ಹಿಂಸಾಚಾರ ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ) ಆಗ್ರಹ
ತ್ರಿಪುರಾ ವಿಧಾನ ಸಭೆಗೆ ಚುನಾವಣೆಗಳ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸುತ್ತಿರುವಂತೆಯೇ ಅಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಆಳುವ ಪಕ್ಷದ ಗೂಂಡಾಗಳಿಂದ ನಡೆಯುತ್ತಿರುವ ಹಲ್ಲೆ-ಹಿಂಸಾಚಾರಗಳು ತೀವ್ರಗೊಂಡಿವೆ. ಇದನ್ನು ಕುರಿತಂತೆ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರ ನೇತೃತ್ವದ ಮೂವರು ಸದಸ್ಯರ ನಿಯೋಗವೊಂದು ಪೂರ್ಣ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಒಂದು ಮನವಿ ಪತ್ರವನ್ನು ಸಲ್ಲಿಸಿ, ಅದು ತ್ರಿಪುರಾದ ಜನತೆಗೆ ಭರವಸೆ ನೀಡಿರುವಂತೆ ಹಿಂಸಾಚಾರ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವತ್ತ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದೆ.
ತ್ರಿಪುರಾಕ್ಕೆ ಭಾರತ ಚುನಾವಣಾ ಆಯೋಗದ ಪೂರ್ಣ ತಂಡ ಭೇಟಿ ನೀಡಿದ ನಂತರ ತಕ್ಷಣವೇ ತೀವ್ರ ಹಿಂಸಾಚಾರವನ್ನು ಹರಿಯಬಿಟ್ಟಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದಿರುವ ಮನವಿ ಪತ್ರ ಆಯೋಗದ ನಿಯೋಗ ಖಚಿತ ಭರವಸೆಯ ನೀಡಿದ ನಂತರವೂ ಈ ಬೆಳವಣಿಗೆಗಳು ನಡೆಯುತ್ತಿರುವುದು ಒಂದು ವಿಪರ್ಯಾಸ ಎಂದಿದೆ. ತ್ರಿಪುರಾದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕೂಡ ನಿರ್ದಿಷ್ಟವಾಗಿ ಚುನಾವಣಾ ಹಿಂಸಾಚಾರ-ಶೂನ್ಯ ಮಿಷನ್ನನ್ನೇ ಪ್ರಾರಂಭಿಸಿದ್ದರು. ಆದಾಗ್ಯೂ, ಆಡಳಿತ, ವಿಶೇಷವಾಗಿ ಪೊಲೀಸ್ ಆಡಳಿತ ಹಿಂದಿನಂತೆಯೇ ಇ.ಸಿ.ಐ.ಯ ಭರವಸೆಗಳ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದೆ ಎಂದು ಮನವಿ ಪತ್ರ ಹೇಳಿದೆ. ಇತ್ತೀಚಿನ ಹಿಂಸಾಚಾರದ ಘಟನೆಗಳ ಪಟ್ಟಿಯನ್ನು ಈ ಮನವಿ ಪತ್ರದೊಂದಿಗೆ ಲಗತ್ತಿಸಲಾಗಿದೆ ಎಂದು ಸಿಪಿಐ(ಎಂ) ಹೇಳಿದೆ.
ಜನವರಿ 19ರಂದು ಚುನಾವಣೆ ಘೋಷಣೆಯಾದ ನಂತರ ಹಲ್ಲೆಗಳು ಮತ್ತು ಹಿಂಸಾಚಾರದ ತೀವ್ರತೆ ಹೆಚ್ಚಾಗಿದೆ. ಹಿಂಸಾಚಾರದ ವಿಧಾನವು ಸ್ಪಷ್ಟವಾಗಿ ಭಯೋತ್ಪಾದನೆಯ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಇದು ಮುಕ್ತ ಮತ್ತು ನ್ಯಾಯಸಮ್ಮತವಾದ ಮತದಾನವನ್ನು ನಡೆಸಲು ಇರಬೇಕಾದ ವಾತಾವರಣವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಆದ್ದರಿಂದ ಕಳೆದ ಐದು ವರ್ಷಗಳಲ್ಲಿ ನಡೆಯುತ್ತಿರುವುದಕ್ಕೆ ವ್ಯತಿರಿಕ್ತವಾಗಿ, ರಾಜ್ಯ ವಿಧಾನಸಭೆಗೆ ಮುಕ್ತ ಮತ್ತು ನ್ಯಾಯಸಮ್ಮತ ಮತದಾನವನ್ನು ನಡೆಸಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿರುವ ಸಿಪಿಐ(ಎಂ) ನಿಯೋಗ ಚುನಾವಣಾ ಆಯೋಗ ಒಂದು ದೃಢವಾದ ಮತ್ತು ನಿರ್ಣಾಯಕವಾದ ಕ್ರಮವನ್ನು ಕೈಗೊಳ್ಳುತ್ತದೆ ಎಂದು ನಿರೀಕ್ಷಿಸುವುದಾಗಿ ಹೇಳಿದೆ.