ಹಾವೇರಿ : 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರನ್ನ ಕಡೆಗಣಿಸಿದ್ದಾರೆ. ದಲಿತಪರ ಗೋಷ್ಠಿ ಇಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿ, ದಲಿತ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಕವಿಗೋಷ್ಠಿ ನಡೆಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಸಮ್ಮೇಳನ ಎಂದು ರಾಜ್ಯಾಧ್ಯಕ್ಷರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಲಿತ ಸಂಘಟನೆಗಳ ಆಕ್ರೋಶ ಕಂಡು ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಕಕ್ಕಾಬಿಕ್ಕಿಯಾಗಿ ನಿಂತಿದ್ದಾರೆ. ನಂತರ ಸಮಾಧಾನ ಪಡಿಸಲು ಮುಂದಾದಾಗ ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮತ್ತು ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಇದು ಬಿಜೆಪಿ ಸಮ್ಮೇಳನವಾಗಿದೆ. ಜನರ ಹಣವನ್ನ ಲೂಟಿ ಮಾಡಲು ಹೊರಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮ್ಮೇಳನ ಈಗಾಗಲೇ ವಿವಾದಕ್ಕೆ ಈಡಾಗಿದೆ. ಮುಸ್ಲಿಂ ಸಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಸಮಗ್ರ ಕನ್ನಡಿಗರ ಪ್ರಾತಿನಿಧಿಕ ಸಾಹಿತ್ಯ ವೇದಿಕೆಯಾಗುವ ಬದಲು, ಕೋಮು ತಾರತಮ್ಯದ ಸಾಹಿತ್ಯ ಸಮ್ಮೇಳನ ಎಂದು ಹಾವೇರಿ ಸಮ್ಮೇಳನ ಕರೆಸಿಕೊಂಡಿದೆ. ಇದಕ್ಕೆ ಬದಲಿಯಾಗಿ ಜನಪರ ಸಂಘಟನೆಗಳು ಹಾಗೂ ಪ್ರಗತಿಪರ ಸಾಹಿತಿಗಳು ಬೆಂಗಳೂರಿನಲ್ಲಿ ಜ.8ರಂದು ಜನ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದಾರೆ. ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇದನ್ನೂ ಓದಿ : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರ ಕಡೆಗಣನೆ-ಪರ್ಯಾಯ ಸಮ್ಮೇಳನಕ್ಕೆ ಚಿಂತನೆ
ವರದಿ : ನಿಂಗಪ್ಪ ಆರೇರ್
Super