ತಿರುವಣ್ಣಾಮಲೈ: ಇಂದಿಗೂ ದಲಿತರು ದೇವಾಲಯ ಪ್ರವೇಶವೆಂಬುದು ನಿಷಿದ್ಧವಾಗಿದ್ದು, ಹಲವು ಕಡೆಗಳಲ್ಲಿ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಇಂತಹುದೇ ಪ್ರಕರಣವೊಂದು ತೆನ್ಮುಡಿಯನೂರು ಗ್ರಾಮದಲ್ಲಿ ಆಚರಣೆಯಲ್ಲಿದ್ದು, ಇಲ್ಲಿ 500ರಷ್ಟು ದಲಿತ ಸಮುದಾಯದವರು ವಾಸವಾಗಿರುವ ಗ್ರಾಮದ ಶ್ರೀ ಮುತಾಲಮ್ಮನ ದೇವಸ್ಥಾನ ಪ್ರವೇಶಕ್ಕೆ ಕಳೆದ 70 ವರ್ಷಗಳಿಂದ ಅವಕಾಶ ಇರಲಿಲ್ಲ.
ಶ್ರೀ ಮುತಾಲಮ್ಮನ ದೇವಸ್ಥಾನ 200 ವರ್ಷಗಳಷ್ಟು ಹಳೆಯದಾಗಿದ್ದು, ದಲಿತರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಇಂದು ಮಹಾತ್ಮ ಗಾಂಧಿಜೀ ಹುತಾತ್ಮ ದಿನದ ಪ್ರಯುಕ್ತ ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ದಲಿತ ಸಮುದಾಯದವರು ಹೂಮಾಲೆ ಮತ್ತು ಹಣ್ಣುಹಂಪಲುಗಳನ್ನು ಹೊತ್ತು ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದರು.
ಇದನ್ನು ಓದಿ : ಗದಗದಲ್ಲಿ ದಲಿತ ಕುಟುಂಬಗಳಿಗೆ ಬಹಿಷ್ಕಾರ; ದೇವಸ್ಥಾನ ಪ್ರವೇಶವಿಲ್ಲ, ಹೋಟೆಲು ಕಿರಾಣಿಗೂ ಹೋಗುವಂತಿಲ್ಲ
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಟ್ಟಿರುವ ದೇವಸ್ಥಾನ ಇದಾಗಿದ್ದು, ಪೋಷಕ-ಶಿಕ್ಷಕರ ಸಮಾವೇಶದ ಸಂದರ್ಭದಲ್ಲಿ ದಲಿತರ ದೇವಸ್ಥಾನ ಪ್ರವೇಶ ನಿಷೇಧ ವಿಚಾರ ಬೆಳಕಿಗೆ ಬಂದಿತು. ದಲಿತರಿಗೆ ದೇವಾಲಯ ಪ್ರವೇಶಕ್ಕೆ ಸಂಬಂಧಸಿದಂತೆ ಪ್ರಬಲ ಸಮುದಾಯಗಳ ಮನವೊಲಿಸಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆಗಳು ನಡೆದಿತ್ತು. ಸಭೆಯಲ್ಲಿ, ದೇವಸ್ಥಾನದಲ್ಲಿ ಪೂಜೆ ಮಾಡದಂತೆ ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಮನವರಿಕೆ ಮಾಡಿಕೊಡಲಾಯಿತು.
ಆದರೂ ಸಹ, ದಲಿತರ ದೇವಸ್ಥಾನ ಪ್ರವೇಶದ ಐತಿಹಾಸಿಕ ಕಾರ್ಯಕ್ಕೆ ಗ್ರಾಮದ ಮೇಲ್ವರ್ಗ ಸಮುದಾಯದ 12 ಪ್ರಬಲ ಗುಂಪು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಗೆ ಮುಂದಾದರು ಮತ್ತು ದೇವಸ್ಥಾನವನ್ನು ಮುಚ್ಚಬೇಕೆಂದು ಆಗ್ರಹಿಸಿದರು. ಇಂದು ಮುಂಜಾಗೃತ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಉದ್ದೇಶದಿಂದ ಸುಮಾರು 300 ಪೊಲೀಸ್ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು ಮತ್ತು ವಿರೋಧ ವ್ಯಕ್ತಪಡಿಸಲು ಆಗಮಿಸಿದ ಮೇಲ್ವರ್ಗದ ಜನರಿಗೆ ದೇವಾಲಯವು ಮಾನವ ಸಂಪನ್ಮೂಲ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಒಳಪಡುವುದರಿಂದ ಇಂತಹ ತಾರತಮ್ಯ ಆಚರಣೆಗಳು ಕಾನೂನಿಗೆ ವಿರುದ್ಧವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತರ ಮೇಲೆ ಸವರ್ಣೀಯರಿಂದ ಮಾರಣಾಂತಿಕ ಹಲ್ಲೆ : ದೂರು ದಾಖಲು
ತಿರುವಣ್ಣಾಮಲೈ ಪೊಲೀಸ್ ವರಿಷ್ಠಾಧಿಕಾರಿ ಕೆ.ಕಾರ್ತಿಕೇಯನ್ ಅವರೊಂದಿಗೆ ಕಲೆಕ್ಟರ್ ಬಿ.ಮುರುಗೇಶ್ ಮತ್ತು ವೆಲ್ಲೂರು ವ್ಯಾಪ್ತಿಯ ಉಪ ಪೊಲೀಸ್ ಮಹಾ ನಿರೀಕ್ಷಕ(ಡಿಐಜಿ) ಎಂ.ಎಸ್.ಮುತ್ತುಸಾಮಿ ಸ್ಥಳದಲ್ಲಿ ಉಪಸ್ಥಿತರಿದ್ದರು.
ತೆನ್ಮುಡಿಯನೂರು ಗ್ರಾಮದಲ್ಲಿ ಸುಮಾರು 500 ಮಂದಿ ದಲಿತರು ಹಾಗೂ ಮೇಲ್ವರ್ಗದ 750 ಮಂದಿ ವಾಸವಾಗಿದ್ದಾರೆ. ದಶಕಗಳ ಹಿಂದೆಯೇ ಸಮುದಾಯಗಳು ವಿವಿಧ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲು ಒಪ್ಪಿಕೊಂಡಿವೆ. ಅದರಲ್ಲಿ ಯಾವುದೇ ಬದಲಾವಣೆಗಳ ಅವಶ್ಯಕತೆ ಇಲ್ಲ ಎಂಬುದು ಮೇಲ್ವರ್ಗದವರ ಆಗ್ರಹ. ಆದರೆ ಅಸ್ಪೃಶ್ಯತಾ ಆಚರಣೆ ಇನ್ನೂ ಮುಂದುವರೆದಿದ್ದು, ಇಂಥಹ ಅನಿಷ್ಠ ಆಚರಣೆ ನಿವಾರಣೆ ಮಾಡಬೇಕು. ದಲಿತರಿಗೆ ಶ್ರೀ ಮುತಾಲಮ್ಮನ ದೇವಸ್ಥಾನ ಪ್ರವೇಶ ಹಾಗೂ ಪೂಜೆಗೆ ಅವಕಾಶ ನೀಡಬೇಕೆಂಬುದು ದಲಿತ ಸಮುದಾಯದ ಆಗ್ರಹವಾಗಿದೆ.
ತಮಿಳುನಾಡಿನಲ್ಲಿ ದಲಿತರ ದೇವಸ್ಥಾನ ಪ್ರವೇಶ ಘಟನೆ ಇದು ಎರಡನೇಯದಾಗಿದ್ದು, ಪುದುಕ್ಕೊಟ್ಟೈ ಜಿಲ್ಲೆಯಲ್ಲೂ ದೇವಾಲಯ ಪ್ರವೇಶ ನಿರಾಕರಿಸಿದ ಪ್ರತಿನಿಧಿಗಳ ಗುಂಪನ್ನು ಜಿಲ್ಲಾಧಿಕಾರಿ ನೇತೃತ್ವ ವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ