ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ ಪಕ್ಷ ಸೋಲಿನ ಭಯದಿಂದಾಗಿ ಬಿಬಿಎಂಪಿ ಚುನಾವಣೆಯನ್ನು ನಡೆಸುತ್ತಿಲ್ಲ. ಪಾಲಿಕೆ ಚುನಾವಣೆ ನಡೆದರೆ, ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯ ಭ್ರಷ್ಟಾಚಾರದ ವಿರುದ್ದ ಜನಜಾಗೃತಿ ಮೂಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ವತಿಯಿಂದ ಇಂದು ಹಮ್ಮಿಕೊಂಡ ಮೌನ ಪ್ರತಿಭಟನಾ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದರು.
ಇದನ್ನು ಓದಿ: ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲ: ಜ.24ರಿಂದ ಪ್ರತಿಭಟನೆಗೆ ಮುಂದಾದ ಸಾರಿಗೆ ನೌಕರರು
ಬೆಂಗಳೂರಿನಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ. ಜನರು ರೋಸಿ ಹೋಗಿದ್ದಾರೆ. ಪೊಲೀಸ್ ಅಧಿಕಾರಿಗಳು ಆಯಾ ಕಟ್ಟಿನ ಸ್ಥಳಕ್ಕೆ 80 ಲಕ್ಷದಿಂದ 1 ಕೋಟಿ ರೂಪಾಯಿ ವರೆಗೂ ಲಂಚ ಕೊಟ್ಟು ಬಂದಿದ್ದಾರೆ. ಹಾಗಾಗಿ ಪೊಲೀಸರು ಬೀದಿಬದಿ ವ್ಯಾಪಾರಿಗಳ, ಹೋಟೆಲಿನವರ ಹತ್ತಿರ ವಸೂಲಿಗೆ ಇಳಿದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದರು.
ಟ್ರಿನಿಟಿ ವೃತ್ತದಲ್ಲಿ ಹಮ್ಮಿಕೊಂಡಿದ ಮೌನ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಮತ್ತು ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು.
ಇದನ್ನು ಓದಿ: ಹಿರಿಯ ಕನ್ನಡ ಚಳವಳಿಯ ಹೋರಾಟಗಾರ ಪ.ಮಲ್ಲೇಶ್ ನಿಧನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಬೆಂಗಳೂರಿನಲ್ಲಿ ರಸ್ತೆ, ನೀರು ಸೇರಿದಂತೆ ಅನೇಕ ಸಮಸ್ಯೆಗಳು ಇವೆ. ಬೆಂಗಳೂರಿನಲ್ಲಿ ಕಾಮಗಾರಿ ಕೈಗೊಂಡ ರಸ್ತೆಗಳಲ್ಲಿ ಇದೀಗ ಮತ್ತೆ ರಸ್ತೆಗುಂಡಿಗಳು ಎಲ್ಲೇಂದರಲ್ಲಿ ಕಾಣಿಸುಕೊಳ್ಳುತ್ತಿದ್ದು ಭ್ರಷ್ಟಾಚಾರದ ಕಾರಣ ಕಳಪೆ ಕಾಮಗಾರಿ ಇದಕ್ಕೆ ಕಾರಣವೆಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಪ್ರತಿಭಟನೆಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ, ಲೋಕೋಪಯೋಗಿ, ಹಾಗೂ ವಿದ್ಯುತ್ ಇಲಾಖೆ ನೇಮಕಾತಿ ಹಗರಣಗಳಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಪ್ರದರ್ಶಿಸುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. 51 ಮೆಟ್ರೋ ನಿಲ್ದಾಣಗಳು, 26 ಮೇಲ್ಸೇತುವೆಗಳು, ಪ್ರಮುಖ ವೃತ್ತಗಳು ಸೇರಿದಂತೆ ಬೆಂಗಳೂರು ನಗರದ 300ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ