ಬೆಂಗಳೂರು: ನಿಯಮ ಉಲ್ಲಂಘನೆಯ ದಂಡ ಪಾವತಿಗೆ ವಿಶೇಷ ರಿಯಾಯಿತಿ ಘೋಷಿಸಿದ ಸಂಚಾರಿ ಪೊಲೀಸರು ಶೇ. 50ರಷ್ಟು ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಅದನ್ನು ಸದುಪಯೋಗ ಪಡಿಸಿಕೊಂಡಿದ್ದು ರಿಯಾಯಿತಿ ಘೋಷಣೆಯಾದ ಆರು ದಿನಗಳಲ್ಲಿ ರೂ. 51 ಕೋಟಿಗೂ ಹೆಚ್ಚಿನ ಮೊತ್ತ ಪಾವತಿಸಿದ್ದಾರೆ ಎಂದು ವರದಿಯಾಗಿದೆ.
ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ವಸೂಲಿಯಾಗದೇ ಭಾರೀ ಪ್ರಮಾಣದ ಮೊತ್ತ ಬಾಕಿಯಿರುವುದು ಇಲಾಖೆಗೆ ದೊಡ್ಡ ಸಮಸ್ಯೆ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಶೇ. 50ರ ರಿಯಾಯಿತಿ ಘೋಷಿಸಿತು. ಫೆಬ್ರವರಿ 11ರಂದು ಕೊನೆಯಾಗಲಿದೆ. ಅದರ ಒಳಗಾಗಿ ಸಾರ್ವಜನಿಕರು ಸ್ಪಂದನೆ ನೀಡುತ್ತಿದ್ದು, ತಮ್ಮ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ದಂಡದ ಮೊತ್ತ ಪಾವತಿ ಮಾಡುತ್ತಿದ್ದಾರೆ.
ಇದನ್ನು ಓದಿ: ಸಂಚಾರಿ ನಿಮಯ ಉಲ್ಲಂಘನೆ; ದಂಡ ಪಾವತಿಗೆ ಶೇ. 50 ರಿಯಾಯಿತಿ-ದಂಡ ಕಟ್ಟಲು ಮುಗಿಬಿದ್ದ ಜನ
ರಿಯಾಯಿತಿ ಘೋಷಣೆಯಾದ ಮೊದಲ ದಿನವೇ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿದೆ. ನಂತರ ಅಂದರೆ, ಎರಡನೇ ದಿನ ಬರೋಬ್ಬರಿ 6,80,72,500 ರೂ., ಮೂರನೇ ದಿನ 7,49,94,870 ರೂಪಾಯಿ ಸಂಗ್ರಹವಾಗಿದೆ. ಅದೇ ರೀತಿ 4ನೇ ದಿನ 9,57,12,420, 5ನೇ ದಿನ 8,13,12,200 ಸಂಗ್ರಹಗೊಂಡಿದೆ ಎಂದು ವರದಿಯಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ದಂಡ ಸಂಗ್ರಹ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ಇದುವರೆಗೆ ಸರಿಸುಮಾರು 17 ಲಕ್ಷದವರೆಗೂ ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದು ವರದಿಯಾಗಿದೆ.
ದಂಡ ವಸೂಲಿಗೆ ರಿಯಾಯಿತಿ ಬೆನ್ನಲ್ಲೇ ವಾಹನ ಸವಾರರು ಕಳೆದ 6 ದಿನದಿಂದ ನಿರಂತರವಾಗಿ ಸರತಿ ಸಾಲಿನಲ್ಲಿ ನಿಂತು ದಂಡ ಪಾವತಿ ಮಾಡುತ್ತಿದ್ದಾರೆ. ಆರು ದಿನದಲ್ಲಿ ಬರೋಬ್ಬರಿ 51 ಕೋಟಿ 85 ಲಕ್ಷ ದಂಡದ ಮೊತ್ತ ಸಂಗ್ರಹವಾಗಿದೆ ಎಂದು ವರದಿಯಾಗಿದ್ದು, ಫೆಬ್ರವರಿ 11ರ ಒಳಗಾಗಿ ಸುಮಾರು 70 ಕೋಟಿವರೆಗೂ ದಂಡ ಪಾವತಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದನ್ನು ಓದಿ: ಸಂಚಾರಿ ನಿಯಮ ಉಲ್ಲಂಘನೆ: ಬಿಎಂಟಿಸಿ, ಕೆಎಸ್‌ಆರ್‌ಟಿಸಿಗೆ ಎರಡು ಕೋಟಿ ದಂಡ
ದಂಡ ಪಾವತಿಗೆ ದಿನಾಂಕ ವಿಸ್ತರಿಸಬೇಕೆಂಬ ಆಗ್ರಹವೂ ಈಗ ಕೇಳಿ ಬರುತ್ತಿದೆ. ಸಧ್ಯ ಅವಧಿ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ಇಲ್ಲವೆಂದು ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ ಎಮ್ ಎ ಸಲೀಂ ಹೇಳಿದ್ದಾರೆ.
ರಾಜ್ಯ ಸರ್ಕಾರ ಘೋಷಿಸಿರುವ ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಯಲ್ಲಿ ಆರ್ಧದಷ್ಟು ಮಾತ್ರ ಪಾವತಿಗೆ ಅವಕಾಶ ನೀಡಿ ರಿಯಾಯಿತಿ ಘೋಷಿಸಿ ಫೆಬ್ರವರಿ 11 ಕಡೆಯ ದಿನವನ್ನು ನಿಗದಿಪಡಿಸಿತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಜನವರಿ 27ರಂದು ದಂಡ ರಿಯಾಯಿತಿಗೆ ನಿರ್ಧಾರ ಮಾಡಿ ಅನುಮೋದನೆ ನೀಡಿತು ಮತ್ತು ಫೆಬ್ರವರಿ 03ರಂದು ಸಾರಿಗೆ ಇಲಾಖೆ ಶೇ. 50 ರಿಯಾಯಿತಿ ಘೋಷಿಸಿತು.
ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಳ
ಸಂಚಾರಿ ಪೊಲೀಸ್ ಇಲಾಖೆಯು ಸಂಚಾರಿ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಷ್ಟು ರಿಯಾಯಿತಿ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ಸೈಬರ್ ವಂಚಕ ಪ್ರಕರಣಗಳು ಹೆಚ್ಚಾಗಿವೆ ಎನ್ನಲಾಗಿದೆ. ಅರ್ಧದಷ್ಟು ರಿಯಾಯಿತಿ ಘೋಷಣೆಯಿಂದಾಗಿ ಕೋಟಿಗಟ್ಟಲೇ ಹಣ ಸರ್ಕಾರದ ಭೊಕ್ಕಸ ಸೇರುತ್ತಿದೆ. ಜನರು ಇದೇ ಉಳಿತಾಯದ ಸಮಯ ಎಂದುಕೊಂಡು ಆನ್‌ಲೈನ್, ಆಫ್‌ಲೈನ್ ವಿಧಾನದಲ್ಲಿ ದಂಡ ಕಟ್ಟಲು ಮುಂದಾಗಿದ್ದಾರೆ. ಆದರೆ ಸೈಬರ್ ವಂಚಕರು ಜನರ ಹಣ ಲಪಟಾಯಿಸಲು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ್ದ ಹಣಪಾವತಿ ಲಿಂಕ್‌ಗಳನ್ನು ವಂಚನೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆಂದು ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದಾರೆ.
ಸೈಬರ್ ವಂಚಕರು ಸ್ವತಃ ತಾವೇ ದಂಡ ಪಾವತಿ ಎಂಬ ಸಂದೇಶಗಳನ್ನು ರವಾನಿಸುತ್ತಿದ್ದು, ಅದರ ಮೂಲಕ ವಂಚನೆಗೆ ಕೈ ಹಾಕಿದ್ದಾರೆ. ಆನ್‌ಲೈನ್‌ನಲ್ಲಿ ದಂಡ ಕಟ್ಟಿ ಎಂದು ವೆಬ್‌ಸೈಟ್ ಲಿಂಕ್/ವಿಳಾಸವೊಂದನ್ನು ಸಂದೇಶದಲ್ಲಿ ಅಳವಡಿಸುತ್ತಿದ್ದಾರೆ. ಒಂದು ವೇಳೆ ಸಂದೇಶದಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಅದು ನಕಲಿ ವೆಬ್‌ಸೈಟ್ ಪ್ರವೇಶಕ್ಕೆ ದಾರಿಯಾಗುತ್ತಿದೆ ಆದ್ದರಿಂದ ದಂಡ ಪಾವತಿಸುವವರು ವಂಚಕರ ಸಂದೇಶಗಳ ಎಚ್ಚರಿಕೆ ವಹಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ