ಕೋಮುವಾದ-ಜಾತಿವಾದ ಬೆಳೆಸುವ ಮತ್ತು ಜನತೆಯ ಮೇಲೆ ಅಪಾರ ಸಾಲದ ಹೊರೆ ಹೇರುವ ಜನವಿರೋಧಿ ಬಜೆಟ್: ಸಿಪಿಐ(ಎಂ)

ಬೆಂಗಳೂರು: ಕರ್ನಾಟಕ ಸರಕಾರ ಮಂಡಿಸಿದ 2023-24 ರ ಸಾಲಿನ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಜನ ವಿರೋಧಿಯಾದ ಬಜೆಟ್ ಆಗಿದೆ. ಅದಾಗಲೇ ನವ ಉದಾರೀಕರಣದ ನೀತಿಗಳ ಜಾರಿಗೆ ಕ್ರಮವಹಿಸಿ, ಕಾರ್ಪೊರೇಟ್ ಕಂಪನಿಗಳ ಲೂಟಿಗೆ ರಾಜ್ಯವನ್ನು ತೆರೆದಿದ್ದು ಅದರ ವಿರುದ್ದ ಪ್ರತಿರೋದ ವ್ಯಾಪಕಗೊಳ್ಳದಂತೆ ಜನತೆಯನ್ನು ಒಡೆದಾಳುವ, ಕೋಮುವಾದ ಹಾಗೂ ಜಾತಿವಾದದ ಬೆಳವಣಿಗೆಗೆ ಒತ್ತು ನೀಡಲು ಸಹಾಯಕವಾದ ಬಜೆಟ್ ಆಗಿದೆಯೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ಇದನ್ನು ಓದಿ: ರಾಜ್ಯ ಬಜೆಟ್‌-2023-24: ರೈತರಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ

ಹೇಳಿಕೆಯನ್ನು ನೀಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಅವರು, ರಾಜ್ಯ ಸರ್ಕಾರ ಮಂಡಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಬಜೆಟ್ ಆಗಿದೆ. ಅದಾಗಲೇ ಒಕ್ಕೂಟ ಸರಕಾರದ ಬಜೆಟ್ ಕೃಷಿ ಹಾಗೂ ಬಡವರ ಮೇಲೆ ಸಹಾಯಧನಗಳನ್ನು ಕಡಿತ ಮಾಡುವ ಮೂಲಕ ತೀವ್ರ ದಾಳಿ ನಡೆಸಿದೆ ಎಂದಿದ್ದಾರೆ.

ರಾಜ್ಯ ಬಜೆಟ್ ಪ್ರವಾಹ, ಅತೀವೃಷ್ಠಿ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದ ಕಷ್ಠದಲ್ಲಿರುವ ರೈತರ ಸಾಲ ಮನ್ನಾ ಘೋಷಿಸಲಿಲ್ಲ. ಸಂಕಷ್ಟದಲ್ಲಿರುವ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗಳಿಂದ ತತ್ತರಿಸಿರುವ ರಾಜ್ಯದ ಶೇ 90 ಜನತೆಯ ಮೇಲೆ ರಾಜ್ಯ ಸರಕಾರ ಈ ಬಜೆಟ್ ಮೂಲಕ ಒಟ್ಟು ಬಜೆಟ್ ನ ಶೇ 26 ರಷ್ಟು ಅಂದರೆ ಸುಮಾರು 77,000 ಕೋಟಿ ರೂ ಸಾಲದ ಹೊರೆಯನ್ನು ಹೇರಿದೆ.

ಇದನ್ನು ಓದಿ: ರಾಜ್ಯ ಬಜೆಟ್‌ 2023-24; ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್ ಯೋಜನೆ

ಮಠಗಳಿಗೆ ಸಮುದಾಯಗಳ ಭಾವನಾತ್ಮಕ ವಿಚಾರಗಳಿಗೆ ನೆರವು ಘೋಷಿಸುವ ಮೂಲಕ ಜಾತಿ ಭಾವನೆಗಳ ಬೆಳವಣಿಗೆಗೆ ಕುಮ್ಮಕ್ಕು ನೀಡಿದೆ. ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣದ ಘೋಷಣೆ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಮತೀಯ ಭಾವನೆಗಳನ್ನು ಹರಡುವ ವೇದಿಕೆಯನ್ನು ಯೋಜನೆಯಂತೆ ಜಾರಿಗೊಳಿಸಲು ಕ್ರಮವಹಿಸಿದೆ. ಅದಾಗಲೇ ಶ್ರೀ ರಂಗಪಟ್ಟಣದ ಟಿಪ್ಪು ಮಸೀದಿಯ ಒಡೆಯುವ ಸಂಚು ನಡೆದಿರುವಾಗ ಇದು ಅದಕ್ಕೆ ಕುಮ್ಮಕ್ಕಾಗಲಿದೆ.

ಬೆಲೆ ಏರಿಕೆಯ ಈ ದಿನಗಳಲ್ಲಿ ಯೋಜನಾ ಕೆಲಸಗಾರರಿಗೆ ಘೋಷಿಸಿದ ಒಂದು ಸಾವಿರ ಹೆಚ್ಚಳ ಹೆಚ್ಚಳವೇ ಅಲ್ಲವಾಗಿದೆ. ಕೆಲವು ಕ್ರಮಗಳನ್ನು ಮತದಾರರ ಗಮನ ಸೆಳೆಯಲು ರೂಪಿಸಲಾಗಿದೆ.

ತಕ್ಷಣವೇ ರಾಜ್ಯ ಸರಕಾರ ಈ ಜನ ವಿರೋದಿ ಬಜೆಟ್ ವಾಪಾಸು ಪಡೆದು ಬಡವರು, ರೈತರು ಹಾಗೂ ಕಾರ್ಮಿಕರು, ನಾಗರೀಕರ ಐಕ್ಯತೆ ಮತ್ತು ಹಿತ ರಕ್ಷಣೆಯ ಬಜೆಟ್ ಆಗಿ ಬದಲಾಯಿಸಲು ಸಿಪಿಐ(ಎಂ) ಪಕ್ಷವು ಒತ್ತಾಯಿಸುತ್ತದೆ ಎಂದು ಯು. ಬಸವರಾಜ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *