ಮಕ್ಕಳ ಶಿಕ್ಷಣಕ್ಕಾಗಿ ಪ್ರತಿದಿನ 130 ಕಿ.ಮೀ. ಪ್ರಯಾಣ ಮಾಡುವ ಶಿಕ್ಷಕ ಮಂಜುನಾಥ್

ಜ್ಯೋತಿ ಶಾಂತರಾಜು

ಶಿಕ್ಷಕ ವೃತ್ತಿ ಜಗತ್ತಿನಲ್ಲಿಯೇ ಶ್ರೇಷ್ಠ ವೃತ್ತಿ. ಗುರುವಿಗೆ ಶಾಲೆಯೇ ದೊಡ್ಡ ಪ್ರಪಂಚ. ತನಗಾಗಿ ತನ್ನವರಿಗಾಗಿ ಹಣ, ಆಸ್ತಿ ಮಾಡಬೇಕೆಂಬ ಯಾವುದೇ ಸ್ವಾರ್ಥಪರವಿಲ್ಲದ ನಿಸ್ವಾರ್ಥ ಜೀವ ಗುರು. ಮಕ್ಕಳಿಗೆ ಆಟಪಾಠ ಹೇಳುತ್ತ ಇಡೀ ದಿನ ಅವರೊಂದಿಗೆ ಒಡನಾಡುತ್ತ ಇಡೀ ಜನ್ಮ ಅವರಿಗಾಗಿ ಬದುಕಿಬಿಡುತ್ತಾರೆ. ಗುರುವೆಂದರೆ ಹೀಗೆ ಅಲ್ಲವೇ… ಶಾಲೆಯ ಮಕ್ಕಳೆಲ್ಲ ಅವರ ಮಕ್ಕಳಂತಯೇ. ಕೆಲವೊಮ್ಮೆ ಆ ಮಕ್ಕಳಿಗಾಗಿ ಎಂತಹ ತ್ಯಾಗಕ್ಕಾದರೂ ಸಿದ್ಧವಾಗಿಬಿಡುತ್ತಾರೆ. ಏನೇ ಅಡತಡೆಗಳಿದ್ದರೂ ಮುದ್ದು ಮಕ್ಕಳ ನಗುಮುಖ ನೋಡಿ ಎಲ್ಲವನ್ನೂ ಎದುರಿಸುತ್ತಾರೆ. ಅಂತಹ ಶಿಕ್ಷಕರೊಬ್ಬರ ಜೀವನಗಾಥೆ ನಿಮ್ಮ ಓದಿಗಾಗಿ…..

ಇವರ ಹೆಸರು ಮಂಜುನಾಥ್. ಮಕ್ಕಳು ಎಷ್ಟೇ ಇರಲಿ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಬಾವಿಕೆರೆ ಗ್ರಾಮದಿಂದ ಮೂರು ಕಿ.ಮೀ. ಬೈಕಿನಲ್ಲಿ ಅಂಕೋಲಕ್ಕೆ ಬಂದು ಅಂಗಡಿಯೊಂದರ ಬಳಿ ಬೈಕ್ ನಿಲ್ಲಿಸಿ ಅಲ್ಲಿಂದ ಅರಬೈಲ್ ಗೆ ಐವತ್ತೈದು ಕಿ.ಮೀ. ಬಸ್ ಹತ್ತಿಕೊಂಡು ಪ್ರಯಾಣ ಮಾಡಿ, ಅಲ್ಲಿಂದ ಇನ್ನೊಂದು ಬೈಕ್ ತೆಗೆದುಕೊಂಡು ಏಳು ಕಿ.ಮೀ. ಕೆಳಾಸೆ ಗ್ರಾಮದಲ್ಲಿರುವ ಶಾಲೆಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಾರೆ. ಈ ಶಾಲೆಯಲ್ಲಿರುವ ಆರು ಮಕ್ಕಳಿಗಾಗಿ ಪ್ರತಿದಿನ ಒಟ್ಟು ನೂರಾಮೂವತ್ತು ಕಿಲೋಮೀಟರ್ ಪ್ರಯಾಣ ಮಾಡುತ್ತಾರೆ. ಇವರ ವೃತ್ತಿಬದ್ಧತೆಗಾಗಿ ಮಕ್ಕಳ ಆಶೀರ್ವಾದದಿಂದ 2017ರಲ್ಲಿ ತಾಲ್ಲೂಕು ಮಟ್ಟದಲ್ಲಿ “ಉತ್ತಮ ಶಿಕ್ಷಕ” ಎಂಬ ಪ್ರಶಸ್ತಿ ಇವರನ್ನು ಅರಸಿ ಬಂದಿದೆ.

‘ನನ್ನ ತಂದೆ ತಿಮ್ಮಣ್ಣ, ತಾಯಿ ತಿಮ್ಮಕ್ಕ ಅವರಿಗೆ ಒಟ್ಟು ಆರು ಮಕ್ಕಳು. ಎರಡು ಗಂಡು, ನಾಲ್ಕು ಹೆಣ್ಣು ಮಕ್ಕಳು. ನಾನು ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ನಮ್ಮದು ಅಂತ ಜಮೀನು ಏನೂ ಇರಲಿಲ್ಲ. ಬಡತನ ಬೆನ್ನಿಗಂಟಿತ್ತು. ತಂದೆ-ತಾಯಿ ಬೇರೆಯವರ ಗದ್ದೆಯಲ್ಲಿ ಕೂಲಿ ಮಾಡಿ ನಮ್ಮನ್ನು ಅಷ್ಟೂ ಜನರನ್ನು ಸಾಕಿದರು. ಆ ನಂತರದಲ್ಲಿ ನಾವು ಬೇರೆಯವರ ಬಟ್ಟೆಗಳನ್ನು ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದೆವು. ಕಾಲಿಗೆ ಚಪ್ಪಲಿ ಸಹ ಇರಲಿಲ್ಲ. ತಾಯಿ-ತಂದೆ ಕಷ್ಟಪಟ್ಟು ಓದಿಸಿದರು. ಈಗ ನಮ್ಮ ಹಿರಿಯಕ್ಕ ಮನೆಯಲ್ಲಿದ್ದಾಳೆ, ಉಳಿದ ಐವರೂ ಶಿಕ್ಷಕ ವೃತ್ತಿಯಲ್ಲಿದ್ದೇವೆ. ನಾನು ಬಾವಿಕೆರೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಅಂಕೋಲದಲ್ಲಿ ಪಿ.ಯು.ಸಿ. ಮುಗಿಸಿ, ಅಲ್ಲಿಯೇ Tch ಮಾಡಿದೆ. ಜೊತೆಗೆ ಬಿ.ಎ. ಪದವಿ ಮುಗಿಸುತ್ತಿದ್ದಂತೆಯೇ ಶಿರಸಿಯ ಹತ್ತಿರ ಉಮ್ಮಚಗಿಯಿಂದ ಏಳು ಕಿ.ಮೀ. ದೂರದ ಹಳ್ಳಿಯ ಶಾಲೆಯೊಂದರಲ್ಲಿ ಕೆಲಸ ಸಿಕ್ಕಿತು. ಭರತನಹಳ್ಳಿ ಯಲ್ಲಾಪುರ ತಾ. ಎಂಬಲ್ಲಿ ಇಪ್ಪತ್ತೊಂದು ವರ್ಷ ಪಾಠ ಮಾಡಿದ್ದೇನೆ. ಅಲ್ಲಿಯೂ ಕೂಡ ಶಾಲೆ ಮುಗಿದ ನಂತರ ನನ್ನ ರೂಮಿನಲ್ಲಿ ಜಾಗ ಸಾಲುವುದಿಲ್ಲವೆಂದು ಶಾಲೆಯ ಆಡಳಿತ ಮಂಡಳಿಯವರ ಒಪ್ಪಿಗೆಯ ಮೇರೆಗೆ ಶಾಲೆಯ ಎರಡು ಕ್ಲಾಸ್ ರೂಮುಗಳಲ್ಲಿ ಅಲ್ಲಿನ ಸ್ಥಳೀಯ ಮಕ್ಕಳಿಗೆ ಸಂಜೆ 6:30 ರಿಂದ ರಾತ್ರಿ 8 ಗಂಟೆಯವರೆಗೆ ಸುಮಾರು ಇಪ್ಪತ್ತು ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದೆ. ಶಾಲೆಯ ಮುಖ್ಯ ಕೆಲಸಗಳನ್ನು ಶಾಲೆಗೆ ದತ್ತು ಹಣ ಸಂಗ್ರಹ ಮಾಡಿಕೊಡುವುದು, ಆ ಹಣದಿಂದ ಶಾಲೆಯ ವಾರ್ಷಿಕೋತ್ಸವ ಮಾಡುವುದು, ಮಕ್ಕಳಿಗೆ ಬಹುಮಾನಕೊಡುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತ ಬಂದೆ. ಎಲ್ಲಾ ಪೋಷಕರು, ಮಕ್ಕಳು ನನ್ನ ಕೆಲಸ ಮೆಚ್ಚಿಕೊಂಡಿದ್ದಾರೆ’ ಎಂದು ಹೆಮ್ಮೆಪಡುತ್ತಾರೆ. ನನ್ನ ಸೇವೆಯನ್ನು ಗುರುತಿಸಿ 2017 – 2018 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ “ತಾಲೂಕು ಉತ್ತಮ ಶಿಕ್ಷಕ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಇದನ್ನು ಓದಿ: ನದಿ, ಜಲಪಾತಗಳಲ್ಲಿ ಮುಳುಗಿದ ಶವ ತೆಗೆಯುವ ಬಾಬಾ ಅಣ್ಣು ಸಿದ್ದಿ ಅವರ ಸಾಹಸ ಗಾಥೆ

‘ಈಗ ಈ ಕೆಳಾಸೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ, ಶಿರಸಿ ತಾಲ್ಲೂಕು, (ಉತ್ತರ ಕನ್ನಡ) ನಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ.

ಇಲ್ಲಿನ ಮಕ್ಕಳ ಮುಖ್ಯ ಸಮಸ್ಯೆ ಭಾಷೆ. ಇವರ ಮಾತೃ ಭಾಷೆ ಕೊಂಕಣಿ. ಪಠ್ಯ ಪುಸ್ತಕದಲ್ಲಿನ ಪಾಠ ಕನ್ನಡ, ಇಂಗ್ಲಿಷ್ ಇರುವುದರಿಂದ ಮಕ್ಕಳು ಭಾಷೆಯ ಉಚ್ಛಾರಣೆಯ ಸಮಸ್ಯೆಯನ್ನು ಎದುರಿಸುತ್ತಾರೆ. ಅವರ ತಂದೆ ತಾಯಿಯರು ಕೂಡ ಶಿಕ್ಷಣದಿಂದ ದೂರ ಉಳಿದವರೇ. ಹಾಗಾಗಿ ಈ ಮಕ್ಕಳು ಚೆನ್ನಾಗಿ ಕಲಿಯಬೇಕು. ಅದಕ್ಕಾಗಿ ಮಕ್ಕಳನ್ನು ಉತ್ತೇಜನ ಮಾಡಲು ಪ್ರತೀದಿನ ಅರ್ಧ ಗಂಟೆ ಅವರಿಗೆ ಸ್ಫೂರ್ತಿ ತುಂಬಲು ಪ್ರೇರಣಾದಾಯಕ ಕಥೆಗಳನ್ನು, ಮಾತುಗಳನ್ನು ಹೇಳುತ್ತಿರುತ್ತೇನೆ. ಮಕ್ಕಳು ಮೊದಲೆಲ್ಲ ಉಚ್ಚಾರಣೆ ಮಾಡಲು ಕಷ್ಟಪಡುತ್ತಿದ್ದರು. ಒಂದೊಂದೇ ವಿಚಾರಗಳನ್ನು ಬಿಡಿಬಿಡಿಯಾಗಿ ಹೇಳಿದಾಗ ಅರ್ಥ ಮಾಡಿಕೊಳ್ಳುತ್ತಾರೆ. ಇಲ್ಲಿ ಒಂದರಿಂದ ಐದರವರೆಗೆ ತರಗತಿಗಳಿವೆ. ಆದರೆ ಒಂದು ಮತ್ತು ಎರಡನೇ ತರಗತಿಯಲ್ಲಿ ಮಕ್ಕಳಿಲ್ಲ. ಅಷ್ಟು ಚಿಕ್ಕ ವಯಸ್ಸಿನ ಮಕ್ಕಳು ಇಲ್ಲಿ ಯಾರೂ ಇಲ್ಲ. ಮೂರನೇ ತರಗತಿಯಲ್ಲಿ ಹೇಮ ನಾಗರಾಜ್ ಸಿದ್ದಿ, ನಾಲ್ಕನೇ ತರಗತಿಯಲ್ಲಿ ನಾಲ್ಕು ಮಕ್ಕಳು ಚೈತ್ರ ಪುಟ್ಟ ಸಿದ್ದಿ, ಪೃಥ್ವಿರಾಜ್ ಕಾಂತ ಸಿದ್ದಿ, ಸಂದೀಪ್ ನಾಗೇಶ್ ಸಿದ್ದಿ, ವೈಶಾಲಿ ಮಜುನಾಥ ಸಿದ್ದಿ, ಐದನೇ ತರಗತಿಯಲ್ಲಿ ನಂದಿತಾ ಗೋವಿಂದ ಸಿದ್ದಿ. ಒಟ್ಟು ಮಕ್ಕಳ ಸಂಖ್ಯೆ ಆರು. ಇವರಲ್ಲಿ ಒಂದು ವಿಶೇಷ ಚೇತನ ಮಗು ನಂದಿತಾ. ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಆ ಮಗುವಿಗೆ ವಿಶೇಷವಾಗಿ ಕೈ ಸನ್ನೆಗಳ ಮೂಲಕ ಪಾಠ ಹೇಳಿಕೊಡುತ್ತೇನೆ. ನಾನು ಬರೆದುಕೊಟ್ಟಿದ್ದನ್ನು ನೋಡಿಕೊಂಡು ಬರೆದುಕೊಂಡು ಬರುತ್ತಾಳೆ. ಏನೇ ಹೋಮ್ ವರ್ಕ್ ಕೊಟ್ಟರೂ ಮಾಡಿಕೊಂಡು ಬರುತ್ತಾಳೆ. ಹೇಳಿದ್ದೆಲ್ಲವನ್ನು ಮಾಡುತ್ತಾಳೆ. ಬರವಣಿಗೆ ತುಂಬಾ ಚೆನ್ನಾಗಿದೆ. ಬೇರೆ ಮಕ್ಕಳಿಗಿಂತಲೂ ಹೆಚ್ಚು ಚುರುಕು ಬುದ್ಧಿ ಜಾಣೆ. ರಾಷ್ಟ್ರಗೀತೆ ಹಾಡುವಾಗ ಅವಳ ಭಾಷೆಯಲ್ಲಿಯೇ ಆ…. ಆ… ಎಂಬ ಸ್ವರದಲ್ಲಿ ಎಲ್ಲಾ ಮಕ್ಕಳ ಜೊತೆಗೆ ಹಾಡುತ್ತಾಳೆ. ಅದನ್ನು ನೋಡುವುದೇ ಚೆಂದ. ಐದನೇ ತರಗತಿ ಮುಗಿದ ಮೇಲೆ ಕಾರವಾರ ಮತ್ತು ಮೈಸೂರಿನಲ್ಲಿ ವಿಶೇಷ ಮಕ್ಕಳ ಶಾಲೆ ಇದೆ. ಎರಡಲ್ಲೊಂದುಕಡೆ ಶಾಲೆಗೆ ಸೇರಿಸಲು ಅವರ ಪೋಷಕರ ಮನ ಒಲಿಸಿದ್ದೇನೆ’.

‘ಮಕ್ಕಳಿಗೆ ಬೇಸರವಾಗದಿರಲು ಹಾವು ಏಣಿ, ಕ್ಯಾರಂ, ಚೆಸ್, ರಿಂಗ್, ಸ್ಕಿಪಿಂಗ್ ಆಟಗಳನ್ನು ಆಡಿಸುತ್ತೇನೆ. ಆರು ಮಕ್ಕಳು ಇರುವುದರಿಂದ ಗುಂಪು ಆಟಗಳನ್ನು ಆಡಿಸುವುದು ಕಷ್ಟ. ಅದರಲ್ಲೂ ಒಮ್ಮೊಮ್ಮೆ ವಾರಕ್ಕೆ ಒಂದೆರಡು ಮಕ್ಕಳು ಶಾಲೆ ತಪ್ಪಿಸಿಕೊಳ್ಳುತ್ತಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಬಿಟ್ಟು ನಂತರ ನೀವು ಹೋಗಿ ಎಂದು ಪಾಲಕರ ಮೀಟಿಂಗಿನಲ್ಲಿ ತಿಳಿಸಿದ್ದೇನೆ. ಕೊರೊನಾ ಸಂದರ್ಭದಲ್ಲಿ ಸಮಾಜಸೇವಕಿ ರಾಜೇಶ್ವರಿ ಮತ್ತು ವಾಸುದೇವ್ ಸರ್ ರವರು ಶಾಲೆಗೆ ಡೆಸ್ಕ್, ಬೆಂಚ್, ಟಿವಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಮಕ್ಕಳಿಗೆ ಅನುಕೂಲವಾಗಲಿ ಅಂತ ಟಿವಿಯಲ್ಲಿಯೂ ಚಿತ್ರ ತೋರಿಸಿ ಪಾಠಮಾಡುತ್ತೇನೆ’.

 

‘ನಾನು ಮೊದಲು ಇಲ್ಲಿಗೆ ಬಂದಾಗ ಹದಿಮೂರು ಮಕ್ಕಳಿದ್ದರು. ಐದು ಮಕ್ಕಳು ಐದನೇ ತರಗತಿ ಉತ್ತೀರ್ಣವಾಗಿ ಮುಂದಿನ ತರಗತಿಗೆ ಹೋಗಿದ್ದಾರೆ. ಎರಡು ಮಕ್ಕಳು ವಲಸೆ ಹೋಗಿದ್ದಾರೆ. ನನಗೆ ಕಷ್ಟವಾದರೂ ಅಡ್ಡಿ ಇಲ್ಲ ಎಂದು ಮನೆಯಿಂದ ಊಟ ತೆಗೆದುಕೊಂಡು ಬರುತ್ತೇನೆ. ಮೊದಲು ಅರಬೈಲ್ ಗೆ ರಿಕ್ಷಾ ಹಿಡಿದುಕೊಂಡು ಹೋಗುತ್ತಿದ್ದೆ. ಈಗ ತಿಂಗಳ ಹಿಂದೆ ಬೈಕ್ ಒಂದನ್ನು ತೆಗೆದುಕೊಂಡಿದ್ದೇನೆ. ಶಾಲೆ ಬಿಟ್ಟ ಮೇಲೆ 4:45ಕ್ಕೆ ಹೋದರೆ ಕೆಲವೊಮ್ಮೆ ಬಸ್ ರಶ್ ಇದ್ದು ನಿಲ್ಲಿಸುವುದಿಲ್ಲ. ನಂತರ ಬರುವ ಬಸ್ಸಿಗೆ ಕಾದಿದ್ದು ಹೋರಡಬೇಕು’ ಎಂದರು.

ಇದನ್ನು ಓದಿ: ದುಡಿಮೆ ಮಾಡುವ ಹಂಬಲವಿದ್ದರೂ ಚೈತನ್ಯ ತುಂಬವವರು ಯಾರು..?

ಏನೇ ತೊಂದರೆಯಿದ್ದರೂ ಇವರು ತಮ್ಮ ಬದ್ಧತೆ ಮತ್ತು ಶಿಸ್ತನ್ನು ಬಿಟ್ಟಿಲ್ಲ. ಇಂತಹ ಶಿಕ್ಷಕರು ನಮ್ಮ ಸಮಾಜದ ಬಹುದೊಡ್ಡ ಆಸ್ತಿ ಮತ್ತು ನಮ್ಮೆಲ್ಲರ ಹೆಮ್ಮೆ. ಇಂಥವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ. ಇಲ್ಲಿನ ಮಕ್ಕಳ ಪಾಲಕರಂತೂ ಓದಿಲ್ಲ. ಈ ಮಕ್ಕಳನ್ನಾದರೂ ಶೈಕ್ಷಣಿಕವಾಗಿ ಮುಂದೆ ತರಬೇಕು. ಇವರಿಂದ ಏನಾದರೂ ಸಾಧನೆ ಮಾಡಿಸಬೇಕು. ಅಷ್ಟಾಗದಿದ್ದರೂ ಕನಿಷ್ಠ ಅವರು ಗೌರವಯುತವಾಗಿ ಜೀವನ ಮಾಡುವಷ್ಟಾದರೂ ಶಿಕ್ಷಣದಲ್ಲಿ ಮುಂದೆ ಬರಬೇಕು ಎಂಬ ಕನಸನ್ನು ಹೊತ್ತಿದ್ದಾರೆ ನಲವತ್ತಾರು ವರ್ಷದ ಮಂಜುನಾಥ್ ಸರ್. ಇವರ ಕನಸು ನನಸಾಗುವ ಹಾದಿಯಲ್ಲಿ ಯಾವುದೇ ಸಮಸ್ಯೆ ಬಾರದಿರಲಿ ಎಂಬುದು ದೇವರಲ್ಲಿ ನಮ್ಮ ಬೇಡಿಕೆ. ಇವರ ನಿಸ್ವಾರ್ಥ ಸಾರ್ಥಕ ವೃತ್ತಿಪರತೆಗೆ ನಮ್ಮದೊಂದು ಗೌರವದ ನಮಸ್ಕಾರ.

Donate Janashakthi Media

Leave a Reply

Your email address will not be published. Required fields are marked *