ಕುವೆಂಪು ಅವರಿಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಕಾಲಿಟ್ಟರೆ ಪ್ರತಿಭಟನೆ

 ತೀರ್ಥಹಳ್ಳಿ: ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿರುವ ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಕಾಲಿಡುವುಡು ಬೇಡ. ಒಂದು ವೇಳೆ ಅವರು ತೀರ್ಥಹಳ್ಳಿಗೆ ಬಂದರೆ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ವಿಷಯ ಕುರಿತು ಮುಖ್ಯ ಭಾಷಣ ಮಾಡಲು ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಡಿಸೆಂಬರ್‌ 28 ರಂದು  ಭೇಟಿ ನೀಡುತ್ತಿದ್ದಾರೆ. ಇದು ಪ್ರಗತಿಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ರಾಷ್ಟ್ರ, ರಾಜ್ಯದ ಮಹಾನ್ ವ್ಯಕ್ತಿಗಳಿಗೆ ಅವಮಾನ ಮಾಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಕುವೆಂಪು ಅವರ ಕುರಿತು ಮುಖ್ಯ ಭಾಷಣ ಮಾಡುವ ಅರ್ಹತೆ ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಚಿಂತಕ ಬಾಳೆಹಳ್ಳಿ ಪ್ರಭಾಕರ್ ಪ್ರತಿಕ್ರಿಯಿಸಿದ್ದು, ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಕಾಲಿಡುವ ಅವಶ್ಯಕತೆಯೇ ಇಲ್ಲ. ಅವರು ಬಂದರೆ ಬಿಜೆಪಿಯವರು ಕುವೆಂಪು ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ. ಅವರನ್ನು ದಾರಿಯಲ್ಲೇ ಅಡ್ಡಗಟ್ಟಿ ಮಸಿ ಬಳಿಯುತ್ತೇವೆ ಎಂದು ಪಡುವಳ್ಳಿ ಹರ್ಷೇಂದ್ರ ಎಚ್ಚರಿಸಿದರು. ಕುವೆಂಪು ಅವರ ಬಗ್ಗೆ ನಾವು ಶಾಲೆಗಳಿಂದಲೂ ಓದಿದ್ದೇವೆ. ಅವರ ಬಗ್ಗೆ ಕೇಳಿ ಅದನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದೇವೆ. ಈಗಲೂ ಸಮಯವಕಾಶ ಇದ್ದು, ರಾಷ್ಟ್ರಕವಿಯನ್ನು ಅವಮಾನ ಮಾಡಿದ ರೋಹಿತ್ ಚಕ್ರತೀರ್ಥರನ್ನು ಕರೆಸದಂತೆ ರಾಮೇಶ್ವರ ದೇವರು ಬಿಜೆಪಿಯವರಿಗೆ ಬುದ್ಧಿ ನೀಡಲಿ ಎಂದು  ತಿಳಿಸಿದರು.

ಇದನ್ನೂ ಓದಿನಾಡಗೀತೆ ತಿರುಚಿದ ಆರೋಪ: ರೋಹಿತ್‌ ಚಕ್ರತೀರ್ಥ ಬೆನ್ನತ್ತಿದ ಸಿಐಡಿ ತಂಡ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲೇಖಕ ನೆಂಪೆ ದೇವರಾಜ್ , ಭಾರತ ಜನನಿಯ ತನುಜಾತೆ ಎನ್ನುವ ಕವಿತೆಯನ್ನು ಯಾರು ದೇಶಕ್ಕೆ ನೀಡಿದರೋ ಅಂತಹ ವ್ಯಕ್ತಿಯನ್ನು ಅವಮಾನ ಮಾಡಿ ಆ ಸಾಹಿತ್ಯವನ್ನೇ ತಿರುಚಿದ ವ್ಯಕ್ತಿಯನ್ನು ತೀರ್ಥಹಳ್ಳಿಗೆ ಕರೆಸುತ್ತಿದ್ದಾರೆ. ಚುನಾವಣೆಯ ಮತಕ್ಕಾಗಿ ಆತನನ್ನು ಕರೆಸುತ್ತಿದ್ದಾರೆ. ಆದರೆ ಕುವೆಂಪು ಅವರನ್ನು ಅವಮಾನ ಮಾಡಿದವನನ್ನು ಮತಕ್ಕಾಗಿ ಕರೆಸಬಾರದು. ರಾಜಕೀಯ ಅಜೆಂಡಾ ಏನೇ ಇದ್ದರೂ ಚುನಾವಣೆಯಲ್ಲಿ ತೋರಿಸಿ ಆದರೆ ಕುವೆಂಪು ಅವರ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ.  ನಾರಾಯಣಗುರು, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್.ಅಂಬೇಡ್ಕರ್, ಕುವೆಂಪು ಸೇರಿದಂತೆ ಅನೇಕ ಮಹಾನೀಯರ ವಿಚಾರಧಾರೆಗೆ, ವ್ಯಕ್ತಿತ್ವಕ್ಕೆ ರೋಹಿತ್ ಚಕ್ರತೀರ್ಥ ಅಪಚಾರ ಎಸಗಿದ್ದಾರೆ. ಕುವೆಂಪು ಅವರ ನಾಡಗೀತೆಯ ಸಾಹಿತ್ಯವನ್ನು ಒಳ ಉಡುಪಿಗೆ ಹೋಲಿಸಿ ವಿಕೃತಿ ಮೆರೆದಿದ್ದ ಎಂದು ಟೀಕಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿ, ಶ್ರೀ ನಾರಾಯಣ ಗುರುವಿನ ಬಗ್ಗೆ ಪಠ್ಯ ಪುಸ್ತಕ ವಿಚಾರದಲ್ಲಿ ತಿರುಚಿ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿದ್ದ ರೋಹಿತ್ ಚಕ್ರತೀರ್ಥ ಅವರನ್ನು ತೀರ್ಥಹಳ್ಳಿಗೆ ಕರೆಸಿ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಈ ಬಿಜೆಪಿ ಪ್ರಯೋಜಿತ ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿ ಬಹಿಷ್ಕಾರ ಮಾಡಬೇಕು ಎಂದು ವೆಂಕಟೇಶ ಹೆಗ್ಡೆ ಒತ್ತಾಯಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *