ಎಸ್.ವೈ. ಗುರುಶಾಂತ್
`ನಾನು ಮತ್ತೆ ಸದನಕ್ಕೆ ಬರುವುದಿಲ್ಲ. ಇದೇ ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ ಗದ್ಗದಿತ ಕಂಠದಲ್ಲಿ ಹೀಗೆ ಹೇಳುತ್ತಲೇ ಭಾವುಕರಾದರು ಬಿ.ಎಸ್.ಯಡಿಯೂರಪ್ಪ. ಮಾತನಾಡಲು ಸದನದಲ್ಲಿ ಎದ್ದು ನಿಂತದ್ದು ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ಟಿನ ಮೇಲಿನ ಚರ್ಚೆಗೆಂದು, ಆದರದು ನೆಪವಾಗಿತ್ತು. ಅವರ ಮಾತುಗಳು ಪೂರ್ತಿಯಾಗಿ ವಿದಾಯದ ದಾಟಿಯಲ್ಲಿ ಸಾಗಿದ್ದವು. ಮೇ ತಿಂಗಳಲ್ಲಿ ಹೊಸ ವಿಧಾನಸಭೆ ಆಯ್ಕೆಯಾಗಬೇಕು. ಅದೇನಿದ್ದರೂ ಮಾರ್ಚ್ ಕೊನೆ ಅಥವಾ ಏಪ್ರಿಲ್ ನಲ್ಲಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ಸಿಗಲೇಬೇಕು. ಅಂದರೆ ಈ ಬಜೆಟ್ ಅಧಿವೇಶನವೇ ಈಗಿನ ವಿಧಾನಸಭೆಯ ಕೊನೆಯ ಅಧಿವೇಶನ. 1970ರ ದಶಕದಲ್ಲಿ ಆರಂಭಗೊಂಡ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ಶಾಸಕಾಂಗದ ಪಯಣ ಬಹುತೇಕ ಇಲ್ಲಿಗೆ ಕೊನೆಯಾಗಿದೆ. ಬಿಜೆಪಿ ವರಿಷ್ಠರು ಯಡಿಯೂರಪ್ಪನವರನ್ನು ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸಬಾರದೆಂದು ಸ್ಪಷ್ಟವಾದ ನಿರ್ಬಂಧವನ್ನು ವಿಧಿಸಿದ್ದಾರೆ. ಹಾಗೆ ನೋಡಿದರೆ ನಾಲ್ಕನೆಯ ಬಾರಿ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು ಯಡಿಯೂರಪ್ಪನವರ ಹಠದಿಂದಲೇ. ವರ್ಷದ ಗಡುವಿನ ಒಪ್ಪಂದ ದಾಟಿದ ಮೇಲೆಯೂ ಮುಂದುವರಿದಿದ್ದು ಹೈಕಮಾಂಡ್ ಗೆ ಕೊಟ್ಟ ಪ್ರತಿರೋಧದಿಂದಲೇ. ಬಳಿಕ ಹೈಕಮಾಂಡ್ ಬಲವಂತವಾಗಿ ರಾಜೀನಾಮೆ ಕೊಡಿಸಿದ ನಂತರ ಅವರು ಸದನವನ್ನು ಉದ್ದೇಶಿಸಿ ಮಾಡಿದ ದುಃಖದಾಯಕ ಭಾಷಣವೇ ವಿದಾಯಗಳ ಮಾತಾಗಿತ್ತು. ಆದರೂ ಒಂದಿಷ್ಟು ಆಶಾಭಾವನೆ ಇರಿಸಿಕೊಂಡಿದ್ದ ಬಿ.ಎಸ್.ವೈ ಗೆ ಬಿ.ಜೆ.ಪಿ – ಆರ್.ಎಸ್.ಎಸ್.ಗಳ ಹೈಕಮಾಂಡ್ ಪೂರ್ಣ ವಿರಾಮವನ್ನು ಘೋಷಿಸುವಂತೆ ಮಾಡಿದವು. ಹೀಗಾಗಿ ಮತ್ತೆಂದೂ ವಿಧಾನಸಭೆಗೆ ಪ್ರವೇಶಿಸಲಾರೆ ಎನ್ನುವ ಖಾತ್ರಿಯ ಆ ದುಃಖ, ನೋವು ಅವರ ಕಂಠದಿಂದ ಹೊರಟ ಶಬ್ದ ಶಬ್ದಗಳಲ್ಲಿ ಯಾತನೆ, ಹತಾಶೆ ಮಡುಗಟ್ಟಿದ್ದು ಒಸಗಿತು.
`ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ನಾನು ಸುಮ್ಮನೆ ಕೂಡುವುದಿಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ನಿರಂತರ ಶ್ರಮಿಸುವೆ. ರಾಜ್ಯದಾದ್ಯಂತ ಓಡಾಡುವೆ. ಈ ಸರಕಾರ ಯಾರೂ ಕೊಡದಷ್ಟು ಯೋಜನೆಗಳನ್ನು ಕೊಟ್ಟಿದೆ. ಮೋದಿಯಂತವರು ಪ್ರಧಾನಿಯಾಗಿರುವುದು ನಮ್ಮ ಪುಣ್ಯ.’ ಇತ್ಯಾದಿ ಮಾತುಗಳು ಹೊರ ಬಂದವು ನಿಜ. ಆದರೆ ಆ ಯಾವ ಮಾತುಗಳಲ್ಲಿಯೂ ಜೀವ ಇರಲಿಲ್ಲ. ಸತ್ವ ಕಳೆದುಕೊಂಡ ಸತ್ತ ಮಾತುಗಳ ಅರ್ತನಾದದಂತೆ ಕೇಳಿಸುತ್ತಿತ್ತು.
1970 ರಲ್ಲಿ ಆರ್.ಎಸ್.ಎಸ್.ನ ಶಿಕಾರಿಪುರದ ಕಾರ್ಯವಾಹಕ, ಪುರಸಭೆಯ ಸದಸ್ಯ ಬಳಿಕ ಅಧ್ಯಕ್ಷ, 1975ರಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕೆ ಜೈಲುವಾಸ, 1983 ರಲ್ಲಿ ಶಾಸಕನಾಗಿ ಹೀಗೆ ಹಂತ ಹಂತವಾಗಿ ಸಾಗಿ ಬಂದವರು.
‘ನನ್ನನ್ನು ಅಧಿಕಾರ ಬಿಡವಂತೆ ಯಾರೂ ಒತ್ತಾಯಿಸಲಿಲ್ಲ. ನಾನಾಗೆ ರಾಜೀನಾಮೆ ಕೊಟ್ಟು ಬಂದೆ. ನನಗೆ ಅತಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿರುವುದು ಬಿಜೆಪಿ’ ಎಂದೇನೋ ಯಡಿಯೂರಪ್ಪ ಹೇಳಿದರು. ಆದರೆ ಅಂದು ರಾಜೀನಾಮೆ ಕೊಡಲು ತೀವ್ರ ಒತ್ತಡ ಹೇರಿದ್ದ ಹೈಕಮಾಂಡ್ ಎದುರಿನಲ್ಲಿ ‘ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಸವಾಲಿನ ಮಾತುಗಳನ್ನು ಅಂದು ಬಿ.ಎಸ್.ವೈ. ಹೇಳಿದ್ದ್ಯಾಕೆ? ಬಿ.ಎಸ್.ವೈ. ಒಬ್ಬ ಹಿರಿಯ ನಾಯಕ, ಅವರಿಲ್ಲದ ಪಕ್ಷ ದುರ್ಬಲ ಎನ್ನುವುದು ಗೊತ್ತಿದ್ದರೂ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ‘ಬಿ.ಎಸ್.ವೈ. ಅನಿವಾರ್ಯ ಅಲ್ಲ’ ಎಂದು ಅಂದಿದ್ದ್ಯಾಕೆ ಎನ್ನುವ ಪ್ರಶ್ನೆಗಳು ಈ ಹೊತ್ತಿನಲ್ಲಿ ನೆನಪಾಗುತ್ತವೆ.
ಅಂತೂ ಯಡಿಯೂರಪ್ಪನವರು ಬಿಜೆಪಿ ಕೊಟ್ಟಿರುವ ‘ಗೌರವ ನೆನೆದು ಈ ಮಾತುಗಳನ್ನು ಆಡುತ್ತಾ, ಸಿದ್ದರಾಮಯ್ಯನವರಿಗೆ ಚುಚ್ಚುತ್ತಾ (ಇವರ ನಡುವೆ ಒಳ ಒಪ್ಪಂದಗಳಿವೆ ಎನ್ನುವುದನ್ನು ನಿರಾಕರಿಸುವಂತೆ) ಸೂಚ್ಯಾರ್ಥವಾಗಿ ಹಿತೋಪದೇಶ ಮಾಡುತ್ತಾ ಒಂದಿಷ್ಟು ಮಾತನಾಡಿದರು ನಿಜ. ಆದರೆ ಯಡಿಯೂರಪ್ಪ ನವರ ಅಂತಿಮ ವಿದಾಯದ ಮಾತುಗಳನ್ನು ಆಡುವಾಗ ಅಬ್ಬರಿಸುತ್ತಿದ್ದ ಅವರಿಲ್ಲದೇ ಹೋಗುವ ಬಗ್ಗೆ ಬಹುತೇಕರಿಗೆ ಒಂದು ರೀತಿಯ ವಿಷಾದ, ಮ್ಲಾನತೆ ಕಾಡಿತು. ಅವರ ಬಲಪ್ರತಿಗಾಮಿ ಸಿದ್ಧಾಂತ, ವೈರುದ್ಯಾತ್ಮಕ ವ್ಯಕ್ತಿತ್ವ, ಕಳಂಕ, ದೌರ್ಬಲ್ಯಗಳ ಬಳಿಕವೂ ಕರ್ನಾಟಕ ಕಂಡ ಮಹತ್ವದ ಒಬ್ಬ ನಾಯಕ ಯಡಿಯೂರಪ್ಪ ಎನ್ನುವುದರಲ್ಲಿ ಅನುಮಾನವಿಲ್ಲ. ಅಂದರೆ ಕರ್ನಾಟಕದ ರಾಜಕಾರಣದಲ್ಲಿ ತಳ್ಳಿ ಹಾಕುವ ವ್ಯಕ್ತಿ ಅಲ್ಲ.
ಈ ಕಾಲಘಟ್ಟದಲ್ಲಿ ರಾಜ್ಯಗಳಲ್ಲಿ ಯಡಿಯೂರಪ್ಪನಂತಹ ಜನನಾಯಕರು ಅವಶ್ಯಕತೆಯೇ ಇಲ್ಲ ಎಂದೇ ಬಿಜೆಪಿ ಭಾವಿಸಿದೆ. ಏಕಸ್ವಾಮ್ಯ ಬಂಡವಾಳ, ರಾಜಕಾರಣದ ಎಕಸ್ವಾಮ್ಯದ ಪ್ರಕ್ರಿಯೆಯಲ್ಲಿ ರಾಜ್ಯ ಮಟ್ಟದಲ್ಲಿ ಅಂಥವರನ್ನು ಎಲ್ಲಿಯೂ ಇಲ್ಲವಾಗಿಸುವ ರಾಜಕಾರಣವೇ ರಾಷ್ಟ್ರೀಯ ಮಟ್ಟದಲ್ಲಿ ಮೇಲುಗೈ ಸಾಧಿಸುತ್ತಿದೆ.
ಯಡಿಯೂರಪ್ಪನವರದು ದೀರ್ಘ ಪಯಣ. ಆರ್.ಎಸ್.ಎಸ್.ನ ಕಟ್ಟಾಳುವಾಗಿದ್ದ ಬಿ.ಎಸ್.ವೈ. ಅಧಿಕಾರ ಅನುಭವಿಸಲು ನಾಲ್ಕು ದಶಕಗಳನ್ನೇ ಕಾಯಯಬೇಕಾಯಿತು. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಸಿಗುವುದು ಅಸಾಧ್ಯ ಎನ್ನುವಾಗ ಹತಾಶೆ ಕಾಡಿತು. ಕನಿಷ್ಠ ಮಂತ್ರಿಯನ್ನಾದರೂ ಮಾಡಿ ಎಂದು ಜೆಡಿಎಸ್ ನಂತಹ ಪಕ್ಷದ ನಾಯಕರಿಗೆ ಗೋಗರೆದರಂತೆ. ಟ್ವೆಂಟಿ-ಟ್ವೆಂಟಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾದ ಬಿ.ಎಸ್.ವೈ. ಮುಂದೆ ಸಂಘ ಪರಿವಾರ ರೂಪಿಸಿದ ತಂತ್ರದಲ್ಲಿ ಮುಖ್ಯಮಂತ್ರಿಯಾದದ್ದು, ಭ್ರಷ್ಟಾಚಾರದ ಹಗರಣಗಳಲ್ಲಿ ಜೈಲು ಸೇರಿದ್ದು, ಬಿದ್ದಿದ್ದು ಎದ್ದಿದ್ದು ಎಲ್ಲವೂ ರಾಜಕೀಯ ಆಟದ ಅಂಗಳದಲ್ಲಿವೆ. ಹಾಗೆ ನೋಡಿದರೆ, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಕಾಲಘಟ್ಟ, ಬಿಜೆಪಿಯ ಅಧಿಕಾರದ ಹಪಾಹಪಿ ರಾಜ್ಯದ ಇಡೀ ರಾಜಕೀಯ ಭಾಷೆ, ನಡವಳಿಕೆ, ಸಂಸ್ಕೃತಿಗಳನ್ನೇ ಬುಡಮೇಲು ಮಾಡಿತು. ಗಣಿಗಳ್ಳರ `ಪ್ರತಿಷ್ಠಿತ’ ಪ್ರವೇಶ ರಾಜಕಾರಣದಲ್ಲಿ ಮೇಲುಗೈ ಸಾಧಿಸಿತು. ಕಬ್ಬಿಣ ಗಣಿಗಾರಿಕೆಯಲ್ಲಿ ಖನಿಜಗಳ ಅಪಾರ ನೈಸರ್ಗಿಕ ಸಂಪನ್ಮೂಲದ ಲೂಟಿಯಾಯಿತು. ಅನೈತಿಕ ‘ಆಪರೇಷನ್ ಕ-ಮಲ’ ಎನ್ನುವುದು ರಾಜಕೀಯ ತಂತ್ರಗಾರಿಕೆಯ ಹೆಚ್ಚುಗಾರಿಕೆಯಾಗಿ, ಒಂದು ಚಾಣಕ್ಯ ಮೌಲ್ಯ ಎಂಬಂತೆ ಬಿಂಬಿತವಾಯಿತು.
ಹಣದ ಆಮಿಷ, ಅಧಿಕಾರ ಲಾಲಸೆ, ನೈತಿಕ ಆಧಃಪತನ, ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವಾಡಿತು. ಯಡಿಯೂರಪ್ಪನವರು ನಾಯಕನೆಂದು ಗುರುತಿಸಲ್ಪಟ್ಟಿದ್ದರೂ ಲಿಂಗಾಯತ ನಾಯಕನೆಂದು ಗುರುತಿಸಲಾಗುತ್ತಿರಲಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಎಲ್ಲ ಮಠಾಧೀಶರನ್ನು ಸರ್ಕಾರದ ಬಜೆಟ್ ಹಣ ಹಂಚಿಕೆಯ ಮೂಲಕ ಸೆಳೆದು ಜಾತಿ ಸುತ್ತ ಕ್ರೋಢೀಕರಣ ಪ್ರಯತ್ನ ನಡೆದು ಯಶಸ್ವಿಯಾಯಿತು. ಸಂಘ ಪರಿವಾರದ ಫ್ಯಾಸಿಸ್ಟ್ ಮಾದರಿಯ ಕೋಮುವಾದದ ರಾಜಕಾರಣ ನಿರ್ಭಯವಾಗಿ ನಡೆಯುತ್ತ ವಿಸ್ತರಿಸಿ ತಲೆಯತ್ತಿ ಆಡತೊಡಗಿತು. ನರಹತ್ಯೆಯ ಗುಜರಾತ್ ಮಾದರಿಯಲ್ಲಿ ಕರ್ನಾಟಕ ಸಾಗಬೇಕು ಎಂಬ ಕಲ್ಪನೆ ಚಾಲನೆಗೆ ಬಂತು. ದುರಾಡಳಿತಕ್ಕೆ ಬೇಸತ್ತ ಜನ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆದರು. ಬಿ.ಎಸ್.ವೈ. ಕಾಲದ ಅವ್ಯವಹಾರಗಳ ಬೆಣ್ಣೆಯಲ್ಲಿ ಸಮಪಾಲು ಅನುಭವಿಸಿದ ರಾಷ್ಟ್ರೀಯ `ಸಂಘ’ ಒಂದು ಹಂತದಲ್ಲಿ ಅವರನ್ನೇ ಕೈ ಬಿಡಲು ಹೊರಟದ್ದು, ಬಲವಂತವಾಗಿ ಶಕ್ತಿ ರಾಜಕಾರಣದಿಂದ ಅವರನ್ನು ಹೊರದಬ್ಬಿದ್ದು ಮತ್ತೊಂದು ಹಂತ.
ಇವೆಲ್ಲವುಗಳ ನಡುವಿನಲ್ಲಿಯೇ ಬಿ.ಎಸ್.ವೈ. ವಿದಾಯದ ಮಾತುಗಳನ್ನು ಆಡಿದ್ದಾರೆ. ಈಗಲೂ ಬಿಜೆಪಿಯ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಎಲ್ಲವೂ ತಣ್ಣಗಿದೆ ಎನ್ನುವಂತೆ ಕಂಡರೂ ಅಂತರಂಗದ ಬೇಗುದಿ ಖಂಡಿತಕ್ಕೂ ಆರಿಲ್ಲ. ಅವರ ಮಗ ಬಿ.ವೈ.ವಿಜಯೇಂದ್ರನಿಗೆ ರಾಜಕೀಯ ಭದ್ರ ಜಾಗ ಇನ್ನೂ ಸಿಕ್ಕಿಲ್ಲ. ಬಿ.ಎಸ್.ವೈ. ಬಂಟನಂದೇ ಹೇಳಲಾಗಿದ್ದ ಬೊಮ್ಮಾಯಿಯವರ ಸ್ಥಾನವು ಅಲುಗಾಡುತ್ತಿರುವುದು ಸುಳ್ಳಲ್ಲ. ಮುಂಬರುವ ಚುನಾವಣೆಯಲ್ಲಿ ಈ ‘ರಾಜಾಹುಲಿ’ ಎತ್ತ, ಯಾವ ಕಡೆ ಹೆಜ್ಜೆ ಹಾಕುತ್ತದೆ ಎನ್ನುವುದು ಗೊತ್ತಿಲ್ಲ. ಬಿ.ಎಸ್.ವೈ. ತನ್ನದೆಲ್ಲವೂ ಮುಗಿಯಿತು ಎಂದು ವಿಶ್ರಾಂತಿ ಪಡೆದರೂ ಅದು ಬಿಜೆಪಿಗೆ ಮರ್ಮಾಘಾತ ಆಗಲೂಬಹುದು. ಅಂದರೆ ಈಗಲೂ ಬಿ.ಎಸ್.ವೈ.ಯ ಬಲ ಅಷ್ಟಾಗಿ ಕುಂದಿಲ್ಲ ಎಂಬುದೂ ಗೊತ್ತಿದೆ. ಅಮಿತ್ ಶಾ ಅಂತವರು ಬಾಯಿ ಮಾತಿನಲ್ಲಾದರೂ ಬಿ.ಎಸ್. ವೈ. ಯನ್ನು ಹೊಗಳುತ್ತಿದ್ದಾರೆ. ಆದರೆ ತೆರೆಯ ಮರೆಯ ಮಸಲತ್ತುಗಳ ನಡುವೆ ಅಂತಹ ಮಾತುಗಳಿಗೆ ಅರ್ಥವೆಲ್ಲಿ?