ಕೇವಲ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಅಲ್ಲ-ಅನುದಾನ ಪಡೆಯುವ ಸಂಘಸಂಸ್ಥೆಗಳನ್ನು ಎಚ್ಚರಿಸಲು ಜನಸಾಹಿತ್ಯ ಸಮ್ಮೇಳನ

ಬೆಂಗಳೂರು: ಹಾವೇರಿ ಸಾಹಿತ್ಯ ಸಮ್ಮೇಳನವು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಮ್ಮೇಳನದ ಕರೆಯೋಲೆ ಹೊರಗೆ ಬರುತ್ತಿರುತ್ತಿದ್ದಂತೆಯೇ ರಾಜ್ಯದ ಅನೇಕ ಲೇಖಕರು ಮತ್ತು ಕಲಾವಿದರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ 08ರಂದು ನಡೆಯಲಿರುವ ಜನಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಅಲ್ಲ. ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಹಲವು ಸಂಘ ಸಂಸ್ಥೆಗಳನ್ನ ಎಚ್ಚರಿಸುವ ಕಾರ್ಯವೂ ಒಳಗೊಂಡಿದೆ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಜನಸಾಹಿತ್ಯ ಸಮ್ಮೇಳನದ ರೂಪುರೇಷೆಗಳು ಕುರಿತು ಅಲುಮ್ನಿ ಅಸೋಸಿಯೇಷನ್‌ ಅವರಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿಯ ಜವಾಹರಲಾಲ್‌ ನೆಹರೂ(ಜೆಎನ್‌ಯು) ವಿಶ್ವವಿದ್ಯಾಲಯದ ಪ್ರೊಪೆಸರ್‌ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.

ಇದನ್ನು ಓದಿ: ಜನಸಾಹಿತ್ಯ ಸಮ್ಮೇಳನ ಆಹ್ವಾನ ಪತ್ರ ಬಿಡುಗಡೆ

ನಾಳಿನ ಜನಸಾಹಿತ್ಯ ಸಮ್ಮೇಳನ ಬಳಿಕ ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ. ನಾಳಿನ ಕಾರ್ಯಕ್ರಮ ಮೊದಲ ಹೆಜ್ಜೆಯಷ್ಟೇ. ಕನ್ನಡ ಸಾಹಿತ್ಯ ಪರಿಷತ್ತಿನ ಈಗಿನ ಅಧ್ಯಕ್ಷರು ಕೊಮುವಾದಿ ಎಂಬುದರಲ್ಲಿ ಅನುಮಾನ ಇಲ್ಲ. ಸಾಹಿತ್ಯ ಸಂಘಟಕರೂ ಅಲ್ಲದ, ಸಾಹಿತಿಗಳು ಅಲ್ಲದವರನ್ನು ಸಾಹಿತ್ಯ ಪರಿಷತ್ತಿ ನಲ್ಲಿ ನೇಮಿಸಿದ್ದಾರೆ. ಪರಿಷತ್ ಮತ್ತು ಹಲವು ವಿವಿಗಳು ಕೊಮುವಾದಿ ಸಂಘಟನೆಯಾಗಿ ಕೆಲಸ ಮಾಡುತ್ತಿವೆ. ಇದರ ವಿರುದ್ದ ಪರ್ಯಾಯ ಸಂಘಟನೆಗಳನ್ನ ಕಟ್ಟಿಕೊಳ್ಳದಿದ್ದರೆ ಈ ನಾಡಿಗೆ ಸಮಸ್ಯೆ ಆಗಲಿದೆ ಎಂದು ಎಚ್ಚರಿಸಿದರು.

 

ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅದ್ಬುತ ಕೆಲಸ ಮಾಡಿದೆ. ಸಮಯ ಕಳೆದಂತೆ ಸಾಹಿತಿಗಳನ್ನ ದೂರ ತಳ್ಳುವ ಕೆಲಸ ಆಗ್ತಾಯಿದೆ. ಈಗ ಅದು ಸರ್ಕಾರದ ಅನುದಾನಿತ ಸಂಸ್ಥೆ ಯಾಗಿ ಬದಲಾಗಿದೆ. ಸರ್ಕಾರದಿಂದ ಅನುದಾನ ಪಡೆದು ತನ್ನ ಸ್ವಾಯತ್ತತೆ ಬಿಟ್ಟುಕೊಡುತ್ತಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.

ಸಾಹಿತ್ಯ ಪರಿಷತ್ತು ಆರಂಭವಾದ ಮೂಲ ಉದ್ದೇಶ ಈಗ ಈಡೇರುತ್ತಿಲ್ಲ. ಈಗಿನ ಸಾಹಿತ್ಯ ಪರಿಷತ್ತಿ ಅಧ್ಯಕ್ಷ ಸಾಹಿತಿಗಳು ಅಲ್ಲ ಬರಹಗಾರರು ಅಲ್ಲ. ಪಥನಮುಖಿ ಸಾಹಿತ್ಯ  ಸಂಘಟನೆಯನ್ನ ಎಚ್ಚರಿಸಬೇಕು. ಹೀಗಾಗಿ ಪರ್ಯಾಯವಾಗಿ  ಜನಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ : “ಧೀರ ಟಿಪ್ಪುವಿನ ಲಾವಣಿಗಳು” ಜನವರಿ 8 ರಂದು ‘ಜನಸಾಹಿತ್ಯ ಸಮ್ಮೇಳನ’ದಲ್ಲಿ ಬಿಡುಗಡೆಯಾಗಲಿದೆ.

ಕರ್ನಾಟಕ ರಾಜ್ಯದಲ್ಲಿ 77 ಭಾಷೆಗಳಿವೆ. 2011ರ ಜನಗಣತಿ ಪ್ರಕಾರ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಕೇವಲ 1.30 ಲಕ್ಷದಷ್ಟು ಇದ್ದಾರೆ. ದಿನಕಳೆದಂತೆ ಭಾಷೆಗಳು ಪಥನವಾಗುತ್ತಿವೆ. ಇಂತಹ ಸಮಯದಲ್ಲಿ ಸಾಹಿತ್ಯ ಪರಿಷತ್ತು ಭಾಷೆ ಉಳಿಸಲು ಹೋರಾಡಬೇಕಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ತಮ್ಮ ಅಪ್ರಬುದ್ಧ ನಡವಳಿಕೆಯ ಮೂಲಕ ಪ್ರತಿ ಆರೋಪಗಳನ್ನು ಮಾಡುತ್ತಾ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದ್ದಾರೆ. ಮುಸ್ಲಿಮರೂ ಸೇರಿದಂತೆ ಕನ್ನಡದ ಅತ್ಯಂತ ಸಶಕ್ತ ಬರೆಹಗಾರರನ್ನು ಹೊರಗಿಟ್ಟಿರುವ ಪರಿಷತ್ತು ಕನ್ನಡ ಕರ್ನಾಟಕವು ಇವತ್ತು ಇದಿರಿಸುತ್ತಿರುವ ಬಹಳ ಗಂಭೀರವಾದ ಬಿಕ್ಕಟ್ಟುಗಳ ಬಗ್ಗೆ ಯಾವ ಮುಖ್ಯ ಗೋಷ್ಠಿಗಳನ್ನೂ ಹಮ್ಮಿಕೊಂಡಿಲ್ಲ ಎಂದು ಹೇಳಿದರು.

೧೯೯೦ರ ದಶಕದಲ್ಲಿ ಜಾರಿಗೆ ಬಂದ ಜಾಗತೀಕರಣ ಪ್ರಕ್ರಿಯೆಯು ಕನ್ನಡ, ಕೊಡವ, ಉರ್ದು, ತುಳು ಮೊದಲಾದ ಭಾಷೆಗಳೂ ಒಳಗೊಂಡಂತೆ, ಭಾರತದ ಸುಮಾರು ೧೯೫೦೦ಕ್ಕೂ ಹೆಚ್ಚು ತಾಯ್ನುಡಿಗಳನ್ನು ಅಂಚಿಗೆ ತಳ್ಳಿದೆ. ಖಾಸಗೀಕರಣವು ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ. ದಲಿತರು, ಮಹಿಳೆಯರು ಮತ್ತು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಮುಂದುವರೆದಿವೆ. ಸಾಮಾಜಿಕ ನ್ಯಾಯಕ್ಕಾಗಿ ಚಾಲ್ತಿಗೆ ತಂದಿರುವ ಮೀಸಲಾತಿಯನ್ನು ಅರ್ಥಹೀನಗೊಳಿಸಿ ಅದನ್ನು ಯಾರ‍್ಯಾರೋ ಕಿತ್ತು ತಿನ್ನುವಂತೆ ಮಾಡಲಾಗಿದೆ ಎಂದು ಪುರುಷೋತ್ತಮ ಬಿಳಿಮಲೆ ವಿವರಿಸಿದರು.

ಇದನ್ನು ಓದಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ-ಪರ್ಯಾಯ ಸಮ್ಮೇಳನಕ್ಕೆ ಚಿಂತನೆ

ಸರಿಸುಮಾರು ಇದೇ ಅವಧಿಯ ಆನಂತರ ತೀವ್ರವಾಗಿ ಬೆಳೆದ ಕೋಮುವಾದವು ದೇಶವನ್ನು ಇಬ್ಭಾಗಿಸಿ ಮೂಲಭೂತವಾದವನ್ನು ಬೆಳೆಸಿದೆ. ವಿಜ್ಯಾನದ ಜಾಗವನ್ನು ಮೂಢನಂಬಿಕೆಗಳು ಆಕ್ರಮಿಸಿಕೊಂಡಿವೆ. ಭಾರತದ ಬಹುತ್ವಕ್ಕೆ ಧಕ್ಕೆಯಾಗಿದೆ. ಸುಳ್ಳುಗಳು ಮತ್ತು ದ್ವೇಷ ಭಾಷೆಯು ಸಾರ್ವತ್ರಿಕವಾಗಿ ಬೆಳೆದು ನಾಗರಿಕತೆ ಗಾಯಗೊಂಡಿದೆ. ಸ್ವಾತಂತ್ರ್ಯಕ್ಕಾಗಿ ದುಡಿದ ಹಿರಿಯರನ್ನು ದಿನನಿತ್ಯ ಅವಮಾನಿಸಲಾಗುತ್ತಿದೆ. ಇಂಥ ಬೆಳವಣಿಗೆಗಳ ಬಗ್ಗೆ ಮುಕ್ಯವಾಗಿ ಚರ್ಚಿಸಿ ದೇಶಕ್ಕೆ ಮಾರ್ಗದರ್ಶನ ನೀಡಬೇಕಾಗಿದ್ದ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹಾಗೂ ಇತರ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗಿದೆ. ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿಯೆತ್ತಿದ್ದ ಬುದ್ಧ, ಬಸವ, ಅಂಬೇಡ್ಕರ್‌, ಕುವೆಂಪು, ಗಾಂಧಿ, ಲೋಹಿಯಾ, ಫುಲೆ, ನಾರಾಯಣಗುರು, ಪೆರಿಯಾರ್‌, ಮೊದಲಾದವರನ್ನೆಲ್ಲ ಅಪಮೌಲ್ಯಗೊಳಿಸಲಾಗುತ್ತಿದೆ ಎಂದು ಹೇಳಿದರು.

ಇಂಥ ಸಂದರ್ಭದಲ್ಲಿ ಲೇಖಕರು ಮತ್ತು ಕಲಾವಿದರು ಏನು ಮಾಡಬೇಕೆಂಬ ಪ್ರಶ್ನೆಗೆ ನಾವಿಂದು ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ. ನಿಜ ತಿಳಿದಿರುವ ಲೇಖಕರು ಗಟ್ಟಿಯಾಗಿ ಮಾತಾಡಬೇಕಾದ ಕಾಲವಿದು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಭುತ್ವದ ದರ್ಪವನ್ನು ಲೇಖಕರು ಸದಾ ಪ್ರಶ್ನಿಸುತ್ತಲೇ ಬಂದಿದ್ದಾರೆ. ಆದಿ ಕವಿ ಪಂಪನು ಸ್ವತಃ ಅರಿಕೇಸರಿಯ ಆಸ್ಥಾನದಲ್ಲಿದ್ದರೂ ʻನಿಜದಿಂ ಭೂಪರೆಂಬುವರ್‌ ಅವಿವೇಕಿಗಳ್‌ʼ ಎಂದದ್ದಲ್ಲದೆ, ಈ ಅರಸರು ʻಕಲಿಯನ್ನು ಹೇಡಿಗಳನ್ನಾಗಿಯೂ, ಹೇಡಿಗಳನ್ನು ಕಲಿಗಳನ್ನಾಗಿಯೂ ಮಾಡುತ್ತಾರೆʼ ಎಂದು ಧೈರ್ಯದಿಂದ ಅರಸನೆದುರೇ ಘೋಷಿಸುತ್ತಾನೆ. ವಚನಕಾರರು ಪ್ರಭುತ್ವವನ್ನೇ ಧಿಕ್ಕರಿಸಿ ಅನುಭವ ಮಂಟಪ ಕಟ್ಟಿಕೊಳ್ಳುತ್ತಾರೆ. ಕುಮಾರವ್ಯಾಸನಂತೂ ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಉರಿ ಉರಿವುತಿದೆ ದೇಶ, ನಾವಿನ್ನಿರಲು ಬಾರದುʼ ಎಂದು ಬರೆಯುತ್ತಾನೆ. ಕೃಷ್ಣದೇವರಾಯನ ಮೂಗಿನ ಕೆಳಗೇ ಓಡಾಡುತ್ತಿದ್ದ ಪುರಂದರದಾಸನು ʻಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ, ಆನೆ ಕುದರೆ ಒಂಟೆ ಲೊಳಲೊಟ್ಟೆ, ಬಹು ಸೇನೆ ಭಂಡಾರವು ಲೊಳಲೊಟ್ಟೆ, ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆʼ ಎಂದು ಹಾಡುತ್ತಾ, ಒಂಟಿ ಲಂಗೋಟಿಯಲ್ಲಿ ಹಂಪಿಯ ಬೀದಿಗಳಲ್ಲಿ ಸುತ್ತುತ್ತಿದ್ದ ಎಂದು ಪುರುಷೋತ್ತಮ ಬಿಳಿಮಲೆ ಅವರು ಸಾಹಿತ್ಯದ ಶಕ್ತಿಯ ಹಿನ್ನೆಲೆಯನ್ನು ವಿವರಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಉತ್ತರ ಕರ್ನಾಟಕದ ತತ್ವಪದಗಳು ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಎದೆ ತುಂಬಿ ಹಾಡಿದರು. ೨೦ನೇ ಶತಮಾನದ ಉದ್ದಕ್ಕೂ ಬಹುತೇಕ ಸಾಹಿತಿಗಳು ಸಮಕಾಲೀನ ಘಟನೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದರು. ಅವರ ಪ್ರತಿಕ್ರಿಯೆಗಳಲ್ಲಿ ಎರಡು ರೀತಿಯಿತ್ತು. ಮೊದಲನೆಯದು, ಕುವೆಂಪು ಮಾಡಿದ ಹಾಗೆ, ಸಾರ್ವಜನಿಕವಾಗಿ ಹೆಚ್ಚು ಮಾತಾಡದೆ, ಗಂಭೀರವಾದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಪ್ರಭುತ್ವವನ್ನು ಆಳವಾಗಿ ಪ್ರಶ್ನಿಸುವುದು. ಎರಡನೆಯದು, ಶಿವರಾಮ ಕಾರಂತರ ರೀತಿ. ಗಂಭೀರವಾಗಿ ಬರೆಯುವುದರ ಜೊತೆಗೆ ಗಟ್ಟಿಯಾಗಿ ಜನರೊಡನೆ ಮಾತನಾಡುವುದು. ಈ ಎರಡೂ ಮಾದರಿಗಳನ್ನು ನಾವಿವತ್ತು ಮುಂದುವರೆಸಬೇಕಾಗಿದೆ ಎಂದು ತಿಳಿಸಿದರು.

ನಾವು ಹೊಸ ಭಾಷೆ, ತಂತ್ರ ಮತ್ತು ವಿಧಾನಗಳನ್ನು ರೂಪಿಸಿಕೊಳ್ಳಬೇಕಾಗಿದೆ. ನಾಗರಿಕ ಸಮಾಜದ ಯೋಚನಾ ಶಕ್ತಿಯೇ ಕೊಲೆಯಾಗುತ್ತಿರುವಾಗ ನಾವು ಸುಮ್ಮನಿರುವುದು ತರವಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ನಾಳೆ (ಜನವರಿ ೮) ಬೆಂಗಳೂರಿನ ಅಲುಮ್ನಿ ಸಭಾಂಗಣದಲ್ಲಿ ಒಂದು ದಿನದ ʻಜನಸಾಹಿತ್ಯ ಸಮ್ಮೇಳನʼವನ್ನು ಆಯೋಜಿಸಲಾಗಿದೆ. ಇದರಲ್ಲಿ ಕನ್ನಡದ ಬಹಳ ಮುಖ್ಯ ಹಿರಿಯ ಕಿರಿಯ ಲೇಖಕರು, ಕಲಾವಿದರು ಭಾಗವಹಿಸಲಿದ್ದಾರೆ ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುನೀರ್ ಕಾಟಿಪಳ್ಳ, ಭೈರಪ್ಪ ಹರೀಶ್ ಕುಮಾರ್, ವಿಜಿಯಕುಮಾರಿ, ನಜ್ಮಾ ನಜೀರ್ ಇದ್ದರು.

Donate Janashakthi Media

One thought on “ಕೇವಲ ಕನ್ನಡ ಸಾಹಿತ್ಯ ಸಮ್ಮೇಳನದ ವಿರುದ್ಧ ಅಲ್ಲ-ಅನುದಾನ ಪಡೆಯುವ ಸಂಘಸಂಸ್ಥೆಗಳನ್ನು ಎಚ್ಚರಿಸಲು ಜನಸಾಹಿತ್ಯ ಸಮ್ಮೇಳನ

  1. ಕನ್ನಡ ಬೇಡ. ಒಗ್ಗಟ್ಟು ಬೇಡ. ಕೆಲವರನ್ನು ಬಿಟ್ಟದಕ್ಕೆ ನೀವು ಜಾತಿ ಧರ್ಮ ಓಲೈಕೆ ಇಂಥವುಗಳ ಪರ ಉಗ್ರ ಹೋರಾಟ ಎಂದರೂ, ಶಾಲೆ ಮನೆ ಮಹಲು ಮುಂಗಟ್ಟುಗಳಲ್ಲಿ ಬಳಕೆ ತಪ್ಪುತ್ತಿರುವ ಕನ್ನಡ ಉಳಿಸೋಕ್ಕೆ ಶ್ರಮವಹಿಸಿ ದುಡಿಯೋ ಕೆಲಸ ಇಷ್ಟವಿಲ್ಲ. ಏಕೆಂದರೆ ಸಭೆ ವೇದಿಕೆ ಹಾಕೋದು ಭಾಷಣ ಹೊಡೆಯುವುದು ಸುಲಭ. ಕಷ್ಟ ಪಡುವುದು ತಿಳಿದಿಲ್ಲ

Leave a Reply

Your email address will not be published. Required fields are marked *