ಬೆಂಗಳೂರು: ಮಸಣಗಳಲ್ಲಿ ದುಡಿಮೆ ಮಾಡುತ್ತಿರುವ ಕಾರ್ಮಿಕರಿಗೆ ಇಂದಿಗೂ ಗೌರವಯುತ ಬದುಕನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ, ಹೋರಾಟಗಳನ್ನು ನಡೆಸಿ ಎಚ್ಚರಿಸಲಾಗಿದ್ದರೂ ಸರ್ಕಾರ ಕೇವಲ ಭರವಸೆ ನೀಡುತ್ತದೆ ವಿನಃ ಅವುಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ತಿಳಿಸಿದೆ.
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿರುವ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ರಾಜ್ಯ ಸಂಚಾಲಕ ಯು. ಬಸವರಾಜ ಅವರು, ಕಳೆದ ಎರೆಡು ದಶಕಗಳಿಂದ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದಡಿ ರಾಜ್ಯದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿರುವ ಸಂಘಟಿತರಾಗಿರುವ ಕಾರ್ಮಿಕರ ಜೀವನದ ಸ್ಥಿತಿ ಧಾರೂಣವಾಗಿದೆ.
ಇದನ್ನು ಓದಿ: ಮಸಣ ಕಾರ್ಮಿಕರಿಗೆ ವಿಮಾ ರಕ್ಷಣೆ ಮತ್ತು ಪರಿಹಾರಕ್ಕಾಗಿ ಮನವಿ
ಶತಮಾನಗಳಿಂದ ದೌರ್ಜನ್ಯದ ಜಾತಿ ಪದ್ಧತಿ ಹಾಗೂ ಅಸ್ಪೃಶ್ಯಾಚರಣೆಯ ಭಾಗವಾಗಿ, ಮೇಲು ಜಾತಿ ಹಾಗೂ ಮೇಲು ವರ್ಗಗಳ ಸೇವೆಯನ್ನು ಬಿಟ್ಟಿಯಾಗಿ ನಡೆಸುತ್ತಿದ್ದ ವೃತ್ತಿ ತೊಲಗಿಸಿ ನಮಗೊಂದು ಗೌರವದ ಬದುಕನ್ನು ನೀಡುವಂತೆ ಅಹವಾಲುಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಈಗಾಗಲೇ ಹಲವು ಬಾರಿ ಮನವಿ ಮಾಡಲಾಗಿದೆ ಮತ್ತು ಕರ್ನಾಟಕ ಸರಕಾರದ ಹಲವು ಅಧಿಕಾರಿಗಳು ಮತ್ತು ಮಂತ್ರಿಗಳ ಜೊತೆಯು ಹಲವು ಬಾರಿ ಚರ್ಚಿಸಲಾಗಿದೆ. ಬೇಡಿಕೆಗಳನ್ನು ಈಡೇರಿಸಬೇಕೆಂದು ವಿನಂತಿಸಲಾಗಿದೆ ಎಂದು ಹೇಳಿದರು.
ಪ್ರತಿ ಸಾರ್ವಜನಿಕ ಮಸಣಕ್ಕೆ ಕಾರ್ಮಿಕರೊಬ್ಬರನ್ನು ಸ್ಥಳೀಯ ಸಂಸ್ಥೆಗಳ “ಮಸಣ ನಿರ್ವಾಹಕ” ನೌಕರರನ್ನಾಗಿ ನೇಮಿಸಿಕೊಳ್ಳಬೇಕು. ಅದೇ ರೀತಿ, ಎಲ್ಲಾ ಮಸಣಗಳಲ್ಲಿ ಪಾರಂಪರಿಕವಾಗಿ ಕಾರ್ಯ ನಿರ್ವಹಿಸುವ ಮಸಣ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಗಣತಿ ಮಾಡಬೇಕು. ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯ ಉದ್ಯೋಗವೆಂದು ಪರಿಗಣಿಸಿ, ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಕನಿಷ್ಠ 3,000 ರೂ.ಗಳ ಕೂಲಿಯನ್ನು ಪಾವತಿಸಬೇಕೆಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಆಗ್ರಹಿಸಿದೆ.
ಇದನ್ನು ಓದಿ: ಜನತೆಯನ್ನು ಯಾಮಾರಿಸಿ ಅಗ್ಗದ ಪ್ರಚಾರ ಪಡೆಯುವ ಹುನ್ನಾರದ ಪ್ಯಾಕೇಜ್: ಸಿಪಿಐ(ಎಂ)
ಕಾರ್ಮಿಕರಿಗೆ ಮಸಣದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತು ಕುಣಿ ಅಗೆಯುವ ಮತ್ತು ಮುಚ್ಚುವ ಅಗತ್ಯ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕವೇ ಒದಗಿಸಬೇಕು. ಅದೇ ರೀತಿ, ಸೋಪು ಒದಗಿಸಬೇಕು. ಸ್ಥಳೀಯ ಸಂಸ್ಥೆಗಳನ್ನು ಮಾಲೀಕರನ್ನಾಗಿಸಿ ಮಸಣ ಕಾರ್ಮಿಕರಿಗೆ ಭವಿಷ್ಯನಿಧಿ ಯೋಜನೆಯನ್ನು ಜಾರಿಗೊಳಿಸಬೇಕು. 45 ವರ್ಷದ ಎಲ್ಲಾ ಮಸಣ ಕಾರ್ಮಿಕರಿಗೆ ಮಾಸಿಕ ಸಹಾಯಧನ ಅಥವಾ ಪಿಂಚಣಿಯಾಗಿ ಕನಿಷ್ಠ 3,000 ರೂ.ಗಳನ್ನು ಘೋಷಿಸಬೇಕು.
ಎಲ್ಲಾ ಮಸಣ ಕಾರ್ಮಿಕರಿಗೆ ತಲಾ ಐದು ಎಕರೆ ನೀರಾವರಿ ಜಮೀನು ಉಚಿತವಾಗಿ ನೀಡಬೇಕು. ಅದೇ ರೀತಿ, ಹಿತ್ತಲು ಹಾಗೂ ನಿವೇಶನ ಸಹಿತ 10 ಲಕ್ಷ ರೂ. ಮೌಲ್ಯದ ಮನೆಯನ್ನು ಉಚಿತವಾಗಿ ಒದಗಿಸಬೇಕು. ಕುಟುಂಬದ ತಲಾ ಸದಸ್ಯರಿಗೆ ಮಾಸಿಕ ಕನಿಷ್ಠ 10 ಕೆ.ಜಿ. ಸಮಗ್ರ ಆಹಾರ ಮತ್ತು ಆರೋಗ್ಯ ಸಾಮಾಗ್ರಿ ಕಿಟ್ ಒದಗಿಸಬೇಕು. ಎಲ್ಲಾ ಕಾರ್ಮಿಕರ ಉಚಿತ ಆರೋಗ್ಯ ತಪಾಸಣೆಗೆ ಸಾರ್ವಜನಿಕ ಆರೋಗ್ಯ ಇಲಾಖೆಯ ಮೂಲಕ ಕ್ರಮವಹಿಸಬೇಕು. ಮಸಣ ಕಾರ್ಮಿಕರಿಗೆ ಕೋವಿಡ್ ವಿಮೆ ಜಾರಿಗೊಳಿಸಬೇಕು.
ರಾಜ್ಯ ಸರಕಾರದ ದಲಿತರು ಹಾಗೂ ಜನ ವಿರೋಧಿಯಾದ ಭೂಸುಧಾರಣಾ ತಿದ್ದುಪಡಿ ಕಾಯ್ದೆ- 2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಹಾಗೂ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಮತ್ತು ಕಾರ್ಮಿಕರ ತಿದ್ದುಪಡಿ ಕಾಯ್ದೆಗಳನ್ನು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯನ್ನು ಮತ್ತು ಮತಾಂತರ ನಿಷೇಧ ಹಾಗೂ ಜಾತಿತಾರತಮ್ಯ ಹಾಗೂ ಅಸ್ಪೃಶ್ಯಾಚರಣೆಗಳನ್ನು ಮುನ್ನಡೆಸಲು ಕುಮ್ಮಕ್ಕು ನೀಡುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಸುಗ್ರೀವಾಜ್ಞೆ, ಇವುಗಳನ್ನು ವಾಪಾಸ್ಸು ಪಡೆಯಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನು ಓದಿ: ಸಾರ್ವಜನಿಕ ಸ್ಮಶಾನಗಳನ್ನು ಒದಗಿಸಲು ಆಗ್ರಹ
ಎಲ್ಲಾ ಮಸಣ ಕಾರ್ಮಿಕರ ಕುಟುಂಬಗಳಿಗೆ ಕಡ್ಡಾಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ 200 ದಿನಗಳ ಕಾಲ ಉದ್ಯೋಗ ಒದಗಿಸಬೇಕು ಮತ್ತು ಉದ್ಯೋಗ ನೀಡದೇ ಇರುವ ಸಂದರ್ಭದಲ್ಲಿ ಶೇ. 75 ರಷ್ಠು ನಿರುದ್ಯೋಗ ಭತ್ಯೆ ನೀಡಬೇಕು. ಅದೇ ರೀತಿ, ಅವರು ಮತ್ತು ಕುಟುಂಬದ ಸದಸ್ಯರು ಹೈನುಗಾರಿಕೆ ಮತ್ತಿತರೇ ಉದ್ಯೋಗದಲ್ಲಿ ತೊಡಗಲು ಶೇ. 75 ಸಹಾಯ ಧನವಿರುವ ಮತ್ತು ಉಳಿದ ಮೊತ್ತಕ್ಕೆ ಕನಿಷ್ಟ 05 ವರ್ಷಗಳ ಕಾಲ ಬಡ್ಡಿ ರಹಿತ 5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಒದಗಿಸಬೇಕು.
ಮಸಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಗಳಲ್ಲಿ ಮತ್ತು ಉದ್ಯೋಗಕ್ಕಾಗಿ ಉದ್ಯೋಗಾವಕಾಶಗಳ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕು. 25 ವಯಸ್ಸು ಮೇಲ್ಪಟ್ಟ ವಿದ್ಯಾವಂತ ಮಕ್ಕಳಿಗೆ ಉದ್ಯೋಗ ಒದಗಿಸಲಾಗದಿದ್ದಲ್ಲಿ ತಲಾ 10,000 ರೂಪಾಯಿಗಳ ನಿರುದ್ಯೋಗ ಭತ್ಯೆ ನೀಡಲು ಸೂಕ್ತ ಕ್ರಮವಹಿಸಬೇಕು. ಎಲ್ಲಾ ಗ್ರಾಮಗಳಲ್ಲಿ ದಲಿತರ ಮಸಣಕ್ಕೆ ಸ್ಥಳವನ್ನು ಒದಗಿಸಬೇಕು. ಕಾಡು ಸೋಸುವ ಕೆಲಸಕ್ಕೆ ಪ್ರತಿ ಕಾರ್ಮಿಕನಿಗೆ ಕನಿಷ್ಠ 2,500 ರೂ. ಗಳನ್ನು ಸ್ಥಳೀಯ ಸಂಸ್ಥೆಗಳು ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಸಹ ಸಂಚಾಲಕಿ ಬಿ. ಮಾಳಮ್ಮ ಮಾತನಾಡಿ, ಮಂತ್ರಿಗಳು, ಅಧಿಕಾರಿಗಳು ನಮ್ಮ ಕಷ್ಠಗಳನ್ನು ಆಲಿಸಿ ನಮ್ಮನ್ನು ಸಫಾಯಿ ಕರ್ಮಾಚಾರಿಗಳ ಜೊತೆ ಮಸಣಗಳ ಶುಚಿ ಕಾರ್ಮಿಕರೆಂದು ಒಪ್ಪಿ ನೆರವು ನೀಡಬಹುದೆಂದು ಮೌಖಿಕವಾಗಿ ಹೇಳಿದ್ದಾರೆ. ಅದೇ ರೀತಿ, ಕನಿಷ್ಠ ವೇತನವನ್ನು ಘೋಷಿಸಿದ್ದಾರೆ. ಈಚೆಗೆ ನಗರಗಳ ಚಿತಾಗಾರಗಳಲ್ಲಿ ಕಾರ್ಯನಿರ್ವಹಿಸುವ ಕೆಲವರಿಗೆ ಉದ್ಯೋಗ ಭದ್ರತೆ ಒದಗಿಸಿ ಕನಿಷ್ಟ ವೇತನ ನೀಡುವುದಾಗಿಯೂ ಹೇಳಿಕೊಂಡಿದ್ದಾರೆ. ಆದರೆ, ಕೇವಲ ಬಾಯಿಮಾತಲ್ಲಿ ಹೇಳಲಾಗಿದೆ. ಆದರೆ, ಲಕ್ಷಾಂತರ ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶದ ಮಸಣ ಕಾರ್ಮಿಕರ ಇನ್ನೂ ಕೆಲವು ಬೇಡಿಕೆಗಳನ್ನು ಪರಿಗಣಿಸಿ, ಸೂಕ್ತ ಯೋಜನೆ ಮೂಲಕ ಕಾರ್ಯರೂಪಕ್ಕೆ ತರಬೇಕೆಂದು ಆಗ್ರಹಿಸಿದರು.
ಇದನ್ನು ಓದಿ: ರೈತರನ್ನು ದುರ್ಬಗೊಳಿಸುತ್ತಿರುವ ಮೋದಿ ಸರ್ಕಾರ :ನಿತ್ಯಾನಂದಸ್ವಾಮಿ
ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಯ ಅನುದಾನ ಪ್ರತಿ ವರ್ಷ 30,000 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಒದಗಿಸುವುದಾಗಿ ಸರಕಾರ ಹೇಳಿಕೊಳ್ಳುತ್ತಿದ್ದರೂ ಮಸಣ ಕಾರ್ಮಿಕರಿಗೆ ಅದರಿಂದ ಒಂದು ಪೈಸೆಯು ದೊರೆಯುತ್ತಿಲ್ಲ. ಸರಕಾರದ ಹತ್ತಿರ ಹಣವಿದೆ ಮತ್ತು ಲಕ್ಷಾಂತರ ಎಕರೆ ಜಮೀನು ಇದೆ. ಅಧಿಕಾರಿಗಳು ಮತ್ತು ಮಂತ್ರಿಗಳು ಈಗಾಗಲೇ ಒಪ್ಪಿರುವಂತೆ ನಮ್ಮನ್ನು ಸಫಾಯಿ ಕರ್ಮಾಚಾರಿಗಳೆಂದು ಪರಿಗಣಿಸಬಹುದೆಂದಿದೆ. ಆದರೆ ರಾಜ್ಯ ಸರಕಾರ ಮತ್ತು ಮಂತ್ರಿಗಳು ಬರೀ ಮಾತನಾಡುವುದು ಮತ್ತು ನಮ್ಮೊಂದಿಗೆ ಉಪಹಾರ ಸೇವಿಸಿ ಪ್ರಚಾರ ಪಡೆಯುವುದು ಬಿಟ್ಟರೇ ವಾಸ್ತವಿಕವಾಗಿ ಇಲ್ಲಿಯವರೆಗೆ ಯಾವುದೇ ಆದೇಶ ಹೊರಡಿಸಿಲ್ಲ ಮತ್ತು ಯಾವ ನೆರವು ಘೋಷಿಸಿರುವುದಿಲ್ಲ ಎಂದು ತಿಳಿಸಿದರು.
ಹಾಲಿ ಸಂಕಷ್ಠದಲ್ಲಿರುವ ನಮಗೆ ಕೋವಿಡ್-19 ಸಾಂಕ್ರಮಿಕ ಹಾವಳಿಯ ಪರಿಹಾರವನ್ನು ನೀಡಲಿಲ್ಲ. ನಮ್ಮ ಈ ಎಲ್ಲಾ ಸಮಸ್ಯೆ ಪರಿಹರಿಸಿರುವುದಿರಲಿ, ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಘೋಷಿಸಿರುವ ನಮ್ಮ ವಿರುದ್ಧವಾದ ಕಾಯ್ದೆಗಳು ನಮ್ಮ ಆಶಯಗಳನ್ನು ಮಣ್ಣುಪಾಲು ಮಾಡುತ್ತವೆ. ಇದುವರೆಗೆ ನಮಗಾದ ಅನ್ಯಾಯದಲ್ಲಿ, ದೌರ್ಜನ್ಯಗಳಲ್ಲಿ ಜೀವ ಹಿಡಿದುಕೊಂಡು ಬದುಕಲಾದರೂ ಇದ್ದ ಅವಕಾಶಗಳನ್ನು ಇಲ್ಲವಾಗಿಸಿ ಬೀದಿ ಬೀಳುವಂತ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿದೆ.
ಸಚಿವರಿಗೆ ಮನವಿ ಸಲ್ಲಿಸಿರುವ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘವು 2023ರ ಸಾಲಿನ ಬಜೆಟ್ನಲ್ಲಿಯೇ ಹಕ್ಕೊತ್ತಾಯಗಳನ್ನು ಈಡೇರಿಸುವಂತ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ