ಶಿಕ್ಷಣ ವ್ಯವಸ್ಥೆಯಲ್ಲಿ ಅರಾಜಕತೆ, ಗೊಂದಲ ಸೃಷ್ಟಿಸುತ್ತಿರುವ ಯುಜಿಸಿ ಮತ್ತು ರಾಜ್ಯ ಸರಕಾರ

ಬಿ. ಶ್ರೀಪಾದ್‌ ಭಟ್‌

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ-2020) ಶಿಫಾರಸ್ಸಿನ ಅನ್ವಯ ಯುಜಿಸಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಹುಶಿಸ್ತೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಪ್ರೊ. ಆರ್.ಪಿ.ತಿವಾರಿ ನೇತೃತ್ವದ ಸಮಿತಿಯ ಕರಡು ಪ್ರತಿಯು ಸಹ ಸಾರ್ವಜನಿಕರ ಅದ್ಯಯನಕ್ಕೆ ಲಭ್ಯವಿದೆ. ಇದು ಸ್ವಾಗತಾರ್ಹ. ಮೂವತ್ತು ವರ್ಷಗಳ ನಂತರ, ಜಾಗತೀಕರಣದ ಬಲೆಯಲ್ಲಿರುವ ಭಾರತಕ್ಕೆ ಹೊಸ ಶಿಕ್ಷಣ ನೀತಿಯ ಅಗತ್ಯವಿದೆ. ಹೊಸ ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ಶಿಕ್ಷಣ ನೀತಿಯನ್ನು ರೂಪಿಸುವ ಅನಿವಾರ್ಯತೆಯಿದೆ. ಇದರಲ್ಲಿ ಯಾವುದೇ ತಕರಾರಿಲ್ಲ.

ಆದರೆ ಎನ್‌ಇಪಿ ಶಿಫಾರಸ್ಸುಗಳು ಮಾತ್ರ ಆಧುನಿಕ, ವೈಚಾರಿಕ, ವೈಜ್ಞಾನಿಕ ಶಿಕ್ಷಣ, ಸಂವಿದಾನದ ಅಶಯಗಳಿಗೆ ಅನುಗುಣವಾದ ಮತ್ತು ಮುಖ್ಯವಾಗಿ ವಂಚಿತ ಸಮುದಾಯಗಳ ಶಿಕ್ಷಣದ ಹಿತಾಸಕ್ತಿಗೆ ವಿರುದ್ಧವಾಗಿವೆ. ಈ ಕುರಿತು ಸಾಕಷ್ಟು ಚರ್ಚೆಯಾಗಿದೆ. ಇದು ನಮ್ಮೆಲ್ಲರ ಆತಂಕಕ್ಕೆ ಕಾರಣವಾಗಿರುವುದು. ಮತ್ತೊಂದು, ಯಾವುದೇ ಪೂರ್ವ ಸಿದ್ಧತೆಗಳಿಲ್ಲದೆ, ಈಗಿರುವ ಕಳಪೆ ಗುಣಮಟ್ಟದ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸದೆ ಏಕಪಕ್ಷೀಯವಾಗಿ ಉನ್ನತ ಶಿಕ್ಷಣದಲ್ಲಿ ಪಶ್ಚಿಮದ ‘ಲಿಬರಲ್ ಆರ್ಟ್ಸ್‌’ ಮಾದರಿಯನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರಕಾರ ಆ ಮೂಲಕ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ಅರಾಜಕತೆಗೆ, ಅವ್ಯವಸ್ಥೆಗೆ ಕಾರಣವಾಗಿದೆ. ಬಡ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ತ್ರಿಶಂಕು ಸ್ಥಿತಿಯಲ್ಲಿದೆ. ಈ ಹಿನ್ನಲೆಯಲ್ಲಿ ಈ ಉನ್ನತ ಶಿಕ್ಷಣವನ್ನು ಬಹುಶಿಸ್ತೀಯ ಶಿಕ್ಷಣವನ್ನಾಗಿ ಪರಿವರ್ತಿಸುವಂತಹ ಯುಜಿಸಿಯ ನಿರ್ಧಾರವನ್ನು ಮತ್ತು ತಿವಾರಿ ಸಮಿತಿಯ ಮಾರ್ಗಸೂಚಿಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗಿದೆ.

ಇದನ್ನು ಓದಿ: ದೇಶದ ಪ್ರಗತಿ ಬಯಸುವವರು ಎನ್‌ಇಪಿ ವಿರೋಧಿಸುತ್ತಾರೆ : ಫ್ರೊ. ಮುರಿಗೆಪ್ಪ

ಈ ಸಮಿತಿಯ ಮಾರ್ಗಸೂಚಿಯ ಪೀಠಿಕೆಯಲ್ಲಿ “ಋಗ್ವೇದದ ಮಾದರಿಗಳನ್ನು ಉದಾಹರಿಸುತ್ತಾ ‘ವೇದ ಕಾಲದ’ ಕಲಿಕೆಯ ಮಹತ್ವವನ್ನು ಪ್ರಸ್ತಾಪಿಸಲಾಗಿದೆ. ಶತಮಾನಗಳಿಂದಲೂ ಭಾರತದಲ್ಲಿ ಈ ಬಹುಶಿಸ್ತೀಯ ಶಿಕ್ಷಣವಿತ್ತು, ಪ್ರಾಚೀನ ವಿಶ್ವವಿದ್ಯಾಲಯಗಳಾದ ತಕ್ಷಶಿಲಾ, ನಳಂದ ಮುಂತಾದವುಗಳಲ್ಲಿ ಬಹುಶಿಸ್ತೀಯ ಕಲಿಕೆಯಿತ್ತು. ಹಾಡುಗಾರಿಕೆ, ಚಿತ್ರಗಾರಿಕೆ, ಗಣಿತ ಇತ್ಯಾದಿ ಜ್ಞಾನದ ಎಲ್ಲಾ ಶಾಖೆಗಳನ್ನು ಬೋಧಿಸಲಾಗುತ್ತಿತ್ತು. ವೃತ್ತಿಪರ ಕೋರ್ಸ್‌ ಗಳಾದ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಕಸುಬು ಆಧಾರಿತ ಬಡಗಿ, ಕುಂಬಾರಿಕೆ, ನೇಕಾರಿಕೆ ಇತ್ಯಾದಿ ಹಾಗೂ ಸಾಫ್ಟ್ ಕೌಶಲ್ಯಗಳಾದ ಸಂಪರ್ಕ, ಚರ್ಚೆಗಳು ಪ್ರಾಚೀನ ಭಾರತದಲ್ಲಿ ಬೋಧಿಸಲಾಗುತ್ತಿತ್ತು” ಎಂದು ಬರೆಯುತ್ತಾರೆ. ಎನ್‌ಇಪಿಯಂತೆಯೆ ಈ ಮಾರ್ಗಸೂಚಿಯ ಈ ಚಿಂತನೆಗಳು ಸಮಸ್ಯಾತ್ಮಕವಾಗಿದೆ. ಈ ಸಮಿತಿಯಲ್ಲಿ ವಿವಿ ಉಪಕುಲಪತಿಗಳಿದ್ದಾರೆ, ಅನುಭವಿ ಪ್ರಾಧ್ಯಾಪಕರಿದ್ದಾರೆ. ಆದರೆ 2030-35 ಹೊತ್ತಿಗೆ ಆಧುನಿಕ, ಉದ್ಯೋಗ ಕೇಂದ್ರಿತ ಶಿಕ್ಷಣ ಕೊಡುತ್ತೇವೆ ಎಂದು ಭರವಸೆ ಕೊಡುವ ಈ ಪರಿಣಿತರು ಮತ್ತೆ ಮತ್ತೆ ಪ್ರಾಚೀನ ಕಾಲದ, ಗುರುಕುಲ ಪದ್ಧತಿಯ, ಚಾತುರ್ವರ್ಣದ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಪೋಷಿಸಿಸುವಂತಹ ಶಿಕ್ಷಣ ಪದ್ಧತಿಯನ್ನು ಪುನಃ ಜಾರಿಗೊಳಿಸುವುದಾಗಿ ಹೇಳುತ್ತಾರೆ. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ನ ಸಿದ್ಧಾಂತ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರಣದಿಂದಾಗಿ ಪರಿಣಿತರ ಈ ಸಮಿತಿಯ ಮಾರ್ಗಸೂಚಿಗಳ ವಿಶ್ವಸಾರ್ಹತೆಯನ್ನು ಪ್ರಶ್ನಿಸಬೇಕಾಗುತ್ತದೆ.

ಈ ಮಾರ್ಗಸೂಚಿಯಲ್ಲಿ ʻಉನ್ನತ ಶಿಕ್ಷಣ ಸಂಸ್ಥೆಗಳ ಕ್ಲಸ್ಟರ್ ಮೂಲಕ ಸಂಸ್ಥೆಗಳ ನಡುವೆ ಶೈಕ್ಷಣಿಕ ಒಡಂಬಡಿಕೆʼ ಕುರಿತು ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ. ಇದು ಬಹುಶಿಸ್ತೀಯ ಶಿಕ್ಷಣಕ್ಕೆ, ವಿವಿಧ ವಿಚಾರಗಳ ಸಂಶೋಧನೆಗೆ ಸಹಕಾರಿಯಾಗುತ್ತದೆ. ಒಂದೇ ಆಡಳಿತ ಮಂಡಳಿ ಅಥವಾ ವಿಭಿನ್ನ ಆಡಳಿತ ಮಂಡಳಿಯಲ್ಲಿ ಒಂದೇ ಕೋರ್ಸ್‌ ಅನ್ನು ಬೋಧಿಸುವ ಸಂಸ್ಥೆಗಳನ್ನು ಬಹುಶಿಸ್ತೀಯ ಕೋರ್ಸ್‌ ಗಳನ್ನು ಬೋಧಿಸುತ್ತಿರುವ ಸಂಸ್ಥೆಗಳೊಂದಿಗೆ ವಿಲೀನಗೊಳಿಸಬೇಕು. ವಿವಿಧ ವಿಷಯಗಳಾದ ಸಾಹಿತ್ಯ, ಭಾಷೆ, ಸಂಗೀತ, ತತ್ವಶಾಸ್ತ, ಇಂಡಾಲಜಿ, ಕಲೆ, ನಾಟ್ಯ, ರಂಗಭೂಮಿ ಶಿಕ್ಷಣ, ಗಣಿತ, ಸಂಖ್ಯಾಶಾಸ್ತ್ರ, ಶುದ್ಧ ಅನ್ವಯಿಕ ವಿಜ್ಞಾನ, ಸಮಾಜಶಾಸ್ತ, ಅರ್ಥಶಾಸ್ತ್ರ, ಕ್ರೀಡೆ, ಅನುವಾದ ಇತ್ಯಾದಿ ಕೋರ್ಸ್‌ ಗಳನ್ನು ಒಳಗೊಂಡಂತಹ ಬಹುಶಿಸ್ತೀಯ ಸಂಸ್ಥೆಗಳನ್ನು ರೂಪಿಸುವುದು ಇದರ ಗುರಿಯಾಗಿದೆ. ಇದು ವಿದ್ಯಾರ್ಥಿಗಳ ಉದ್ಯೋಗದ ಭವಿಷ್ಯಕ್ಕೂ ಸಹಕಾರಿಯಾಗಲಿದೆ ಎಂದು ಆಭಿಪ್ರಾಯಪಟ್ಟಿದೆ. ಈ ಉದೇಶದ ಕುರಿತು ಯಾರಿಗೂ ತಕರಾರು ಇರಲು ಸಾಧ್ಯವಿಲ್ಲ. ಆದರೆ ಇದನ್ನು ಜಾರಿಗೊಳಿಸುವ ವಿಧಾನ ಮತ್ತು ಕಾರ್ಯಸೂಚಿಗಳ ಕುರಿತು ಶಿಕ್ಷಣ ತಜ್ಞರಲ್ಲಿ ಅನುಮಾನಗಳಿವೆ.

ಇದನ್ನು ಓದಿ: ಎನ್‌ಇಪಿ ಜಾರಿ: ಮುಂದಿನ ನಡೆ ಕುರಿತು ಕಾರ್ಯಾಗಾರ

ಈ ಮಾರ್ಗಸೂಚಿಯಲ್ಲಿ ಈಗಿನ ಸಾಂಪ್ರದಾಯಿಕ ಉನ್ನತ ಶಿಕ್ಷಣವನ್ನು ಬಹುಶಿಸ್ತೀಯ ಸಂಸ್ಥೆಗಳನ್ನಾಗಿ ಪರಿವತಿಸಲು ವಿವಿಧ ಶಿಕ್ಷಣ ಸಂಸ್ಥೆಗಳ ನಡುವಿನ ಒಡಂಬಡಿಕೆಗೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳನ್ನು ಬಹುಶಿಸ್ತೀಯ ಶಿಕ್ಷಣದ ಸೌಲಭ್ಯವಿರುವ ಸಂಸ್ಥೆಗಳೊಂದಿಗೆ ವಿಲೀನಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಲಾಗಿದೆ. ಇದು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ.

ಕೊಲಿಜಿಯೆಟ್ ಶಿಕ್ಷಣ ಇಲಾಖೆಯ ಅಂತರ್ಜಾಲದ ಮಾಹಿತಿಯ ಅನುಸಾರ ಕರ್ನಾಟಕದಲ್ಲಿ 440 ಪದವಿ ಕಾಲೇಜುಗಳಿವೆ. 33 ರಾಜ್ಯ ವಿಶ್ವವಿದ್ಯಾಲಯಗಳಿವೆ. ಒಂದು ಕೇಂದ್ರೀಯ ವಿಶ್ವವಿದ್ಯಾಲಯವಿದೆ. 17 Affiliating universities ಗಳಿವೆ. 7400 ಪ್ರಾಧ್ಯಾಪಕರಿದ್ದಾರೆ. 3.94 ಲಕ್ಷ ವಿದ್ಯಾರ್ಥಿಗಳಿದ್ದಾರೆ. 1,43,227 ಕಲಾ, 1,08,546 ವಾಣಿಜ್ಯ, 27,053 ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 10,615 ಸ್ನಾತಕೋತ್ತರ ವಿದ್ಯಾರ್ಥಿಗಳಿದ್ದಾರೆ. 192 ಇಂಜಿನಿಯರಿಂಗ್ ಸಂಸ್ಥೆಗಳು, 248 ಪಾಲಿಟೆಕ್ನಿಕ್, 42 ವೈದ್ಯಕೀಯ, 38 ದಂತ ವೈದ್ಯಕೀಯ ಸಂಸ್ಥೆಗಳಿವೆ.

ಈ ನೀತಿಯನ್ನು ಸ್ವಾಗತಿಸುತ್ತಲೇ ಸರಕಾರಕ್ಕೆ ಕೇಳಬೇಕಾದ ಮುಖ್ಯ ಪ್ರಶ್ನೆಯೆಂದರೆ ನಿಮಗೆ ರಾಜಕೀಯ ಇಚ್ಚಾಶಕ್ತಿಯಿದೆಯೇ? ನಿಮ್ಮ ಸಿದ್ಧತೆ ಯಾವ ಪ್ರಮಾಣದಲ್ಲಿದೆ?

2022-23ರ ಬಜೆಟ್‌ನ ವೆಚ್ಚ 2.51 ಲಕ್ಷ ಕೋಟಿಯಿದ್ದರೆ ಶಿಕ್ಷಣಕ್ಕೆ 32,018 ಕೋಟಿ (ಶೇ.12.8) ಹಂಚಿಕೆ ಮಾಡಲಾಗಿದೆ. ಅದರಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ 17,184 ಕೋಟಿ (ಶೇ.6.7), ಮದ್ಯಾಹ್ನದ ಬಿಸಿಯೂಟಕ್ಕೆ 960 ಕೋಟಿ (ಶೇ.3.8) ಮತ್ತು ಉನ್ನತ ಶಿಕ್ಷಣಕ್ಕೆ 13,874 ಕೋಟಿ (ಶೇ.5.12) ಹಂಚಿಕೆ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಕಳೆದ ಮೂರು ವರ್ಷಗಳಲ್ಲಿ (2018-21) ಉನ್ನತ ಶಿಕ್ಷಣಕ್ಕೆ ಕೇವಲ 280 ಕೋಟಿ ಮಾತ್ರ ಹಂಚಿಕೆ ಮಾಡಿದೆ. ಬಜೆಟ್ ಘೋಷಣೆಯ ಮೊತ್ತಕ್ಕಿಂತಲೂ ಅತ್ಯಂತ ಕಡಿಮೆ ಹಣ ಕೊಟ್ಟಿದೆ. ಇದರ ಫಲವಾಗಿ ಬಹುತೇಕ ಸಂದರ್ಭಗಳಲ್ಲಿ ಇತರೆ ಕಲ್ಯಾಣ ಯೋಜನೆಗಳಾದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಈ ಪದವಿ ಸಂಸ್ಥೆಗಳ ನಿರ್ವಹಣೆಗೆ ವರ್ಗಾಯಿಸಲಾಗುತ್ತಿದೆ. ಉದಾಹರಣೆಗೆ ಕರ್ನಾಟಕ ಪರೀಕ್ಷಾ ಆಯೋಗದಿಂದ 27 ಕೋಟಿ ಬಳಸಿಕೊಂಡು 2500 ಸ್ಮಾರ್ಟ್‌ ಕ್ಲಾಸ್ ರೂಂ ನಿರ್ಮಿಸಲಾಗಿದೆ.

ಇದನ್ನು ಓದಿ: ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ಅವೈಜ್ಞಾನಿಕ: ವಿಜ್ಞಾನಿಗಳು

ಎಲ್ಲರಿಗೂ ಕಾಡುವ ಪ್ರಶ್ನೆಯೆಂದರೆ ಉನ್ನತ ಶಿಕ್ಷಣಕ್ಕೆ ಬಜೆಟ್ ವೆಚ್ಚದ ಕೇವಲ ಶೇ.5.1ರಷ್ಟು ಹಂಚಿಕೆ ಮಾಡುವ ಸರಕಾರವು ಈಗಿರುವ 440 ಪದವಿ ಕಾಲೇಜುಗಳನ್ನು ಬಹುಶಿಸ್ತೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಲು ಹಣವನ್ನು ಎಲ್ಲಿಂದ ತರುತ್ತಾರೆ? ಮಾರ್ಗಸೂಚಿಯಲ್ಲಿ ವಿವರಿಸಿದಂತಹ ಮೂವತ್ತಕ್ಕೂ ಅಧಿಕ ವಿಷಯಗಳ ಬಹುಶಿಸ್ತೀಯ ಕೋರ್ಸ್‌ ಗಳಿಗೆ ಅಗತ್ಯವಾದ ಪ್ರಾದ್ಯಾಪಕರ ಕೊರತೆಯಿದೆ. ಅವರ ನೇಮಕಾತಿಯ ಅಧಿಸೂಚನೆ, ಯೋಜನೆಯಾಗಲಿ ಇನ್ನೂ ಪ್ರಕಟಿಸಿಲ್ಲ. ಈ ಬಹುಶಿಸ್ತೀಯ ಕೋರ್ಸ್‌ ಗಳಿಗೆ ಅಗತ್ಯವಾಗಿರುವ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿದೆ. ಮುಖ್ಯವಾಗಿ ಪಠ್ಯಪುಸ್ತಗಳನ್ನು ರಚಿಸಬೇಕಾಗಿದೆ. ಈ ಬಹುಶಿಸ್ತೀಯ ಪಠ್ಯಪುಸ್ತಕಗಳನ್ನು ರಚಿಸಲು ವಿಷಯ ತಜ್ಞರ ಸಮಿತಿಗಳ ರಚನೆಯಾಗಬೇಕಿದೆ. ಈ ಸಮಿತಿಗೆ ಪಠ್ಯಗಳ ಆಯ್ಕೆಗೆ ಅಂತರಶಿಸ್ತೀಯ ಮಾರ್ಗಸೂಚಿಗಳ ಅಗತ್ಯವಿದೆ. ಆದರೆ ಈ ಯಾವುದೇ ಸಿದ್ದತೆಗಳಿಲ್ಲದೆ ಸರಕಾರ ಯಾವ ಆಧಾರದಲ್ಲಿ ಬಹುಶಿಸ್ತೀಯ ಸಂಸ್ಥೆಗಳನ್ನಾಗಿ ಪರಿವರ್ತಿಸುತ್ತದೆ?

ತಿವಾರಿ ಸಮಿತಿಯ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿದಂತೆ ಸೌಲಭ್ಯಗಳು, ಪ್ರಾದ್ಯಾಪಕರ ಕೊರತೆ ಇರುವ ಕಾಲೇಜುಗಳು ಇತರೆ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬಹುದು. ಸಾದ್ಯವಾದರೆ ವಿಲೀನಗೊಳ್ಳಬಹುದು. ಸಹಜವಾಗಿಯೇ ಕಲೆ, ವಿಜ್ಞಾನ, ವಾಣಿಜ್ಯ ಎನ್ನುವ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯಿರುವ ಸರಕಾರಿ ಕಾಲೇಜುಗಳು ಮೇಲೆ ಪ್ರಸ್ತಾಪಿಸಿದ ಕೊರತೆಗಳ ಕಾರಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಲೀನಗೊಳ್ಳಬೇಕಾಗುತ್ತದೆ. ಇದು ಅನಿವಾರ್ಯ. ಕಡೆಗೂ ಬಹುಶಿಸ್ತೀಯ ಶಿಕ್ಷಣದ ಹೆಸರಿನಲ್ಲಿ ಸರಕಾರಿ ಕಾಲೇಜುಗಳನ್ನು ಶಾಶ್ವತವಾಗಿ ಮುಚ್ಚುವುದು ಎನ್‌ಇಪಿಯ ಸಾಧನೆ ಎನ್ನುವುದರಲ್ಲಿ ಅನುಮಾನವಿಲ್ಲ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಮತ್ತೊಂದೆಡೆ, ಈ ಸಮಿತಿಯು ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚಿನ ಪ್ರಾಸಸ್ತ್ಯ ಕೊಡಬೇಕೆಂದು ಸೂಚಿಸಿದೆ. ಈಗಾಗಲೇ ಕರ್ನಾಟಕದಲ್ಲಿ ಎನ್‌ಇಪಿ ನೆಪದಲ್ಲಿ ಆನ್‌ಶಿಕ್ಷಣ ಜಾರಿಯಗಿದೆ. ಪದವಿ ಕಾಲೇಜುಗಳಲ್ಲಿ ‘ಕಲಿಕಾ ನಿರ್ವಹಣಾ ವ್ಯವಸ್ಥೆ'(ಎಲ್‌ಎಂಎಸ್) ಎನ್ನುವ ಆನ್‌ಲೈನ್ ಶಿಕ್ಷಣ ಜಾರಿಯಲ್ಲಿದೆ. ಇಲ್ಲಿ ಶಿಕ್ಷಕರು ಎಲ್‌ಎಂಎಸ್ ಅಂತರ್ಜಾಲ ತಾಣದಲ್ಲಿ ವಿಷಯಗಳ ಪಿಪಿಟಿಯನ್ನು  ಅಪ್‌ಲೊಡ್ ಮಾಡುತ್ತಾರೆ ಮತ್ತು ವಿದ್ಯಾರ್ಥಿಗಳು ಅದನ್ನು ಡೌನ್‌ಲೊಡ್ ಮಾಡಿಕೊಂಡು ಕಲಿಯಬೇಕಾಗಿದೆ. ಆದರೆ ಬಹುತೇಕ ತಾಲೂಕು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ, ಅಂತರ್ಜಾಲ ಸಂಪರ್ಕದ ತೊಂದರೆಯಿದೆ. ವಿದ್ಯಾರ್ಥಿಗಳಿಗೆ ಡೌನ್‌ಲೋಡ್ ಮಾಡಿಕೊಳ್ಳುವಲ್ಲಿ ವಿಫಲರಾಗಿ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಮುಖ್ಯವಾಗಿ ಶಿಕ್ಷಕರು ಅಪ್‌ಲೋಡ್ ಮಾಡುವ ಪಠ್ಯಗಳನ್ನು ಅನುಮೋದಿಸುವವರು ಯಾರು? ಪರಿಶೀಲಿಸುವವರು ಯಾರು? ಈ ಪ್ರಶ್ನೆಗಳಿಗೆ  ಉತ್ತರವಿಲ್ಲ. ಇದು ನಮ್ಮ ಘನ ಸರಕಾರ ಜಾರಿಗೊಳಿಸುತ್ತಿರುವ ಬಹುಶಿಸ್ತೀಯ ಕೋರ್ಸ್‌ ಗಳ ಮಾದರಿ. ಪ್ರಭುತ್ವದ ಈ ಅವ್ಯವಸ್ಥೆ, ಬೇಜವ್ದಾರಿ ಮತ್ತು ಇಚ್ಚಾಶಕ್ತಿಯ ಕೊರತೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ.

 

 

Donate Janashakthi Media

Leave a Reply

Your email address will not be published. Required fields are marked *