ಚೆನ್ನೈ : ಭಾರತೀಯ ಚಿತ್ರರಂಗ ಕಂಡ ಹೆಸರಾಂತ ಗಾಯಕಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ವಾಣಿ ಜಯರಾಮ್ ಅವರು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಚೆನ್ನೈನ ನುಂಗಂಬಕ್ಕಂನಲ್ಲಿರುವ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ. ಈಚೆಗಷ್ಟೇ ಭಾರತದ ಮೂರನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಭೂಷಣವನ್ನು ವಾಣಿ ಜಯರಾಮ್ ಅವರಿಗೆ ಘೋಷಣೆ ಮಾಡಲಾಗಿತ್ತು.
ವಾಣಿ ಜಯರಾಮ್ ಅವರು ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ವಾಣಿ ಜಯರಾಮ್ ಅವರು ಮಲಗುವ ಕೋಣೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅದ್ರೆ ಅವರ ಹಣೆಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆಯುರ್ ಲ್ಯಾಂಪ್ ಪೊಲೀಸರು ವಾಣಿ ಜಯರಾಂ ಅವರ ಮನೆಯಲ್ಲಿನ ಸಿಸಿಟಿವಿ ಕ್ಯಾಮೆರಾ ಪೂಟೇಜ್ಗಳನ್ನು ವಶಕ್ಕೆ ಪಡೆದಿದ್ದು, ತೀವ್ರ ತನಿಖೆ ನಡೆಸುತ್ತಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಅವರ ದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಂದ ನಂತರವಷ್ಟೇ ಅವರ ಸಾವಿನ ನಿಗೂಢ ಬಹಿರಂಗವಾಗಲಿದೆ. ಸ್ಥಳೀಯರ ಪ್ರಕಾರ ವಾಣಿ ಒಬ್ಬರೇ ಮನೆಯಲ್ಲಿ ವಾಸವಿದ್ದರಂತೆ. ಮನೆಗೆಲಸದಾಕೆ ಬಂದು ಬಾಗಿಲು ಬಡಿದಾಗ, ಬಾಗಿಲು ತೆರೆದಿಲ್ಲ. ಹಾಗಾಗಿ ಪಕ್ಕದ ಮನೆಯವರಿಗೆ ತಿಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗಾಯಕಿ ವಾಣಿ ಜಯರಾಮ್ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬೆಂಗಾಲಿ, ಭೋಜ್ಪುರಿ, ತುಳು ಮತ್ತು ಒರಿಯಾ ಭಾಷೆಗಳು ಸೇರಿ ಸುಮಾರು ಹತ್ತು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಅವರು ದೇಶ ಮತ್ತು ಪ್ರಪಂಚದಾದ್ಯಂತ ಪ್ರದರ್ಶನ ನೀಡಿದ್ದಾರೆ. ಅವರು ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ಒಡಿಶಾದಿಂದ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದ ಗಾಯಕಿ : ವಾಣಿ ಜಯರಾಂ ಅವರು 1945 ನವೆಂಬರ್ 30ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಅವರದು ಸಂಗೀತ ಕುಟುಂಬ. ಪೋಷಕರಿಂದ ಸಂಗೀತದ ಬಗ್ಗೆ ಜ್ಞಾನ ಬೆಳೆಸಿಕೊಂಡ ವಾಣಿ ಅವರು 8ನೇ ವಯಸ್ಸಿನಲ್ಲಿ ರೆಡಿಯೋದಲ್ಲಿ ಹಾಡಲು ಆರಂಭಿಸಿದರು. ಬ್ಯಾಂಕ್ ಉದ್ಯೋಗಿಯಾಗಿಯೂ ವಾಣಿ ಕೆಲಸ ಮಾಡಿದ್ದರು. ಮದುವೆಯಾದ ಮೇಲೆ ಪತಿ ಜಯರಾಮ್ ಅವರೊಂದಿಗೆ ಮುಂಬೈಗೆ ವಾಣಿ ಅವರು, ಮೊದಲು ಹಾಡಿದ್ದು ಹಿಂದಿ ಸಿನಿಮಾಗಳಿಗೆ. 1971ರಲ್ಲಿ ಹಿಂದಿಯ ‘ಗುಡ್ಡಿ’ ಚಿತ್ರದ ಮೂರು ಹಾಡುಗಳಿಗೆ ವಾಣಿ ಧ್ವನಿ ನೀಡಿದರು. ನಂತರ ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳ 10 ಸಾವಿರ ಹಾಡುಗಳನ್ನು ವಾಣಿ ಅವರು ಹಾಡಿದ್ದಾರೆ. 2021ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷ ತುಂಬಿತ್ತು.