ಬೆಂಗಳೂರು: ಮುಷ್ಕರ ನಿರತ ಅಂಗನವಾಡಿ ಕಾರ್ಯಕರ್ತರನ್ನು ಸರ್ಕಾರ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತಿಳಿಸಿದ್ದು, ಕೂಡಲೇ ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.
ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು(ಜನವರಿ 27) ಐದನೇ ದಿನಕ್ಕೆ ಕಾಲಿಟ್ಟಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರ ಹಠಕ್ಕೆ ಬಿದ್ದು ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟ ನಡೆಸುತ್ತಿದ್ದಾರೆ ಎಂದಿದ್ದಾರೆ.
ಇದನ್ನು ಓದಿ: ಅಂಗನವಾಡಿ ನೌಕರರ ಪ್ರತಿಭಟನೆ 4ನೇ ದಿನಕ್ಕೆ: ಗಣರಾಜ್ಯೋತ್ಸವ ಆಚರಣೆ – ನ್ಯಾ. ನಾಗಮೋಹನ್ ದಾಸ್ ಭಾಗಿ
ಅಂಗನವಾಡಿ ಕಾರ್ಯಕರ್ತರು ಮಳೆ- ಚಳಿ-ಗಾಳಿ ಎನ್ನದೆ ಬೀದಿಯಲ್ಲಿ ಠಿಕಾಣಿ ಹೂಡಿ ಮುಷ್ಕರದಲ್ಲಿ ತೊಡಗಿದ್ದಾರೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ನಂತರವೂ ರಾಜ್ಯ ಸರ್ಕಾರ ಮುತುವರ್ಜಿ ವಹಿಸದಿರುವುದ ವಿಷಾದನೀಯ ಎಂದು ಸಿದ್ಧರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ತಕ್ಷಣವೇ ಅಂಗನವಾಡಿ ಕಾರ್ಯಕರ್ತರನ್ನು ಕರೆದು ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಬೇಕು ಎಂದಿರುವ ಅವರು, ಸೇವೆ ಕಾಯಂ, ವೇತನ ಹೆಚ್ಚಳ ಮತ್ತು ಮತ್ತು ನಿವೃತ್ತಿ ಸೌಲಭ್ಯವೂ ಸೇರಿದಂತೆ ಹಲವು ಬೇಡಿಕೆಗಳನ್ನು ಅಂಗನವಾಡಿ ಕಾರ್ಯಕರ್ತರು ಸರ್ಕಾರದ ಮುಂದಿಟ್ಟಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಮನಸ್ಸು ಮಾಡಿದರೆ ಮಾತುಕತೆಯ ಮೂಲಕ ಮುಷ್ಕರ ನಿರತರ ಬೇಡಿಕೆ ಈಡೇರಿಸಲು ಸಾಧ್ಯವಿತ್ತು. ಸರ್ಕಾರ ಉದ್ಧಟತನದಿಂದ ಸಂಘರ್ಷದ ಹಾದಿ ಆಯ್ದುಕೊಂಡಿದೆ ಎಂದು ವಿವರಿಸಿದ್ದಾರೆ.
ಇದನ್ನು ಓದಿ: 2023 ಜನವರಿ 23 ರಿಂದ ಅಂಗನವಾಡಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ: ಈ ಮುಷ್ಕರ ಯಾಕೆ?
ನಮ್ಮ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತರ ಗೌರವಧನವನ್ನು ರೂ.5,000ದಿಂದ ರೂ.8000ಕ್ಕೆ ಮತ್ತು ಸಹಾಯಕಿಯರ ವೇತನವನ್ನು ರೂ.2500ದಿಂದ ರೂ.4000ಕ್ಕೆ ಹೆಚ್ಚಿಸಿದ್ದೇವು. ಆದರೆ ರಾಜ್ಯ ಬಿಜೆಪಿ ಸರ್ಕಾರ ಅಂಗನವಾಡಿ ಕಾರ್ಯಕರ್ತರ ಮುಷ್ಕರವನ್ನು ತಡೆಯುವ ಹತಾಶ ಪ್ರಯತ್ನ ಮಾಡುತ್ತಿದ್ದು ಇದು ಪ್ರಜಾತಂತ್ರ ವಿರೋಧಿ ಪ್ರಯತ್ನ ಎಂದು ಸಿದ್ಧರಾಮಯ್ಯ ಆರೋಪಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ