ನವದೆಹಲಿ: ಚೀನಾ, ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಮತ್ತು ಬ್ರೆಜಿಲ್ ದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಹೆಚ್ಚಳವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಎದುರಾಗಲಿರುವ ಬಿಕ್ಕಟ್ಟನ್ನು ತಪ್ಪಿಸಲು ಮಹತ್ವದ ಸಭೆಯನ್ನು ನಡೆಸಿದೆ.
ಮುನ್ನಚ್ಚರಿಕಾ ಕ್ರಮವಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಇಂದು(ಡಿಸೆಂಬರ್ 21) ಉನ್ನತ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಿದ್ದಾರೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಗಳು ಕೊರೊನಾ ಪ್ರಕರಣಗಳ ಮಾದರಿ ವರದಿಗಳನ್ನು ಹಾಗೂ ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್‌ಗಳಿಗೆ ಪ್ರತಿದಿನ ಕಳುಹಿಸಬೇಕು ಎಂದು ಸರ್ಕಾರ ತಿಳಿಸಿದೆ.
ಇದನ್ನು ಓದಿ: ಚೀನಾದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಳ: ಒಂದೇ ದಿನ 39 ಸಾವಿರ ಸೋಂಕಿತರು ಪತ್ತೆ
ದೇಶದಲ್ಲಿ ಕೋವಿಡ್ ಇನ್ನೂ ಮುಗಿದಿಲ್ಲ. ಎಚ್ಚರಿಕೆ ಮತ್ತು ಹೆಚ್ಚಿನ ಕಣ್ಗಾವಲು ವಹಿಸುವುದಕ್ಕಾಗಿ ನಾವು ಎಲ್ಲ ಸೂಚನೆಗಳನ್ನು ನೀಡಿದ್ದೇವೆ. ನಾವು ಯಾವುದೇ ಪರಿಸ್ಥಿತಿ ನಿಭಾಯಿಸಲು ನಾವು ಸಿದ್ಧರಾಗಿದ್ದೇವೆ ಎಂದು ಮನ್ಸುಖ್ ಮಾಂಡವಿಯ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಕೊವೀಡ್ ಸಾಂಕ್ರಾಮಿಕತೆಯ ವಿವಿಧ ರೂಪಾಂತರಗಳನ್ನು ಅಧ್ಯಯನ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಐಎನ್‌ಎಸ್‌ಎಸಿಒಜಿ ಆರೋಗ್ಯ ಸಚಿವಾಲಯದ ಅಡಿಯಲ್ಲಿರುವ ಒಂದು ವೇದಿಕೆಯಾಗಿದೆ. ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳವಾಗುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಆರೋಗ್ಯ ಬಿಕ್ಕಟ್ಟು ದೇಶದಲ್ಲಿ ಎದುರಾಗದಂತೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಕೇಂದ್ರ ನಿರ್ಧರಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು, ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಪ್ರಕರಣದ ಮಾದರಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಸಜ್ಜುಗೊಳಿಸುವುದು ಅತ್ಯಗತ್ಯವಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಕೋವಿಡ್ 2ನೇ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದ ಉಂಟಾದ ಸಾವುಗಳ ಬಗ್ಗೆ ಲೆಕ್ಕಪರಿಶೋಧನೆಗೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸ್ಸು
ಚೀನಾ ಸೇರಿದಂತೆ ವಿಶ್ವದ ಇತರ ದೇಶಗಳ ಕೊವಿಡ್ ಸೋಂಕು ಪ್ರಕರಣಗಳ ಅಂಕಿಅಂಶ ಮತ್ತು ಆರೋಗ್ಯ ಪರಿಸ್ಥಿತಿಯನ್ನು ಗಮನಿಸಲು ಕೇಂದ್ರ ಸರ್ಕಾರವು ಆಂತರಿಕ ಕಾರ್ಯಪಡೆಯೊಂದನ್ನು ರಚಿಸಿದೆ. ಈ ಸಮಿತಿಯಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿದ್ದು, ಭಾರತದ ಮೇಲಿನ ಪರಿಣಾಮ ಮತ್ತು ಸ್ಥಳೀಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಕಣ್ಗಾವಲು ಇರಿಸಲು, ತುರ್ತು ನಿರ್ಧಾರ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಈ ಸಭೆಯಲ್ಲಿ ಆರೋಗ್ಯ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳು, ಫಾರ್ಮಸ್ಯುಟಿಕಲ್ಸ್ ಮತ್ತು ಬಯೋಟೆಕ್ನಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿರ್ದೇಶಕ ರಾಜೀವ್ ಬೇಲ್, ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ ಪೌಲ್ ಮತ್ತು ನ್ಯಾಷನಲ್ ಟೆಕ್ನಿಕಲ್ ಅಡ್ವಸರಿ ಗ್ರೂಪ್ ಆನ್ ಇಮ್ಯುನೈಜೇಷನ್ ಅಧ್ಯಕ್ಷ ಎನ್.ಎಲ್ ಆರೋರಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.
ಇದನ್ನು ಓದಿ: ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ 10 ಲಕ್ಷ ಆಶಾ ಕಾರ್ಯಕರ್ತೆಯರಿಗೆ ವಿಶ್ವ ಆರೋಗ್ಯ ಸಂಸ್ಥೆ ಗೌರವ!
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 112 ಹೊಸ ಕೊರೊನಾ ಪ್ರಕರಣಗಳು ವರದಿ ಮಾಡಿವೆ. ಸೋಮವಾರ 181 ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ ಅದು ಕಡಿಮೆಯಾಗಿವೆ. ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 3,490 ರಷ್ಟಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ 0.01% ರಷ್ಟಿವೆ. ಕಳೆದ 24 ಗಂಟೆಗಳಲ್ಲಿ ಮೂರು ಸಾವುಗಳು ದಾಖಲಾಗಿವೆ. ಕೇರಳದಿಂದ ಇಬ್ಬರು ಮತ್ತು ಮಹಾರಾಷ್ಟ್ರದಿಂದ ಒಬ್ಬರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಒಟ್ಟು 5,30,677 ಕ್ಕೆ ತಲುಪಿದೆ. ರಾಷ್ಟ್ರವ್ಯಾಪಿ ಇದುವರೆಗೆ ಸುಮಾರು 220 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಾಗಿದೆ.
ಕೋವಿಡ್ ನಿಯಮ ಪಾಲಿಸು ಭಾರತ ಐಕ್ಯತಾ ಯಾತ್ರೆಗೆ ಸರ್ಕಾರ ಸೂಚನೆ
ಜಾಗತಿಕ ಮಟ್ಟದಲ್ಲಿ ಇತರೆ ದೇಶಗಳಲ್ಲಿ ಕೋವಿಡ್-19ರ ಸಾಂಕ್ರಾಮಿಕತೆ ಹೆಚ್ಚಳದ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಕೋವಿಡ್–19 ನಿಯಮಾವಳಿಗಳನ್ನು ಪಾಲನೆ ಮಾಡಿ. ಸಾಧ್ಯವಾಗದಿದ್ದರೆ ಭಾರತ ಐಕ್ಯತಾ ಯಾತ್ರೆ ರದ್ದುಗೊಳಿಸಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಯಾತ್ರೆಯಲ್ಲಿ ಕೋವಿಡ್ ತಡೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ಪಾಲನೆಯಾಗದಿದ್ದರೇ ಯಾತ್ರೆಯನ್ನು ನಿಲ್ಲಿಸುವುದು ಸೂಕ್ತ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ವಿಚಾರವನ್ನು ತಲೆಯಲ್ಲಿಟ್ಟುಕೊಳ್ಳಿ ಎಂದು ಪತ್ರದಲ್ಲಿ ಸೂಚಿಸಿದ್ದಾರೆಂದು ಎಂದು ವರದಿಯಾಗಿದೆ.