ಉದ್ಯೋಗ-ಮಾಲಿನ್ಯದ ಕುರಿತು ಮಾತಾಡಬೇಕಾದ ಶಾಸಕರುಗಳು ಹಿಂದು-ಮುಸ್ಲಿಂ ಘರ್ಷಣೆಗೆ ಪ್ರಚೋದಿಸುತ್ತಿದ್ದಾರೆ: ಮುನೀರ್ ಕಾಟಿಪಳ್ಳ

ಕೈಗಾರಿಕಾ ಮಾಲಿನ್ಯ, ಉದ್ಯೋಗ ನಿರಾಕರಣೆ ವಿರೋಧಿಸಿ ಎಮ್ಆರ್‌ಪಿಎಲ್ ಮುಂಭಾಗ ಪ್ರತಿಭಟನೆ

ಮಂಗಳೂರು: ಯುವಜನತೆಗೆ ಉದ್ಯೋಗ, ಪರಿಸರದ ಮೇಲಿನ ಮಾಲಿನ್ಯದ ಬಗ್ಗೆ ಮಾತನಾಡಬೇಕಾದ ಇಲ್ಲಿನ ಶಾಸಕರುಗಳು ಹಿಂದು-ಮುಸ್ಲಿಮರ ನಡುವೆ ದ್ವೇಷವನ್ನು ಹರಡುವ, ವೈಮನಸ್ಸು ಪ್ರಚೋದಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಆರೋಪಿಸಿದರು.

‘ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ’ ಹಸಿರು ವಲಯ ನಿರ್ಮಾಣ, ಪರಿಸರ ಮಾಲಿನ್ಯ ತಡೆಯಲು ಆಗ್ರಹಿಸಿ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್‌ ಸಂಸ್ಥೆ(ಎಮ್ಆರ್‌ಪಿಎಲ್) ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಆಗ್ರಹಿಸಿ ಎಮ್ಆರ್‌ಪಿಎಲ್ ಪ್ರಧಾನ ದ್ವಾರದ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮುನೀರ್‌ ಕಾಟಿಪಳ್ಳ ಮಾತನಾಡಿದರು.

ಸಾರ್ವಜನಿಕ ರಂಗದ ಪ್ರತಿಷ್ಟಿತ ಕಂಪೆನಿಯಾಗಿರುವ ಎಮ್ಆರ್‌ಪಿಎಲ್ ಪರಿಸರ, ಉದ್ಯೋಗದ ವಿಷಯದಲ್ಲಿ ಖಾಸಗೀ ಕಾರ್ಪೊರೇಟ್ ಕಂಪೆನಿಗಳಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಿದೆ. ಹಸಿರು ವಲಯ ನಿರ್ಮಾಣದ ಕಡ್ಡಾಯ ನಿಯಮವನ್ನು ಉಲ್ಲಂಘಿಸಿದೆ. ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳ ಜನವಸತಿ ಪ್ರದೇಶದಲ್ಲಿ ಮಾರಣಾಂತಿಕ ಪೆಟ್ ಕೋಕ್ ಮಾಲಿನ್ಯ ತಡೆಯಲು  27 ಎಕರೆ ಹಸಿರು ವಲಯ ನಿರ್ಮಿಸುವ ಸರಕಾರಿ ಆದೇಶದಂತೆ ಭೂಮಿ ಗುರುತಿಸಲಾಗಿದ್ದರೂ ಕಂಪೆನಿ ಕುಂಟು ನೆಪಗಳನ್ನು ಮುಂದಿಟ್ಟು ಕಾಲಹರಣ ಮಾಡುತ್ತಿದೆ. ಇದರಿಂದ ಜೋಕಟ್ಟೆ, ಕಳವಾರು ಗ್ರಾಮಗಳು ರೋಗಗ್ರಸ್ತಗೊಂಡಿವೆ ಎಂದು ಆರೋಪಿಸಿದರು.

ಇದನ್ನು ಓದಿ: ಸ್ಥಳೀಯರಿಗೆ ಉದ್ಯೋಗ ಒದಗಿಸದ ಎಂಆರ್‌ಪಿಎಲ್‌ ಕಂಪನಿ ಗಡಿಪಾರು ಮಾಡಿ: ಮುನೀರ್ ಕಾಟಿಪಳ್ಳ

ಕಂಪೆನಿಯ ಮಾಲಿನ್ಯದಿಂದ ಪಲ್ಗುಣಿ ನದಿಯಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ಸಮುದ್ರದಲ್ಲಿ ಮೀನುಗಳ ಸಂತತಿ ಕಡಿಮೆಯಾಗುತ್ತಿದೆ. ಕಂಪೆನಿಯ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಮುಲಾಜಿಲ್ಲದೆ ಹೊರಗಿಡಲಾಗುತ್ತಿದೆ. ಇವುಗಳ ಕುರಿತು ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್, ಭರತ್ ಶೆಟ್ಟಿ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ. ಕಂಪೆನಿಯ ಹಿತಗಳ ಕುರಿತು ಹೆಚ್ಚು ಆಸಕ್ತರಾಗಿವ ಬಿಜೆಪಿ ಸಂಸದ, ಶಾಸಕರುಗಳಿಗೆ ಜನತೆಗಿಂತ ಕಂಪೆನಿಯ ಗುತ್ತಿಗೆ, ಸಿಎಸ್ಆರ್ ನಿಧಿಯೇ ಹೆಚ್ಚು ಆಪ್ತವಾಗಿದೆ. ಯುವಜನರ ಉದ್ಯೋಗ, ಮಾಲಿನ್ಯದಂತಹ ಗಂಭೀರ ಪ್ರಶ್ನೆಗಳ ಕುರಿತು ಮಾತಾಡಬೇಕಾದ ಶಾಸಕರುಗಳು ಧರ್ಮ ದ್ವೇಷದ ಭಾಷಣಗಳನ್ನು ಮಾಡಿ ಯುವಕರನ್ನು ಹಿಂಸೆಗೆ ಪ್ರಚೋದಿಸುವುದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಮೊಯ್ದಿನ್ ಬಾವಾ ಮಾತನಾಡಿ, ಕಾಂಗ್ರೆಸ್ ಸರಕಾರ ಇದ್ದಾಗ ಪರಿಸರ ಮಾಲಿನ್ಯದಿಂದ ಆಗಿರುವ ಹಾನಿ ಸರಿಪಡಿಸಲು ಆರು ಅಂಶಗಳ ಪರಿಹಾರ ಕ್ರಮ ಜಾರಿಗೊಳಿಸುವಂತೆ ಎಮ್ಆರ್‌ಪಿಎಲ್‌ಗೆ ಆದೇಶಿಸಿತ್ತು. ನಾನು ಶಾಸಕನಾಗಿದ್ದಾಗ ಪರಿಸರ ಮಾಲಿನ್ಯ ಕಂಡುಹಿಡಿಯಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರತಿ ತಿಂಗಳು ಇಡೀ ಸುರತ್ಕಲ್ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೆ. ಈಗಿನ ಶಾಸಕ ಭರತ್ ಶೆಟ್ಟಿ ಲವ್ ಜಿಹಾದ್, ಮಸೀದಿ ಮಂದಿರ ಅಂತ ಭಾಷಣ ಮಾಡುವುದರಲ್ಲೇ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಇಂತಹ ಶಾಸಕರಿಂದಾಗಿ ಕಂಪೆನಿಗಳಿಗೆ ಯಾರ ಭಯವೂ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿ: ಉದ್ಯೋಗ ವಂಚನೆ: ಎಮ್‌ಆರ್‌ಪಿಎಲ್‌ ವಿರುದ್ಧ ಜೂನ್‌ 5ರಂದು ಪ್ರತಿಭಟನೆ

ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಮಾಜಿ ಉಪಮೇಯರ್ ಗಳಾದ ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ಸಾಮಾಜಿಕ ಮುಂದಾಳುಗಳಾದ ಮಂಜುಳಾ ನಾಯಕ್, ಸುಂದರ ಶೆಟ್ಟಿ, ನಾಗರಿಕ ಹೋರಾಟ ಸಮಿತಿಯ ಅಬೂಬಕ್ಕರ್ ಬಾವಾ, ಸಿಲ್ವಿಯಾ ಜೋಕಟ್ಟೆ, ಶೆರೀಫ್ ನಿರ್ಮುಂಜೆ, ಶೇಖರ ನಿರ್ಮುಂಜೆ, ರಾಜು ಜೋಕಟ್ಟೆ, ಚಂದ್ರಶೇಖರ ಜೋಕಟ್ಟೆ, ಸೀತಾರಾಮ ಆಚಾರ್ಯ, ಇಕ್ಬಾಲ್ ಜೋಕಟ್ಟೆ, ಯಮುನಾ ಕೆಂಜಾರು, ಡಿವೈಎಫ್ಐ ಮುಖಂಡರಾದ ಶ್ರೀನಾಥ್ ಕುಲಾಲ್, ಬಿ ಕೆ ಮಕ್ಸೂದ್, ಪ್ರಮೀಳಾ, ಸಲೀಂ ಶ್ಯಾಡೋ, ಸಮರ್ಥ್ ಭಟ್ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರತಿಭಟನೆಗೂ ಆರಂಭದಲ್ಲಿ ಎಚ್‌ಪಿಸಿಎಲ್ ಪ್ರಧಾನ ದ್ವಾರದಿಂದ ಎಮ್ಆರ್‌ಪಿಎಲ್ ಪ್ರಧಾನ ದ್ವಾರದವರಗೆ ಬೃಹತ್ ಮೆರವಣಿಗೆ ನಡೆಯಿತು‌.

 

 

Donate Janashakthi Media

Leave a Reply

Your email address will not be published. Required fields are marked *