ಸಂಪತ್ತು ಬಡಜನರಿಂದ ಶ್ರೀಮಂತರ ಕಡೆಗೆ ಹರಿಯುತ್ತಿದೆ: ಅಮರ್‌ಜಿತ್‌ ಕೌರ್‌

ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನದಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೌಹಾರ್ದ ಪ್ರತಿನಿಧಿಯಾಗಿ ಭಾಗವಹಿಸಿದ ಅಖಿಲ ಭಾರತ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌(ಎಐಟಿಯುಸಿ) ಅಮರ್‌ಜಿತ್‌ ಕೌರ್‌ ಮಾತನಾಡಿದರು.

ಕಾರ್ಮಿಕ ಚಳುವಳಿಯ ಅನುಭವ ಹಂಚಿಕೊಳ್ಳಲು, ಅಂತರ ರಾಷ್ಟ್ರೀಯ ಕಾರ್ಮಿಕ ಚಳುವಳಿಯ ಭಾಗವಾಗಿ ನಾವು ಇಲ್ಲಿ ಸೇರಿದ್ದೇವೆ.  ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ ಪ್ರಭುತ್ವದ ಕೌರ್ಯ ಎದುರಿಸಿದೆವು. ಇಂದು ದೇಶ ದೊಡ್ಡ ತಿರುವಿನಲ್ಲಿದೆ. ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಆರೆಸ್ಸೆಸ್-ಬಿಜೆಪಿಗಳ ಆಡಳಿತದಲ್ಲಿ ದೇಶದ ಸ್ವಾತಂತ್ಯ, ಶಾಂತಿ, ಸೌಹಾರ್ದತೆ, ದೇಶದ ಐಕ್ಯತೆ ಗಂಡಾಂತರದಲ್ಲಿವೆ ಎಂದು ತಿಳಿಸಿದರು.

ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಆರ್ಥಿಕ ಪರಿಸ್ಥಿತಿ ಕೆಟ್ಟಿದೆ. ಕಾರ್ಮಿಕ ವರ್ಗದ ಮುಂದೆ ದೊಡ್ಡ ಸವಾಲಿದೆ. ದೇಶದ ‘ಕಾರ್ಮಿಕರು, ರೈತರು ಸಂತೋಷವಾಗಿದ್ದಾರೆ’ ಎಂದೂ, ಜಿ20 ರಾಷ್ಟ್ರಗಳ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿರುವುದು ಪ್ರಸ್ತುತ ಸರಕಾರದ ಸಾಧನೆ ಎಂದು ಪ್ರಚಾರ ಮಾಡಲಾಗುತ್ತಿದೆ. ಶೇ. 90ರಷ್ಟು ಕಾರ್ಮಿಕರು ತೀವ್ರ ಸಂಕಟಗಳಲ್ಲಿದ್ದಾರೆ. ದೇಶದಲ್ಲಿ ಜರುಗುತ್ತಿರುವ ಆತ್ಮಹತ್ಯೆಗಳಲ್ಲಿ ಶೇ. 25ರಷ್ಟು ದಿನಕೂಲಿ ಕಾರ್ಮಿಕರ ಆತ್ಮಹತ್ಯೆಗಳಾಗಿವೆ. ದುಡಿಯುವ ಜನರಿಗೆ ಕಾನೂನು ಬದ್ಧ ಕನಿಷ್ಟ ಕೂಲಿಯೂ ಸಿಗುವುದಿಲ್ಲ. ದೇಶದಲ್ಲಿ ಬಡತನ ಹೆಚ್ಚುತ್ತಿದೆ ಎಂದು ತಿಳಿಸಿದರು.

ಕೊರೊನ ಬಿಕ್ಕಟ್ಟಿನ ಕಾಲದಲ್ಲಿ ದೇಶದ ಕಾರ್ಪೋರೇಟ್ ಕಂಪನಿಗಳು ಬಹುದೊಡ್ಡ ಲಾಭ ಗಳಿಸಿದವು. ನಮ್ಮ ಶ್ರಮವನ್ನು, ಬಡ ಜನರ ಜೇಬನ್ನು ಕೊಳ್ಳೆ ಹೊಡೆಯಲು, ಲೂಟಿ ನಡೆಸಲು ಸರಕಾರಗಳು ಅವಕಾಶ ನೀಡಿದವು.

ಆಕ್ಸ್‌ಫಾಮ್‌ ವರದಿಯ ಪ್ರಕಾರ  2020 ರಿಂದ 2022ರಲ್ಲಿ ವರ್ಷದಲ್ಲಿ  ಭಾರತದ  ಶತಕೋಟ್ಯಾಧೀಶರ (ಅಮೆರಿಕನ್ ಡಾಲರ್) ಸಂಖ್ಯೆಯು 102 ರಿಂದ 162ಕ್ಕೆ ಏರಿಕೆಯಾಗಿದೆ. ಅದೇ ಸಮಯದಲ್ಲಿ ಭಾರತದ  ಬಡ ಮತ್ತು ಕೆಳಮಧ್ಯಮ ವರ್ಗಕ್ಕೆ ಸೇರಿದ ಜನಸಂಖ್ಯೆಯ ಶೇ. 50 ರಷ್ಟು ಜನರು  ಹೊಂದಿರುವ ಸಂಪತ್ತಿನ ಪಾಲು ಶೇ. 16 ರಿಂದ 13 ಕ್ಕೆ ಕುಸಿದಿದೆ. ದೇಶದ ಕೇವಲ ಶೇ. 1 ಜನರು  ಶೇ. 45ರಷ್ಟು ಸಂಪತ್ತಿನ ಒಡೆತನ ಗಳಿಸಿದ್ದಾರೆ. ಸಂಪತ್ತು ಬಡಜನರಿಂದ ಶ್ರೀಮಂತರ ಕಡೆಗೆ ಹರಿಯುತ್ತಿದೆ. ದೇಶದ ಶಿಕ್ಷಣ, ಆರೋಗ್ಯಕ್ಕೆ ಹಣ ಹೆಚ್ಚು ಕೊಡಿ ಎಂದು ಕೇಳಿದರೆ ಅಧಿಕಾರಸ್ಥರು ಹಣ ಎಲ್ಲಿಂದ ತುರುವುದು ಎಂದು ಕೇಳುತ್ತಾರೆ.… ಮನೆಯಲ್ಲಿ ತಿನ್ನಲು ಅನ್ನವಿಲ್ಲದೇ ಸತ್ತವರೂ ಸಹ ತೆರಿಗೆ ಕೊಟ್ಟಿರುತ್ತಾರೆ. ಏಕೆಂದರೆ ಜನರು ದೊಡ್ಡ ಪ್ರಮಾಣದಲ್ಲಿ ಪರೋಕ್ಷ ತೆರಿಗೆ ತೆರುತ್ತಾರೆ.

ದೇಶದ ಒಟ್ಟು ಜಿ.ಎಸ್.ಟಿ.ಯಲ್ಲಿ ಶೇ. 64 ರಷ್ಟನ್ನು ಕೆಳಗಿನ ಶೇ. 50 ಜನರು, ಅಂದರೆ ಬಡವರು ಕಟ್ಟುತ್ತಾರೆ. ಆದರೆ ದೇಶದ ಶೇ. 10 ಅತಿ ಶ್ರೀಮಂತರು ಕಟ್ಟುವ ಪರೋಕ್ಷ ತೆರಿಗೆಯ ಪಾಲು ಶೇ. 3 ಮಾತ್ರ. ಒಟ್ಟು ಜಿ.ಎಸ್.ಟಿ. ತೆರಿಗೆಯಲ್ಲಿ  ರಾಜ್ಯ ಸರಕಾರಗಳು ತಮ್ಮ ಪಾಲಿಗಾಗಿ ಕೇಳುತ್ತವೆ. ಜನರ ತೆರಿಗೆ ಹಣ ಇದ್ದರೂ ಕೇಂದ್ರ ಸರಕಾರ ರಾಜ್ಯಗಳ ಪಾಲನ್ನು ಕೊಡುವುದಿಲ್ಲ. ಕಾರ್ಮಿಕ ಚಳುವಳಿ ಪ್ರಕಾರ ಸರಕಾರಕ್ಕೆ ಹಣದ ಕೊರತೆ ಇಲ್ಲ. ಐ.ಎಲ್.ಓ. ಶಿಫಾರಸ್ಸಿನಂತೆ ವೇತನ  ಹೆಚ್ಚಿಸಿ ಎಂದರೆ ಹೆಚ್ಚಿಸುವುದಿಲ್ಲ. ಕೊರೊನಾ ಬಿಕ್ಕಟ್ಟಿನ ಕಾಲವನ್ನು, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು, ರೈತರ ಮೇಲೆ ದಾಳಿ ಮಾಡಲು, ಕಾರ್ಮಿಕ ಕಾಯ್ದೆಗಳಲ್ಲಿ ಕಾರ್ಮಿಕ ವಿರೋಧಿ ಬದಲಾವಣೆ ತರಲು ಬಳಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರುಗಳಿಗೆ ಕಾರ್ಮಿಕರ ವೇತನ, ಪಿಂಚಣಿ, ಶಿಕ್ಷಣ-ಆರೋಗ್ಯಗಳ ಮಾತನಾಡುವುದೇ ಇಲ್ಲ. ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ ಎಂದಿದ್ದರು. ಆದರೆ ಅಧಿಕಾರಸ್ಥರಾದ ಇವರುಗಳು ಈಗ ‘ಹಿಂದೂ ಜಾಗೃತಿ’ಯ ಕುರಿತು ಮಾತನಾಡುತ್ತಿದ್ದಾರೆ. ಇದು ರಾಜಕೀಯ ಲೆಕ್ಕಾಚಾರದ ಹೇಳಿಕೆ. ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಹಿಂದೂ-ಮುಸ್ಲಿಮ್ ಎಂಬ ಮತೀಯ ವಿಭಜನೆಯ ಮೇಲೆ ನಡೆಸಬೇಕೆಂಬ ಉದ್ದೇಶದಿಂದ ಅವರು ಈ ರೀತಿ ಕರೆ ನೀಡುತ್ತಿದ್ದಾರೆ.

ರಾಷ್ಟ್ರೀಯ ಕಾರ್ಮಿಕ ಸಮಾವೇಶವು ಸದ್ಯದಲ್ಲೇ ಸೇರಲಿದ್ದು, ಮಹಾತ್ಮ ಗಾಂಧಿಯವರು ಹುತಾತ್ಮರಾದ ಜನವರಿ 30, 2023ರಂದು ಸಭೆ ಸೇರಲಿದೆ. ದೇಶದ ಕಾರ್ಮಿಕ ಚಳುವಳಿ, ಕಾರ್ಮಿಕ ಹಕ್ಕುಗಳಿಗಾಗಿ ಹಾಗೂ ಭಾರತದ ಜಾತ್ಯತೀತ ಸಂವಿಧಾನವನ್ನು ರಕ್ಷಿಸುವ ಮತ್ತು ಜನತೆಯ ಐಕ್ಯತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಿದೆ. ಪ್ರಸ್ತುತ ಸರಕಾರವು ವಿರೋಧ ಪಕ್ಷಗಳು, ಕಾರ್ಮಿಕ-ರೈತ ಚಳುವಳಿಗಳ ಮೇಲೆ, ಮಾನವ ಹಕ್ಕು ಹೋರಾಟಗಾರರ ಮೇಲೆ ದಾಳಿ ಮಾಡುತ್ತಿದೆ. ಈಗ ಸರಕಾರವು ನ್ಯಾಯಾಂಗದ ಮೇಲೆ ಮುಗಿ ಬಿದ್ದಿದೆ. ದೇಶದ ನ್ಯಾಯಾಂಗವು ಸ್ವತಂತ್ರವಾಗಿ ಇರಬಾರದು ಎನ್ನುತ್ತಿದೆ.

ಭಾರತದ ಸಂವಿಧಾನಕ್ಕೆ ಸಂಬಂಧಿಸಿ ಮೂಲತತ್ವ, ಮೂಲಭೂತ ಮೌಲ್ಯ ಎಂಬುದು ಏನೂ ಇಲ್ಲ, ಸಂವಿಧಾನವನ್ನು ನಮಗೆ ಬೇಕಾದಾಗ ಬೇಕಾದಂತೆ ಬದಲಿಸಬಹುದು ಎಂದು ಅವರು ಹೇಳುತ್ತಿದ್ದಾರೆ. ಅದು ಅಪಾಯಕಾರಿ. ಭಾರತ ಸಂವಿಧಾನಕ್ಕೆ ಅಪಾಯವಿದೆ. ಸಂವಿಧಾನದಲ್ಲಿ ಅಡಕವಾಗಿರುವ ಜನರ ಮೂಲಭೂತ ಹಕ್ಕುಗಳನ್ನು ಯಾರೂ ಮುಟ್ಟಲಾಗದು. ದೇಶದ ಉಪರಾಷ್ಟ್ರಪತಿ ಹೀಗೆ ಹೇಳಿದರೆ, ಸಾಮಾಜಿಕ ನ್ಯಾಯ ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರರ ಆಶಯಗಳು ಮತ್ತು ಕನಸುಗಳು ಮಣ್ಣುಪಾಲಾಗುತ್ತವೆ. ಪ್ರಸ್ತುತ  ಕಾರ್ಮಿಕ ಕಾನೂನುಗಳು ಕಾರ್ಮಿಕ ವಿರೋಧಿಯಾಗಿವೆ. ಕಾರ್ಮಿಕ ನ್ಯಾಯಾಲಯಗಳು ಕಾರ್ಮಿಕರ ಪರವಾಗಿಲ್ಲ. ಕಾರ್ಮಿಕರ ಹೋರಾಟವನ್ನು ಮುಂದೆ ಒಯ್ಯಲು ಈ ಸಿಐಟಿಯು ಅಖಿಲ ಭಾರತ ಸಮ್ಮೇಳನವು ತೀರ್ಮಾನಿಸಲಿದೆ.

2024ರಲ್ಲಿ ಸಾರ್ವತ್ರಿಕ ಚುನಾವಣೆ ಬರಲಿದ್ದು, ಜನರ ಬದುಕನ್ನು ದುರ್ಬರಗೊಳಿಸಿರುವ ಕಾರ್ಮಿಕ ವಿರೋಧಿಯಾದ ಆರೆಸ್ಸೆಸ್-ಬಿಜೆಪಿ ನೇತೃತ್ವದ ವಿಭಜನಕಾರಿ ಕೋಮುವಾದಿ ಸರಕಾರವನ್ನು ಸೋಲಿಸಲು ಸಹ ಕಾರ್ಮಿಕ ಚಳುವಳಿಯು ದೃಢವಾದ ತೀರ್ಮಾನ ಕೈಗೊಳ್ಳಲಿದೆ ಎಂದು ಅಮರ್‌ಜಿತ್ ಕೌರ್ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *