ಟೆಹ್ರಾನ್: ತೀವ್ರ ಪ್ರಮಾಣದಲ್ಲಿ ಪ್ರತಿಭಟನೆಗೆ ಗುರಿಯಾಗಿರುವ ಹಿಜಾಬ್ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಇರಾನ್ ಸರ್ಕಾರ ಸಾಕಷ್ಟು ಕ್ರಮಗಳನ್ನು ಅನುಸರಿಸುತ್ತಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವುದನ್ನು ಮಂದಾಗಿದೆ. ಇದೀಗ, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಸಂದೇಶ ನೀಡಿದ ಇರಾನಿ ನಟಿ ತರನೆಹ್ ಅಲಿದೋಸ್ತಿ ಅವರನ್ನು ಬಂಧಿಸಲಾಗಿದೆ.
ಎಂಟು ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತೆ ನಟಿ ತರನೆಹ್ ಅಲಿದೋಸ್ತಿ ಡಿಸೆಂಬರ್ 8ರಂದು ಸಂದೇಶವೊಂದನ್ನು ಹಂಚಿಕೊಂಡಿದ್ದರು. `ನೀವು ಮೌನವಾಗಿದ್ದೀರಿ ಅಂದರೆ, ಎದುರಾಳಿಯ ದಬ್ಬಾಳಿಕೆಯನ್ನು ಬೆಂಬಲಿಸಿದಂತೆ. ಈ ರಕ್ತಪಾತವನ್ನು ನೋಡುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದೇ ಇರೋದು ಮಾನವೀಯತೆಗೆ ಮಾಡಿದ ಅಪಮಾನ’ ಎಂದು ಬರೆದಿದ್ದರು. ಇದಲ್ಲದೆ ಪ್ರತಿಭಟನಾಕಾರರಿಗೆ ಬೆಂಬಲವಾಗಿ ಭಿತ್ತಿಪತ್ರವನ್ನು ಹಿಡಿದು ಫೋಟೋವೊಂದನ್ನು ಹಂಚಿಕೊಂಡಿದ್ದರು.
ಇರಾನಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳು ನಟಿ ತರನೆಹ್ ಅಲಿದೋಸ್ತಿ ಅವರನ್ನು ಬಂಧಿಸಿದ್ದಾರೆ. ಇರಾನಿನಲ್ಲಿ ಮರಣದಂಡನೆಗೆ ಗುರಿಯಾದ ಮೊಹ್ಸೆನ್ ಶೇಕರಿ ಎಂಬಾತನ ಪರವಾಗಿ ಅವರು ಬರಹವನ್ನು ಬರೆದಿದ್ದರು ಮತ್ತು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದರು. ಇದು ಆಡಳಿತಕ್ಕೆ ವಿರೋಧವಾದ ನಡೆಯಾಗಿದ್ದು ಅದಕ್ಕಾಗಿ ನಟಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ತರನೆಹ್ ಅಲಿದೋಸ್ತಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ಗುರುತಿಸಿಕೊಂಡು ಖ್ಯಾತಿ ಪಡೆದವರು. 2016ರಲ್ಲಿ ಆಸ್ಕರ್ ಪ್ರಶಸ್ತಿ ಪಡೆದ `ದಿ ಸೇಲ್ಸ್ಮ್ಯಾನ್’ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ `ಲೀಲಾ ಬ್ರದರ್ಸ್’ ಚಿತ್ರದಲ್ಲಿ ನಟಿಸಿದ್ದಾರೆ. ಬ್ಯೂಟಿಫುಲ್ ಸಿಟಿ ಮತ್ತು ಅಬೌಟ್ ಎಲಿ ಸಿನಿಮಾದಲ್ಲೂ ಅಲಿದೋಸ್ತಿ ನಟಿಸಿದ್ದಾರೆ. ಇರಾನ್ ಸಿನಿಮಾರಂಗದಲ್ಲಿನ ಮೀಟೂ ಘಟನೆಯನ್ನು ಬೆಳಕಿಗೆ ತಂದಿದ್ದರು.
ಕೆಲದಿನಗಳ ಹಿಂದೆ ಪ್ರತಿಭಟನಾಕಾರರನ್ನು ಬೆಂಬಲಿಸಿದ್ದಕ್ಕಾಗಿ ಹೆಂಗಮೆಹ್ ಘಜಿಯಾನಿ ಮತ್ತು ಕಟಯೌನ್ ರಿಯಾಹಿ ಎಂಬ ನಟಿಯರನ್ನೂ ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು. ಈಗ ಆಸ್ಕರ ಪ್ರಶಸ್ತಿ ವಿಜೇತೆ ತರನೆಹ್ ಅಲಿದೋಸ್ತಿ ಎಂಬವವರನ್ನು ಬಂಧಿಸಿದೆ.
ಇರಾನ್ ನಲ್ಲಿ ಹಿಜಾಬ್ ವಿರೋಧಿ ಆಂದೋಲನ ತೀವ್ರ ಸ್ವರೂಪ ಪಡೆದುಕೊಂಡಿದ್ದು, 22 ವರ್ಷದ ಯುವತಿ ಮಹ್ಸಾ ಅಮೀನಿಯ ಸಾವಿನ ಬಳಿಕ. ಪ್ರತಿಭಟನೆಯಿಂದಾಗಿ ಸಾವಿರಾರು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಹಿಂಸಾಚಾರದಿಂದ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಸ್ಕಾರ್ಫ್ ಧರಿಸಿಲ್ಲ ಎಂದು ಆರೋಪಿಸಿ ಮಹ್ಸಾ ಅಮಿನಿ ‘ನೈತಿಕತೆ ಪೊಲೀಸ್ಗಿರಿ’ಯಿಂದ ಬಂಧಿಸಲ್ಪಟ್ಟು ಸೆಪ್ಟಂಬರ್ 16ರಂದು ಸಾವಿಗೀಡಾದರು.