ಬೆಂಗಳೂರು: ರಾಜ್ಯ ಸರ್ಕಾರ ತಿದ್ದುಪಡಿಗೊಳಿಸಿ ಜಾರಿಗೊಳಿಸಿರುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ-2023 ಅನ್ನು ವಿರೋಧಿಸಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಕರ್ನಾಟಕ ರಾಜ್ಯ ಸಮಿತಿಯು ವಾರಕ್ಕೆ 5 ದಿನ ಕೆಲಸ, ದಿನಕ್ಕೆ 7 ಗಂಟೆ ಅಥವಾ ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿದೆ.
ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿ ಗರಿಷ್ಟ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಹಾಗೂ ದುಡಿಯುವ ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ – 1948ಕ್ಕೆ ತಿದ್ದುಪಡಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ನ್ನು ಬಂಡವಾಳದಾರರ ಲಾಭಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿರುವುದು ಕಾರ್ಮಿಕ ವಿರೋಧಿ ನಡೆಯಾಗಿದೆ ಸಿಐಟಿಯು ಖಂಡಿಸಿದೆ.
ಇದನ್ನು ಓದಿ: ದಿನದ ಕೆಲಸದ ಅವಧಿ 3 ಗಂಟೆ ಹೆಚ್ಚಳ: ಮಾರ್ಚ್ 1 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಸಿಐಟಿಯು ಕರೆ
1948ರ ಕಾಯ್ದೆಯು ‘ದಿನದ ಕೆಲಸದ ಅವಧಿಯ ಆರಂಭದಿಂದ ಗರಿಷ್ಠ 5 ಗಂಟೆಗೆ 30 ನಿಮಿಷ ವಿರಾಮವನ್ನು ನೀಡಬೇಕೆಂದು ಹೇಳುತ್ತದೆ’. ಆದರೆ ಈ ತಿದ್ದುಪಡಿ ವಿಧೇಯಕದಲ್ಲಿ ಯಾವುದೇ ವಿರಾಮವಿಲ್ಲದೆ ದುಡಿಮೆ ಮಾಡುವ ಅವಧಿ ಗರಿಷ್ಠ 5 ಗಂಟೆಯಿಂದ 6 ಗಂಟೆಗೆ ಹೆಚ್ಚಿಸಿ ಹಾಗೂ ಕಾರ್ಮಿಕರ ದಿನದ ಕೆಲಸದ ಗರಿಷ್ಠ ಅವಧಿ 9 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಿ ಕಾರ್ಮಿಕರ ಶೋಷಣೆಗೆ ಮತ್ತಷ್ಟು ಅವಕಾಶ ಕಲ್ಪಿಸಿದೆ.
ಉದ್ಯೋಗದ ಕಡಿತ, ಕಡಿಮೆ ವೇತನಕ್ಕೆ ದುಡಿಮೆ, ಅಧಿಕ ಉತ್ಪಾದನೆ ಮಾಡಿಸಿಕೊಳ್ಳುವುದು ಈ ಅವಧಿಯಲ್ಲಿ ಹೆಚ್ಚಾಗಿದೆ. ಈ ತಿದ್ದುಪಡಿಗಳು ಕಾರ್ಮಿಕರ ಮೇಲೆ ವಿರಾಮವಿಲ್ಲದೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡ, ಕಾರ್ಮಿಕರ ಶೋಷಣೆ ಹೆಚ್ಚಿಸಲಿದೆ. ಹಲವು ಕಾರ್ಖಾನೆ ಮಾಲೀಕರಿಗೆ ಆರು ದಿನಗಳ ಉತ್ಪಾದನೆಯನ್ನು ನಾಲ್ಕು ದಿನಗಳಲ್ಲೇ ಉತ್ಪಾದನೆ ಮಾಡಿಸಿಕೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಸಿಗಲಿದೆ. ಇದು ಕಾರ್ಮಿಕರ ಶ್ರಮದ ಅತೀವ ಶೋಷಣೆಯಾಗಿದೆ. ಮೂರು ಪಾಳಿಗಳಿಗೆ ಒದಗಿಸಬೇಕಾದ ಸಾರಿಗೆ ಸೌಲಭ್ಯ ಹಾಗೂ ಕ್ಯಾಂಟೀನ್ ಮತ್ತು ಇನ್ನಿತರ ಸೌಲಭ್ಯಗಳನ್ನು ಉಳಿಸಲು ಇದು ದಾರಿ ಮಾಡಿಕೊಡಲಿದೆ ಎಂದು ಸಿಐಟಿಯು ಸಂಘಟನೆಯು ಖಂಡಿಸಿದೆ.
ಇದನ್ನು ಓದಿ: ಕಾರ್ಖಾನೆಗಳಲ್ಲಿ ಕಾರ್ಮಿಕರ ದುಡಿಮೆಯ ಅವಧಿ 9 ರಿಂದ 12 ಗಂಟೆಗೆ ಹೆಚ್ಚಳ; ಮಸೂದೆ ಅಂಗೀಕರಿಸಿದ ರಾಜ್ಯ ಸರ್ಕಾರ
ಚಾರಿತ್ರಿಕ 8 ಗಂಟೆ ಕೆಲಸ, 8 ಗಂಟೆ ವಿರಾಮ ಮತ್ತು 8 ಗಂಟೆ ಮನೋರಂಜನೆ ಎಂಬ ಜೀವಪರ, ವೈಜ್ಞಾನಿಕ, ತಾತ್ವಿಕ ನೆಲೆಯನ್ನು ಕಳಚಿ ಹಾಕಿ, ಕಾರ್ಪೋರೇಟ್ ಬಂಡವಾಳಕ್ಕೆ ಲಾಭ ಮಾಡಿಕೊಡುವ ನವ ಉದಾರವಾದಿ ಆರ್ಥಿಕ ನೀತಿಯ ಜಾರಿಯ ನಿಟ್ಟಿನಲ್ಲಿ ಬಿಜೆಪಿ ಸರ್ಕಾರವು ಈ ತಿದ್ದುಪಡಿ ಮಾಡಿರುವುದು ದುಡಿಯುವ ವರ್ಗಕ್ಕೆ ಮಾಡಿದ ಮಹಾದ್ರೋಹ ಎಂದು ಸಿಐಟಿಯು ತಿಳಿಸಿದೆ.
ದುಡಿಯುವ ಮಹಿಳೆಯರ ಸುರಕ್ಷತೆ, ಕೆಲಸದ ಭದ್ರತೆ, ಸಾರಿಗೆ, ಸೇವಾ ಸೌಲಭ್ಯಗಳಿಂದ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಕಿರುಕುಳ ಹೆಚ್ಚಾಗಿದೆ. ಕಡಿಮೆ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದ್ದು, ಕೆಲಸದ ಅಭದ್ರತೆಯಿಂದಾಗಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ ಮಹಿಳಾ ಕಾರ್ಮಿಕರನ್ನು ರಾತ್ರಿಪಾಳಿಯಲ್ಲಿ ದುಡಿಮೆ ಮಾಡಿಸಿಕೊಳ್ಳಲು ಕಾರ್ಖಾನೆ ಮಾಲೀಕರಿಗೆ ಅನುವುಗೊಳಿಸಿ ತಿದ್ದುಪಡಿ ಮಾಡಿರುವುದು ಮಹಿಳಾ ಕಾರ್ಮಿಕರನ್ನು ದುಡಿಮೆಯಿಂದ ಹೊರಗಿಡುವ ಹುನ್ನಾರವೆಂದು ಸಿಐಟಿಯು ಸಂಘಟನೆ ತಿಳಿಸಿದೆ.
2020 ಇಸವಿ ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಇದೇ ಕಾಯ್ದೆಗೆ ಕಾರ್ಮಿಕ ವಿರೋಧಿ ತಿದ್ದುಪಡಿಯನ್ನು ಮಾಡಿ ಸುಗ್ರೀವಾಜ್ಞೆ ಹೊರಡಿಸಿತು. ಈ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ ಆಗಿದ್ದರೂ, ಕಾರ್ಮಿಕರ ತೀವ್ರ ವಿರೋಧದಿಂದಾಗಿ ವಿಧಾನ ಪರಿಷತ್ತಿನಲ್ಲಿ ವಿಧೇಯಕಕ್ಕೆ ಸೋಲಾಗಿತ್ತು. ಈಗ ಬಿಜೆಪಿ ಸರ್ಕಾರ ಮತ್ತೆ ಚುನಾವಣೆ ಹೊಸ್ತಿಯಲ್ಲಿ ಬಂಡವಾಳಗಾರರ ಲಾಭವನ್ನು ಹೆಚ್ಚಿಸಲು ಈ ತಿದ್ದುಪಡಿ ವಿಧೇಯಕವನ್ನು ಶಾಸನಸಭೆಯಲ್ಲಿ ಅಂಗೀಕಾರ ಮಾಡಿರುವುದು, ಅದರ ಕಾರ್ಮಿಕ ವಿರೋಧಿ ನಿಲುವನ್ನು ದೃಢಪಡಿಸಿದೆ ಎಂದು ಸಿಐಟಿಯು ಸಂಘಟನೆ ತಿಳಿಸಿದೆ.
ಕಾರ್ಖಾನೆಗಳಲ್ಲಿ ಹೊಸ ಉದ್ಯೋಗ ಅವಕಾಶಗಳ ಸೃಷ್ಟಿಗೆ, ಕಾರ್ಮಿಕರ ಮೇಲೆ ಅಧಿಕ ಉತ್ಪಾದನೆ ಮಾಡಬೇಕೆನ್ನುವ ಒತ್ತಡಗಳನ್ನು ಕಡಿಮೆ ಮಾಡಲು, ಕಾರ್ಮಿಕರ ಜೀವನವನ್ನು ಉತ್ತಮಪಡಿಸಲು ವಾರಕ್ಕೆ 5 ದಿನ ಕೆಲಸ, ದಿನಕ್ಕೆ 7 ಗಂಟೆ ಅಥವಾ ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಪಡಿಸಿ ಕಾಯ್ದೆಗೆ ತಿದ್ದುಪಡಿ ಮಾಡಬೇಕೆಂದು ಸಿಐಟಿಯು ಆಗ್ರಹಿಸಿದೆ.
ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಒಳಗೊಂಡಿರುವ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ನ್ನು ರಾಜ್ಯ ಸರ್ಕಾರ ಕೂಡಲೇ ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ರಾಜ್ಯವ್ಯಾಪಿ ಜಿಲ್ಲಾ ಕೇಂದ್ರಗಳಲ್ಲಿ ವಿಧೇಯಕ ಪ್ರತಿದಹನ ಪ್ರತಿಭಟನೆಗೆ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.
ಎಲ್ಲಾ ಕಾರ್ಖಾನೆ ಗೇಟ್ ಬಳಿ ಕಾರ್ಮಿಕರಿಂದ ವಿಧೇಯಕ ಪ್ರತಿ ದಹನ ಮತ್ತು ಮಾರ್ಚ್ 1, 2023 ರಂದು ಮಧ್ಯಾಹ್ನ 3.00 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಿಐಟಿಯು ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ, ರಾಮನಗರ ಜಿಲ್ಲಾ ಸಮಿತಿಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ