ಮಂಗಳೂರು : ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರು ಆಹಾರ ಸೇವಿಸಿದ ಕೆಲವೇ ಗಂಟೆಗಳಲ್ಲೇ ಏಕಾಏಕಿ ಅನಾರೋಗ್ಯಕ್ಕೀಡಾದ ಘಟನೆ ನಡೆದಿದೆ.
ಅಸ್ವಸ್ಥರಾಗಿರುವ ವಿದ್ಯಾರ್ಥಿನಿಯರನ್ನು ನಗರದ ಸಿಟಿ ಆಸ್ಪತ್ರೆ, ಕೆಎಂಸಿ ಹಾಗೂ ಮಂಗಳಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಹೊರವಲಯದ ಶಕ್ತಿ ನಗರದಲ್ಲಿರುವ ಸಿಟಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳ ಹಾಸ್ಟೆಲ್ ಇದಾಗಿದ್ದು, 137 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಯಾವುದೇ ಅಪಾಯವಿಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಹಲವರನ್ನು ಆಸ್ಪತ್ರೆಗೆ ದಾಖಲಾಗಲು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ. ನಗರದ ಮೂರು ಆಸ್ಪತ್ರೆಗಳಲ್ಲಿ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ಅವರು ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಂತಿ ಭೇದಿ : ಮಾಂಸಾಹಾರ ಸೇವಿಸಿದ್ದ ವಿದ್ಯಾರ್ಥಿನಿಯರಲ್ಲಿ ಸೋಮವಾರ ಮಧ್ಯಾಹ್ನ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ‘ಮಧ್ಯಾಹ್ನ ಊಟ ಸೇವಿಸಿದ ಬಳಿಕ ಹೊಟ್ಟೆ ನೋವು, ವಾಂತಿ, ಭೇದಿ ಶುರುವಾಗಿತ್ತು. ಚಿಕನ್, ಘೀರೈಸ್’, ಸೇವಿಸಿದವರಲ್ಲಿ ಹೆಚ್ಚು ಸಮಸ್ಯೆ ಕಾಣಿಸಿಕೊಂಡಿದೆ ಭಾನುವಾರವೂ ಆಹಾರ ಸೇವಿಸಿದ್ದ ಕೆಲವು ವಿದ್ಯಾರ್ಥಿನಿಯರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಸೋಮವಾರ ಮಧ್ಯಾಹ್ನ ಹಾಸ್ಟೆಲ್ನ ಬಹುತೇಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡರು ಎಂದು ಮೂಲಗಳು ತಿಳಿಸಿವೆ.