ಗುರುರಾಜ ದೇಸಾಯಿ
- ಪ್ರೇಮಿಗಳ ದಿನವಾಗಿ ಆಚರಿಸಲ್ಪಡುವ ಫೆ.14ನ್ನು ದನ ಅಪ್ಪಿಕೋ ದಿನವನ್ನಾಗಿ ಆಚರಿಸಲು ಕೇಂದ್ರ ಸರಕಾರ ಮನವಿ
- ಕೇಂದ್ರ ಪಶು ಸಂಗೋಪನಾ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿಯಿಂದ ಪ್ರಕಟಣೆ
ನವದೆಹಲಿ : ಫೆಬ್ರವರಿ 14 ಅಂದರೆ ವಿಶ್ವಾದ್ಯಂತ ಪ್ರೇಮಿಗಳ ದಿನವೆಂದೇ ಜನಪ್ರಿಯ. ಆದರೆ ಇದೀಗ ಫೆಬ್ರವರಿ 14ನ್ನು ಕೇಂದ್ರ ಸರಕಾರ ‘ಅಪ್ಪಿಕೋ ದನ’ ದಿನವನ್ನಾಗಿ ಆಚರಿಸಿಲು ತೀರ್ಮಾನಿಸಿದೆ. ಅಷ್ಟು ಮಾತ್ರವಲ್ಲದೆ ಎಲ್ಲರೂ ಎಲ್ಲರೂ ಅಂದು ಹಸುವನ್ನು ಅಪ್ಪಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು ಎಂದು ಕೇಂದ್ರ ಪಶು ಸಂಗೋಪನೆ ಮತ್ತು ಹೈನುಗಾರಿಕಾ ಸಚಿವಾಲಯದಡಿ ಕಾರ್ಯನಿರ್ವಹಿಸುವ ಕೇಂದ್ರ ಪ್ರಾಣಿ ಕಲ್ಯಾಣ ಮಂಡಳಿ ಮನವಿ ಮಾಡಿದೆ.
ಫೆ.14ನ್ನು ‘ಕೌವ್ ಹಗ್ ಡೇ’ ಎಂದು ಆಚರಿಸಬೇಕು ಅಂತ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಕುರಿತು ಫೆ.6ರಂದು ಮಂಡಳಿ ಸುತ್ತೋಲೆ ಹೊರಡಿಸಿತ್ತು. ಸುತ್ತೋಲೆಗೆ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವಾಲಯ ಅನುಮೋದನೆ ನೀಡಿದೆ.
ಇದು ಪಶುವನ್ನು ಪ್ರೀತಿಸುವವರಿಗಾಗಿ ಒಂದು ಮನವಿಯಷ್ಟೇ. ಸಮಯದ ಅಭಾವದಿಂದಾಗಿ ಈ ವರ್ಷ ಈ ದಿನದಂದು ಯಾವುದೇ ವಿಶೇಷ ಸಮಾರಂಭವನ್ನು ಆಯೋಜಿಸಲು ನಾವು ಯೋಜಿಸಿಲ್ಲ. ಆದರೆ ಮುಂದಿನ ವರ್ಷ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳಿವೆ ಎಂದು ಮಂಡಳಿಯ ಸಹಾಯಕ ಕಾರ್ಯದರ್ಶಿ ಪ್ರಾಚಿ ಜೈನ್ ತಿಳಿಸಿದ್ದಾರೆ.
ವ್ಯಾಪಕ ಆಕ್ರೋಶ : ಇನ್ನೂ ಈ ವಿವಾದಾತ್ಮಕ ಸುತ್ತೋಲೆಯನ್ನು ಬಲಪಂಥೀಯ ಸಂಘಟನೆಗಳು ಸ್ವಾಗತಿಸಿದರೆ, ಜನಪರ ಸಂಘಟನೆಗಳು ವಿರೋಧಿಸಿವೆ. ಸರಕಾರದ ಈ ನಡೆ ವಿಚಿತ್ರವಾಗಿದೆ. ದನವನ್ನು ಮಾತೆ ಎಂದು ಹೇಳುವ ಕೇಂದ್ರ ಸರಕಾರ 8 ವರ್ಷದ ಅವಧಿಯಲ್ಲಿ ಅತೀ ಹೆಚ್ಚು ದನದ ಮಾಂಸವನ್ನು ರಫ್ತು ಮಾಡಿದೆ. ಈಗ ದನ ತಬ್ಬಿಕೋ ಎಂದು ಹೇಳುತ್ತಿರುವುದು ನಾಟಕವಷ್ಟೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಕೆಲವರ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ.
ಹಿರಿಯ ಬರಹಗಾರ ಚಂದ್ರಪ್ರಭ ಕಠಾರಿಯವರು ಫೆಸ್ಬುಕ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ,
“ಪ್ರೇಮಿಗಳ ದಿನಾಚರಣೆ (Valentines day) ಬಂದರೆ ಸಾಕು…ಈ ಮತಾಂಧರಿಗೆ ಯಾಕೊ ಮೈಯೆಲ್ಲ ತುರಿಕೆ ಶುರುವಾಗುತ್ತೆ. ಸಾಲದಕ್ಕೆ ಎಲೆಕ್ಷನ್ ಬೇರೆ ಹತ್ತಿರ ಇದೆ. 40% ಕಮೀಷನ್ ಭ್ರಷ್ಟ ಸರ್ಕಾರ ಅನ್ನೋ ಇಮೇಜ್ ಇನ್ನೂ ಅಳಿಸಲಾಗಿಲ್ಲ. ಏನೋ ಒಂದು ಡೈವರ್ಷನ್ ಟ್ಯಾಕ್ ಟಿಕ್ಸ್ ಮಾಡ್ಬೇಕಲ್ಲ. ಅದಕ್ಕೆ…
ಫೆಬ್ರವರಿ ೧೪ ರಂದು ಹಸುಗಳನ್ನ ತಬ್ಬಿಕೊ ಬೇಕಂತೆ (ಅದು ಎಗರಿಸಿ ಒದಿದಿದ್ರೆ ಸಾಕು!!!) ಅವತ್ತೇ ಏಕೆ ದಿನಾ ತಬ್ಕೊಂಡು ಕೊಟ್ಟಿಗೆಯಲ್ಲೇ ಮಲಗಿ…ಯಾರು ಬೇಡ ಅಂದದ್ದು
ಕೌ ಹಗ್ ಡೇ ಅಂದರೆ ಹಸು ಅಪ್ಪುಗೆ ದಿನ…ಮುಂಡಾ ಮೊಚ್ತು….ಥತ್..
ಅದಿರಲಿ…ಸಾರ್ವಜನಿಕವಾಗಿ ಈ ಕೇಸರಿಗಳು ಇಂಥ ಹೇಳಿಕೆ ಕೊಟ್ರೆ ಆಶ್ಚರ್ಯವೇನಿಲ್ಲ. ಆದರೆ…ANIMAL WELFARE BOARD OF INDIA ದಂತ ಸರ್ಕಾರಿ ಸಂಸ್ಥೆಯ ಮೂಲಕ ಆರ್ಡರ್ ಮಾಡುವಷ್ಟು ಲಜ್ಜೆಗೇಡಿತನ ಈ ಫ್ಯಾಶಿಸ್ಟ್ ಮೋದಿ ಸರ್ಕಾರದ್ದು ಎಂದು ಚಂದ್ರಪ್ರಭ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೇಮಿಗಳ ದಿನಕ್ಕೆ ಕೇಂದ್ರ ಸರ್ಕಾರದ ಕೌಂಟರ್. ಕೌ ಹಗ್ ಡೇ ಅಂತೆ. ದನ ತಬ್ಬಿಕೊಳ್ಳೋ ದಿನ! ಬಹುಶಃ ಮೋದಿಯವರೇ ಒಂದು ದನ ತಬ್ಕೊಂಡು ಉದ್ಘಾಟನೆ ಮಾಡಬಹುದು. ಆದರೆ ದನ ತಬ್ಕೊಳ್ಳೋದು ಹೆಂಗೆ? ಇದೊಂಥರ ಬಡಪಾಯಿ ದನಗಳಿಗೆ ಲೈಂಗಿಕ ಕಿರುಕುಳದ ಥರ ಅನ್ನಿಸಲ್ವಾ? ತೀರ್ಮಾನ ತೆಗೆದುಕೊಳ್ಳೋದಕ್ಕೂ ಮುಂಚೆ ದನಗಳಿಗೂ ಒಂದು ಮಾತು ಕೇಳಬೇಕಿತ್ತು ಅಲ್ವಾ? ನಿಮಗೇನನ್ನಿಸುತ್ತೆ? ಎಂದು ಪತ್ರಕರ್ತ ದಿನೇಶ್ ಕುಮಾರ್ ದಿನೋ ಪ್ರಶ್ನಿಸಿದ್ದಾರೆ.
ಮಿತ್ರ ಪ್ರಕಾಶ್ ಎನ್ನುವವರು ಮುಂದೆ ಬಂದರೆ ಹಾಯ ಬೇಡ… ಹಿಂದೆ ಬಂದರೆ ಒದೆಯಬೇಡ…
ಕೌಹಗ್ಡೇ ಎಂದು ಕಿಚಾಯಿಸಿದ್ದಾರೆ. ಬಹಳಷ್ಡು ಜನ ಪ್ರಧಾನಿ ಮೋದಿ ಚಾಲನೇ ನೀಡಲಿದ್ದಾರೆ ಎಂದರೆ, ಕೆಲವರು ತೇಜಸ್ವಿ ಸೂರ್ಯ, ಸೂಲಿಬೇಲೆ ಮನೆ ಕಡೆ ಹಸ ಬಿಟ್ಟ ಬನ್ರೋ ಅವರ ಬಂಡವಾಳ ಏನು ಅಂತಾ ಗೊತ್ತಾಗುತ್ತೆ ಅಂತಾ ಬರೆದಿದ್ದಾರೆ.
ಪ್ರೇಮಿಗಳ ದಿನವಾದ ಫೆ-14 ಕುರಿತು ವಿವಾದಗಳನ್ನು ಹುಟ್ಟು ಹಾಕುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ ಹುತಾತ್ಮರಾದ ದಿನ ಎಂದು ಅಪಪ್ರಚಾರ ಮಾಡಿ ಇತಿಹಾಸ ತಿರುಚುವ ಕೆಲಸ ಮಾಡಲಾಗಿತ್ತು. ಈ ಮೂವರು ಕ್ರಾಂತಿಕಾರಿಗಳು ಹುತಾತ್ಮರಾದದ್ದು 1931 ಮಾರ್ಚ್ 23. ಸುಳ್ಳು ಇತಿಹಾಸವನ್ನು ಧಿಕ್ಕರಿಸಿ ಎಂಬ ಪ್ರಚಾರ ಜೋರಾದ ನಂತರ ತೆಪ್ಪಗಾಗಿದ್ದರು.
ಈಗ ಮತ್ತೆ ಇಂತಹ ಗೊಂದಲ ಸೃಷ್ಟಿಸಿದ್ದಾರೆ. ಕವಿ ಜಿಎಸ್ ಶಿವರುದ್ರಪ್ಪ ಹೇಳಿದ ಹಾಗೆ ” ಪ್ರೀತಿ ಇಲ್ಲದ ಮೇಲೆ ಹೂ ಅರಳೀತು ಹೇಗೆ? ” ಎಂಬಂತೆ ಪ್ರೀತಿಯೇ ಇಲ್ಲದ ಬಲಪಂಥಯರಿಗೆ ಫೆ 14 ನ್ನು ಕಂಡರೆ ಭಯವೇಕೆ?, ಪ್ರೀತಿ ಹಂಚುವ ಗುಣ ಅವರಲ್ಲಿ ಇಲ್ಲಿ ಎಂಬುದು ಸ್ಪಷ್ಟವಾಗುತ್ತಿದೆ.
ಪ್ರೀತಿ ಎಲ್ಲರ ಹಕ್ಕು, ಆಯ್ಕೆ, ಆದರೆ ಹೊಣೆಗಾರಿಕೆಯಿಂದ ವರ್ತಿಸುವುದು ಅಗತ್ಯ.