“ಚೆ ಗೆವಾರ” ಜನ ಸಂಸ್ಕೃತಿಯ ಪ್ರತಿಪಾದಕ – ಬರಗೂರು ರಾಮಚಂದ್ರಪ್ಪ

ಬೆಂಗಳೂರು: “ಚೆ ಗೆವಾರ” ಜನ ಸಂಸ್ಕೃತಿಯ ಪ್ರತಿಪಾದಕ, ಅವರು ಆಶಾವಾದಕ್ಕೆ ಪ್ರೇರಣೆ ಆಗಿದ್ದಾರೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ವಿವಿಧ ಸಂಘಟನೆಗಳ ಸೌಹಾರ್ದ ಸಮಿತಿ ಗುರುವಾರ ಹಮ್ಮಿಕೊಂಡ ಕ್ಯೂಬಾ ಸೌಹಾರ್ದತೆಯ ಸಮಾರಂಭದಲ್ಲಿ ಚೆ ಗೆವಾರ ಅವರ ಪುತ್ರಿ ಡಾ. ಅಲಿಡಾ ಗೆವಾರ ಮತ್ತು ಮೊಮ್ಮಗಳು ಎಸ್ತಿಫಾನಿಯಾ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,  ‘ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ನಾಗಿದ್ದ ಅವಧಿಯಲ್ಲಿ ‘ಸಾಮಾಜಿಕ ಚಿಂತನ ಮಾಲೆ’ ಎಂಬ ಕೃತಿಯನ್ನು ಹೊರತರಲಾಗಿತ್ತು. ಚೆ ಗೆವಾರ ಅವರ ಕುರಿತಾದ ಲೇಖನವೂ ಅದರಲ್ಲಿತ್ತು. ಅದು ಪ್ರಜಾಪ್ರಭುತ್ವದ ಸ್ವಾತಂತ್ರ್ಯ. ಈಗ ಆ ರೀತಿಯ ಲೇಖನ ಪ್ರಕಟಿಸಿದರೆ ದೇಶದ್ರೋಹಿಗಳಾಗುತ್ತೇವೆ. ಚೆ ಗೆವಾರ ಅಗಲಿ 55 ವರ್ಷಗಳಾದರೂ ಅವರ ನಮ್ಮೊಳಗೆ ಇನ್ನೂ ಚೇತನವಾಗಿದ್ದಾರೆ. ಟಿ ಶರ್ಟ್, ಟೋಪಿ, ಹಚ್ಚೆ ಸೇರಿ ವಿವಿಧೆಡೆ ಅವರ ಭಾವಚಿತ್ರವನ್ನು ಕಾಣಬಹುದು. ಅವರು ಜನ ಸಂಸ್ಕೃತಿಯನ್ನು ಪ್ರತಿಪಾದಿಸಿದ್ದರು. ಅವರು ಆಶಾವಾದಕ್ಕೆ ಪ್ರೇರಣೆ ಆಗಿದ್ದಾರೆ’ ಈಗಲೂ ಕ್ಯೂಬಾದಲ್ಲಿ ಶಾಲಾ ಮಕ್ಕಳು ರಾಷ್ಟ್ರಗೀತೆಯ ನಂತರ ನಾವೆಲ್ಲ ಚೆ ಗೆವಾರ ಆಗುತ್ತೇವೆ ಎಂದು ಘೋಷಣೆಯನ್ನು ಮೊಳಗಿಸುತ್ತಾರೆ ಎಂದರು.

ದೇಶದಲ್ಲಿ ಬಹುಮುಖದ ಆಶಯದಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಹುಸಿ ಸಂಸ್ಕೃತಿಯನ್ನೇ ನಿಜ ಸಂಸ್ಕೃತಿ ಎಂದು ಮೆರೆಯಲಾಗುತ್ತಿದೆ. ಬಹುತ್ವ ಪ್ರತಿಪಾದಿಸುವ ಈ ದೇಶದಲ್ಲಿ ಬಹು ಸಂಸ್ಕೃತಿಯನ್ನು ನಾಶ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ’ ಕಳವಳ ವ್ಯಕ್ತಪಡಿಸಿದರು.

ಚೆ ಬದುಕಿನ ಅಪರೂಪದ ಪುಟ ತೆರೆದಿಟ್ಟ ಅಲಿಡಾ : ಕ್ಯೂಬಾದ ಯಶಸ್ವಿ ಕ್ರಾಂತಿಯ ಹರಿಕಾರ ಹಾಗೂ ಇಂದಿಗೂ ಕೋಟ್ಯಂತರ ಯುವಕರ ಪ್ರೇರಣಾಶಕ್ತಿ ಅರ್ನೆಸ್ಟೊ ಚೆಗೆವಾರ  ಅವರ ಬದುಕಿನ ಅಪರೂಪದ ಪುಟವೊಂದನ್ನು ಅಲಿಡಾ ಗೆವಾರ ತೆರೆದಿಟ್ಟರು. ಕ್ಯೂಬಾದ ಪ್ರಚಲಿತ ವಿದ್ಯಮಾನಗಳು ಹಾಗೂ ಸಹಜ ಬದುಕಿನ ಸಂಕಷ್ಟಗಳ ಬಗ್ಗೆಯೂ ಅವರ ಮಾತು ಹೊರಳಿತು. ‘ಅಮೆರಿಕಾ ಇನ್ನೂ ಕ್ಯೂಬಾದ ಬಗ್ಗೆ ಆರ್ಥಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ಪಾಲಿಸುತ್ತಿದೆ. ಕೊವಿಡ್ ಸಮಯದಲ್ಲಿ ನನ್ನ ದೇಶ ಇನ್ನಿಲ್ಲದಂತೆ ನಲುಗಿದೆ. ನಮ್ಮಲ್ಲಿದ್ದ ಎಲ್ಲಾ ಮೀಸಲು ನಿಧಿಗಳು ಜನರ ಬದುಕು ಉಳಿಸುವ ಉದ್ದೇಶಕ್ಕಾಗಿ ಬಳಸಬೇಕಾಯಿತು’ ಎಂದು ವಿವರಿಸಿದರು.

‘ಬಹುತೇಕ ಜೀವರಕ್ಷಕ ಔಷಧಿಗಳ ಪೇಟೆಂಟ್ ಅಮೇರಿಕಾದ ಬಳಿ ಇದೆ. ನಾವು ಹಣ ಕೊಟ್ಟರೂ ಅದು ನಮಗೆ ಔಷಧಿಗಳನ್ನು ಕೊಡುವುದಿಲ್ಲ. ಬೇರೆ ಯಾವುದಾದರೂ ದೇಶ ಅಮೆರಿಕದಿಂದ ಔಷಧಿಗಳನ್ನು ಖರೀದಿಸಿ, ನಾವು ಆ ದೇಶದಿಂದ ಔಷಧಗಳನ್ನು ಖರೀದಿಸಬೇಕಿದೆ. ನಮಗೆ ಔಷಧಿಗಳನ್ನು ಕೊಟ್ಟಿದ್ದಾರೆ ಎಂದು ತಿಳಿದರೆ ಅಂಥ ದೇಶಗಳನ್ನೂ ಅಮೆರಿಕ ಕಾಡುತ್ತದೆ. ಹೀಗಾಗಿ ನಾವು ಕನಿಷ್ಠ ಐದು ಜನರ ಕೈದಾಟಿದ ಮೇಲೆ ಔಷಧಿ ಕೊಳ್ಳಬೇಕು. ಆಗ ಬೆಲೆ ಎಷ್ಟು ಹೆಚ್ಚಾಗುತ್ತದೆ ಯೋಚಿಸಿ’ ಎಂದು ತಮ್ಮ ದೇಶದ ಸಂಕಟ ತೋಡಿಕೊಂಡರು.

‘ಒಂದು ದೇಶವಾಗಿ ಕ್ಯೂಬಾ ಈ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದೆ. ನಾವು ನಮ್ಮ ಜನರಿಗೆ ಸಂಪೂರ್ಣ ಉಚಿತ ವೈದ್ಯಕೀಯ ಸೌಲಭ್ಯ ಕೊಡುತ್ತೇವೆ. ನಮ್ಮ ವಿಜ್ಞಾನಿಗಳು ಒಟ್ಟು ಐದು ಬಗೆಯ ಕೋವಿಡ್ ವ್ಯಾಕ್ಸಿನ್ ಗಳನ್ನು ಕಂಡುಹಿಡಿದರು. ಆದರೆ ಅದಕ್ಕೆ ಬೇಕಾದ ಸಿರಿಂಜ್​ಗಳ ಮೇಲೂ ಅಮೇರಿಕಾ ನಿರ್ಬಂಧ ಹೇರಿತ್ತು. ಕಡೆಗೆ ನಾವು ನೇಸಲ್ ವ್ಯಾಕ್ಸಿನ್ ಕಂಡುಹಿಡಿದೆವು. ಆಗ ನಮ್ಮ ಜೊತೆಗೆ ನಿಂತಿದ್ದು ಭಾರತ, ಕೇರಳ. ನಾವು ನಂಬಿರುವುದು ಒಗ್ಗಟ್ಟನ್ನು ಮಾತ್ರ’ ಎಂದು ಭಾರತದ ಬಗ್ಗೆ ಕ್ಯೂಬನ್ನರಿಗೆ ಇರುವ ಪ್ರೀತಿಯ ಬಗ್ಗೆ ಹೇಳಿದರು.

ಸಿಗಾರ್‌ ಅಪ್ಪನ ಅಚ್ಚುಮೆಚ್ಚು : ಅಪ್ಪ ಅತೀ ಹೆಚ್ಚು ಸಿಗಾರ್‌ ಸೇದುತ್ತಿದ್ದರು. ಅದು ಅವರ ಅಚ್ಚುಮೆಚ್ಚಾಗಿತ್ತು. ‘ಅಪ್ಪನಿಗೆ ಹುಷಾರಿಲ್ಲದಾಗ ವೈದ್ಯರು ಸಿಗಾರ್ ಸೇದುವುದನ್ನು ಕಡಿಮೆ ಮಾಡುವಂತೆ ಸೂಚಿಸಿದ್ದರು. ಇದರಿಂದ ಅಪ್ಪನಷ್ಟೇ ಸಿಗಾರ್ ಕಂಪನಿಯ ಕಾರ್ಮಿಕರೂ ಚಿಂತಿತರಾಗಿದ್ದರು. ಅತ್ಯಂತ ಬೇಸರದಿಂದಲೇ ಅವರು ಒಂದು ಅಡಿ ಉದ್ದದ ಸಿಗಾರ್ ತಂದುಕೊಟ್ಟಿದ್ದರು’ ಎಂದು ತನ್ನ ಅಪ್ಪ ಬಗ್ಗೆ ಹೇಳಿದರು. ದೊಡ್ಡ ಗುಲಾಬಿ ಹಾರ, ಮೈಸೂರು ಪೇಟಾ ಇಟ್ಟಾಗ ಅಲಿಡಾ ಅಕ್ಷರಶಃ ಮಕ್ಕಳಂತೆ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಚೆಗೆವಾರ ನೆನಪು ಮತ್ತು ವೈಚಾರಿಕ ಪ್ರಸ್ತುತತೆಯ ಬಗ್ಗೆ ಜಿ.ರಾಮಕೃಷ್ಣ, ಎಸ್‌, ವೈ, ಗುರುಶಾಂತ, ಎಚ್‌ ,ಎನ್‌ ನಾಗಮೋಹನ್ ದಾಸ್, ಪಿಜಿಆರ್ ಸಿಂಧ್ಯಾ, ಎಚ್ ಎಲ್ ಪುಷ್ಪಾ, ಯು. ಬಸವರಾಜ,  ಸಿದ್ದನಗೌಡ ಪಾಟೀಲ್‌,  ಮಾವಳ್ಳಿ ಶಂಕರ್, ಮೋಹನ್‌ರಾಜ್‌, ಮೈತ್ರೇಯಿ ಕೃಷ್ಣನ್‌ ಇದ್ದರು.  ಜಿ.ಎನ್.ಮೋಹನ್ ಅವರು ಕ್ಯೂಬಾ ಮತ್ತು ಚೆಗೆವಾರ ಕುರಿತು ಆಸಕ್ತಿದಾಯಕ ವಿಷಯಗಳನ್ನು ಹೇಳುತ್ತಿದ್ದರು. ಚಿಂತನ್ ವಿಕಾಸ್ ಅವರ ಹಾಡು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ‘ನನ್ನೊಳಗಿನ ಹಾಡು ಕ್ಯೂಬಾ’ ಕೃತಿಯ ಆಯ್ದಭಾಗದ ರಂಗಪ್ರಸ್ತುತಿ ನಡೆಯಿತು.

ಅಮ್ಮನ ಫೋಟೊ ಕ್ಲಿಕ್ಕಿಸಿದ ಎಸ್ತೆಫಾನಿಯಾ
Donate Janashakthi Media

Leave a Reply

Your email address will not be published. Required fields are marked *