– ವಸಂತರಾಜ ಎನ್.ಕೆ
ಬ್ರೆಜಿಲ್‌ನಲ್ಲಿ ಎಡಪಂಥೀಯ ಸರಕಾರದ ವಿರುದ್ಧ ಯು.ಎಸ್ ಪ್ರಯೋಗ ಮಾಡಿದ ಕಾನೂನು ಬಾಹಿರ ‘ಪಾರ್ಲಿಮೆಂಟರಿ ಕ್ಷಿಪ್ರಕ್ರಾಂತಿ’ ತಂತ್ರ ರಿವರ್ಸ್ ಹೊಡೆದಿದೆ. ಅದನ್ನೇ ಪೆರುವಿನಲ್ಲಿ ಪ್ರಯೋಗಿಸಲಾಗಿದೆ. ಇಲ್ಲಿ ಇನ್ನೂ ಬೇಗ ರಿವರ್ಸ್ ಹೊಡೆಯುವ ಸಾಧ‍್ಯತೆಗಳಿವೆ.
ಪೆರುವಿನ ರಾಜಕೀಯ ಬಿಕ್ಕಟ್ಟು ತೀವ್ರವಾಗುತ್ತಾ ನಡೆದಿದೆ. ಕಳೆದ ಎರಡು ವಾರಗಳಿಂದ ಪದಚ್ಯುತರಾದ ಅಧ‍್ಯಕ್ಷ ಪೆದ್ರೊ ಕ್ಯಾಸ್ಟಿಲೊ ಬೆಂಬಲಿಗರು ದಂಗೆ ಎದ್ದಿದ್ದಾರೆ. ಪಾರ್ಲಿಮೆಂಟ್ ನೇಮಿಸಿದ ಅಧ‍್ಯಕ್ಷ ದೀನಾ ಅವರನ್ನು ವಜಾ ಮಾಡಬೇಕು. ಚುನಾಯಿತ ಅಧ‍್ಯಕ್ಷ ಪೆದ್ರೊ ಕ್ಯಾಸ್ಟಿಲೊ ಅವರನ್ನು ಅಧ್ಯಕ್ಷ-ಸ್ಥಾನಕ್ಕೆ ಮರಳಿಸಬೇಕು. ಪಾರ್ಲಿಮೆಂಟನ್ನು ವಿಸರ್ಜಿಸಿ ಚುನಾವಣೆ ನಡೆಯಬೇಕು. ಅದರ ಜತೆಗೆ ಅಲ್ಬರ್ಟೊ ಫುಜಿಮೊರಿ ಸರ್ವಾಧಿಕಾರಿ ಆಡಳಿತದ (1990-2000) ಕಾಲದಲ್ಲಿ ರಚಿಸಲಾದ 1993ರ ಸಂವಿಧಾನವನ್ನು ರದ್ದು ಮಾಡಿ ಹೊಸ ಸಂವಿಧಾನ ರಚಿಸಲು ಸಂವಿಧಾನ ಸಭೆಗೂ ಚುನಾವಣೆ ನಡೆಯಬೇಕು ಎಂಬುದು ಪೆದ್ರೊ ಬೆಂಬಲಿಗರ ಹಕ್ಕೊತ್ತಾಯಗಳು. ಇವಕ್ಕೆ ಒತ್ತಾಯಿಸಿ ಪ್ರತಿ ದಿನ ಹತ್ತಾರು ಸಾವಿರಾರು ಜನ ಭಾಗವಹಿಸಿದ ಪ್ರತಿಭಟನೆಗಳು ದೇಶದಾದ್ಯಂತ ನಡೆಯುತ್ತಿದೆ. ಇದರಲ್ಲಿ ಕಾರ್ಮಿಕ, ರೈತ, ಕೃಷಿ ಕೂಲಿಕಾರರ, ವಿದ್ಯಾರ್ಥಿಗಳ ಸಂಘಟನೆಗಳು ಸಕ್ರಿಯ ಪಾತ್ರ ವಹಿಸುತ್ತಿವೆ. ಇದನ್ನು ಹತ್ತಿಕ್ಕಲು ತೀವ್ರ ಹಿಂಸಾತ್ಮಕ ದಮನಕ್ರಮಗಳನ್ನು ಸರಕಾರ ಬಳಸುತ್ತಿದೆ. ಪೋಲಿಸ್ ಅಲ್ಲದೆ ಮಿಲಿಟರಿ ಪಡೆಗಳನ್ನು ಕರೆದಿದ್ದು ಅವು ಅಶ‍್ರುವಾಯು, ಮದ್ದು-ಗುಂಡುಗಳನ್ನು ಎಗ್ಗಿಲ್ಲದೆ ಬಳಸುತ್ತಿವೆ. ಡಿಸೆಂಬರ್ 12ರಂದು ‘ತುರ್ತು ಪರಿಸ್ಥಿತಿ’ಯನ್ನು ಘೋಷಿಸಿ ಪ್ರತಿಭಟನೆ, ಪ್ರದರ್ಶನ, ಸಭೆಗಳನ್ನು ನಿ಼ಏಧಿಸಲಾಗಿದೆ. ಹಲವಾರು ಕಡೆ ಪ್ರಯಾಣ, ವಾಹನಗಳ ಮೇಲೆ ನಿರ್ಬಂಂಧ ಹೇರಲಾಗಿದೆ. ಪೆರುವಿನ ರಾಷ್ಟ್ರೀಯ ಮಾನವ ಹಕ್ಕು ಸಂಯೋಜಕರ ವರದಿಯ ಪ್ರಕಾರವೇ ಹಲವು ಮಕ್ಕಳನ್ನು ಸೇರಿದಂತೆ 27 ಜನ ಸತ್ತಿದ್ದಾರೆ. 60 ಜನ ಗಂಭೀರ ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದಾರೆ. 113 ಬಂಧನಗಳನ್ನು ಮಾಡಲಾಗಿದೆ. ವಾಸ್ತವದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಂಭವವೇ ಹೆಚ್ಚು. ಒಟ್ಟಾರೆಯಾಗಿ ಪೆರು ವಿನಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಇದಕ್ಕೆ ತಕ್ಷಣದ ಪ್ರಚೋದನೆ ದೊರಕಿದ್ದು ಡಿಸೆಂಬರ್ 7ರ ರಾಜಕೀಯ ಘಟನೆಗಳಿಂದ.
ಪೆದ್ರೊ ಪದಚ್ಯುತಿ
ಡಿಸೆಂಬರ್ 7ರಂದು ನಡೆದಿದ್ದಾರೂ ಏನು? ಗ್ರಾಮೀಣ ಪ್ರದೇಶದ ಬಡ ಶಾಲಾಶಿಕ್ಷಕರ ಯೂನಿಯನ್ ನಾಯಕರಾಗಿದ್ದ ಪೆರುವಿನ ಜನಪ್ರಿಯ ಅಧ್ಯಕ್ಷ ಪೆದ್ರೊ ಕ್ಯಾಸ್ಟಿಲೊ ಅವರನ್ನು ಡಿಸೆಂಬರ್ 7ರಂದು ಪದಚ್ಯುತಿ ಮಾಡಲಾಯಿತು. ಇದಕ್ಕೆ ಮುಂಚೆ ಮತ್ತು ನಂತರ ಆ ದಿನದ ಘಟನಾವಳಿ ನೋಡೋಣ. ಡಿಸೆಂಬರ್ 7 ರಂದು ಬೆಳಿಗ್ಗೆ ಪೆದ್ರೊ ತಾವು ಪಾರ್ಲಿಮೆಂಟನ್ನು ವಿಸರ್ಜಿಸಿ ‘ತುರ್ತು ಪರಿಸ್ಥಿತಿ ಸರಕಾರ’ ರಚಿಸುವುದಾಗಿ ಘೋಷಿಸುತ್ತಾರೆ. ಅದೇ ದಿನ ಪೆದ್ರೊ ವಿರುದ್ಧ (ಕಳೆದ ಒಂದುವರೆ ವರ್ಷದಲ್ಲಿ ಮೂರನೆಯ ಬಾರಿ ತರಲಾದ) ದೋಷಾರೋಪಣೆ ಅಭಿಯೋಗದ ಮೇಲೆ ಪಾರ್ಲಿಮೆಂಟಿನಲ್ಲಿ ಮತದಾನವಾಗುವುದಿತ್ತು. ಆ ಮತದಾನ ನಡೆದು ಪಾರ್ಲಿಮೆಂಟ್ ಅಧ‍್ಯಕ್ಷರನ್ನು ಪದಚ್ಯುತಗೊಳಿಸುತ್ತದೆ. ಕೂಡಲೇ (ಅವರ ಜತೆಗೆ ಆಯ್ಕೆಯಾದ) ಉಪಾಧ್ಯಕ್ಷ ದಿನಾ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುತ್ತದೆ. ಪೆದ್ರೊ ಅವರನ್ನು ‘ಸಾಂವಿಧಾನಿಕ ವ್ಯವಸ್ಥೆಯ ಉಲ್ಲಂಘನೆ’ಯ ಆಪಾದನೆ ಮೇಲೆ ಕ್ರಿಮಿನಲ್ ಪ್ರಕರಣದಲ್ಲಿ ಬಂಧಿಸಲಾಗುತ್ತದೆ. ಅವರನ್ನು ಒಂದು ವಾರದ ವರೆಗೆ ಜೈಲಿಗೆ ಕಳಿಸಲಾಗುತ್ತದೆ. ಅದನ್ನು ಮುಂದೆ ವಿಸ್ತರಿಸುತ್ತಾ ಹೋಗಿ, ಡಿ.15ರಂದು 18 ತಿಂಗಳ ಜೈಲುವಾಸ ವಿಧಿಸಲಾಗುತ್ತದೆ. ಡಿ.7ರ ಈ ಘಟನೆಗಳನ್ನಷ್ಟೇ ನೋಡಿದರೆ ಅಧ್ಯಕ್ಷ ಪೆದ್ರೊ ಸರ್ವಾಧಿಕಾರಿ ಹಾದಿ ಹಿಡಿದಿದ್ದರು ಎಂದನಿಸಬಹುದು. ಹಾಗಂತ ಪಾಶ್ಚಿಮಾತ್ಯ ಮಾಧ‍್ಯಮಗಳು ಪ್ರಚಾರ ಮಾಡುತ್ತಿವೆ ಕೂಡಾ ಮುಂದಿನ ಭಾಗದಲ್ಲಿ ಡಿ.7ರ ಹಿಂದಿನ ಮತ್ತು ಆನಂತರ ಬೆಳಕಿಗೆ ಬಂದ ಘಟನೆಗಳು ಮತ್ತು ಮಾಹಿತಿಗಳನ್ನು ವಿವರವಾಗಿ ಗಮನಿಸಿದರೆ ಮಾತ್ರ ವಾಸ್ತವವ ಸ್ಥಿತಿ ಅರ್ಥವಾಗುವುದು.
ಇದನ್ನೂ ಓದಿ : ಎಡಪಂಥೀಯ ಸ್ಕೂಲ್ ಟೀಚರ್ ಕ್ಯಾಸ್ಟಿಲೊ ಪೆರು ಅಧ್ಯಕ್ಷ
ನಿರ್ಲಕ್ಷಿತ ಗ್ರಾಮೀಣ ಜನ ಮತ್ತು ರೈತ-ಕಾರ್ಮಿಕರು ಕೂಲಿಕಾರರು ಬಡವರ ಕಣ್ಮಣಿಯಾಗಿದ್ದ ಪೆದ್ರೊ ಅವರು ಪೆರು ವಿನ ಮೊದಲ ಎಡಪಂಥೀಯ ಅಧ‍್ಯಕ್ಷರಾಗಿದ್ದರು. ಲ್ಯಾಟಿನ್ ಅಮೆರಿಕದ ದೇಶಗಳಲ್ಲೇ ತೀವ್ರ ಅಸಮಾನತೆ, ಶೋಷಣೆ, ಅನಬಿವೃದ್ಧಿಯನ್ನು ಎದುರಿಸುತ್ತಿದ್ದ ಬಡಜನರು, ದುಡಿಯುವ ಜನ ಅವರಲ್ಲಿ ಬಹಳ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ಪೆರುವಿನ ಉದ್ಯಮಿಗಳು, ಶ್ರೀಮಂತರು, ಅಮೆರಿಕನ್ ಬಹುರಾಷ್ಟ್ರೀಯ ಕಂಪನಿಗಳ ಅಧಿಕಾರಿಗಳು ಏಜೆಂಟರು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡುತ್ತಾ ಬಂದಿರುವ ರಾಜಕಾರಣಿಗಳು, ಅಧಿಕಾರಿಗಳು, ಪೋಲಿಸ್/ಮಿಲಿಟರಿ ಅಧಿಕಾರಿಗಳು ತಮ್ಮ ನಿರಂಕುಶ ಆಳ್ವಿಕೆಗೆ ಕುತ್ತು ಬಂದಿದೆ ಎಂದು ಆತಂಕಿತರಾಗಿದ್ದರು. ಈ ಆತಂಕವನ್ನು ಕ್ರೋಢೀಕರಿಸಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಪೆದ್ರೊ ಪ್ರತಿಸ್ಪರ್ಧಿಯಾಗಿದ್ದ ಕೈಕೊ ಫುಜಿಮೊರಿ (ಹಿಂದೆ ಹೇಳಿದ ಕುಖ್ಯಾತ ಸರ್ವಾಧಿಕಾರಿ ಅಲ್ಬರ್ಟೊ ಫುಜಿಮೊರಿ ಅವರ ಮಗಳು), ಪೆದ್ರೊ ಪದಗ್ರಹಣ ಮಾಡಿದಂದಿನಿಂದಲೇ ಅವರ ಪದಚ್ಯುತಿಗೆ ಸ್ಕೆಚ್ ಹಾಕಲಾರಂಭಿಸಿದ್ದರು. ಪಾರ್ಲಿಮೆಂಟಿನಲ್ಲಿ ಬಲಪಂಥೀಯ ಶಾಸಕರ ಬಹುಮತ ಇರುವುದನ್ನು ಇದಕ್ಕೆ ಯಥೇಚ್ಛವಾಗಿ ಬಳಸಲಾಯಿತು.
ಪೆದ್ರೊ ನೇಮಿಸಿದ ಸಚಿವ ಸಂಫುಟದ ಸದಸ್ಯರ ಮೇಲೆ ‘ಅನುಭವ-ಪರಿಣತಿಯ ಅಭಾವ’ ಮತ್ತು ‘ಭ್ರಷ್ಟಾಚಾರ’ದ ಯಾವುದೇ ಪುರಾವೆಯಿಲ್ಲದ ಆಪಾದನೆಗಳನ್ನು ಮಾಡಲಾಯಿತು. ‘ಅನುಭವ-ಪರಿಣತಿಯ ಅಭಾವ’ದ ಆಪಾದನೆಯನ್ನು ಪೆದ್ರೊ ಅವರ ವಿರುದ್ಧವೂ ಮಾಡಲಾಯಿತು. ಪಾರ್ಲಿಮೆಂಟಿನಲ್ಲಿ ಈ ಕುರಿತು ಕೋಲಾಹಲ ಸೃ಼ಷ್ಟಿಸಲಾಯಿತು. ಹೆಚ್ಚಿನ ಸಚಿವರು ಎಡ ಮತ್ತು ಎಡ-ನಡು ಪಂಥೀಯ ಪಕ್ಷಗಳ ನಾಯಕರಾಗಿದ್ದು ಅವರಿಗೆ ಪರಿಣತಿಯ ಅಭಾವವಿರಲಿಲ್ಲ. ಸಚಿವರಾಗಿ ಅನುಭವದ ಕೊರತೆ ಇತ್ತು, ಅದಕ್ಕೆ ಯಾವತ್ತೂ ಬಲಪಂಥೀಯರೇ ಆಳಿದ್ದ ಪೆರುವಿನಲ್ಲಿ ಅಂತಹ ಅವಕಾಶಗಳೇ ಸಿಕ್ಕಿರಲಿಲ್ಲ! ಈ ಆಪಾದನೆಗಳಿಗೆ ಉತ್ತರಿಸುತ್ತಾ ಅವರು ‘ನಾನು ಯು.ಎಸ್ ಗೆ ಹೋಗಿ ಅಧ್ಯಕ್ಷನಾಗಿ ಪೆರುವಿನ ಶ್ರೀಮಂತರ ಹಿತಾಸಕ್ತಿ ರಕ್ಷಿಸುವುದು ಹೇಗೆ ಎಂಬ ತರಬೇತಿ ಪಡೆದು ಬಂದಿಲ್ಲ. ನಮ್ಮ ಸಚಿವರೂ ಅಷ್ಟೇ’ ಎಂದು ಮಾಧ‍್ಯಮ ಸಂದರ್ಶನವೊಂದರಲ್ಲಿ ಖಾರವಾಗಿ ಹೇಳಿದ್ದರಂತೆ! ಅಧಿಕಾರದ ಅವಕಾಶವೇ ಇಲ್ಲದಿರುವಾಗ ಭ್ರಷ್ಟಾಚಾರದ ಪ್ರಶ್ನೆ ಎಲ್ಲಿ ಬರುತ್ತದೆ? ಆಧರೂ ಪಾರ್ಲಿಮೆಂಟರಿ ಒತ್ತಡದಿಂದಾಗಿ ನಾಲ್ಕು ಬಾರಿ ಸಂಪುಟ ಪುನರ್ರಚನೆ ಮಾಡಬೇಕಾಯಿತು. ಸಂಪುಟ ಸ್ಥಿರವಿಲ್ಲವಾದ್ದರಿಂದ ಆಡಳಿತ ಅಸ್ಥಿರಗೊಂಡಿದೆಯೆಂದೂ ಮತ್ತೆ ಆಪಾದನೆ ಮಾಡಲಾಯಿತು!
‘ಪಾರ್ಲಿಮೆಂಟರಿ ಕ್ಷಿಪ್ರಕ್ರಾಂತಿ’ ಗೆ ರಿಹರ್ಸಲ್
ಅಕ್ಟೋಬರ್ 2021ರಲ್ಲಿಯೇ ಪೆರು ವಿನ ಉದ್ಯಮಗಳ ರಾಷ್ಟ್ರೀಯ ಸಂಘಟನೆ, ಸಾರಿಗೆ ಉದ್ಯಮದ ಗಿಲ್ಡ್, ಕೈಕೊ ಫುಜಿಮೊರಿ ಮತ್ತಿತರ ರಾಜಕಾರಣಿಗಳು ಪೆದ್ರೊ ಸರಕಾರ ಉರುಳಿಸುವ ಪಿತೂರಿ ಆರಂಭಿಸಿದರು. ನವೆಂಬರ್ 2021ರಲ್ಲಿ ಮಹಾ ಸಾರಿಗೆ ಮುಷ್ಕರ ಮಾಡಿ ಆರ್ಥಿಕವನ್ನು ಸ್ಥಗಿತಗೊಳಿಸುವ, ಸಚಿವರು, ಅಧಿಕಾರಿಗಳನ್ನು ಬೆದರಿಸುವ, 2021ರ ಯು.ಎಸ್ ಪಾರ್ಲಿಮೆಂಟಿನ ಮೇಲೆ ನಡೆದ ದಾಳಿಯ ಮಾದರಿಯ ನೇರ ಭಯೋತ್ಪಾದಕ ದಾಳಿ ಇವುಗಳನ್ನೆಲ್ಲ ಯೋಜಿಸಲಾಗಿತ್ತು. ಈ ಯೋಜನೆಗಳನ್ನು ವೆಬ್ ಪತ್ರಿಕೆಯೊಂದು ರೆಕಾರ್ಡಿಂಗ್ ಸಮೇತ ಬಹಿರಂಗ ಪಡಿಸಿತು.
ಪಾರ್ಲಿಮೆಂಟ್ ನ ಬಲಪಂಥೀಯ ಬಹುಮತ ಬಳಸಿ ಅಧ‍್ಯಕ್ಷರ ಅಧಿಕಾರ ಮೊಟಕು ಮಾಡುವ, ಜನಪರ ಕ್ರಮಗಳಿಗೆ ಅಡೆತಡೆಗಳನ್ನೊಡ್ಡುವ ಸರಣಿ ಕ್ರಮಗಳನ್ನು ಕೈಗೊಳ್ಳಲಾಯಿತು. ಪಾರ್ಲಿಮೆಂಟ್ ವಿಸರ್ಜನೆ ಮಾಡುವ ಅಧ‍್ಯಕ್ಷರ ಅಧಿಕಾರವನ್ನು ಮೊಟಕು ಮಾಡುವಂತೆ ಸಂವಿಧಾನವನ್ನು ವ್ಯಾಖ್ಯಾನಿಸುವ ಕಾನೂನು ಮಾಡಲಾಯಿತು. ಆದರೆ ಅಧ್ಯಕ್ಷರನ್ನು ಪದಚ್ಯುತಗೊಳಿಸಬಹುದಾದ ಪಾರ್ಲಿಮೆಂಟಿನ ಅಧಿಕಾರವನ್ನು ಉಳಿಸಿಕೊಳ್ಳಲಾಯಿತು. ಸಂವಿಧಾನವನ್ನು ಪುನರ್ರಚಿಸಲು ಸಂವಿಧಾನ ಸಭೆಯ ಚುನಾವಣೆಗೆ ಜನಮತಸಂಗ್ರಹ ಸಂಘಟಿಸಲು ಹೊಸ ಷರತ್ತುಗಳನ್ನು ಹಾಕುವ ಕಾನೂನು ಮಾಡಿತು. ಇಂತಹ ಜನಮತ ಸಂಗ್ರಹ ಮಾಡುವ ಮೊದಲು ಸಂವಿಧಾನದ ಸುಧಾರಣೆ ಮಾಡುವ ಅಗತ್ಯತೆ ಕುರಿತು ಕಾನೂನು ಮಾಡಬೇಕು ಎಂಬುದೇ ಆ ಷರತ್ತು. ಪೆದ್ರೊ ಸರ್ವಾಧಿಕಾರದ ಕಾಲದಲ್ಲಿ ರಚಿಸಲಾದ ಸಂವಿಧಾನವನ್ನು ಬದಲಾಯಿಸುವ ಆಶ್ವಾಸನೆಯ ಮೇಲೆ ಗೆದ್ದಿದ್ದರು. ಅದರರ್ಥ ಸಂವಿಧಾನವನ್ನು ಬದಲಾಯಿಸುವುದಕ್ಕೆ ಜನಾದೇಶ ದೊರಕಿತ್ತು ಎಂದಲ್ಲವೇ?
ಇದನ್ನೂ ಓದಿ : ಪೆರು ಅಧ್ಯಕ್ಷೀಯ ಚುನಾವಣೆ: ಶಾಲಾ ಶಿಕ್ಷಕ ಪೆದ್ರೋ ಕ್ಯಾಸ್ಟಿಲೊ ಭರ್ಜರಿ ಗೆಲುವು
ಪೆರು ಪಾರ್ಲಿಮೆಂಟ್ ಸಭಾಪತಿ ಸ್ಪೈನ್ ಗೆ ಭೇಟಿ ಕೊಟ್ಟಾಗ “ಪೆರು ವನ್ನು ಕಮ್ಯುನಿಸ್ಟರು ವಶಪಡಿಸಿಕೊಂಡಿದ್ದಾರೆ. ಪೆದ್ರೊ ಕಾನೂನುಬದ್ಧ ಅಧ್ಯಕ್ಷರಲ್ಲ.’ ಎಂಬ ನಿರ್ಣಯ ಪಾಸು ಮಾಡುವಂತೆ ಪಾರ್ಲಿಮೆಂಟ್ ಸದಸ್ಯರನ್ನು ಕೇಳಿಕೊಂಡರು. ಇವೆಲ್ಲವೂ ‘ಸಾಂವಿಧಾನಿಕ ವ್ಯವಸ್ಥೆಯ ಉಲ್ಲಂಘನೆ’ ಯಲ್ಲವೇ?
ಇದು ಸಾಲದು ಎನ್ನುವಂತೆ ಅಪರೂಪದ ಗಂಭೀರ ಸನ್ನಿವೇಶಗಳಲ್ಲಿ ಬಳಸಬೇಕಾದ ‘ಅಧ‍್ಯಕ್ಷೀಯ ದೋಷಾರೋಪಣೆ’ಯನ್ನು (ಇಂಪೀಚ್ ಮೆಂಟ್) ಬೇಕಾಬಿಟ್ಟಿಯಾಗಿ ಬಳಸಲಾಯಿತು. ಜುಲೈ 2021ರಲ್ಲಿ ಪೆದ್ರೊ ಅಧಿಕಾರ ವಹಿಸಿಕೊಂಡರೆ ನವೆಂಬರ್ 2021ರಲ್ಲಿಯೇ (4 ತಿಂಗಳೊಳಗೆ) ಮೊದಲ ‘ದೋಷಾರೋಪಣೆ’ ಮಾಡಲಾಯಿತು. ಪೆದ್ರೊ ಕಚೇರಿಯ ಅಧಿಕಾರಿಯ ಮೇಲೆ ‘ಭ್ರಷ್ಟಾಚಾರ’ದ ಆಪಾದನೆ ನೆಪವಾಗಿತ್ತು. ಪೆದ್ರೊ ಗೆ ‘ಪದವಿಯಲ್ಲಿರಲು ನೈತಿಕ ಅರ್ಹತೆ’ ಇಲ್ಲ’ವೆಂದು ಕೈಕೊ ಗರ್ಜಿಸಿದರು. ಆದರೆ ಅದಕ್ಕೆ ‘ದೋಷಾರೋಪಣೆ’ ಅಭಿಯೋಗದ ಕ್ರಮ ಆರಂಭಿಸಲು ಅಗತ್ಯವಾದ ಕನಿಷ್ಠ ಮತ ಪಾರ್ಲಿಮೆಂಟಿನಲ್ಲಿ ಬರಲಿಲ್ಲವಾಧ‍್ದರಿಂದ ಬಿದ್ದು ಹೋಯಿತು. ಆ ಅಭಿಯೋಗ ಎಷ್ಟು ಹುರುಳಿಲ್ಲದ್ದು ಅಂದರೆ ಬಲಪಂಥೀಯ ಬಹುಮತ ಇದ್ದಾಗ್ಯೂ ಅದಕ್ಕೆ ಕೇವಲ 46 ಮತ ಬಂತು. ವಿರುದ್ಧ 76 ಮತ ಬಂತು. ಫೆಬ್ರುವರಿ 2022ರಲ್ಲಿ ಎರಡನೆಯ ಬಾರಿ ‘ಅಧ‍್ಯಕ್ಷೀಯ ದೋಷಾರೋಪಣೆ’ಯನ್ನು ತರಲಾಯಿತು. ಈ ಬಾರಿ ಕೈಕೊ ಮೊದಲ ಮುಖಭಂಗದಿಂದ ಪಾಠ ಕಲಿತು ‘ಅಗತ್ಯ ತಯಾರಿ’ಯನ್ನು ಮಾಡಿದ್ದರು. ‘ದೋಷಾರೋಪಣೆ’ ಮೊದಲ ಸುತ್ತು ದಾಟಿ ವಿಚಾರಣೆ ಹಂತಕ್ಕೆ ಬಂದು ಅಂತಿಮ ಮತದಾನದಲ್ಲಿ ಮಾತ್ರ ಬಿದ್ದು ಹೋಯಿತು. ಅಗತ್ಯ 87 ಮತಗಳು ಬರಲಿಲ್ಲ. ಕೇವಲ 55 ಮತಗಳು ಬಂದವು.
ಇವೆಲ್ಲವೂ ಡಿ.7 ರ ‘ಪಾರ್ಲಿಮೆಂಟರಿ ಕ್ಷಿಪ್ರಕ್ರಾಂತಿ’ಗೆ ರಿಹರ್ಸಲ್ ಅಲ್ಲವೇ?
ಪೆದ್ರೊ ಪಾರ್ಲಿಮೆಂಟ್ ವಿಸರ್ಜನೆ ಘೋಷಿಸಿದ್ದು ಸರಿಯೇ?
ಜುಲೈ 2022ರಲ್ಲಿ ಮೂರನೆಯ ದೋಷಾರೋಪಣೆಯನ್ನು ಮಾಡಲಾಯಿತು. ಅದೇ ಡಿ.7ಕ್ಕೆ ಪಾರ್ಲಿಮೆಂಟಿನ ಮುಂದೆ ಬರುವುದಿತ್ತು. ಎಲ್ಲ ಸಮೀಕ್ಷೆಗಳು ರಾಜಕೀಯ ವಿಶ್ಲೇಷಕರು ಈ ಬಾರಿ ಸಹ ಅದಕ್ಕೆ ಅಗತ್ಯ ಮೂರನೇ ಎರಡು ಬಹುಮತ ಬರುವುದಿಲ್ಲವೆಂದು ಹೇಳಿದ್ದರು. ಹಾಗಿರುವಾಗ ಪೆದ್ರೊ ಏಕೆ ಪಾರ್ಲಿಮೆಂಟರಿ ವಿಸರ್ಜನೆ ಮಾಡುವ ಅವಸರದ ಘೋಷಣೆ ಮಾಡಿದರು? ಈ ಘೋಷಣೆಯ ಪ್ರಮಾದವನ್ನು ಪೆದ್ರೊ ಮಾಡಿರದಿದ್ದರೆ ಅವರನ್ನು ಪದಚ್ಯುತಿ ಮಾಡುವುದು (ಮಿಲಿಟರಿ ಕ್ಷಿಪ್ಪಕ್ರಾಂತಿ ಬಿಟ್ಟರೆ) ಅಷ್ಟು ಸುಲಭವಿರಲಿಲ್ಲವೆಂದು ಭಾವಿಸಲಾಗಿದೆ.
ಮೇಲೆ ಹೇಳಿದ ಹಿನ್ನೆಲೆಯಿಂದ (ಅವರಿಗೆ ತಮ್ಮ ವಿರುದ್ಧ ನಡೆಯುತ್ತಿದ್ದ ಪಿತೂರಿಗಳ ಕುರಿತು ಇನ್ನಷ್ಟು ಬೆಚ್ಚಿಬೀಳಿಸುವ ಭೀಕರ ಮಾಹಿತಿ ಇರಬೇಕು) ಪೆದ್ರೊ ಅವರ ಮೇಲೆ ಭಾರೀ ಒತ್ತಡವಿತ್ತು ಎಂಬುದು ಸ್ಪಷ್ಟ. ಅಲ್ಲದೆ, ತಾನು ಈ ದೇಶದ ಜನ-ವಿರೋಧೀ ಶ್ರೀಮಂತರ-ಪರ ರಾಜಕಾರಣವನ್ನು ಬದಲಾಯಿಸಬೇಕು. ತನ್ನ ಮೇಲೆ ಇಡೀ ದೇಶದ ಬಡವರು ದುಡಿಯುವವರು ಇಟ್ಟುಕೊಂಡಿರುವ ಅಪಾರ ನಿರೀಕ್ಷೆಯನ್ನು ಈಡೇರಿಸುವತ್ತ ಕೆಲಸ ಗಂಭೀರವಾಗಿ ಆರಂಭಿಸಬೇಕು. ಈ ಪಾರ್ಲಿಮೆಂಟ್ ತನ್ನನ್ನು ಅರ್ಥಹೀನ ಜಗ್ಗಾಟದಲ್ಲಿ ಕಟ್ಟಿಹಾಕುತ್ತದೆ. ಬಹುಶಃ ಇನ್ನೂ ಹಲವು ಒತ್ತಡಗಳಲ್ಲಿ ಸಿಕ್ಕು ಪೆದ್ರೊ ಒದ್ದಾಡುತ್ತಿದ್ದರು. ಇದಕ್ಕಾಗಿ ನಿರ್ಣಾಯಕವಾಗಿ ಏನಾದರೂ ಮಾಡಬೇಕು ಎಂದು ಅವರು ತಾಳ್ಮೆಗೆಟ್ಟು ವಿಸರ್ಜನೆಯ ಘೋಷಣೆ ಮಾಡಿರುವ ಸಾಧ‍್ಯತೆಯೆ ಹೆಚ್ಚು.
2021ರ ಪೆರು ಚುನಾವಣೆಯ ಸ್ವಲ್ಪ ಮೊದಲು ಲೀಸಾ ಕೆನ್ನಾ ಎಂಬ ಮಾಜಿ ಸಿಐಎ ಏಜೆಂಟ್ ನ್ನು ಪೆರು ಗೆ ಯು.ಎಸ್ ಯು.ಎಸ್ ರಾಯಭಾರಿಯಾಗಿ ಕಳಿಸಲಾಯಿತು. ಸಾಮಾನ್ಯವಾಗಿ ಯಾವುದೇ ದೇಶದಲ್ಲಿ ಯು.ಎಸ್ ವಿರುದ್ಧ ಆತಂಕಕಾರಿ ಬೆಳವಣಿಗೆ ನಿರೀಕ್ಷಿತವಾಗಿದ್ದರೆ ಸಿಐಎ ಏಜೆಂಟರನ್ನೇ ರಾಯಭಾರಿಯಾಗಿ ಕಳಿಸಲಾಗುತ್ತದೆ. ಡಿ.6ರಂದು ಆಕೆ ರಕ್ಷಣಾ ಮಂತ್ರಿಯನ್ನು ಭೇಟಿಯಾಗಿದ್ದರು. ಡಿ.7ರಂದು ಪೆದ್ರೊ ಸ್ವೀಕರಿಸಿದ ಕೊನೆಯ ಕರೆ ಯು.ಎಸ್ ರಾಯಭಾರ ಕಚೇರಿಯಿಂದ ಬಂದಿತ್ತು ಎಂದು ಹೇಳಲಾಗಿದೆ. ಪೆದ್ರೊ ವಿರ್ಜನೆಯ ಘೋಷಣೆ ಮಾಡಲಿ ಬಿಡಲಿ ಮಿಲಿಟರಿ ಕ್ಷಿಪ್ರಕ್ರಾಂತಿಯ ತಯಾರಿ ನಡೆದಿತ್ತೇ ಎಂಬ ಅನುಮಾನ ಹುಟ್ಟಿಸುತ್ತದೆ.
ಮುಂದೇನು?
ಹೊಸ ಅಧ್ಯಕ್ಷ ದೀನಾ ಅವರ ಆಡಳಿತ ಈಗಾಗಲೇ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ಆಗಲೇ ಎರಡನೆಯ ಬಾರಿ ಸಂಪುಟ ರಚನೆಯಾಗಿದೆ. ಪ್ರತಿಭಟನೆಯನ್ನು ತಣ್ಣಗಾಗಿಸಲು ಮುಂದಿನ ಚುನಾವಣೆಯನ್ನು (ಏಪ್ರಿಲ್ 2026ರಲ್ಲಿ ನಡೆಯಬೇಕಾಗಿದ್ದನ್ನು ಏಪ್ರಿಲ್ 2024ಕ್ಕೆ) ಹಿಂದಕ್ಕೆ ತರಲಾಗಿದೆ. ಇದು ಸಂವಿಧಾನಿಕ ವಿಷಯವಾದ್ದರಿಂದ ಎರಡನೆಯ ಬಾರಿಯೂ ಮೂರನೆಯ ಎರಡು ಬಹುಮತದೊಂದಿಗೆ ಮಂಜೂರಾಗಬೇಕು ಬೇರೆ. ಕಳೆದ ವಾರ ಡಿಸೆಂಬರ್ 2023ಕ್ಕೆ ತರಬೇಕೆಂಬ ಪ್ರಸ್ತಾವವನ್ನು ಪಾರ್ಲಿಮೆಂಟ್ ತಿರಸ್ಕರಿಸಿತು. ಆದರೆ ಇದು ಪ್ರತಿಭಟನೆಯನ್ನು ತಣಿಸುವ ಸಾಧ‍್ಯತೆ ಕಡಿಮೆ. ಏಕೆಂದರೆ ಸಂವಿಧಾನ ಪುನರ್ರಚನೆ, ಸಂವಿಧಾನ ಸಭೆಗೆ ಚುನಾವಣೆ ಬಗ್ಗೆ ಏನೂ ಹೇಳಲಾಗಿಲ್ಲ. ಒಂದು ಸ್ವತಂತ್ರ ಸಮೀಕ್ಷೆಯ ಪ್ರಕಾರ ಚುನಾವಣೆಯನ್ನು ಬೇಗನೇ ಮಾಡುವುದಕ್ಕೆ ಶೇ.85 ಜನ ಪರವಾಗಿದ್ದರೆ, ಶೇ. 62 ಜನ ಚುನಾವಣೆಯ ಮೊದಲು ರಾಜಕೀಯ ಸುಧಾರಣೆ ಸಹ ಆಗಬೇಕೆಂದು (ಅಂದರೆ ಸಂವಿಧಾನ ಬದಲಾವಣೆ) ಬಯಸುತ್ತಾರೆ.
ಬ್ರೆಜಿಲ್ ನಲ್ಲಿ ಯು.ಎಸ್ ಪ್ರಯೋಗ ಮಾಡಿದ ಕಾನೂನು ಬಾಹಿರ ‘ಪಾರ್ಲಿಮೆಂಟರಿ ಕ್ಷಿಪ್ರಕ್ರಾಂತಿ’ ತಂತ್ರ ರಿವರ್ಸ್ ಹೊಡೆದಿದೆ. ಅದನ್ನೇ ಪೆರುವಿನಲ್ಲಿ ಪ್ರಯೋಗಿಸಲಾಗಿದೆ. ಇಲ್ಲಿ ಇನ್ನೂ ಬೇಗ ರಿವರ್ಸ್ ಹೊಡೆಯುವ ಸಾಧ‍್ಯತೆಗಳಿವೆ.