ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸದ ವೆಚ್ಚದ ವಿವರ ಬಹಿರಂಗ

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರವು ವ್ಯಯಿಸಿದ ವೆಚ್ಚದ ವಿವರಗಳನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ವರದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ವಿದೇಶಗಳಿಗೆ ಭೇಟಿ ನೀಡಿದ್ದು, ಭಾರತದ ಜೊತೆಗೆ ಇತರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಲು, ಭಾರತದ ದೃಷ್ಟಿಕೋನವನ್ನು ಅವರ ಮುಂದಿಡಲು ಮತ್ತು ಜಾಗತಿಕ ವಿಷಯಗಳ ಕುರಿತ ಕಾರ್ಯಸೂಚಿಯನ್ನು ರೂಪಿಸಲು ಅನುವು ಮಾಡಿಕೊಟ್ಟಿದೆ ಎಂದು ಸರ್ಕಾರ ವರದಿಯಲ್ಲಿ ತಿಳಿಸಿದೆ.

ಸಿಪಿಐ(ಎಂ) ಸಂಸದ ಎಳಮರಮ್‌ ಕರೀಂ ಅವರು ರಾಜ್ಯಸಭೆಯಲ್ಲಿ ಪ್ರಧಾನಿಯವರ ವಿದೇಶಿ ಭೇಟಿಗಳ ವೆಚ್ಚದ ವಿವರಗಳನ್ನು ಬಹಿರಂಗಗೊಳಿಸಬೇಕೆಂದು ಪ್ರಶ್ನಿಸಿದ್ದರು. ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಉತ್ತರ ನೀಡಿ, ಪ್ರಧಾನಿಗಳ ವಿದೇಶ ಪ್ರವಾಸಗಳ ಉದ್ದೇಶವು ವಿದೇಶಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸುವುದು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವುದಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಜಿ20 ಶೃಂಗಸಭೆ ನಡೆದಿತ್ತು. ಬಾಲಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಮೋದಿ ಅವರ ಈ ಪ್ರವಾಸಕ್ಕೆ ಕೇಂದ್ರ ಸರ್ಕಾರ 32,09,760 ರೂಪಾಯಿ ಖರ್ಚು ಮಾಡಿದೆ ಎಂದು ಮರಳೀಧರನ್ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ವಿದೇಶಿ ಭೇಟಿಯ ಖರ್ಚು

  1. ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಇತ್ತೀಚಿನ ಇಂಡೋನೇಷ್ಯಾ ಭೇಟಿಯ ವೆಚ್ಚ 32,09,760 ರೂಪಾಯಿಗಳು.
  2. ಸೆಪ್ಟೆಂಬರ್ 26 ಮತ್ತು 28 ರ ನಡುವೆ ಪ್ರಧಾನಿಯವರ ಜಪಾನ್ ಭೇಟಿಗೆ 23,86,536 ರೂಪಾಯಿ ವೆಚ್ಚ
  3. ಈ ವರ್ಷದ ಆರಂಭದಲ್ಲಿ ಪ್ರಧಾನಿ ಮೋದಿಯವರ ಯುರೋಪ್ ಭೇಟಿಯ ವೆಚ್ಚ 2,15,61,304 ರೂಪಾಯಿಗಳು.
  4. 2019 ರ ಸೆಪ್ಟೆಂಬರ್ 21 ಮತ್ತು 28 ರ ನಡುವೆ ಪ್ರಧಾನಿಯವರ ಯುಎಸ್ ಭೇಟಿಗೆ 23,27,09,000 ರೂಪಾಯಿ ವೆಚ್ಚವಾಗಿದೆ.

ಮಾರ್ಚ್ 2021 ರಲ್ಲಿ ಬಾಂಗ್ಲಾದೇಶ ಭೇಟಿಗಳು, 2021 ರ ಯುನೈಟೆಡ್‌ ಸ್ಟೇಟ್ಸ್‌ ಭೇಟಿ ಮತ್ತು 2021ರಲ್ಲಿ ಇಟಲಿ ಮತ್ತು ಯುಕೆ ಭೇಟಿಗಳ ವೆಚ್ಚವನ್ನು ಗೃಹ ವ್ಯವಹಾರಗಳ ಸಚಿವಾಲಯ ಮುಖ್ಯಸ್ಥರಿಂದ ಭರಿಸಲಾಯಿತು ಎಂದು ಸಚಿವರು ಉತ್ತರಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ವಿದೇಶಿ ಪ್ರವಾಸವನ್ನು ಪ್ರತಿ ಭಾರಿ ಪ್ರಶ್ನಿಸಿದೆ. ಭಾರತದಲ್ಲಿ ಜನರ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಾಗದ ಬಿಜೆಪಿ ಸರ್ಕಾರ, ಮೋದಿಯನ್ನು ವಿದೇಶಿ ಪ್ರವಾಸಕ್ಕೆ ಕಳುಹಿಸುತ್ತಿದೆ. ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ.

Donate Janashakthi Media

Leave a Reply

Your email address will not be published. Required fields are marked *