ಮಂಗಳೂರು: ನಗರದಾದ್ಯಂತ ರಾಜಾರೋಷವಾಗಿ ನಡೆಸುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್ ಸೇರಿ ಇನ್ನಿತರ ಜೂಜು ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕೆಂದು ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ಹಲವು ಹಂತದ ಹೋರಾಟಕ್ಕೆ ಸಜ್ಜಾಗಿದೆ.
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ನಮ್ಮ ಸಂಘಟನೆಯ ಮೂಲಕ ಜೂಜುಕೇಂದ್ರಗಳಿಗೆ ಸಾಂಕೇತಿಕ ಮುತ್ತಿಗೆ ಹಾಕುವ ಮೂಲಕ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಗಮನಕ್ಕೆ ತಂದರೂ ಜೂಜುಕೇಂದ್ರಗಳ ವಿರುದ್ದ ಕ್ರಮಕೈಗೊಳ್ಳುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆ. ಈಗ ಮತ್ತೆ ಜೂಜುಕೇಂದ್ರಗಳು ಎಂದಿನಂತೆ ಪ್ರಾರಂಭಗೊಂಡಿದ್ದು, ಅವುಗಳನ್ನು ಶಾಶ್ವತವಾಗಿ ಮುಚ್ಚುವವರೆಗೆ ಹಲವು ಹಂತದ ಹೋರಾಟ ಸಂಘಟಿಸಲು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಮಂಗಳೂರು: ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್ಐ ಮುತ್ತಿಗೆ
ರಿಕ್ರಿಯೇಶನ್ ಕ್ಲಬ್ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಈ ಜುಗಾರಿ ಅಡ್ಡೆಗಳು ಕಾನೂನುಬಾಹಿರ ಚಟುವಟಿಕೆಯಾಗಿದ್ದು ಬೀದಿಬದಿ ವ್ಯಾಪಾರಿಗಳನ್ನು, ದಿನಕೂಲಿ ನೌಕರರನ್ನು, ರಿಕ್ಷಾ ಚಾಲಕ ಇನ್ನಿತರ ಸಣ್ಣ ಆದಾಯಕ್ಕೆ ದುಡಿಯುವ ಜನಸಾಮಾನ್ಯರನ್ನು ಮತ್ತು ವಿದ್ಯಾರ್ಥಿಗಳನ್ನು ಬಲಿಪಡೆಯುತ್ತಿದ್ದೆ. ಇಂತಹ ಜುಗಾರಿ ಕೇಂದ್ರಗಳಿಂದ ಈಗಾಗಲೇ ಬಹುತೇಕ ಕುಟುಂಬಗಳು ಬೀದಿಪಾಲಾಗಿದ್ದು ಇವುಗಳ ವಿರುದ್ದ ಪ್ರಾರಂಭದಿಂದಲೇ ಸಾರ್ವಜನಿಕ ವಲಯಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತ ಬಂದಿದೆ. ಆದರೂ ಪೊಲೀಸರು ಯಾವ ಕ್ರಮಗಳನ್ನು ಅನುಸರಿಸಿಲ್ಲ ಎಂದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದ ಹಿತೇಂದ್ರ ಮತ್ತು ಚಂದ್ರಶೇಖರ್ ರಂತಹ ಅಧಿಕಾರಿಗಳು ಸಾರ್ವಜನಿಕರ ಯಾವುದೇ ದೂರುಗಳಿಗೆ ಕಾಯದೆ ಸ್ವಯಂ ಪ್ರೇರಿತರಾಗಿ ಜೂಜುಕೇಂದ್ರಗಳು ಮುಚ್ಚಿಸುವ ಕ್ರಮ ಕೈಗೊಂಡಿದ್ದರು. ಆದರೆ, ಸದ್ರಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಆಯುಕ್ತರು ಇಂತಹ ಯಾವುದೇ ಜನಪರ ನೀತಿಗಳನ್ನು ಕೈಗೊಳ್ಳದೆ ಇರುವುದು, ಅವರ ಮೇಲಿದ್ದ ಭರವಸೆಗಳನ್ನು ಹುಸಿಗೊಳಿಸಿದೆ ಎಂದು ಸಂತೋಷ್ ಬಜಾಲ್ ತಿಳಿಸಿದ್ದಾರೆ.
ಇದನ್ನು ಓದಿ: ಆರೋಗ್ಯ ಕೇಂದ್ರದಲ್ಲಿನ ಮೂಲಸೌಕರ್ಯಗಳ ಪರಿಹಾರಕ್ಕಾಗಿ ಡಿವೈಎಫ್ಐ ಪ್ರತಿಭಟನೆ
ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಮೌನವು ಜುಗಾರಿ ಅಡ್ಡೆಗಳನ್ನು ನಡೆಸುವ ಕುಳಗಳನ್ನು ಮೆರೆಸುವಂತಾಗಿದೆ. ನಗರದ ಕಾನೂನು ಸುವ್ಯವಸ್ಥೆ ಹದಗೆಡದೆ, ಸ್ವಾಸ್ಥ್ಯ ಸಮಾಜವನ್ನು ಕಾಪಾಡಲು ಇಂತಹ ಜನವಿರೋಧಿ ಜುಗಾರಿ ಕೇಂದ್ರಗಳನ್ನು ಮಟ್ಟಹಾಕಲು ಕೂಡಲೇ ಪೊಲೀಸ್ ಇಲಾಖೆ ಮುಂದಾಗಬೇಕು. ಬಡವರ ಮನೆಯ ಅನ್ನವನ್ನು ಕಸಿಯುವ ಗ್ಯಾಂಬ್ಲಿಂಗ್ ಸೆಂಟರ್ ಗಳಿಗೆ ಶಾಶ್ವತವಾಗಿ ಬೀಗ ಜಡಿಯಬೇಕು ಎಂಬುದು ಡಿವೈಎಫ್ಐ ಸಂಘಟನೆ ಆಗ್ರಹ ಎಂದರು.
ಈ ಹಿನ್ನಲೆಯಲ್ಲಿ ಡಿವೈಎಫ್ಐ ಸಂಘಟನೆ ಜೂಜು ಅಡ್ಡೆ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವವರೆಗೆ ಹಾಗೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ನೀತಿಗಳ ವಿರುದ್ಧ ಹಲವು ಹಂತದ ಹೋರಾಟಗಳನ್ನು ಸಂಘಟಿಸಲು ತೀರ್ಮಾನಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ