ವೈದ್ಯರಲ್ಲಿ ಸೇವಾ ಮನೋಭಾವದ ಕೊರತೆ-ಗ್ರಾಮೀಣ ಸೇವೆಗೆ  ಹಿಂದೇಟು

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ನೀಡಬೇಕೆಂಬ ಮನೋಭಾವನೆ ವೈದ್ಯರಲ್ಲಿ ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸದೇ ನಗರ ಪ್ರದೇಶಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂಬ ವಿಚಾರಗಳು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ಬಂದಿತು.

ವಿಧಾನಸಭೆ ಅಧಿವೇಶನದ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಪರವಾಗಿ ಸದಸ್ಯ ಡಾ. ಅಜಯ್ ಧರ್ಮಸಿಂಗ್ ಪ್ರಶ್ನೆ ಕೇಳಿ ವೈದ್ಯರಲ್ಲಿನ ಸೇವಾ ಮನೋಭಾವದ ಕೊರತೆ, ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ವೈದ್ಯರ ಹಿಂದೇಟು ಮಾಡುತ್ತಿರುವ ಬಗ್ಗೆ ಪ್ರಶ್ನೆ ಕೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯಿಸಿ, ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಸರ್ಕಾರವು ಕೈಗೊಂಡ ಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಈ ವೇಳೆ, ಮಧ್ಯೆ ಪ್ರವೇಶಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವೈದ್ಯರಲ್ಲಿ ಸೇವೆ ಮಾಡುವ ಮನೋಭಾವನೆ ಇಲ್ಲವಾಗಿದೆ. ಗ್ರಾಮೀಣ ಭಾಗಕ್ಕೆ ಹೋಗಲು ಆಸಕ್ತಿ ತೋರುತ್ತಿಲ್ಲ. ವೈದ್ಯಕೀಯ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಗ್ರಾಮೀಣ ಸೇವೆಗೆ ಹೋಗುವ ಭೂಮಿಕೆಯನ್ನು ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಿಳಿ ಹೇಳಬೇಕು. ಆಗ ಮಾತ್ರ ಗ್ರಾಮೀಣ ಜನರಿಗೆ ಉತ್ತಮ ವೈದ್ಯರ ಸೇವೆ ದೊರೆಯುತ್ತದೆ ಹೊರತು ಕೇವಲ ಗ್ರಾಮೀಣ ಸೇವೆ ಮಾಡಲು ಆದೇಶ ಹೊರಡಿಸಿದರೆ ಪ್ರಯೋಜನವಾಗಲ್ಲ ಎಂದರು.

ಶಾಸಕರಾದ ಅನ್ನದಾನಿ, ಪ್ರಿಯಾಂಕ ಖರ್ಗೆ ಕೂಡ ದನಿಗೂಡಿಸಿ ಗ್ರಾಮೀಣ ಭಾಗಗಳಿಗೆ ಹೋಗದ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಳವಳ್ಳಿಯಲ್ಲಿ ಆಸ್ಪತ್ರೆ ಇದ್ದರೆ, ಬೆಂಗಳೂರು, ಇಲ್ಲವೇ ಮೈಸೂರಿನಿಂದ ಬಂದು ಕಾರ್ಯನಿವರ್ಹಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಸಚಿವ ಸುಧಾಕರ್ ಅವರು, ವೈದ್ಯರು ಹಳ್ಳಿಗಳಿಗೆ ಹೋಗಿ ಕೆಲಸ ಮಾಡುವ ಮನಸ್ಥಿತಿ ಬೆಳಸಿಕೊಳ್ಳಬೇಕು ಎಂದರು.

ಸಚಿವ ಡಾ. ಕೆ. ಸುಧಾಕರ್, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 1 ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯರು ಇರಬೇಕು ಎಂಬುದಿದೆ. ಈಗ 10 ಸಾವಿರ ವೈದ್ಯರು ಪ್ರತಿ ವರ್ಷ ಬರುತ್ತಿದ್ದಾರೆ. ವೈದ್ಯಕೀಯ ಕಾಲೇಜುಗಳು ಹೆಚ್ಚಾಗಿವೆ. ಸ್ನಾತಕೋತ್ತರ ಕೇಂದ್ರಗಳು ಹೆಚ್ಚಾಗಿವೆ, ರಾಜ್ಯದ ಶೇ. 95 ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕಾತಿ ಮಾಡಿದ್ದೇವೆ. 1480 ವೈದ್ಯರನ್ನು ನೇಮಕ ಮಾಡಿಕೊಂಡಿದ್ದೇವೆ. ಉಳಿದ ಶೇ. 5 ರಷ್ಟು ಕಡೆ ಆಯುಷ್ ವೈದ್ಯರನ್ನು ನೇಮಕ ಮಾಡಿದ್ದೇವೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ

ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಆರೋಗ್ಯ ಸಚಿವ ಡಾ ಸುಧಾಕರ್‌, ರಾಜ್ಯದಲ್ಲಿ ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈಗಾಗಲೇ 43 ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ 57 ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಬಾಕಿ ಇದೆ ಎಂದರು.

Donate Janashakthi Media

Leave a Reply

Your email address will not be published. Required fields are marked *