ಮಂಗಳೂರು: ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್(87) ಅವರು ಇಂದು(ಜನವರಿ 10) ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಕಾರಣಗಳಿಂದ ನಿಧನ ಹೊಂದಿದ್ದಾರೆ. ಗಡಿನಾಡು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದಲ್ಲಿ ಜೂನ್ 30, 1936 ರಂದು ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು ತಾಯಿ ಚೈನಾಬಿ ಅವರು.
ಸಾರಾ ಅಬೂಬಕ್ಕರ್ ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟಿರಿನಲ್ಲೇ ನೆರವೇರಿಸಿದರು. ಮುಂದೆ ಹೈಸ್ಕೂಲು ವಿದ್ಯಾಬ್ಯಾಸವನ್ನು ಕಾಸರಗೋಡಿನಲ್ಲಿ ಮಾಡಿದರು. ವಿದ್ಯಾಭ್ಯಾಸವನ್ನು ಅರ್ಧಕ್ಕೆ ವಿದಾಯ ಹೇಳುವಂತಾಯಿತು. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಅವರ ಬಾಲ್ಯದಲ್ಲೇ ಮೂಡಿಬಂದಿತ್ತು. ಅಬೂಬಕ್ಕರ್ ಅವರೊಡನೆ ಸಾರಾ ಅವರು ವಿವಾಹವಾದರು.
ದಶಕಗಳಿಂದಲೂ ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆಗಳಿಗೆ ಪ್ರೇರಪಣೆ ನೀಡುತ್ತಾ ಬಂದಿದವರು. ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದಿಂದಾಗಿ ಸಾರಾ ಅಬೂಬಕ್ಕರ್ ಅವರಲ್ಲಿ ಬರೆಯಬೇಕೆಂಬ ಒತ್ತಡ ಸದಾ ಇರುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು.
ಅವರ ಮೊದಲ ಕಾದಂಬರಿ ʻಚಂದ್ರಗಿರಿಯ ತೀರದಲ್ಲಿʼ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ ಕೃತಿಯಾಗಿದ್ದು, ಬಹಳ ಗಮನ ಸೆಳೆಯಿತು. ಸುಮಾರು 10 ಕಾದಂಬರಿ, 6 ಕಥಾ ಸಂಕಲನಗಳು, 5 ಬಾನುಲಿ ನಾಟಕ, ಲೇಖನ, ಪ್ರವಾಸ ಕಥನಗಳನ್ನು ರಚಿಸುವ ಮೂಲಕ ಅವರು, ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದರು.
‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯು ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಹೊರಹೊಮ್ಮಿದ ಶೋಷಿತ ಮುಸ್ಲಿಂ ಮಹಿಳೆಯರ ದನಿ, ವಾಸ್ತವಿಕ ಬದುಕಿನ ಚಿತ್ರಣದ ಈ ಕಾದಂಬರಿ ಬಹುಬೇಗ ಓದುಗರಿಂದ ಪಡೆದ ಮೆಚ್ಚುಗೆ. ನಂತರ ಬರೆದದ್ದು ಹಲವಾರು ಕಾದಂಬರಿಗಳು.
ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ನಿರಂತರವಾಗಿ ಪ್ರತಿಪಾದಿಸುವ ಸಾರಾ ಅಬೂಬಕ್ಕರ್ “ಹೆಣ್ಣು ಮಕ್ಕಳು ಪ್ರಾಣಿಗಳು, ಹೆರಲು ಇರುವ ಯಂತ್ರಗಳು ಎಂದು ಬಿಂಬಿಸಿರುವ ಸಮಾಜ ನಮ್ಮದು. ಇಸ್ಲಾಂನ ಮೂಲದಲ್ಲಿ ಹೆಣ್ಣಿಗೆ ಅಪಾರ ಗೌರವವಿವೆ. ಆದರೆ ಸೌದಿ ಅರೇಬಿಯಾ ಮೂಲದ ‘ವಹಾದಿಸಂ’ ಅನ್ನು ಮುಂದಿಟ್ಟುಕೊಂಡು ಈಗೀಗ ವಿಶ್ವದ ನಾನಾ ಭಾಗಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬಾರದು ಎಂದೆಲ್ಲಾ ವಾದಿಸುತ್ತಿದ್ದಾರೆ. ಮಹಿಳೆಗೆ ಶಿಕ್ಷಣ ಸಿಗಬೇಕು. ಅದರಲ್ಲೂ ತಾಯಂದಿರಿಗೆ ಅಕ್ಷರ ಜ್ಞಾನ ಬೇಕು. ಆದರೆ ಕೇರಳ, ಕರ್ನಾಟಕ ಕರಾವಳಿ ಭಾಗದ ಬಹುತೇಕ ಮುಸ್ಲಿಂ ಕುಟುಂಬಗಳಲ್ಲಿನ ತಾಯಂದಿರಿಗೆ ಶಿಕ್ಷಣ ಇಲ್ಲ. ಎಲ್ಲೋ ದೂರದ ದುಬೈನಲ್ಲೋ, ಮತ್ತೊಂದೆಡೆಯೋ ಕುಳಿತ ಪತಿ ಹಣ ಕಳುಹಿಸುತ್ತಾನೆ. ಅದನ್ನು ಮಕ್ಕಳು ಮಜಾ ಮಾಡುತ್ತಾರೆ. ಹಣವನ್ನು ಸರಿಯಾಗಿ ನಿರ್ವಹಿಸಲೂ ಬಾರದ ಮಕ್ಕಳು ಕುಟುಂಬ ಸಮೇತ ಹಾಳಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಮಹಿಳೆಯನ್ನು ಶಿಕ್ಷಣದಿಂದ ವಂಚಿಸುವುದು ಸರಿಯಲ್ಲ” ಎಂದು ಹಿಂದೊಮ್ಮೆ ಅವರು ಹೇಳಿದ್ದರು.
ಸಾರಾ ಅಬೂಬಕ್ಕರ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.