ ನಡೆದ ರೋಚಕ ಕಾಳಗದ ಕಥನದ ನಾಟಕವಿದು.
ಸಮಾಜಮುಖಿ ರಂಗ ಬಳಗ
ʻಅನ್ನದ ಭಾಷೆಯ ಚಿನ್ನದ ಮಾಸಿಕ-ಚಿಂತನಶೀಲ ಸಮಾಜಮುಖಿʼ – ʻಸಮಾಜಮುಖಿ ರಂಗಬಳಗʼಕ್ಕೆ ಅಸ್ತಿತ್ವ ನೀಡಿ ಕನ್ನಡ ರಂಗಭೂಮಿಯಲ್ಲಿ ಹೊಸತನದ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಿದೆ. ರಂಗಾಯಣದ ಹಿರಿಯ ಕಲಾವಿದ, ನಿರ್ದೇಶಕ ಹುಲುಗಪ್ಪ ಕಟ್ಟಿಮನಿ ಅವರನ್ನು ಆಹ್ವಾನಿಸಿ ʻರಸಾಭಿಜ್ಞಾನʼ ಎಂಬ ವಿಶೇಷ ರಂಗತರಬೇತಿ ಶಿಬಿರವನ್ನು ಆಯೋಜಿಸಿ, ಪ್ರದರ್ಶನ ನೀಡಿತು.
ನಂತರ ಕವಿ, ನಾಟಕಕಾರ ಎಚ್.ಎಸ್. ಶಿವಪ್ರಕಾಶ್ ರಚಿಸಿ, ನಿರ್ದೇಶಿಸಿದ್ದ ʻಕಸಾಂದ್ರʼ ನಾಟಕವನ್ನು ಪ್ರದರ್ಶಿಸಿದೆ. ಇತ್ತೀಚಿಗೆ ಕೆ.ವಿ.ತಿರುಮಲೇಶ್ ಅವರ ʻಪೆಂಟಯ್ಯನ ಅಂಗಿʼ ಕಥನ ಕವನ ಹಾಗೂ ನಿಕೊಲಾಯ್ ಗೊಗೊಲ್ ಅವರ ʻಓವರ್ಕೋಟ್ʼ ಕಥೆಯನ್ನು ಆಧರಿಸಿದ ʻಬಿಳಿಅಂಗಿ-ಓವರ್ ಕೋಟುʼ ನಾಟಕವನ್ನು ಯುವ ನಿರ್ದೇಶಕ ನಿರಂಜನ ಖಾಲಿಕೊಡ ಅವರ ನಿರ್ದೇಶನದಲ್ಲಿ ಪ್ರದರ್ಶಿನ ಕಂಡಿದೆ. ಪ್ರಸ್ತುತ ಜಯರಾಮ್ ರಾಯಪುರ ಅವರ ಮೂರು ನಾಟಕಗಳ ಉತ್ಸವವನ್ನು ನಡೆಸಲು ಸಜ್ಜಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ