ಫುಟ್ಬಾಲ್‌ ವಿಶ್ವಕಪ್‌: ಅರ್ಜೆಂಟೈನಾ-ಫ್ರಾನ್ಸ್‌ ನಡುವೆ ಕೊನೆ ಕಾದಾಟ-ಯಾರ ಮುಡಿಗೇರಲಿದೆ ಜಯಮಾಲೆ?

ಕತಾರ್‌: ಕಾಲ್ಚೆಂಡಿನಾಟ ಫಿಫಾ ವಿಶ್ವಕಪ್-2022 ಅಂತಿಮ ಹಂತ ತಲುಪಿದ್ದು, ಇಂದು ಫೈನಲ್‌ ಪಂದ್ಯ ನಡಯಲಿದ್ದು, ಈ ಮೂಲಕ ಜಯಮಾಲೆಯನ್ನು ಯಾವ ದೇಶ ಮುಡಿಗೇರಿಕೊಳ್ಳಲಿದೆ ಎಂದು ಕಾದುನೋಡಬೇಕು.  ಅರಬ್ಬರ ನಾಡಲ್ಲಿ ಬಹಳ ಅದ್ದೂರಿಯಾಗಿ ಆರಂಭಗೊಂಡ ಕಾಲ್ಚೆಂಡಿನಾಟ ಪಂದ್ಯಾವಳಿಯು ಇಂದು ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಅರ್ಜೆಂಟೈನಾ ಹಾಗೂ ಫ್ರಾನ್ಸ್‌ ನಡುವೆ ನಡೆಯಲಿರುವ ಅಂತಿಮ ಹಣಾಹಣಿಯು ರಾತ್ರಿ 8.30ಕ್ಕೆ ಆರಂಭವಾಗಲಿದೆ. ಇದರೊಂದಿಗೆ ಫಿಫಾ ವಿಶ್ವಕಪ್-2022ಕ್ಕೆ ತೆರೆ ಬೀಳಲಿದೆ.

80,000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಕತಾರ್‌ ನ ಲುಸೈಲ್ ಮೈದಾನದಲ್ಲಿ ಕಾಲ್ಚೆಂಡಿನಾಟ ನಡೆಯಲಿದ್ದು, ಪಂದ್ಯಾವಳಿ ವೀಕ್ಷಿಸಲು ಅಭಿಮಾನಿಗಳ ಹರ್ಷೋದ್ಘಾರದೊಂದಿಗೆ ಜಮಾಯಿಸುತ್ತಿದ್ದಾರೆ. ಎರಡು ತಂಡಗಳು ಬಲಿಷ್ಠ ಹೋರಾಟದ ಮೂಲಕ ಸೋಲು ಗೆಲುವಿನ ಸಮ್ಮಿಲನದೊಂದಿಗೆ ಕೊನೆಯ ಹಂತಕ್ಕೆ ಬರಲಿದೆ. ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರನ್ನು ಹೊಂದಿದೆ.

ಪ್ರಶಸ್ತಿ ಗೆಲುವಿನ ಹೋರಾಟದಲ್ಲಿ ಲಿಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೈನಾ ತಂಡ ಹಾಗೂ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಅರ್ಜೆಂಟೈನಾ ದೇಶದ ದಿಗ್ಗಜ ಆಟಗಾರ ಲಿಯೊನೆಲ್ ಮೆಸ್ಸಿ ಮತ್ತು ಫ್ರಾನ್ಸ್‌ ದೇಶದ ಯಂಗ್ ಫೈಯರ್ ಕಿಲಿಯಾನ್ ಎಂಬಾಪೆ ನಡುವಿನ ಕಾದಾಟವಾಗಿ ಮಾರ್ಪಾಡಾಗುವ ಲಕ್ಷಣಗಳು ಕಂಡುಬಂದಿದೆ. ಒಂದು ಕಡೆ ಹಾಲಿ ಚಾಂಪಿಯನ್ ಫ್ರಾನ್ಸ್ ಆದರೆ, ಇನ್ನೊಂದೆಡೆ ಮಾಜಿ ಚಾಂಪಿಯನ್ ಅರ್ಜೆಂಟೈನಾ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.

ಮೆಸ್ಸಿ-ಎಂಬಾಪೆ ನಡುವೆ ಗೋಲ್ಡನ್ ಬೂಟ್ ಕಾದಾಟ

ಒಂದೆಡೆ ಫ್ರಾನ್ಸ್ ಮತ್ತು ಅರ್ಜೆಂಟೈನಾ ಪ್ರಶಸ್ತಿಗಾಗಿ ಕಾದಾಟ ನಡೆಸಿದರೆ, ಇನ್ನೊಂದೆಡೆ ಗೋಲ್ ವೀರರಾದ ಮೆಸ್ಸಿ ಮತ್ತು ಎಂಬಾಪೆ ನಡುವೆ ಗೋಲ್ಡನ್ ಬೂಟ್ ಪ್ರಶಸ್ತಿಗಾಗಿ (ಹೆಚ್ಚು ಗೋಲು ಬಾರಿಸಿದ ಆಟಗಾರನಿಗೆ ನೀಡುವ ಪ್ರಶಸ್ತಿ) ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಇಬ್ಬರೂ ತಲಾ 5 ಗೋಲು ಬಾರಿಸಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲಿ ಯಾರು ಹೆಚ್ಚು ಗೋಲು ಬಾರಿಸುತ್ತಾರೆ ಅವರ ಮಡಿಲಿಗೆ ಗೋಲ್ಡನ್ ಬೂಟ್ ಸೇರಲಿದೆ.

ಈ ಬಾರಿ ಫ್ರಾನ್ಸ್ ಗೆದ್ದರೆ, ಎಂಬಾಪೆಗೆ 2ನೇ ಪ್ರಶಸ್ತಿ ಆಗಲಿದ್ದು, ಅರ್ಜೆಂಟೈನಾ ಗೆದ್ದರೆ, ಮೆಸ್ಸಿಗೆ ಚೊಚ್ಚಲ ಫಿಫಾ ವಿಶ್ವಕಪ್ ಆಗಲಿದೆ. ಈಗಾಗಲೇ ತಂಡಗಳೆರಡೂ ತಲಾ 2 ಬಾರಿ ಪ್ರಶಸ್ತಿ ಗೆದ್ದರೂ ಅರ್ಜೆಂಟೈನಾ ಸ್ಟಾರ್ ಮೆಸ್ಸಿಗೆ ಈವರೆಗೆ ಫಿಫಾ ವಿಶ್ವಕಪ್ ಎತ್ತಿ ಹಿಡಿಯುವ ಅದೃಷ್ಟ ಸಿಕ್ಕಿರಲಿಲ್ಲ. ಇದೀಗ ಅವಕಾಶ ಕೂಡಿಬಂದಿದ್ದು, ಈ ಬಾರಿ ಪ್ರಶಸ್ತಿ ಜಯಿಸಿ ವೃತ್ತಿಜೀವನದ ಕೊನೆಯ ವಿಶ್ವಕಪ್ ಪಂದ್ಯವನ್ನು ಸ್ಮರಣೀಯವಾಗಿಸಲು ಮೆಸ್ಸಿ ಎದುರು ನೋಡುತ್ತಿದ್ದಾರೆ.

ಗೆದ್ದವರಿಗೆ 347 ಕೋಟಿ ರೂಪಾಯಿ ಬಹುಮಾನ

ಫಿಫಾ ವಿಶ್ವಕಪ್ ಪ್ರಶಸ್ತಿ ಮೊತ್ತ ದುಬಾರಿಯಾಗಿದ್ದು, ವಿಶ್ವಕಪ್ ಗೆದ್ದ ತಂಡಕ್ಕೆ 42 ಮಿಲಿಯನ್ ಡಾಲರ್ (347 ಕೋಟಿ ರೂ.) ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 30 ಮಿಲಿಯನ್ ಡಾಲರ್ (248 ಕೋಟಿ ರೂ.) ಬಹುಮಾನ ಮೊತ್ತ ಸಿಗಲಿದೆ. ಫೈನಲ್‌ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಆರಂಭವಾಗಲಿದ್ದು, ಫುಟ್‍ಬಾಲ್ ಪ್ರಿಯರು ಎರಡು ಶ್ರೇಷ್ಠ ತಂಡಗಳ ನಡುವಿನ ರೋಚಕ ಹಣಾಹಣಿ ನೋಡಲು ಈಗಾಗಲೇ ಸಜ್ಜಾಗುತ್ತಿದ್ದಾರೆ.

ವಿಶ್ವದಾದ್ಯಂತ ಕೋಟ್ಯಾಂತರ ಫುಟ್ಬಾಲ್ ಅಭಿಮಾನಿಗಳು ಫೈನಲ್‌ ಪಂದ್ಯಕ್ಕಾಗಿ ಕುತೂಹಲದಿಂದ ಕಾದು ಕುಳಿತಿದ್ದಾರೆ. ಅರ್ಜೆಂಟೈನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಮತ್ತು ಫ್ರಾನ್ಸ್ ತಂಡದ ಕಿಲಿಯನ್ ಎಂಬಾಪೆ ಕಾಲ್ಚಳಕವನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ಲಿಯೊನೆಲ್‌ ಮೆಸ್ಸಿ ವಿಶ್ವಕಪ್ ಕನಸು ನನಸಾಗಲಿದೆಯೇ ಅಥವಾ ಹಾಲಿ ಚಾಂಪಿಯನ್ ಫ್ರಾನ್ಸ್ ಸತತ 2ನೇ ಬಾರಿ ಗೆಲುವು ಸಾಧಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ. ಹಲವು ನಿರೀಕ್ಷೆಗಳು ಮತ್ತು ಸಂಚಲನಗಳ ನಂತರ ಅಂತಿಮವಾಗಿ ಈ ಎರಡು ತಂಡಗಳು ಸೆಣಸಾಡಲಿವೆ.

ಅರ್ಜೆಂಟೈನಾ ವಿರುದ್ಧ ಫ್ರಾನ್ಸ್

ಅರ್ಜೆಂಟೈನಾ ಮತ್ತು ಫ್ರಾನ್ಸ್ ತಂಡಗಳು ಎರಡು ತಂಡಗಳು ಇಲ್ಲಿಯವರೆಗೆ ಫಿಫಾ ವಿಶ್ವಕಪ್‌ ನಲ್ಲಿ ಮೂರು ಬಾರಿ ಸೆಣಸಿದೆ. ಅರ್ಜೆಂಟೈನಾ ಎರಡು ಗೆಲುವುಗಳನ್ನು ಪಡೆದಿದೆ. 12 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅರ್ಜೆಂಟೈನಾ ಆರು ಪಂದ್ಯಗಳನ್ನು ಗೆದ್ದಿದೆ. ಫ್ರಾನ್ಸ್ ಮೂರರಲ್ಲಿ ಗೆದ್ದರೆ, ಉಳಿದ ಮೂರು ಡ್ರಾದಲ್ಲಿ ಕೊನೆಗೊಂಡಿತು.

ಅರ್ಜೆಂಟೈನಾ 1930 ರಲ್ಲಿ ಒಮ್ಮೆ 1-0 ಮತ್ತು 1978 ರಲ್ಲಿ 2-1 ರಲ್ಲಿ ಫ್ರಾನ್ಸ್ ಅನ್ನು ಸೋಲಿಸಿತು. ಆದರೆ 2018ರ ವಿಶ್ವಕಪ್‌ನಲ್ಲಿ ಕೊನೆಯ ಬಾರಿಗೆ ಈ ಎರಡು ತಂಡಗಳು ಮುಖಾಮುಖಿಯಾದಾಗ ಫ್ರಾನ್ಸ್ ಅರ್ಜೆಂಟೈನಾವನ್ನು 4-3 ಅಂತರದಿಂದ ಸೋಲಿಸಿತ್ತು. ಇದು ಫೈನಲ್‌ಗೂ ಮುನ್ನ ಫ್ರಾನ್ಸ್‌ಗೆ ಕೊಂಚ ಸಮಾಧಾನ ತಂದಿದೆ.

Donate Janashakthi Media

Leave a Reply

Your email address will not be published. Required fields are marked *