“ಈ ಏಕಪಕ್ಷೀಯತೆಯನ್ನು ತಕ್ಷಣವೇ ನಿಲ್ಲಿಸುವಂತೆ ಮಾಡಲು ಎಲ್ಲಾ ದೇಶಪ್ರೇಮಿ ಶಕ್ತಿಗಳು ಕ್ರಿಯೆಗಿಳಿಯಬೇಕು”
ನವದೆಹಲಿ: ವಿದೇಶಿ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಭಾರತದಲ್ಲಿ ಕ್ಯಾಂಪಸ್ ಗಳನ್ನು ಸ್ಥಾಪಿಸಲು ಅನುಕೂಲ ಕಲ್ಪಿಸಲಾಗುವುದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೇಳಿದೆ. 90 ದಿನಗಳ ಅನುಮೋದನೆ ಪ್ರಕ್ರಿಯೆಯ ನಂತರ ಶುಲ್ಕವನ್ನು ನಿರ್ಧರಿಸುವಲ್ಲಿ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಸ್ವಾಯತ್ತತೆಗೆ ಅವಕಾಶದೊಂದಿಗೆ ಈ ಅನುಕೂಲ ಕಲ್ಪಿಸಲಾಗುವುದು ಎಂದು ಅದು ಹೇಳಿದೆ. ಯುಜಿಸಿಯ ಈ ನಡೆಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ವಿರೋಧಿಸಿದೆ. ಏಕೆಂದರೆ, ಇದು ಹೆಚ್ಚು ಶುಲ್ಕದ ಪ್ರತ್ಯೇಕ ವಲಯಗಳು, ಮೇಲ್ವರ್ಗಗಳಿಗೆ ಸೀಮಿತವಾದ ಸಂಸ್ಥೆಗಳು ಹುಟ್ಟಿಕೊಳ್ಳಲು ಹಾದಿ ಮಾಡಿಕೊಡುತ್ತದೆ, ಈ ಮೂಲಕ ದೇಶದಲ್ಲಿ ಉನ್ನತ ಶಿಕ್ಷಣದ ಸಂರಚನೆಯನ್ನು ಮತ್ತಷ್ಟು ವಿಕೃತಗೊಳಿಸುತ್ತದೆ ಎಂದು ಅದು ಹೇಳಿದೆ.
ಅಂತಹ ಕ್ಯಾಂಪಸ್ ಗಳನ್ನು ಸ್ಥಾಪಿಸುವ ಕಾರ್ಯಾಚರಣೆಯ ವಿವರಗಳು, ಅವು ತಮ್ಮದೇ ಆದ ಪ್ರವೇಶ ಪ್ರಕ್ರಿಯೆ ಮತ್ತು ದೇಶೀಯ ಮತ್ತು ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾನದಂಡಗಳನ್ನು ವಿಕಾಸಗೊಳಿಸಬಹುದು ಎಂಬುದನ್ನು ತೋರಿಸುತ್ತವೆ. ಅವು ತಮ್ಮ ಶುಲ್ಕ ರಚನೆಯನ್ನು ತಾವೇ ನಿರ್ಧರಿಸಬಹುದು, ಭಾರತೀಯ ಸಂಸ್ಥೆಗಳ ಮೇಲೆ ಹೊರಿಸುವ ಯಾವುದೇ ಮಿತಿಗಳು ಅವುಗಳ ಮೇಲಿರುವುದಿಲ್ಲ.
ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು ಗಡಿಯಾಚೆ-ಈಚೆಯಿಂದ ನಿಧಿಗಳನ್ನು ಪಡೆಯಬಹುದು ಮತ್ತು ವಿದೇಶಿ ಕರೆನ್ಸಿ ಖಾತೆಗಳನ್ನು, ಪಾವತಿ ವಿಧಾನ, ರವಾನೆ ಮತ್ತು ಸಂಬಂಧ ಪಟ್ಟ ದೇಶಗಳಿಗೆ ಹಿಂದಿರುಗಿಸುವ ಅವಕಾಶಗಳನ್ನು ಹೊಂದಿರುತ್ತವೆ.
ಸರ್ಕಾರ ಮತ್ತು ಉನ್ನತ ಶಿಕ್ಷಣ ಪ್ರಾಧಿಕಾರಗಳ ಶೈಕ್ಷಣಿಕ ನೀತಿಗಳು ಶೈಕ್ಷಣಿಕ ಪ್ರಕ್ರಿಯೆಯ ಸಾರ್ವಭೌಮತ್ವವನ್ನು ಹಾಳುಮಾಡುತ್ತವೆ ಎಂಬುದು ಸ್ಫಟಿಕ ಸ್ಪಷ್ಟವಾಗಿದೆ. ಈ ಹಿಂದೆ, ಭಾರತೀಯ ಕಾರ್ಪೊರೇಟ್ ಗಳಿಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಯಿತು, ಅವುಗಳಿಗೆ ರಾಷ್ಟ್ರೀಯ ಶ್ರೇಷ್ಠತೆಯ ಸ್ಥಾನಮಾನವನ್ನು ನೀಡಲಾಯಿತು, ಆದರೆ ನಂತರ ಈ ದಿಕ್ಕಿನಲ್ಲಿ ಏನಾಗಿದೆ ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಭಾರತೀಯ ಉನ್ನತ ಶಿಕ್ಷಣ ಕ್ಷೇತ್ರವು ಹೊಸ ಶಿಕ್ಷಣ ನೀತಿ ಮತ್ತು ಕೋವಿಡ್ ಸಮಯದಲ್ಲಿ ಆನ್ಲೈನ್ ಶಿಕ್ಷಣವನ್ನು ಅತಿಯಾಗಿ ಅನುಸರಿಸಿದ್ದರಿಂದ ತತ್ತರಿಸುತ್ತಿದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಡ್ರಾಪ್ಔಟ್ ದರಗಳಲ್ಲಿ ತೀವ್ರ ಹೆಚ್ಚಳವಾಗಿದೆ ಎಂಬುದನ್ನು ಎಲ್ಲಾ ಅಧ್ಯಯನಗಳು ಬಯಲಿಗೆ ತಂದಿವೆ. ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳಿಗೆ ತುತ್ತಾಗಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಗಂಭೀರ ಅಪಾಯದಲ್ಲಿದೆ.
ಪ್ರಸ್ತಾವಿತ ನಡೆಯು ಉನ್ನತ ಶಿಕ್ಷಣವು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳನ್ನು ದೇಶ ಎದುರಿಸಲು ಅನುವು ಮಾಡಿಕೊಡುವುದಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಯುಜಿಸಿ ಮತ್ತು ಸರ್ಕಾರ ಈ ಕರಡು ಪ್ರಸ್ತಾಪವನ್ನು ಹಿಂದಕ್ಕೆ ಪಡೆಯಬೇಕು ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಉನ್ನತ ಶಿಕ್ಷಣದ ಭವಿಷ್ಯದಲ್ಲಿ ಪ್ರಮುಖವಾಗಿ ಕಾಳಜಿ ಇರುವ ಎಲ್ಲರೊಂದಿಗೆ ಸಮಾಲೋಚನೆಗಳನ್ನು ಪ್ರಾರಂಭಿಸಬೇಕು ಎಂದು ಬಲವಾಗಿ ಆಗ್ರಹಿಸಿದೆ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆಗಳನ್ನು ನಡೆಸದೆ ಏಕಪಕ್ಷೀಯವಾಗಿ ಕ್ರಮಗಳನ್ನು ಪ್ರಾರಂಭಿಸುವ ಶಾಸನಾತ್ಮಕ ಅಧಿಕಾರವನ್ನು ಯುಜಿಸಿ ಹೊಂದಿಲ್ಲ. ಯುಜಿಸಿ ಮತ್ತು ಸರ್ಕಾರ ಈ ಏಕಪಕ್ಷೀಯತೆಯನ್ನು ತಕ್ಷಣವೇ ನಿಲ್ಲಿಸುವಂತೆ ಮಾಡಲು ಎಲ್ಲಾ ಪ್ರಜಾಪ್ರಭುತ್ವವಾದಿ ಮತ್ತು ದೇಶಪ್ರೇಮಿ ಶಕ್ತಿಗಳು ಕ್ರಿಯೆಗಿಳಿಯಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಮನವಿ ಮಾಡಿದೆ.