ಪಾಟ್ನಾ: ಬಿಹಾರದಲ್ಲಿ ಮತ್ತೆ ಕಳ್ಳಭಟ್ಟಿ ದಂಧೆ ನಡೆದಿರುವುದು ಬೆಳಕಿಗೆ ಬಂದಿದ್ದು, ದುರಂತದಿಂದ 3 ಮಂದಿ ಸಾವಿಗೀಡಾಗಿ, 7 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಿವಾನ್ ಜಿಲ್ಲೆಯ ಬಾಲಾ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಜಿಲ್ಲಾಧಿಕಾರಿ ಅಮಿತ್ ಕುಮಾರ್ ಪಾಂಡೆ ಕಳ್ಳಭಟ್ಟಿ ದುರಂತದಲ್ಲಿ ಅಸ್ವಸ್ಥಗೊಂಡು ಸದರ್ ಆಸ್ಪತ್ರೆಗೆ ದಾಖಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರು ಮಂದಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, 7 ಜನರು ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಮೇಲ್ನೋಟಕ್ಕೆ ಕಳ್ಳಭಟ್ಟಿ ಸೇವಿಸಿರುವುದು ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಕಳ್ಳಾಭಟ್ಟಿ ದುರಂತ: ಬಿಹಾರದಲ್ಲಿ 70ಕ್ಕೇರಿದ ಸಾವಿನ ಸಂಖ್ಯೆ-ಆರೋಪಿಯೊಬ್ಬನ ಬಂಧನ
ಸಾವಿಗೆ ನಿಖರವಾದ ಕಾರಣವನ್ನು ತಿಳಿಸದ ಅವರು, ನಕಲಿ ಮದ್ಯ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದು ಮಾತ್ರ ಗೊತ್ತಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತೇವೆ ಎಂದಿದ್ದಾರೆ.
2022ರ ಡಿಸೆಂಬರ್ ತಿಂಗಳಿನಲ್ಲಿ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 70 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ) ಮದ್ಯ ಕಳ್ಳಸಾಗಣೆ ಮಾಡುತ್ತಿದ್ದವಋನ್ನು ಬಂಧಿಸಿದೆ.
ಇದನ್ನು ಓದಿ: ಬಿಹಾರ ಕಳ್ಳಭಟ್ಟಿ ದುರಂತ; 73 ಜನರ ಸಾವಿಗೆ ಕಾರಣನಾದ ಪ್ರಮುಖ ಆರೋಪಿ ಬಂಧನ
ಇದೀಗ ಸರನ್ ಪೊಲೀಸರು ಅಕ್ರಮ ಮದ್ಯ ವ್ಯಾಪಾರ, ಸಾಗಣೆ, ಕಳ್ಳಸಾಗಣೆ ಹಾಗೂ ಮದ್ಯ ತಯಾರಿಕೆಯಲ್ಲಿ ತೊಡಗಿರುವ ಶಂಕಿತರನ್ನು ಗುರುತಿಸಲು ಹಾಗೂ ಬಂಧಿಸಲು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ