ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಜಾತಿ ಪದ್ಧತಿ ತಾಂಡವಾಡುತ್ತಿದೆ. ಇದರಿಂದ ದೇಶ ಹಾಳಾಗುತ್ತಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಜಾತಿ ಪದ್ದತಿಯನ್ನು ನಿರ್ಮೂಲನೆ ಮಾಡುವ ಕೆಲಸವಾಗಬೇಕಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.
ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ ರಚಿಸಿರುವ ಮತ್ತು ಜನಪ್ರಕಾಶನ ಪ್ರಕಟಿತ ‘ನ್ಯಾಯಾಂಗ ಒಳನೋಟ ಕೃತಿ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಬಿ. ವೀರಪ್ಪ ಅವರು, ನ್ಯಾಯ ಸ್ಥಾನದಲ್ಲಿದ್ದ ವೇಳೆ ಧರ್ಮ ಮತ್ತು ಅಧರ್ಮ ಎರಡೇ ಕಾಣಬೇಕು. ಜಾತಿ ಅಥವಾ ಸಂಬಂಧಗಳು ಅಡ್ಡವಾಗಬಾರದು. ತಪ್ಪು ಮಾಡಿದವರು ತನ್ನ ಪತ್ನಿ ಅಥವಾ ಮಕ್ಕಳೇ ಆಗಿದ್ದರೂ ನ್ಯಾಯಮೂರ್ತಿಗಳು ನಿರ್ದಾಕ್ಷಿಣ್ಯವಾಗಿ ಜೈಲಿಗೆ ಕಳುಹಿಸುವ ಧೈರ್ಯವನ್ನು ತೋರಬೇಕೆಂದು ತಿಳಿಸಿದರು.
ಇದನ್ನು ಓದಿ: ನ್ಯಾಯಾಂಗದಲ್ಲಿ ಕೇಂದ್ರದ ಹಸ್ತಕ್ಷೇಪ ಅಪಾಯಕಾರಿ: ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ಭ್ರಷ್ಟಾಚಾರವೆಂಬ ಪಿಡುಗು ದೇಶದಲ್ಲಿ ಕ್ಯಾನ್ಸರ್ ಮಾದರಿ ಹರಡುತ್ತಿದೆ. ಭ್ರಷ್ಟಾಚಾರ ವಿರುದ್ಧ ಹೋರಾಟ ಮನೆಗಳಿಂದಲೇ ಆರಂಭವಾಗಬೇಕಿದೆ. ಭ್ರಷ್ಟಾಚಾರ ತೊಡೆದು ಹಾಕುವ ಕೆಲಸವಾಗಬೇಕಿದೆ. ಇಲ್ಲವಾದಲ್ಲಿ ಅದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಲಿದೆ. ಕಳವಳ ವ್ಯಕ್ತಪಡಿಸಿದರು. ಶೈಕ್ಷಣಿಕವಾಗಿ ಹೆಚ್ಚು ಅಂಕ ಪಡೆದುಕೊಂಡವರೇ, ದೊಡ್ಡ ಅಧಿಕಾರಿಗಳಾಗುವವರೇ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಕಲ್ಲು ಕಟ್ಟಡಗಳಲ್ಲಿರುವ (ಸರ್ಕಾರಿ ಅಧಿಕಾರಿಗಳು) ಜನರ ಹೃದಯವೂ ಕಲ್ಲಾಗಿರಲಿದೆ. ನ್ಯಾಯಾಲಯ ಆದೇಶ ನೀಡಿ 10 ವರ್ಷ ಕಳೆದರು ಅದನ್ನು ಅನುಪಾಲನೆ ಮಾಡುವುದಿಲ್ಲ. ಈ ವ್ಯವಸ್ಥೆ ನೋಡಿದರೆ ನಾವು ನ್ಯಾಯಾಧೀಶರು ಎಂಬುನ್ನು ಮರೆತು ಹೋಗುವಂತಾಗಲಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮಾತನಾಡಿ, ಒಳ್ಳೆಯ ನ್ಯಾಯಧೀಶರಾಗ ಬೇಕೆಂದುಕೊಂಡವರಲ್ಲಿ ಮಾನವೀಯ ಮೌಲ್ಯಗಳು, ಅಂತಃಕರಣವಿದ್ದಲ್ಲಿ ಮಾತ್ರ ಉತ್ತಮ ನ್ಯಾಯ ಸಿಗಲು ಸಾಧ್ಯ. ನ್ಯಾಯಾಧೀಶರು ಬದ್ಧತೆ ಮತ್ತು ಸ್ವತಂತ್ರವಾಗಿ ತೀರ್ಪು ನೀಡಬೇಕು. ಅವರಿಗೆ ಆತ್ಮಸಾಕ್ಷಿಯೇ ಕಾವಲುಗಾರನಾಗಿರಬೇಕು. ಪ್ರಮಾಣ ವಚನವೇ ಅವರ ಧರ್ಮವಾಗಬೇಕು ಎಂದು ತಿಳಿಸಿದರು.
ಇದನ್ನು ಓದಿ: ಆಡಳಿತದಲ್ಲಿರುವ ಪಕ್ಷಗಳು ತಮ್ಮ ಅಜೆಂಡಾ ನ್ಯಾಯಾಂಗ ಬೆಂಬಲಿಸಬೇಕೆಂದು ಬಯಸುತ್ತಿವೆ: ಎನ್ ವಿ ರಮಣ
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಮಾತನಾಡಿ, ನ್ಯಾಯಾಂಗದ ಸ್ವಾತಂತ್ರಕ್ಕೆ ಧಕ್ಕೆ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಶಾಸಕಾಂಗ, ಅದರಲ್ಲೂ ಉಪರಾಷ್ಟ್ರಪತಿಯೇ ಅದಕ್ಕೆ ಪೂರಕವಾದ ಮಾತುಗಳನ್ನಾಡಿರುವುದು ದುರಂತ. ಸಂವಿಧಾನ ರಕ್ಷಣೆ ಮಾಡಿದ ಹಕ್ಕುಗಳನ್ನು ಜಾರಿ ಗೊಳಿಸಬೇಕಾಗಿದೆ. ಅದಕ್ಕೆ ನ್ಯಾಯಾಂಗ ವ್ಯವಸ್ಥೆಯಿದೆ. ಸಂವಿಧಾನ ಮೂಲ ತತ್ವಗಳಿಗೆ ವಿರುದ್ಧವಾದ ಕಾಯಿದೆಗಳನ್ನು ನ್ಯಾಯಾಂಗ ವ್ಯವಸ್ಥೆ ರದ್ದುಪಡಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಂತಃಕರಣವಿರುವ ನ್ಯಾಯಾಧೀಶರ ಸಂಖ್ಯೆ ಕಡಿಮೆ ಆಗುತ್ತಿವೆ. ನ್ಯಾಯಾಂಗ ನಡೆಯುತ್ತಿರುವ ತಪ್ಪುಗಳನ್ನು ಸರಿಪಡಿಸುವ ಕಾರ್ಯವೂ ಆಗಬೇಕಿದೆ. ಈ ಹಿಂದೆ ಈ ರೀತಿಯ ಪ್ರಕರಣಗಳು ನಡೆದಿತ್ತು. ಆದರೆ, ಪ್ರಸ್ತುತ ನಡೆಯುತ್ತಿಲ್ಲ ಎಂದು ಹೇಳಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ಮಾತನಾಡಿ, “ನ್ಯಾಯದಾನವೆಂಬುದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಆಗಬೇಕಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಸ್ವತಂತ್ರವಾಗಿಯೇ ಉಳಿಸಿಕೊಳ್ಳಬೇಕು. ಅದು ವಕೀಲರಿಂದ ಮಾತ್ರ ಸಾಧ್ಯ. ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನ್ಯಾಯಮೂರ್ತಿಗಳ ವರ್ಗಾವಣೆ ಕಿರುಕುಳದಿಂದ ತನ್ನ ಹುದ್ದೆಗಳಿಗೆ ರಾಜೀನಾಮೆ ನೀಡುವಂತಹ ಪರಿಸ್ಥಿತಿಗಳು ಎದುರಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜನಪ್ರಕಾಶ ಪ್ರಕಾಶನದ ಮುಖ್ಯಸ್ಥ ಬಿ.ರಾಜಶೇಖರ್ ಮೂರ್ತಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ