ಬೆಂಗಳೂರು: ದೇಶದ ಅತಿದೊಡ್ಡ ಕಾರ್ಮಿಕ ಸಂಘಟನೆ, ಕಾರ್ಮಿಕ ಹಕ್ಕುಗಳಿಗಾಗಿ ಚಳವಳಿ ನಡೆಸುತ್ತಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಜನವರಿ 18ರಿಂದ ಆರಂಭವಾಗಿದ್ದು, 22ರಂದು ಕೊನೆಗೊಳ್ಳಲಿದೆ. ಸಮ್ಮೇಳನದ ಕೊನೆಯ ದಿನ ಭಾರೀ ಬಹಿರಂಗ ಸಭೆ ಏರ್ಪಡಿಸಲಾಗಿದೆ.
ಸಭೆಗೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಲಿದ್ದಾರೆ. ಮಾರುತಿ ಮಾನ್ಪಡೆ ವೇದಿಕೆ, ಆರ್ ಶ್ರೀನಿವಾಸ್ ನಗರ ಹೆಸರಿನಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ.
ಬಹಿರಂಗ ಸಭೆ ನಾಳೆ(ಜನವರಿ 22ರಂದು) ಮಧ್ಯಾಹ್ನ 1.00 ಗಂಟೆಗೆ ಆರಂಭವಾಗಲಿದೆ. ಬೆಂಗಳೂರು ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಭೆಯಲ್ಲಿ ಮೊದಲಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ವಹಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ. ಕೆ. ಹೇಮಲತಾ, ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮೀನಾಕ್ಷಿ ಸುಂದರಂ ಮಾತನಾಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡ, ಕೋಲಾರ. ಎಚ್ ಜನಾರ್ಧನ್(ಜನ್ನಿ), ಚಿಂತನ್ ವಿಕಾಸ್ ಮತ್ತು ತಂಡ, ಮೈಸೂರು. ಮಹಿಳಾ ಡೊಳ್ಳು ಕುಣಿತ, ಕೊಪ್ಪಳ ಅಂಗನವಾಡಿ ನೌಕರರು. ಮಹಿಳಾ ಕೋಲಾಟ, ಬಸವಕಲ್ಯಾಣ. ತಮಟೆ – ಗಂಗಾಧರ್ ಮತ್ತು ತಂಡ, ರಾಮನಗರ. ಶಾಂತಿನಗರದ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.