ಬೆಂಗಳೂರು : ಸಾಮಾಜಿಕ ಹೋರಾಟಗಾರ,ಪ್ರಗತಿಪರ ಚಿಂತಕ ಪ. ಮಲ್ಲೇಶ್ ಅವರು ಅನಾರೋಗ್ಯ ಕಾರಣದಿಂದಾಗಿ ಇಂದು (ಜನವರಿ 19) ನಿಧನಹೊಂದಿದ್ದಾರೆ.
ಮೈಸೂರಿನ ರಾಮಕೃಷ್ಣನಗರದ ನಿವಾಸಿಯಾದ ಅವರಿಗೆ 89 ವರ್ಷ ವಯಸ್ಸಾಗಿತ್ತು. ಎಂದಿನಂತೆ ತಮ್ಮ ನೃಪತುಂಗ ಕನ್ನಡ ಶಾಲೆಗೆ ಮಧ್ಯಾಹ್ನ ಮಲ್ಲೇಶ್ ಅವರು ಆಗಮಿಸಿ ಶಾಲೆಯ ಚಟುವಟಿಕೆ ನೋಡಿ ಮನೆಗೆ ತೆರಳಿದ್ದರು.
ಆದರೆ, ದಿಢೀರ್ ಅಸ್ವಸ್ಥರಾದ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4 ಗಂಟೆ ವೇಳೆಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಪ.ಮಲ್ಲೇಶ್ ಕನ್ನಡ ಪರ, ಜನಪರ ಹೋರಾಟಗಾರರಾಗಿದ್ದರು.
ಪ.ಮಲ್ಲೇಶ್ ಅವರು ಕನ್ನಡದ ಗೋಕಾಕ್ ಚಳವಳಿಯಲ್ಲೂ ಭಾಗವಹಿಸಿದ್ದರು. ಅದನ್ನು ಸ್ಫೂರ್ತಿಯಾಗಿ ಪಡೆದುಕೊಂಡು ಮೈಸೂರಿನಲ್ಲಿ ನೃಪತುಂಗ ಕನ್ನಡ ಶಾಲೆಯನ್ನು ಆರಂಭಿಸಿದರು. ಕಳೆದ ಮೂರು ವರ್ಷದಿಂದ ಇಲ್ಲಿನ ಪಿಯು ಕಾಲೇಜಿನಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಹೇಳಿಕೊಡಲಾಗುತ್ತಿದೆ. ರಾಜ್ಯದಲ್ಲೇ ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುತ್ತಿರುವ ಏಕೈಕ ಕಾಲೇಜು ಅಂದರೆ ಅದು ನೃಪತುಂಗ ಕಾಲೇಜು. ಅಲ್ಲದೆ, ಕನ್ನಡ ಕ್ರಿಯಾ ಸಮಿತಿ ರಚಿಸಿ ಮೂರು ದಶಕಗಳ ಕಾಲ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಾನವ ಎಂಬ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು.
ಮೃತರ ಸಾವಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಜನಪರ ಸಂಘಟನೆಗಳು ನಾಯಕರು ಸಂತಾಪ ಸೂಚಿಸಿದ್ದಾರೆ.