ಬೆಂಗಳೂರು: 21ನೇ ಶತಮಾನದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಕ್ಷೇತ್ರವು ಪ್ರಮುಖ ಪಾತ್ರ ವಹಿಸಲಿದ್ದು, ಈ ಶಕ್ತಿಯ ಹೊಸ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಪರಿವರ್ತನೆಯಲ್ಲಿ ಭಾರತವು ಇಂದು ಪ್ರಬಲವಾದ ಧ್ವನಿಗಳಲ್ಲಿ ಒಂದಾಗಿ ಮಾರ್ಪಟ್ಟಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.
ನೆಲಮಂಗಲ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ( ಬಿಐಇಸಿ)ದಲ್ಲಿ ಭಾರತ ಇಂಧನ ಸಪ್ತಾಹ–2023ಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಇದು ಭಾರತದಲ್ಲಿ ಜಿ-20 ಅಧ್ಯಕ್ಷತೆ ದೊರೆತ ನಂತರ ನಡೆಯುತ್ತಿರುವ ಮೊದಲ ಕಾರ್ಯಕ್ರಮ. ತಂತ್ರಜ್ಞಾನದ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇಂಧನ ಕ್ಷೇತ್ರಕ್ಕೆ ಇಂದಿನ ದಿನಮಾನಗಳಲ್ಲಿ ಬಹಳ ಮಹತ್ವವಿದೆ. ಇಂಧನ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವು ಇಂದು ವಿಶ್ವದ ಅತ್ಯಂತ ಮುಂದುವರೆದ ಶಕ್ತಿಗಳ ಪೈಕಿ ಒಂದಾಗಿದೆ ಎಂದು ಹೇಳಿದರು.
ಐಎಂಎಫ್ 2023ರ ಪ್ರಗತಿಯ ಮುನ್ಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಸ್ಥಾನ ಪಡೆದಿದೆ. ಮಹಾಮಾರಿ ಹಾಗೂ ಯುದ್ಧದ ಪ್ರಭಾವದ ನಡುವೆಯೂ ಭಾರತವು ಜಾಗತಿಕ ಆಶಾಕಿರಣ (ಬ್ರೈಟ್ ಸ್ಪಾಟ್) ಆಗಿದೆ. ಆಂತರಿಕ ಸತ್ವದಿಂದಾಗಿ ಭಾರತವು ಬಾಹ್ಯ ಒತ್ತಡಗಳನ್ನು ತಡೆದುಕೊಂಡಿದೆ.
ಭಾರತದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ಸ್ಥಿರ ಸರ್ಕಾರವಿದೆ. ಹೀಗಾಗಿಯೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಪೂರಕವಾಗುವ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ಅವುಗಳ ಫಲಾನುಭವಿಗಳ ಸಂಖ್ಯೆಯು ಹಲವು ಅಭಿವೃದ್ಧಿ ಹೊಂದಿದ ದೇಶಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಕೇರಳದಲ್ಲಿ ಪ್ರದರ್ಶನವಾಗಲಿದೆ: ಡಿವೈಎಫ್ಐ
ಇಂದು ದೇಶದಲ್ಲಿ ಕೋಟ್ಯಂತರ ಜನರ ಬದುಕಿನ ರೀತಿ ಬದಲಾಗಿದೆ. ಹಳ್ಳಿಹಳ್ಳಿಗಳಲ್ಲಿ ಇಂಟರ್ನೆಟ್ ತಲುಪಿದೆ. ಇದಕ್ಕಾಗಿ 5 ಲಕ್ಷ ಕಿಮೀಗೂ ಹೆಚ್ಚು ಉದ್ದದಷ್ಟು ಆಪ್ಟಿಕಲ್ ಫೈಬರ್ ಅಳವಡಿಸಲಾಗಿದೆ. ಬ್ರಾಡ್ಬಾಂಡ್ ಬಳಕೆದಾರರ ಸಂಖ್ಯೆ 13 ಪಟ್ಟು ಹೆಚ್ಚಾಗಿದೆ. ಇಂಟರ್ನೆಟ್ ಬಳಕೆ ಪ್ರಮಾಣ 3 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಬಡವರ್ಗದಲ್ಲಿದ್ದವರು ಮಧ್ಯಮವರ್ಗಕ್ಕೆ ಬಂದಿದ್ದಾರೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ಮುಂಚೂಣಿಗೆ ಬಂದಿದೆ.
ವಿಶ್ವದಲ್ಲಿಯೇ ಅತಿಹೆಚ್ಚು ಆಕಾಂಕ್ಷೆ ಹೊಂದಿರುವವರ ನಾಡಾಗಿ ನಮ್ಮ ಭಾರತ ವಿಕಸಿತಗೊಳ್ಳುತ್ತಿದೆ. ಭಾರತದಲ್ಲಿ ಇಂಧನದ ಬೇಡಿಕೆ ಹೆಚ್ಚಾಗುತ್ತಿದೆ. ಅಭಿವೃದ್ಧಿಯ ವೇಗ ಗಮನಿಸಿದರೆ ಬರುವ ವರ್ಷಗಳಲ್ಲಿ ಭಾರತದಲ್ಲಿ ಹಲವು ಹೊಸ ನಗರಗಳು ರೂಪುಗೊಳ್ಳಲಿವೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು ಇದೇ ಮಾತು ಹೇಳಿದೆ. ಇದೇ ದಶಕದಲ್ಲಿ ಭಾರತದಲ್ಲಿ ಇಂಧನದ ಬೇಡಿಕೆಯು ವಿಶ್ವದಲ್ಲಿಯೇ ಅತ್ಯಂತ ಹೆಚ್ಚಾಗಲಿದೆ. ಹೀಗಾಗಿಯೇ ನಿಮ್ಮಂಥ ಹೂಡಿಕೆದಾರರು ಹಾಗೂ ಸಹವರ್ತಿಗಳಿಗೆ ಹೊಸ ಅವಕಾಶಗಳು ಲಭ್ಯವಾಗಲಿವೆ ಎಂದು ಮೋದಿ ಹೇಳಿದರು.
ಸಿದ್ದರಾಮಯ್ಯ ಲೇವಡಿ :ನಾವು ಅಡುಗೆ ಮಾಡ್ತೀವಿ, ಮೋದಿ ಬಂದು ಬಡಿಸ್ತಾರೆ. ರಾಜ್ಯ ಬಿಜೆಪಿಗೆ ಮೋದಿಯೇ ಬಂಡವಾಳ, ಏನು ಕೆಲಸ ಮಾಡಿಲ್ಲವಲ್ಲ. ಹೆಚ್ಎಎಲ್ ಹೆಲಿಕಾಪ್ಟರ್ ಘಟಕ UPA ಅವಧಿಯಲ್ಲಿ ಜಾರಿಯಾಗಿದೆ. ಆದರೆ ಈಗ ಮೋದಿ ಬಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೋದಿ ನಾವು ಮಾಡಿದ ಕೆಲಸವನ್ನೇ ಯಾವಾಗಲು ಉದ್ಘಾಟನೆ ಮಾಡುತ್ತಾರೆ. ಎಚ್ಎಎಲ್ ಯುಪಿಎ ಸರ್ಕಾರದಲ್ಲಿ ಮಾಡಿರುವುದಾಗಿದೆ. ಲಂಬಾಣಿ ಜನರನ್ನು ಕಂದಾಯ ಗ್ರಾಮ ಮಾಡಿರೋದು ನಾವು, ಕಾನೂನು ಮಾಡಿರುವುದು, ನಾವು ಹಕ್ಕು ಪತ್ರ ಹಂಚಿಕೆ ಮಾಡಲು ಬಿಜೆಪಿಯವರು ಮೋದಿಯನ್ನ ಕರೆದುಕೊಂಡು ಬಂದಿದ್ದರು.
ನಾವು ಅಡುಗೆ ಮಾಡ್ತೀವಿ, ಮೋದಿ ಬಂದು ಬಡಿಸ್ತಾರೆ. ರಾಜ್ಯ ಬಿಜೆಪಿಗೆ ಮೋದಿಯೇ ಬಂಡವಾಳ, ಏನು ಕೆಲಸ ಮಾಡಿಲ್ಲವಲ್ಲ. ಏಕೆಂದರೆ ಇದು ಜನ ವಿರೋಧಿ ಸರ್ಕಾರ 40% ಸರ್ಕಾರ. ಪ್ರಧಾನಿ ಮೋದಿ ಬಂದರೆ ವೋಟ್ ಬರುತ್ತೆ ಅಂತ ಬಿಜೆಪಿ ಅಂದುಕೊಂಡಿದೆ. ಆದರೆ ಈಗಾಗಲೇ ಜನ ತೀರ್ಮಾನ ಮಾಡಿದ್ದಾರೆ ಎಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ