ನವದೆಹಲಿ: ನಾವು ಯಾವುದೇ ರೀತಿಯ ಲೈಂಗಿಕ ಕಿರುಕುಳದ ವಿರುದ್ಧ ನಡೆಯುತ್ತಿರುವ ಹೋರಾಟಗಳಲ್ಲಿ ನಾವು ಸದಾ ಭಾಗಿಯಾಗುತ್ತೇವೆ. ಯಾವುದೇ ವರ್ಗದ ಮಹಿಳೆಯರನ್ನು ಅವಮಾನಿಸುವುದನ್ನು ನಾವು ಖಂಡಿಸುತ್ತೇವೆ. ಇಂತಹ ಪ್ರಕರಣಗಳಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಹೇಳಿದ್ದಾರೆ.
ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಬೆಂಬಲ ಸೂಚಿಸಲು ಹೋರಾಟದ ಸ್ಥಳಕ್ಕೆ ಆಗಮಿಸಿದ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಲು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಸ್ಥಳಕ್ಕೆ ಬಂದಿದ್ದರು. ಆದರೆ ಕುಸ್ತಿಪಟುಗಳು ಪ್ರತಿಭಟನೆಯಲ್ಲಿ ರಾಜಕೀಯ ಮಾಡುವುದು ಬೇಡ ಎಂದು ವಿನಂತಿಸಿಕೊಂಡಿರುವ ಘಟನೆಯೂ ನಡೆದಿದೆ.
ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ನವದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 200 ಕುಸ್ತಿಪಟುಗಳು ಪಾಲ್ಕೊಂಡಿದ್ದು, ಇಂದು ಹೋರಾಟ ಮೂರನೇ ದಿನಕ್ಕೆ ಮುಂದುವರೆದಿದೆ. ಕುಸ್ತಿಪಟುಗಳು ಧರಣಿ ಕುಳಿತಿರುವುದು ಅತ್ಯಂತ ದುರದೃಷ್ಟಕರ. ಸರ್ಕಾರ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು. ವಿಚಾರಣೆಯು ಅಂತಿಮ ತೀರ್ಮಾನಕ್ಕೆ ಬರುವವರೆಗೆ ಆರೋಪಿಯನ್ನು ತೆಗೆದುಹಾಕಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.
ಸಮಾಜವಾದಿ ಪಕ್ಷದ ವಕ್ತಾರ ಸುನೀಲ್ ಸಿಂಗ್ ಸಜನ್, ‘‘ದೇಶಕ್ಕಾಗಿ ಒಲಿಂಪಿಕ್ಸ್ ಮತ್ತು ಇತರ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಿಳೆಯರು ಇಂದು ತಮಗಾಗುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸುದ್ದಿಗಿಂತ ಆತಂಕಕಾರಿಯಾದದ್ದು ಮತ್ತೊಂದು ಇಲ್ಲʼʼ ಎಂದಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಸಚಿವ ನಕುಲ್ ದುಬೆ ಕೂಡ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿರುವ, ದೇಶದ ಅಗ್ರ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್ ಮಾತನಾಡಿ, ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಕೆಲವು ವರ್ಷಗಳಿಂದ ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ, ಕೊಲೆ ಬೆದರಿಕೆ ಸೇರಿದಂತೆ ಹಲವು ಆರೋಪ ಮಾಡಿರುವ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸುತ್ತಿದ್ದಾರೆ. ಭಾರತದ ಖ್ಯಾತ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಹಲವು ಕ್ರೀಡಾಪಟುಗಳು ಈ ಧರಣಿಯ ನೇತೃತ್ವ ವಹಿಸಿದ್ದಾರೆ.