ರಾಜ್ಯದಲ್ಲಿವೆ 1316 ಅನಧಿಕೃತ ಶಾಲೆಗಳು!

ಬೆಂಗಳೂರು : ರಾಜ್ಯದಲ್ಲಿ ಒಟ್ಟು 1,316 ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಂಗ್ರಹಿಸಿದ್ದು, ಈ ಪೈಕಿ 871 ಶಾಲೆಗಳು ಬೆಂಗಳೂರಿನಲ್ಲೇ ಇವೆ ಎಂಬುದಾಗಿ ತಿಳಿದು ಬಂದಿದೆ.

ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರೆ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ 95 ಶಾಲೆಗಳು, ಒಂದು ಮಾಧ್ಯಮಕ್ಕೆ ಅನುಮತಿ ಪಡೆದು ಇನ್ನೊಂದು ಮಾಧ್ಯಮದಲ್ಲಿ ಬೋಧಿಸುತ್ತಿರುವ 294 ಶಾಲೆಗಳು ಪತ್ತೆಯಾಗಿವೆ. ಅಲ್ಲದೆ ರಾಜ್ಯದಲ್ಲಿ ಅನುಮತಿ ಪಡೆಯದೇ 63 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು 74 ಶಾಲೆಗಳು ಅನಧಿಕೃತವಾಗಿ ಉನ್ನತೀಕರಿಸಿಕೊಂಡಿವೆ.

ಅನಧಿಕೃತ ಶಾಲೆಗಳಿಗೆ ನೋಟಿಸ್‌ ನೀಡಲಾಗಿದ್ದು ಈ ಶಾಲೆಗಳ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ಆದಷ್ಟು ಶೀಘ್ರ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಅನಧಿಕೃತ ಶಾಲೆಗಳು ಎಲ್ಲೆಲ್ಲಿ ಇವೆ : ಬೆಂಗಳೂರು ದಕ್ಷಿಣದಲ್ಲಿ 386 ಶಾಲೆಗಳು ಮತ್ತು ಬೆಂಗಳೂರು ಉತ್ತರದಲ್ಲಿ 485 ಅನಧಿಕೃತ ಶಾಲೆಗಳು ಪತ್ತೆಯಾಗಿದೆ. ರಾಜ್ಯದ ಒಟ್ಟು ಅನಧಿಕೃತ ಶಾಲೆಗಳಲ್ಲಿ ಶೇ. 66 ಬೆಂಗಳೂರಿನಲ್ಲೇ ಇದೆ. ಉಳಿದಂತೆ ತುಮಕೂರು 109, ಬೆಂಗಳೂರು ಗ್ರಾಮಾಂತರ 66, ಚಿಕ್ಕಬಳ್ಳಾಪುರ 59, ಬೀದರ್‌ 50, ಕೋಲಾರ 32, ಚಿಕ್ಕಮಗಳೂರು 21, ಕಲಬುರಗಿ 17, ಧಾರವಾಡ 14, ಮಂಡ್ಯ ಜಿಲ್ಲೆಯಲ್ಲಿ 10 ಶಾಲೆಗಳು ಪತ್ತೆಯಾಗಿವೆ.

ಕಾನೂನು ಕ್ರಮ ಜರುಗಿಸಿ : ರಾಜ್ಯದಲ್ಲಿ ಕಂಡು ಬಂದಿರುವ ಅನಧಿಕೃತ ಖಾಸಗಿ ಶಾಲೆಗಳ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಎಚ್ಚರಿಸಿವೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ), ರಾಜ್ಯದಲ್ಲಿ ಸುಮಾರು 1,316 ಖಾಸಗಿ ಅನುದಾನರಹಿತ ಶಾಲೆಗಳು ಅನಧಿಕೃತವಾಗಿ ರಾಜ್ಯದಲ್ಲಿ ನಡೆಯುತ್ತ ಇವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈಗಾಗಲೇ ಗುರುತಿಸಿದೆ ಆ ಎಲ್ಲಾ ಶಾಲೆಗಳ ಮಾನ್ಯತೆ ರದ್ದು ಮಾಡಿ, ಸಂಬಂಧಿಸಿದ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.

ರಾಜ್ಯದ ರಾಜಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸುಮಾರು 1,316 ಖಾಸಗಿ ಶಾಲೆಗಳು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ನಡೆಯುತ್ತಿರುವುದು ಶಿಕ್ಷಣ ಇಲಾಖೆ ಗಮನಕ್ಕೆ ಬಂದಿರುತ್ತದೆ. ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯದ ಜನರಿಗೆ ಮೋಸ, ವಂಚನೆ, ಮಾಡಿ ಸರ್ಕಾರದ ಎಲ್ಲಾ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿ ನಡೆಯುತ್ತಿರುವ ಈ ಶಾಲೆಗಳನ್ನು ಕೂಡಲೇ ರಾಜ್ಯ ಸರ್ಕಾರ ಮಾನ್ಯತೆ ರದ್ದು ಮಾಡಬೇಕು, ಅದಕ್ಕೆ ಈ ಅಧಿವೇಶನದಲ್ಲಿ ಚರ್ಚೆ ಮಾಡಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಂಘಟನೆ ಎಚ್ಚರಿಸಿದೆ.

ಶಿಕ್ಷಣ ಇಲಾಖೆ ಹಾಗೂ ಸರಕಾರ ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕಲು ಮುಂದಾಗಬೇಕಿದೆ. ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕವನ್ನು ಹೆಚ್ಚಳ ಮಾಡವುದರ ಮೂಲಕ ಪಾಲಕರನ್ನು ಶೋಷಣೆ ಮಾಡುತ್ತವೆ ಮತ್ತು 1983 ಶಿಕ್ಷಣ ಕಾಯ್ದೆ ಹಾಗೂ RTE 2009 ನ್ನು ಬಹುತೇಕ ಶಾಲೆಗಳು ಉಲ್ಲಂಘನೆ ಮಾಡುತ್ತಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೌನವಹಿಸಿದ್ದಾರೆ. ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಡೇರಾ ಸಮಿತಿ ಹಲ್ಲುಕಿತ್ತ ಹಾವಿನಂತಾಗಿದೆ ಎಂದು ಎಸ್ಎಫ್ಐ ಆರೋಪಿಸಿದೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ರುಪ್ಸ ಆಗ್ರಹ : ರಾಜ್ಯದಲ್ಲಿ ಅನಧಿಕೃತ ಶಾಲೆಗಳು ಕಾರ್ಯನಿರ್ವಹಿಸಲು ಇದುವರೆಗೂ ಅವಕಾಶ ಮಾಡಿಕೊಟ್ಟಿದ್ದ ಅಧಿಕಾರಿಗಳ ವಿರುದ್ಧ ಶಿಕ್ಷಣ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸ) ಒತ್ತಾಯಿಸಿದೆ.

ಖಾಸಗಿ ಶಾಲೆಗಳಿಂದ ಹಣ ಸಂಗ್ರಹಿಸುತ್ತಿದ್ದ ಇಲಾಖೆಯ ಭ್ರಷ್ಟ ಅಧಿಕಾರಿಗಳ ಕುರಿತು ರುಪ್ಸ ಪ್ರಧಾನಮಂತ್ರಿಗೆ ದಾಖಲೆ ಸಮೇತ ಪತ್ರ ಬರೆದ ನಂತರ ಎಚ್ಚೆತ್ತುಕೊಂಡ ಶಿಕ್ಷಣ ಇಲಾಖೆ, 1,316 ಅನಧಿಕೃತ ಶಾಲೆಗಳನ್ನು ಗುರುತಿಸಿದೆ. ಸರಿಯಾದ ತಪಾಸಣೆ ಮಾಡಿದರೆ ಐದು ಸಾವಿರಕ್ಕೂ ಹೆಚ್ಚು ಅನಧಿಕೃತ ಶಾಲೆಗಳು ಸಿಗುತ್ತವೆ ಎಂದು ರುಪ್ಸ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.

ಹತ್ತಾರು ವರ್ಷಗಳಿಂದ ಕೆಲ ಶಾಲೆಗಳು ಬಹಿರಂಗವಾಗಿ ಪೋಷಕರು, ಮಕ್ಕಳಿಗೆ ಮೋಸ ಮಾಡುತ್ತಿವೆ. ಅಧಿಕಾರಿಗಳು ಹೊಣೆ ಹೊರಬೇಕು. ಬೆಂಗಳೂರು ನಗರದಲ್ಲೇ ಅನುಮತಿ ಇಲ್ಲದೆ ನೂರಾರು ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಹೆಸರಿನಲ್ಲಿ ಬಂಡವಾಳಶಾಹಿ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಶುಲ್ಕ ರೂಪದಲ್ಲಿ ದೊಡ್ಡಮೊತ್ತದ ಹಣ ವಸೂಲಿ ಮಾಡುತ್ತಿವೆ. ಅಂತಹ ಶಾಲೆಗಳಿಗೆ ಮಂತ್ರಿಗಳು, ಶಾಸಕರ ಕೃಪಾಕಟಾಕ್ಷವಿದೆ. ಕೆಲ ಶಾಲೆಗಳು ಅವರ ಒಡೆತನದಲ್ಲೇ ಇವೆ ಎಂದು ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *