ಚಾಮರಾಜನಗರ: ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಬದಲಾಗಿ ಇಲ್ಲಿನ ಪಿಡಿಒ ಪ್ರತಿ ಕಾಮಗಾರಿಗೂ ಲಂಚ ಕೇಳುತ್ತಿದ್ದಾರೆ ಎಂದು ಬೇಸತ್ತಿರುವ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬ ವಿನೂತನ ಪ್ರತಿಭಟನೆಗೆ ಮುಂದಾಗಿದ್ದು, ಭಿಕ್ಷಾ ಪಾತ್ರೆಯನ್ನು ಇಟ್ಟುಕೊಂಡು ಪಂಚಾಯ್ತಿ ಎದುರು ಧರಣಿ ನಡೆಸುತ್ತಿದ್ದಾರೆ.
ಮಾರ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ ರೋಡ್ ಗ್ರಾಮದ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ, ಕಾಮಗಾರಿ ನಡೆಸಲು ಪಿಡಿಒ ಪದೇಪದೇ ಲಂಚ ಕೇಳುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಗ್ರಾಮ ಪಂಚಾಯತ್ ಸದಸ್ಯ ಅರುಳಸೆಲ್ವಂ ಆರೋಪಿಸಿದ್ದಾರೆ.
ಇದನ್ನು ಓದಿ: ಸರ್ಕಾರಿ ಅಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತು ದಂಪತಿಯಿಂದ ದಯಾಮರಣಕ್ಕೆ ಅರ್ಜಿ
ಹನೂರು ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ನಾಲ್ ರೋಡ್ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಚರಂಡಿ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕ್ರಿಯೆ ಯೋಜನೆ ರೂಪಿಸದೇ ಇರುವುದರಿಂದ ಇಲ್ಲಿ ಸಮಸ್ಯೆಗಳು ತಲೆದೋರಿದೆ. ಪಿಡಿಒರವರಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ, ಬದಲಾಗಿ ಎಲ್ಲಾ ಕಾಮಗಾರಿಗಳಿಗೂ ಲಂಚ ಕೇಳುತ್ತಾರೆ. ನಾವು ಎಲ್ಲಿಂದ ಹಣ ಕೊಡಲು ಸಾಧ್ಯ ಎಂದು ಅರುಳಸೆಲ್ವಂ, ಬಾಯಿಗೆ ಬಟ್ಟೆ ಕಟ್ಟಿಕೊಂಡು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ: ಬಾಣಂತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟ ಸರ್ಕಾರಿ ಆಸ್ಪತ್ರೆ ವೈದ್ಯರು
ʻಪ್ರಾಮಾಣಿಕತೆಗೆ ಸಿಕ್ಕ ಪ್ರತಿಫಲ ಭಿಕ್ಷಾ ಪಾತ್ರೆʼ ಎಂದು ಪಾತ್ರೆಗೆ ಚೀಟಿಯನ್ನು ಅಂಟಿಸಿಕೊಂಡು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ ಅರುಳಸೆಲ್ವಂ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಲಂಚ ಕೊಡಬೇಕಾಗಿರುವುದರಿಂದ ಗ್ರಾಮಸ್ಥರಿಂದ ಭಿಕ್ಷೆ ಬೇಡುತ್ತಿದ್ದೇನೆ ಎಂದಿದ್ದಾರೆ.
ಪಿಡಿಒ ಅಧಿಕಾರಿ ಪ್ರತಿಕ್ರಿಯೆ
ಗ್ರಾಮ ಪಂಚಾಯತಿ ಸದಸ್ಯ ಅರುಳಸೆಲ್ವಂ ಆರೋಪದ ಬಗ್ಗೆ ಮಾರ್ಟಳ್ಳಿ ಗ್ರಾ.ಪಂ. ಪಿಡಿಒ ಗಂಗಾಧರ್ ಪ್ರತಿಕ್ರಿಯಿಸಿದ್ದು, “ನಾಲ್ ರೋಡ್ ವಾರ್ಡಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಅವರು ಕಾಮಗಾರಿಗಳನ್ನು ಪಟ್ಟಿ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಕ್ರಿಯೆ ಯೋಜನೆ ಮಾಡಿ ಅಭಿವೃದ್ಧಿಪಡಿಸುತ್ತೇವೆ, ಲಂಚ ಕೇಳುತ್ತೇನೆ ಎನ್ನುವುದು ಸತ್ಯಕ್ಕೆ ದೂರ” ಎಂದಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ