ಬೆಂಗಳೂರು: ಮಸಣಗಳಲ್ಲಿ ದುಡಿಮೆ ಮಾಡುವ ಕಾರ್ಮಿಕರ ಗೌರವಯುತ ಬದುಕಿಗಾಗಿ ಆಗ್ರಹಿಸಿ ಇಂದು ಪ್ರತಿಭಟನೆ ನಡೆಸಿದ ಕಾರ್ಮಿಕರು ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.
ಧರಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ರಾಜ್ಯ ಸಂಚಾಲಕ ಯು. ಬಸವರಾಜ ಸಾರ್ವಜನಿಕ ಮಸಣದ ಪ್ರತಿಯೊಂದು ಕಡೆಯೂ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ಮೂಲಕ ನಿಯೋಜಿಸಿ “ಮಸಣ ನಿರ್ವಾಹಕ” ನೌಕರರನ್ನಾಗಿ ನೇಮಿಸಬೇಕು. ಎಲ್ಲಾ ಮಸಣಗಳಲ್ಲಿ ಪಾರಂಪರಿಕವಾಗಿ ಕಾರ್ಯ ನಿರ್ವಹಿಸುವ ಮಸಣ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಗಣತಿ ಮಾಡಬೇಕೆಂದು ಆಗ್ರಹಿಸಿದರು.
ಇದನ್ನು ಓದಿ: ಮಸಣ ಕಾರ್ಮಿಕರ ಹಕ್ಕೊತ್ತಾಯಗಳನ್ನು ಈಡೇರಿಸಲು ಕ್ರಮವಹಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಕೆ
ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತು ಕುಣಿ ಅಗೆಯುವ ಮತ್ತು ಮುಚ್ಚುವ ಅಗತ್ಯ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳು ಒದಗಿಸಬೇಕು. ಸ್ಥಳೀಯ ಸಂಸ್ಥೆಗಳನ್ನು ಮಾಲೀಕರನ್ನಾಗಿಸಿ ಮಸಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆ ಜಾರಿಗೊಳಿಸಬೇಕು ಮತ್ತು 45 ವರ್ಷದ ಎಲ್ಲಾ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ 3,000 ರೂ.ಗಳನ್ನು ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಎಲ್ಲಾ ಮಸಣ ಕಾರ್ಮಿಕರ ಕುಟುಂಬಗಳಿಗೆ ಕಡ್ಡಾಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ 200 ದಿನಗಳ ಕಾಲ ಉದ್ಯೋಗ ಒದಗಿಸಬೇಕು ಮತ್ತು ಉದ್ಯೋಗ ನೀಡದೇ ಇರುವ ಸಂದರ್ಭದಲ್ಲಿ ಶೇ. 75 ರಷ್ಠು ನಿರುದ್ಯೋಗ ಭತ್ಯೆ ನೀಡಬೇಕು. ಅದೇ ರೀತಿ, ಅವರು ಮತ್ತು ಕುಟುಂಬದ ಸದಸ್ಯರು ಹೈನುಗಾರಿಕೆ ಮತ್ತಿತರೇ ಉದ್ಯೋಗದಲ್ಲಿ ತೊಡಗಲು ಶೇ. 75 ಸಹಾಯ ಧನವಿರುವ ಮತ್ತು ಉಳಿದ ಮೊತ್ತಕ್ಕೆ ಕನಿಷ್ಟ 05 ವರ್ಷಗಳ ಕಾಲ ಬಡ್ಡಿ ರಹಿತ 5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಒದಗಿಸಬೇಕು ಎಂದರು.
ಪ್ರತಿಭಟನಾ ಧರಣಿಯಲ್ಲಿ ಬಿ. ಮಾಳಮ್ಮ, ಗೋಪಾಲಕೃಷ್ಣ ಅರಳಹಳ್ಳಿ, ಎನ್. ರಾಜಣ್ಣ ಸೇರಿದಂತೆ ರಾಜ್ಯ ಜಿಲ್ಲಾ ಮುಖಂಡರು ಭಾಗವಹಿಸಿ ಮಾತನಾಡಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ