ಬೆಂಗಳೂರು: ದೇಶದ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಮತ್ತೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
2023ನೇ ಸಾಲಿನ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಆದರೆ, ಈಗ ಕೊನೆ ಕ್ಷಣದಲ್ಲಿ ಕರ್ನಾಟಕದ ‘ನಾರಿ ಶಕ್ತಿ’ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಕರ್ನಾಟಕ ರಾಜ್ಯದಿಂದ ಸತತ 13 ವರ್ಷಗಳಿಂದ ಪ್ರದರ್ಶನಗೊಳ್ಳುತ್ತ ಬಂದಿದ್ದ ಸ್ತಬ್ಧಚಿತ್ರಕ್ಕೆ ಈ ವರ್ಷವೂ ಅವಕಾಶ ಸಿಕ್ಕಿದ್ದು, 14ನೇ ಬಾರಿ ರಾಜ್ಯದ ಸ್ಥಬ್ದಚಿತ್ರ ಪ್ರದರ್ಶನಗೊಳ್ಳಲಿದೆ.
ಇದನ್ನು ಓದಿ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶವಿಲ್ಲ
ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರದಲ್ಲಿ ಸ್ತಬ್ಧಚಿತ್ರ ಆಯ್ಕೆಯಾಗಿರುವ ಬಗ್ಗೆ ಉಲ್ಲೇಖಿಸಿ, ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಲಗತ್ತಿಸಿದ್ದಾರೆ. ಸ್ತಬ್ಧಚಿತ್ರವು ಜನವರಿ 19ರ ವೇಳೆಗೆ ಸಿದ್ಧಗೊಳ್ಳಬೇಕು ಮತ್ತು 23ರಿಂದ ಪೂರ್ವಸಿದ್ಧತೆ ಸಂಚಾರ ನಡೆಯಲಿದೆ. ಹೀಗಾಗಿ ನಿಗದಿತ ದಿನದೊಳಗೆ ಸ್ತಬ್ಧಚಿತ್ರ ತಯಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ.
ಕರ್ನಾಟಕ ಪ್ರತಿನಿಧಿಸುವ ʻನಾರಿಶಕ್ತಿʼ
2023ರ ಗಣರಾಜ್ಯೋತ್ಸವ ಸ್ತಬ್ಧಚಿತ್ರದಲ್ಲಿ ʻನಾರಿಶಕ್ತಿʼ ವಿಷಯವಸ್ತುವಾಗಿದೆ. ಪದ್ಮಶ್ರೀ ಪುರಸ್ಕೃತ ಮಹಿಳಾ ಸಾಧಕರ ಸಾಧನೆ ಅನಾವರಣಗೊಳಿಸಲಿರುವ ʻನಾರಿ ಶಕ್ತಿʼ ಕಲ್ಪನೆಯಲ್ಲಿ ರಾಜ್ಯದ ಮೂವರು ಮಹಿಳಾ ಸಾಧಕಿಯರ ಬಗ್ಗೆ ಚಿತ್ರಣಗೊಳ್ಳಲಿದೆ. ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಿಸಿಗೌಡ ಇವರ ಸಾಧನೆಗಳು ಅನಾವರಣಗೊಳ್ಳಲಿದೆ.
ಇದನ್ನು ಓದಿ: ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಕರ್ನಾಟಕದ ಕರಕುಶಲ ಕಲೆಗಳ ಅನಾವರಣ
ಈ ಇದು ಆರಂಭಿಕ ಆಯ್ಕೆ ವಿಭಾಗಗಳಲ್ಲಿ ಈಗಾಗಲೇ ಕೆಲವು ಸುತ್ತಿನಲ್ಲಿ ಸೇರ್ಪಡೆಗೊಂಡಿತ್ತು. ಸ್ತಬ್ಧಚಿತ್ರದ ವಿನ್ಯಾಸ ಮತ್ತು ಸಂಗೀತಕ್ಕೆ ತಜ್ಞರ ಸಮಿತಿಗೆ ಒಪ್ಪಿಗೆ ನೀಡಲಾಗುತ್ತು. ಕಳೆದ ಬಾರಿ ಕರ್ನಾಟಕ ಪಾರಂಪರಿಕ ಕರಕುಶಲಗಳ ಬಗೆಗಿನ ‘ಸಾಂಸ್ಕೃತಿಕ ತೊಟ್ಟಿಲು’ ವಿಷಯವನ್ನು ವಸ್ತುವಾಗಿಟ್ಟುಕೊಂಡು ಪ್ರದರ್ಶನವನ್ನು ನೀಡಿತ್ತು. ಇದಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿತ್ತು.
ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗದಿರುವ ಬಗ್ಗೆ ವ್ಯಾಪಕ ಆಕ್ರೋಶವ್ಯಕ್ತವಾಗಿತ್ತು. ಪ್ರತಿಪಕ್ಷಗಳು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಕನ್ನಡ ಹೋರಾಟಗಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. ಅವಕಾಶ ನಿರಾಕರಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅವಕಾಶ ಪಡೆಯಲು ಪ್ರಯತ್ನ ನಡೆಸಿದ್ದೇವೆ. ಅವಕಾಶ ಸಿಗಲಿದೆ ಎಂಬ ವಿಶ್ವಾಸವಿದೆ ಎಂದಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ