ಬೆಳಗಾವಿ: ಕರ್ನಾಟಕ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದ್ದು, ಇದೀಗ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಸಮಾವೇಶ ನಡೆಸುತ್ತಿದೆ. ಈ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಡಿರುವ ಮಾತು ವೈರಲ್ ಆಗಿದ್ದು, ಪ್ರತಿಯೊಬ್ಬರಿಗೆ 500 ರೂಪಾಯಿ ಕೊಟ್ಟು ಕರ್ಕೊಂಡು ಬನ್ನಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಮಾರ್ಚ್ 1ರಂದು ಬೆಳಗಾವಿ ಜಿಲ್ಲೆಯ ಬೆಳಗಾವಿಯ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಾಯಿತು. ಸಮಾವೇಶವನ್ನು ಮುಗಿಸಿಕೊಂಡು ಬಸ್ಸಿನಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್‍ಸಿ ಚೆನ್ನರಾಜ ಹಟ್ಟಿಹೊಳಿ ಸೇರಿದಂತೆ ಇತರ ನಾಯಕರು ವಾಪಸ್ಸಾಗುತ್ತಿದ್ದ ವೇಳೆ ನಡೆದ ಮಾತುಕತೆ ಎನ್ನಲಾಗಿದೆ.
ಜನರನ್ನು ಸೇರಿಸಲು 500 ರೂ. ಕೊಡಬೇಕು ಎಂದಿರುವ ಸಿದ್ದರಾಮಯ್ಯ, ಕಾಂಗ್ರೆಸ್ಸೇತರ ಪಕ್ಷಗಳ ಕುರಿತು ಉದ್ದೇಶಿಸಿ ಮಾತನಾಡಿದ್ದಾರಾ? ಅಥವಾ ತಮ್ಮ ಪಕ್ಷದ ಸಮಾವೇಶ ಬಗ್ಗೆ ಮಾತನಾಡಿದ್ದಾರಾ ಎಂಬ ಬಗ್ಗೆ ಅಸ್ಪಷ್ಟವಾಗಿದೆ. ಸದ್ಯ ಈ ವೀಡಿಯೋವನ್ನು ಬಿಜೆಪಿ ಕರ್ನಾಟಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ಈ ಬಾರಿ ಶತಾಯಗತಾಯ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕು ಎಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿಧಾನಸಭೆ ಕ್ಷೇತ್ರವಾರು ಬಸ್ ಯಾತ್ರೆ ಮಾಡುತ್ತಿದ್ದಾರೆ. ಬೆಳಗಾವಿಯಿಂದ ಈ ಪ್ರಜಾಧ್ವನಿ ಯಾತ್ರೆ ಎಂದು ಹೆಸರಿಟ್ಟು ಚಾಲನೆ ನೀಡಿದ್ದ ಯಾತ್ರೆ ಇದೀಗ ಎರಡನೇ ಸುತ್ತು ಬೆಳಗಾವಿ ಪ್ರವೇಶ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ