ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಸಂಘದ ಚುನಾವಣೆಯಲ್ಲಿ, ಎಸ್‌ಎಫ್‌ಐ, ಡಿಎಸ್‌ಯು, ಎಎಸ್‌ಎ ನೇತೃತ್ವದ ʻಎಡ – ಪ್ರಗತಿಪರ ವಿದ್ಯಾರ್ಥಿ ಮೈತ್ರಿಕೂಟ ‘ಭರ್ಜರಿ ಜಯಭೇರಿ ಬಾರಿಸಿದ್ದು, ಬಿಜೆಪಿ ಬೆಂಬಲಿತ ಎಬಿವಿಪಿ ಮತ್ತು ಕಾಂಗ್ರೆಸ್ ಅಂಗವಾದ ಎನ್‌ಎಸ್‌ಯುಐ ಮುಖಭಂಗ ಅನುಭವಿಸಿವೆ.
ಕೋವೀಡ್ ಕಾರಣದಿಂದಗಿ ಮೂರುವರೆ ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಎಡ ಮತ್ತು ಪ್ರಗತಿಪರ ವಿದ್ಯಾರ್ಥಿಗಳ ಮೈತ್ರಿಕೂಟ ಗೆಲುವನ್ನು ತನ್ನದಾಗಿಸಿಕೊಂಡಿದೆ. ಫೆಬ್ರವರಿ 24 ಶುಕ್ರವಾರದಂದು ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿತ್ತು. 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ ಚಲಾಯಿಸಲು ಅರ್ಹರಾಗಿದ್ದರು ಮತ್ತು ಶೇಕಡಾ 76 ರಷ್ಟು ಮತದಾನವಾಗಿತ್ತು.
ಇದನ್ನೂ ಓದಿ : ಜಾತಿವಾದಿ ವ್ಯವಸ್ಥೆಯ ಸಂಚಿನಿಂದ ಹತ್ಯೆಯಾದ ರೋಹಿತ್ ವೇಮುಲ ಅಗಲಿದ ದಿನವಿಂದು
ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಸೇರಿದಂತೆ ಎಲ್ಲಾ ಪ್ರಮುಖ ಹುದ್ದೆಗಳನ್ನೂ ಈ ಮೈತ್ರಿಕೂಟ ಗೆದ್ದುಕೊಂಡಿದೆ. ASA-SFI-DSU ಮೈತ್ರಿಯ ಕೂಟ ಹಾಗೂ ABVP ನಡುವೆ ಪೈಪೋಟೊ ಏರ್ಪಟ್ಟಿತ್ತು. ಎಬಿವಿಪಿ ಎಲ್ಲಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದಿದ್ದರೆ NSUI ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಶುಕ್ರವಾರ ತಡರಾತ್ರಿ ಮತದಾನದ ನಂತರ ಹಾಸ್ಟೆಲ್ ಬಳಿ ಎಬಿವಿಪಿ ಮತ್ತು ಎಸ್‌ಎಫ್‌ಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು ಸೋಲುವ ಹತಾಶೆಯಿಂದ ಎಸ್‌ಎಫ್‌ಐ ಬೆಂಬಲಿತ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದರು.
ASA-SFI-DSU ಪ್ಯಾನೆಲ್‌ನಿಂದ ಕಣಕ್ಕಿಳಿದ ಎಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ ಹುದ್ದೆಗಳನ್ನು ಗೆದ್ದಿದ್ದಾರೆ. ವಿಜೇತರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಡ ಮೈತ್ರಿಕೂಟದ ಪ್ರಜ್ವಲ್ 1838 ಮತ ಪಡೆದರೆ, ಎಬಿವಿಪಿಯ ಬಾಲಕೃಷ್ಣ 1230 ಮತ ಪಡೆದಿದ್ದಾರೆ. 608 ಮತಗಳಿಂದ ಪ್ರಜ್ವಲ್ ಜಯಗಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಎಡಮೈತ್ರಿಕೂಟದ ಪೃಥ್ವಿ ಸಾಯಿ, 1860 ಮತಗಳನ್ನು ಪಡೆದರೆ ಎಬಿವಿಪಿಯ ಸೇಬ್ರಾಂತ್ ಮುಜುಮ್ದಾರ್ 1153 ಮತ ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಡಮೈತ್ರಿಕೂಟದ ಕೃಪಾ ಮರಿಯಾ ಜಾರ್ಜ್ 2076 ಮತಗಳನ್ನು ಪಡೆದರೆ, ಎಬಿವಿಪಿಯ ಸಾಕ್ಷಿ 1185 ಮತ ಪಡೆದಿದ್ದಾರೆ. ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಡಮೈತ್ರಿಕೂಟದ ಕತಿ ಗಣೇಶ್ 1617 ಪಡೆದರೆ, ಎಬಿವಿಪಿಯ ಕಪಿಲ್ ದೇವ್ 1011 ಮತ ಪಡೆದಿದ್ದಾರೆ.