ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಬುಧವಾರದಿಂದ ನಡೆಯುತ್ತಿರುವ ಪ್ರತಿಭಟನೆ ನೆನ್ನೆ ಅಂತ್ಯಗೊಂಡಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ನಿವಾಸದಲ್ಲಿ ನೆನ್ನೆ(ಜನವರಿ 20) ಸಂಜೆ ನಡೆದ ಎರಡನೇ ಸುತ್ತಿನ ಸಭೆಯಲ್ಲಿ ಸರ್ಕಾರದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿಪಟುಗಳು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ದೂರುಗಳನ್ನು ತನಿಖೆಗೆ ಒಳಪಡಿಸಲು ಮೇಲುಸ್ತುವಾರಿ ಸಮಿತಿ ರಚಿಸಲಾಗುವುದು. ಆರೋಪಗಳು ತನಿಖೆ ನಡೆಯುವವರೆಗೆ ಡಬ್ಲ್ಯುಎಫ್ಐ ಮುಖ್ಯಸ್ಥರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸರ್ಕಾರ ಹೋರಾಟಗಾರರಿಗೆ ಭರವಸೆ ನೀಡಿದೆ.
ಇದನ್ನು ಓದಿ: ಲೈಂಗಿಕ ಕಿರುಕುಳ ವಿರುದ್ಧ ಹೋರಾಟದಲ್ಲಿ ನಾವಿರುತ್ತೇವೆ: ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್
ಕುಸ್ತಿಪಟುಗಳಾದ ಭಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ರವಿ ದಹಿಯಾ, ದೀಪಕ್ ಪುನಿಯಾ ಸೇರಿದಂತೆ ಇತರರೊಂದಿಗೆ ಕ್ರೀಡಾ ಸಚಿವರ ನಿವಾಸದಲ್ಲಿ ಸಭೆ ನಡೆಯಿತು. ಸತತ ಐದು ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿ ನಡೆದಿದೆ.
ಕುಸ್ತಿಪಟು ಬಜರಂಗ್ ಪುನಿಯಾ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಹಾಕಿದ್ದಾರೆ. ಇದನ್ನು ಖಂಡಿಸಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಕ್ರೀಡಾ ಸಚಿವರಿಂದ ಭರವಸೆ ಪಡೆದ ನಂತರ ನಾವು ಪ್ರತಿಭಟನೆಯನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ ಎಂದರು.
‘ಭಾರತೀಯ ಕುಸ್ತಿ ಒಕ್ಕೂಟ ಮತ್ತು ಅದರ ಅಧ್ಯಕ್ಷರ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ಮೇಲ್ವಿಚಾರಣಾ ಸಮಿತಿ ವತಿಯಿಂದ ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಲಾಗುವುದು. ಸಮಿತಿಯು ಲೈಂಗಿಕ ಕಿರುಕುಳ ಮತ್ತು ಹಣಕಾಸಿನ ಅಕ್ರಮಗಳು ಸೇರಿದಂತೆ ಎಲ್ಲ ಗಂಭೀರ ಆರೋಪಗಳನ್ನು ತನಿಖೆ ಮಾಡಿ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ತನಿಖೆ ಪೂರ್ಣಗೊಳ್ಳವವರೆಗೆ ಅವರು ತಮ್ಮ ಸ್ಥಾನದಿಂದ ಹಿಂದೆ ಸರಿಯುತ್ತಾರೆ’ ಎಂದು ಅನುರಾಗ್ ಠಾಕೂರ್ ಭರವಸೆ ನೀಡಿದರು.
ಉತ್ತರ ಪ್ರದೇಶದ ಕೈಸರ್ಗಂಜ್ನ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ 2011 ರಿಂದ ಡಬ್ಲ್ಯುಎಫ್ಐ ಮುಖ್ಯಸ್ಥ ಹುದ್ದೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿ ಸ್ವತಃ ಕುಸ್ತಿಪಟುವಾಗಿದ್ದರು.