ಅದಾನಿ ಗುಂಪಿಗೆ ವಿದ್ಯುತ್ ವಿತರಣೆಯ ಸಮಾನಾಂತರ ಪರವಾನಿಗಿ ಇಲ್ಲ,
ಖಾಸಗೀಕರಣಕ್ಕೆ ಬೆಂಬಲ ಇಲ್ಲ-ಮಹಾರಾಷ್ಟ್ರ ಸರಕಾರದ ಆಶ್ವಾಸನೆ
ಮಹಾರಾಷ್ಟ್ರದ ಮೂರು ಸಾರ್ವಜನಿಕ ವಲಯದ ವಿದ್ಯುತ್ ಕಂಪನಿಗಳ 86000 ನೌಕರರು, ಇಂಜಿನಿಯರುಗಳು ಮತ್ತು ಇತರ ಕಾರ್ಮಿಕರು ತಮ್ಮ ಮೂರು ದಿನಗಳ ಐಕ್ಯ ಮುಷ್ಕರದ ಮೊದಲ ದಿನವೇ ಮಹತ್ವದ ವಿಜಯ ಗಳಿಸಿದ್ದಾರೆ. ನವೀ ಮುಂಬೈ ಪ್ರದೇಶದಲ್ಲಿ ಅದಾನಿಯ ವಿದ್ಯುತ್ ವಿತರಣಾ ಕಂಪನಿಗೆ ಸಮಾನಾಂತರ ಪ್ರವೇಶಕ್ಕೆ ಪರವಾನಿಗಿ ಕೊಡುವುದಿಲ್ಲೆಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ಇಂಧನ ಮಂತ್ರಿ ದೇವೇಂದ್ರ ಫಡ್ನವೀಸ್ ಸಾರ್ವಜನಿಕವಾಗಿ ಆಶ್ವಾಸನೆ ನೀಡಿದ್ದಾರೆ.
ಈ ನೌಕರರು ಕಳೆದ ಎರಡು ತಿಂಗಳಿಂದ ಈ ಬೇಡಿಕೆಯ ಮೇಲೆ ರಾಜ್ಯಾದ್ಯಂತ ನಡೆಸಿದ ಪ್ರಚಾರಾಂದೋಲನಕ್ಕೆ ಕಿವಿಗೊಡದ ಮಹಾರಾಷ್ಟ್ರ ಸರಕಾರ, ಕರಾಳ ಎಂ.ಇ.ಎಸ್.ಎ.(ಅಗತ್ಯ ಸೇವಾ ಕಾಯ್ದೆ) ಪ್ರಯೋಗಿಸಿದರೂ ಲೆಕ್ಕಿಸದೆ ಮೊದಲ ದಿನ ಮುಷ್ಕರ ಸಂಪೂರ್ಣ ಯಶಸ್ವಿಯಾದಾಗ, ಮತ್ತು ಎಲ್ಲೆಡೆಗಳಿಂದ ಬಂದ ಒತ್ತಡಗಳಿಂದಾಗಿ ಕೊನೆಗೂ ವಿದ್ಯುತ್ ಖಾಸಗೀಕರಣದ ತನ್ನ ಈ ಪ್ರಯತ್ನದಲ್ಲಿ ಹಿಮ್ಮೆಟ್ಟಬೇಕಾಗಿ ಬಂದಿದೆ. ವಿದ್ಯುತ್ ಖಾಸಗೀಕರಣದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಇದೊಂದು ಅದ್ಭುತ ವಿಜಯ ಎಂದು ವಿದ್ಯುತ್ ನೌಕರರು ಮತ್ತು ಇಂಜಿನಿಯರುಗಳ ರಾಷ್ಟ್ರೀಯ ಸಮನ್ವಯ ಸಮಿತಿ(ಎನ್ಸಿಸಿಒಇಇಇ) ಮತ್ತು ಕೇಂದ್ರೀಯ ಕಾರ್ಮಿಕ ಸಂಘಟನೆ ಸಿಐಟಿಯು ಮಹಾರಾಷ್ಟ್ರದ ವಿದ್ಯುತ್ ನೌಕರರನ್ನು ಅಭಿನಂದಿಸಿವೆ.
ಇದನ್ನು ಓದಿ: ಸಾರ್ವಜನಿಕ ವಲಯದ ವಿದ್ಯುತ್ ಕಂಪನಿಗಳ ಮೂರು ದಿನಗಳ ಮುಷ್ಕರ
ನವೀ ಮುಂಬೈ ವಿದ್ಯುತ್ ಕ್ಷೇತ್ರ ಇಡಿ ಮಹಾರಾಷ್ಟ್ರದಲ್ಲೇ ಅತ್ಯಂತ ಆಕರ್ಷಕ ಆದಾಯ ತರುವ ಕ್ಷೇತ್ರ. ಕಳೆದ ನವಂಬರ್ನಲ್ಲಿ ಮಹಾರಾಷ್ಟ್ರ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಎಂಇಆರ್ಸಿ) ವಿತರಣೆ ಪರವಾನಿಗಿಯ ನಿಯಮಗಳನ್ನು ಮಾರ್ಪಡಿಸಿದ ಮರುದಿನವೇ ಅದಾನಿ ಟ್ರಾನ್ಸ್ಮಷನ್ ಲಿಮಿಟೆಡ್(ಎಟಿಎಲ್)ನ 100% ಉಪಕಂಪನಿಯಾಗಿ ರಚಿಸಿದ ಅದಾನಿ ಇಲೆಕ್ಟ್ರಿಸಿಟಿ ನವಿ ಮುಂಬೈ ಲಿಮಿಟೆಡ್(ಎಇಎನ್ಎಂಎಲ್) ಈ ಕ್ಷೇತ್ರದಲ್ಲಿ ವಿದ್ಯುತ್ ವಿತರಣೆಯ ಸಮಾನಾಂತರ ಪರವಾನಿಗಿ ಕೊಡಬೇಕೆಂದು ಅರ್ಜಿ ಸಲಿಸಿತು. 2003ರ ವಿದ್ಯತ್ ಕಾಯ್ದೆಯ ಮಾರ್ಪಡಿಸಿದ ನಿಯಮಗಳನ್ನು ಬಳಸಿಕೊಂಡು ಅದಾನಿ ಕಂಪನಿ ಅತ್ಯಂತ ಹೆಚ್ಚು ಆದಾಯ ತರುವ ಕ್ಷೇತ್ರಗಳನ್ನಷ್ಟೇ ಆಯ್ದುಕೊಂಡು ಸರಕಾರೀ ಒಡೆತನದ ವಿದ್ಯುತ್ ವಿತರಣಾ ಕಂಪನಿಯ ಆದಾಯಕ್ಕೆ ಏಟು ಕೊಡುತ್ತದೆ ಎಂಬ ಭೀತಿ ನೌಕರರು ಮತ್ತು ಇಂಜಿನಿಯರುಗಳನ್ನು ತಟ್ಟಿದರೆ, ಬಳಕೆದಾರರು ತಾವು ತೆರಬೇಕಾದ ಬಿಲ್ ಮೊತ್ತ ಏರುವ ಭೀತಿಗೆ ಒಳಗಾದರು. ಏಕೆಂದರೆ ಅದಾನಿ ಗುಂಪಿನ ಇನ್ನೊಂದು ಕಂಪನಿ ಅದಾನಿ ಇಲೆಕ್ಟ್ರಿಸಿಟಿ ಮುಂಬೈ(ಎಇಎಂಎಲ್) ಯ ಸರಾಸರಿ ದರಗಳು ಸರಕಾರೀ ಒಡೆತನದ ಕಂಪನಿಯದಕ್ಕಿಂತ ಎಷ್ಟೋ ಹೆಚ್ಚಿದೆ.
ಆದ್ದರಿಂದ ಇದಕ್ಕೆ ಬಲವಾದ ಪ್ರತಿರೋಧ ರಾಜ್ಯಾದ್ಯಂತ ವ್ಯಕ್ತಗೊಂಡಿತು. ವಿದ್ಯುತ್ ವಿತರಣೆಗೆ ಅನುಮತಿ ಕೋರಿರುವ ಅದಾನಿ ಕಂಪನಿಯ ಅರ್ಜಿ ತಪ್ಪುದಾರಿಗೆಳೆಯುವ, ಅಪೂರ್ಣವಾದ, ಹಲವು ರೀತಿಗಳಲ್ಲಿ ತಪ್ಪಾದ, ದುರಾಶಯಗಳಿಂದ ಕೂಡಿದ ಮಾಹಿತಿಗಳನ್ನು ಒಳಗೊಂಡಿವೆ. ಈ ಗುಂಪು ತೀವ್ರ ಹಣಕಾಸು-ಸಾಲ ಬಿಕ್ಕಟ್ಟಿಗೆ ಒಳಗಾಗಿದೆ, ಅಲ್ಲದೆ ಈ ಕಂಪನಿಗೆ ವಿದ್ಯುತ್ ವಿತರಣೆಯಲ್ಲಿ ಯಾವುದೇ ಅನುಭವವಿಲ್ಲ. ಆದ್ದರಿಂದ, ವಿದ್ಯುತ್ ಕಾಯ್ದೆ 2013ರ ಅಡಿಯಲ್ಲಿ ಪರವಾನಿಗೆ ನೀಡಿಕೆಗೆ ಅರ್ಹವಾಗಿಲ್ಲ ಎಂದು ರಾಜ್ಯದ ವಿದ್ಯುತ್ ವಲಯದ ಕಾರ್ಮಿಕರು ಮತ್ತು ಇಂಜಿನಿಯರುಗಳು ಕಳೆದ ಎರಡು ತಿಂಗಳಿಂದ ಇದರ ವಿರುದ್ಧ ಮತಪ್ರದರ್ಶನ, ರ್ಯಾಲಿಗಳನ್ನು ನಡೆಸಿದ್ದಾರೆ. ಇತ್ತೀಚೆಗೆ ನಾಗಪುರದಲ್ಲಿ ರಾಜ್ಯ ವಿಧಾನ ಮಂಡಲದ ಅಧಿವೇಶನದ ವೇಳೆಯಲ್ಲಿ 35000 ಕ್ಕಿಂತ ಹೆಚ್ಚು ನೌಕರರು ವಿಧಾನಸಭಾ ಚಲೋದಲ್ಲಿ ಭಾಗವಹಿಸಿದ್ದರು. ಜನವರಿ 2ರಂದು 10000 ನೌಕರರು ಥಾಣೆಯಲ್ಲಿ ಮತಪ್ರದರ್ಶನ ನಡೆಸಿದರು. ಬಳಕೆದಾರರ/ನಾಗರಿಕರ ಸಂಘಟನೆಗಳೂ ಬೆಂಬಲಿಸಿದವು. ಆದರೆ ಇವೆಲ್ಲವನ್ನೂ ಸರಕಾರ ಕಡೆಗಣಿಸಿದ್ದರಿಂದ ನಿರ್ವಾಹವಿಲ್ಲದೆ ಈ ವಲಯದ 31 ನೌಕರರ/ಇಂಜಿನಿಯರುಗಳ ಸಂಘಗಳು ಒಟ್ಟುಕೂಡಿ ರಚಿಸಿಕೊಂಡ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಜನವರಿ 3-4ರ ಮಧ್ಯರಾತ್ರಿಯಿಂದ ಮುಷ್ಕರ ಆರಂಭಿಸಿದರು. ಸರಕಾರ ಕರಾಳ ಮಹಾರಾಷ್ಟ್ರ ಅಗತ್ಯ ಸೇವಾ ಕಾಯ್ದೆ(ಎಂ.ಇ.ಎಸ್.ಎ.)ಯನ್ನು ಪ್ರಯೋಗಿಸುವದಾಗಿ ಬೆದರಿಸಿತು. ಆದರೆ ಜಗ್ಗದೆ ಆರಂಭವಾದ ಮುಷ್ಕರ ಬೀರಿದ ಪರಿಣಾಮವನ್ನು ಕಂಡು ಉಪಮುಖ್ಯಮಂತ್ರಿಗಳು ಸಂಘರ್ಷ ಸಮಿತಿಯೊಂದಿಗೆ ಮಾತುಕತೆಗೆ ಬಂದರು, ಸರಕಾರ ವಿದ್ಯುತ್ ಖಾಸಗೀಕರಣವನ್ನು ಅಥವ ಸಮಾನಾಂತರ ಪರವಾನಿಗಿಯನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದರು.
ಇದನ್ನು ಓದಿ: ಸರ್ಕಾರ ಉಚಿತ ವಿದ್ಯುತ್ ಬದಲು ಮೀಟರ್ ಅಳವಡಿಸಿ ರೈತರನ್ನು ಸುಲಿಗೆ ಮಾಡುತ್ತಿದೆ: ಮೊಹಮದ್ ಸಮೀಉಲ್ಲಾ
ಮಹಾರಾಷ್ಟ್ರದ ವಿದ್ಯುತ್ ನೌಕರರು ಮತ್ತು ಇಂಜಿನಿಯರುಗಳು ಮಾದರಿ ಐಕ್ಯ ಮತ್ತು ಧೀರ ಹೋರಾಟದಿಂದ ಈ ವಿಜಯವನ್ನು ಸಾಧಿಸಿದ್ದಾರೆ ಎಂದು ಎನ್ಸಿಸಿಒಇಇಇ ಅವರನ್ನು ಅಭಿನಂದಿಸಿದೆ. ಇದಕ್ಕೆ ಮೊದಲು ಉತ್ತರಪ್ರದೇಶ, ಜಮ್ಮು-ಕಾಶ್ಮೀರ, ಚಂಡೀಗಡ ಮತ್ತು ಪುದುಚೇರಿಯ ವಿದ್ಯುತ್ ನೌಕರರೂ ಖಾಸಗೀಕರಣದ ವಿರುದ್ಧ ನಡೆಸಿದ ಯಶಸ್ವಿ ಹೋರಾಟಗಳನ್ನು ನೆನಪಿಸಿದ ಅದು ಖಾಸಗೀಕರಣದ ವಿರುದ್ಧ ಬಲಿಷ್ಟ ಐಕ್ಯ ಹೋರಾಟಗಳು ಎಷ್ಟು ಮಹತ್ವದ್ದಾಗುತ್ತವೆ ಎಂಬುದು ಕಾಣ ಬರುತ್ತದೆ ಎಂದಿದೆ.
ಕೇಂದ್ರ ಸರಕಾರ ವಿದ್ಯುತ್(ತಿದ್ದುಪಡಿ) ಮಸೂದೆ, 2022 ನ್ನು ಕೈಬಿಡಬೇಕು ಎಂದು ಎಸ್ಸಿಸಿಒಇಇಇ ಮತ್ತೊಮ್ಮೆ ಆಗ್ರಹಿಸಿದೆ.
ಮಹಾರಾಷ್ಟ್ರದ ವಿದ್ಯುತ್ ವಲಯದ ದುಡಿಮೆಗಾರರ ಪ್ರತಿಭಟನೆ ಮತ್ತು ಪ್ರತಿರೋಧ ಅದ್ಭುತ ವಿಜಯ ಗಳಿಸಿದೆ ಎಂದು ಅಭಿನಂದಿಸಿರುವ ಸಿಐಟಿಯು ಕೂಡ ಮಹಾರಾಷ್ಟ್ರದ ಈ ಚಳವಳಿಯ ಅದ್ಭುತ ಅನುಭವವನ್ನು ನಮ್ಮದಾಗಿಸಿಕೊಂಡು ಈ ಕರಾಳ ಮಸೂದೆಯ ವಿರುದ್ಧ ಬೃಹತ್ ಹೋರಾಟವನ್ನು ಕಟ್ಟಬೇಕು ಎಂದು ರಾಷ್ಟ್ರದ ಜನರಿಗೆ ಮತ್ತು ನಿರ್ದಿಷ್ಟವಾಗಿ ಎಲ್ಲಾ ಕಾರ್ಮಿಕ ಸಂಘಗಳಿಗೆ ಕರೆ ನೀಡಿದೆ.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯವರು ಖಾಸಗೀಕರಣವನ್ನು ಬೆಂಬಲಿಸುವುದಿಲ್ಲ ಎಂದು ಘೋಷಿಸಿದ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಗ್ರಾಹಕರಿಗೆ ಪ್ರತ್ಯೇಕ ವಿದ್ಯುತ್ ವಿತರಣಾ ಕಂಪನಿಯನ್ನು ರಚಿಸುವುದಾಗಿಯೂ ಹೇಳಿದ್ದಾರೆ. ಇದು ಆಂತರಿಕ ಸಬ್ಸಿಡಿ ಕಾರ್ಯವಿಧಾನದ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಮತ್ತು ಕೃಷಿ ವಿದ್ಯುತ್ ಸಬ್ಸಿಡಿಯನ್ನು ತೆಗೆದುಹಾಕಲು ಸರ್ಕಾರಕ್ಕೆ ದಾರಿ ಮಾಡಿಕೊಡಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿದ ಸಿಐಟಿಯು, ರೈತರನ್ನು ಹಿಂಡುವ ಕುಟಿಲ ಹಿಂಬಾಗಿಲ ಯೋಜನೆ ಇದಾಗಿದ್ದು, ಅದನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಇದೊಂದು ಬೃಹತ್ ವಿಜಯ, ಆದರೂ ಹೋರಾಟನಿರತ ಕಾರ್ಮಿಕರು ಸರ್ಕಾರದ ಮುಂದಿನ ನಡೆಯ ಮೇಲೆ ಬಲವಾದ ನಿಗಾ ಇಡಬೇಕು ಎಂದು ಅದು ಹೇಳಿದೆ.