ಸಂಪುಟ – 06, ಸಂಚಿಕೆ 32, ಆಗಸ್ಟ್ 12, 2012
ಬರ ಪರಿಸ್ಥಿತಿ ಎರಗುವಂತೆ ಕಾಣುತ್ತಿರುವಾಗ, ಆಹಾರ ಬೆಲೆಗಳ ಏರಿಕೆಯ ಬೆಂಕಿ ಹೊತ್ತಿರುವಾಗ, ತನ್ನ ಬಳಿ ಹೆಚ್ಚುವರಿ ಆಹಾರ ದಾಸ್ತಾನು ರಾಶಿ ಬಿದ್ದಿದ್ದರೂ, ಅದನ್ನು ಬಿಪಿಎಲ್ ದರಗಳಲ್ಲಿ ಜನತೆಗೆ ಕೊಡಲು ಯುಪಿಎ-2 ಸರಕಾರ ನಿರಾಕರಿಸುತ್ತಿರುವುದು ಜನತೆಯ ಜೀವನೋಪಾಯದ ಬಗ್ಗೆ ಅದು ಎಂತಹ ಉಪೇಕ್ಷೆ, ನಿರ್ಲಕ್ಷ್ಯವನ್ನು ಹೊಂದಿದೆ ಎಂಬುದಕ್ಕೆ ಇನ್ನೊಂದು ನಿದರ್ಶನ. ಇಂತಹ ಸಂದರ್ಭದಲ್ಲಿ, ಜನತೆಯ ಆಂದೋಲನದ ಬಲದಿಂದ ಮಾತ್ರವೇ ಯುಪಿಎ-2 ಸರಕಾರ ತನ್ನ ವಿನಾಶಕಾರಿ ಧೋರಣೆಗಳನ್ನು ಕೈಬಿಡುವಂತೆ ಮಾಡಲು ಸಾಧ್ಯ.
ಸಂಸತ್ತಿನ ಎದುರು ಜಂತರ್ ಮಂತರ್ನಲ್ಲಿ ಎಡಪಕ್ಷಗಳ ಕರೆಯ ಮೇರೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸುವ ಮೂಲಕ ಆಹಾರ ಭದ್ರತೆಯನ್ನು ಒದಗಿಸಬೇಕೆಂದು ಆಗ್ರಹಿಸಿ ಧರಣಿ ಯಶಸ್ವಿಯಾಗಿ ನಡೆಯುತ್ತಿದೆ. ಪಕ್ಕದಲ್ಲಿನ ಅಣ್ಣಾ ತಂಡದವರ ಉಪವಾಸ ಸತ್ಯಾಗ್ರಹಕ್ಕಿಂತ ಎಷ್ಟೋ ಹೆಚ್ಚು ಜನಗಳು ಈ ಧರಣಿಯಲ್ಲಿ ಭಾಗವಹಿಸುತ್ತಿದ್ದರೂ ಕಾಪರ್ೊರೇಟ್ ಮಾಧ್ಯಮಗಳು ಉದ್ದೇಶಪೂರ್ವಕವಾಗಿಯೇ ಕಂಡೂ ಕಾಣದಂತಿದ್ದುದು ಒಂದು ಕಡೆಯಾದರೆ, ಅದೇ ವೇಳೆಗೆ ಯುಪಿಎ-2 ಸರಕಾರ ಆಹಾರ ಭದ್ರತೆಯ ಮೇಲಿನ ‘ಅಧಿಕಾರಯುಕ್ತ ಮಂತ್ರಿಗಳ ಗುಂಪ’ನ್ನು (ಇಜಿಒಎಂ) ಕೈಬಿಟ್ಟಿದೆ ಎಂಬ ಪ್ರಕಟಣೆ ನೀಡಿದೆ. ಅದರ ಅಸಡ್ಡೆಗೆ, ಅಮಾನವೀಯ ಸಂವೇದನಾಹೀನತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ?
ಸುಮಾರಾಗಿ ಅದೇ ವೇಳೆಗೆ ಕೇಂದ್ರ ಕೃಷಿ ಮಂತ್ರಿಗಳ ಹೇಳಿಕೆಯೂ ಬಂದಿದೆ- ದೇಶ ಮತ್ತು ಜನತೆ ಈ ವರ್ಷ ಒಂದು ಬರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಬೇಕು ಎಂದು. ಈ ವರ್ಷ ಆಗಸ್ಟಿನಲ್ಲಿಯೂ ಮಳೆ ಪರಿಸ್ಥಿತಿ ಉತ್ತಮಗೊಳ್ಳುವ ನಿರೀಕ್ಷೆಯಿಲ್ಲ ಎಂದು ಅವರು ಹೇಳಿದ್ದಾರೆ. ಮಳೆಯ ವಿವರಗಳನ್ನು ಕೊಡುತ್ತಾ, ಪಂಜಾಬ್ ಮತ್ತು ಹರ್ಯಾಣಾದಂತಹ ಉನ್ನತ ಕೃಷಿ ಉತ್ಪಾದಕ ರಾಜ್ಯಗಳಲ್ಲಿ ಮಳೆಯ ಕೊರತೆ, ಅನುಕ್ರಮವಾಗಿ 68ಶೇ. ಮತ್ತು 70ಶೇ. ಎಂದು ಅವರು ಹೇಳಿದ್ದಾರೆ. ಅದೇ ರೀತಿ, ರಾಜಸ್ತಾನದಲ್ಲಿ 61. ಶೇ., ದಕ್ಷಿಣ ಕನರ್ಾಟಕದಲ್ಲಿ 47 ಶೇ., ಮಧ್ಯ ಮಹಾರಾಷ್ಟ್ರದಲ್ಲಿ 38 ಶೇ. ಮತ್ತು ಗುಜರಾತಿನ ಕಚ್ ಹಾಗೂ ಸೌರಾಷ್ಟ್ರ ಪ್ರದೇಶದಲ್ಲಿ 76 ಶೇ.
ಪರಿಸ್ಥಿತಿ ಸುಧಾರಿಸಲಿಕ್ಕಿಲ್ಲ ಎಂಬ ಅಧಿಕೃತ ಘೋಷಣೆ ಈಗಾಗಲೆ ಆವಶ್ಯಕ ಸರಕುಗಳ ಬೆಲೆಗಳ ಮೇಲೆ ಪರಿಮಾಣ ಬೀರಿದೆ. ಜುಲೈ ಕೊನೆಯ ವಾರದಲ್ಲಿ ಅದು ಗಗನಕ್ಕೇರಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಮುಂಬೈಯಲ್ಲಿ ಅಕ್ಕಿಯ ಸಗಟು ಬೆಲೆ 32 ರೂ.ಗೇರಿದೆ, ಅಂದರೆ 18.5ಶೇ. ಹೆಚ್ಚಳ ಕಂಡಿದೆ. ಅದೇ ರೀತಿ ಗೋದಿಯ ಬೆಲೆ 12.5ಶೇ.ದಷ್ಟು, ಉದ್ದಿನ ಬೇಳೆಯ ಬೆಲೆ 10.3 ಶೇ.ದಷ್ಟು, ಕಡ್ಲೆ ಬೇಳೆಯದ್ದು 13.8ಶೇ., ಸಕ್ಕರೆ ಸುಮಾರು 8ಶೇ. ಮತ್ತು ಆಲೂಗಡ್ಡೆಯದ್ದು 10ಶೇ.ದಷ್ಟು ಏರಿವೆ. ಅಡುಗೆ ಎಣ್ಣೆಗಳ ಬೆಲೆಗಳೂ ಏರುವ ಭೀತಿ ಇರುವುದರಿಂದ ಪರಿಸ್ಥಿತಿ ಇನ್ನಷ್ಟು ಕಠಿಣಗೊಳ್ಳಬಹುದು. ಭಾರತದಲ್ಲಿ ಬಳಕೆಯಾಗುವ ಖಾದ್ಯತೈಲಗಳಲ್ಲಿ ಸುಮಾರು 60ಶೇ.ವನ್ನು ಆಮದು ಮಾಡಬೇಕಾಗಿದೆ. ಅಂತರ್ರಾಷ್ಟ್ರೀಯ ಬೆಲೆಗಳು ಏರುತ್ತಿರುವುದರಿಂದ ಮತ್ತು ರೂಪಾಯಿ ಮೌಲ್ಯ ಇಳಿಯುತ್ತಿರುವುದರಿಂದ ಖಾದ್ಯ ತೈಲಗಳ ಆಮದು ಖಚರ್ು ವಿಪರೀತ ಹೆಚ್ಚಲಿದೆ.
ಜನತೆ ಹಸಿದಿದ್ದರೂ ಪರವಾಗಿಲ್ಲ..
ಇವೆಲ್ಲಾ ಆಗುತ್ತಿರುವುದು ಸರಕಾರದ ಬಳಿ ಹೆಚ್ಚುವರಿ ಆಹಾರ ದಾಸ್ತಾನು ರಾಶಿ ಬಿದ್ದಿರುವಾಗ. ರಾಜ್ಯ ಸರಕಾರಗಳು ಬಹಿರಂಗ ಮಾರುಕಟ್ಟೆ ಮಾರಾಟದ ಮೂಲಕ ಒದಗಿಸುವ ಒಂದು ಕೋಟಿ ಟನ್ ಗೋದಿಯನ್ನು ಎತ್ತಿಕೊಳ್ಳುತ್ತಿಲ್ಲ ಎಂದು ಕೇಂದ್ರ ಸರಕಾರ ದೂರುತ್ತಿದೆ. ಅತ್ತ ರಾಜ್ಯ ಸರಕಾರಗಳು ಈ ಆಹಾರಧಾನ್ಯಗಳನ್ನು ಬಹಿರಂಗ ಮಾರುಕಟ್ಟೆ ದರಗಳಲ್ಲಿ ಬೇಡ, ಬಿಪಿಎಲ್ ದರಗಳಲ್ಲಿ ಕೊಡಿ ಎಂದು ಕೇಳುತ್ತಿರುವುದು ಸರಿಯಾಗಿಯೇ ಇದೆ. ಆದರೆ ಕೇಂದ್ರ ಸರಕಾರ, ನಮ್ಮ ಜನತೆ ಹಸಿದಿದ್ದರೂ ಪರವಾಗಿಲ್ಲ, ಈ ಆಹಾರಧಾನ್ಯಗಳನ್ನು ಬಿಪಿಎಲ್ ದರಗಳಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡದೆ ಅವು ಕೊಳೆತು ಹೋಗ ಬಿಡಲೂ ಸಿದ್ಧವಿದೆ.
ಇಂತಹ ಸನ್ನಿವೇಶ, ಭವಿಷ್ಯದಲ್ಲಿ ಭಾರೀ ಬೆಲೆಗಳು ಸಿಗಬಹುದೆಂಬ ನಿರೀಕ್ಷೆಯಿಂದ ಆಹಾರಧಾನ್ಯಗಳು ಮತ್ತು ಇತರ ಆವಶ್ಯಕ ಸರಕುಗಳ ಕಳ್ಳ ದಾಸ್ತಾನು ಹೆಚ್ಚಲು ದಾರಿ ಮಾಡಿಕೊಡುತ್ತಿದೆ. ಇದರಿಂದಾಗಿ ಆವಶ್ಯಕ ಸರಕುಗಳ ಸಟ್ಟಾ ವ್ಯಾಪಾರದಲ್ಲಿಯೂ ತೇಜಿ ಬರುವಂತಾಗಿದೆ. ಸರಕು ವಿನಿಮಯ ಮಾಹಿತಿಗಳ ಪ್ರಕಾರ, ಏಪ್ರಿಲ್ನಿಂದ ಜೂನ್ 2012ರ ನಡುವೆ ಎಲ್ಲ ಕೃಷಿ ಸರಕುಗಳ ವ್ಯಾಪಾರದ ಮೌಲ್ಯ ರೂ.5,01,866.18 ಕೋಟಿಗಳ ಭಾರೀ ಮೊತ್ತವನ್ನು ತಲುಪಿದೆ. ಇಂತಹ ವಿಪರೀತ ಮಟ್ಟದ ಸಟ್ಟಾ ವ್ಯಾಪಾರ ಎಲ್ಲ ಆವಶ್ಯಕ ಸರಕುಗಳ ಬೆಲೆಗಳಲ್ಲಿ ಇನ್ನಷ್ಟು ಹೆಚ್ಚಳಕ್ಕೆ ದಾರಿ ಮಾಡಿಕೊಡಲಿದೆ. ಈ ರೀತಿಯ ಏರು ಬೆಲೆಗಳನ್ನು ಹತೋಟಿಗೆ ಒಳಪಡಿಸಬೇಕಾದರೆ ಸರಕಾರ ತಕ್ಷಣವೇ ಆವಶ್ಯಕ ಸರಕುಗಳ ರಫ್ತನ್ನು ನಿಲ್ಲಿಸಬೇಕು, ಮತ್ತು ಕೃಷಿ ಸರಕುಗಳಲ್ಲಿ ಭವಿಷ್ಯದ/ ವಾಯಿದಾ ವ್ಯಾಪಾರವನ್ನು ನಿಷೇಧಿಸಬೇಕು.
ದಿವ್ಯ ನಿರ್ಲಕ್ಷ್ಯ
ಸರಕಾರ ಇದನ್ನು ಮಾಡಲು ನಿರಾಕರಿಸುತ್ತಿದೆ ಎಂಬುದು ಜನತೆಯ ಜೀವನೋಪಾಯದ ಬಗ್ಗೆ ಅದು ಎಂತಹ ಉಪೇಕ್ಷೆ, ನಿರ್ಲಕ್ಷ್ಯವನ್ನು ಹೊಂದಿದೆ ಎಂಬುದಕ್ಕೆ ಇನ್ನೊಂದು ನಿದರ್ಶನ. ಆದ್ದರಿಂದ ನಮ್ಮೆಲ್ಲಾ ಜನತೆಗೆ ಸರಕಾರ ಆಹಾರ ಭದ್ರತೆ ಒದಗಿಸುವಂತೆ ಮಾಡಲು ಅದರ ಮೇಲೆ ಜನತೆಯ ಒತ್ತಡವನ್ನು ಹಾಕುವುದು ಅತ್ಯಂತ ಅನಿವಾರ್ಯವಾಗಿದೆ. ಎಡಪಕ್ಷಗಳು ಕರೆ ನೀಡಿರುವ ಐದು ದಿನಗಳ ಧರಣಿಯನ್ನು ಅನುಸರಿಸಿ, ಭವಿಷ್ಯದಲ್ಲಿ ಇನ್ನೂ ಶಕ್ತಿಯುತವಾದ, ಬಲಿಷ್ಟವಾದ ಆಂದೋಲನಗಳನ್ನು ನಡೆಸಬೇಕಾಗಿದೆ.
ಬರ ಪರಿಸ್ಥಿತಿ ಎರಗುವಂತೆ ಕಾಣುತ್ತಿರುವಾಗ, ಆಹಾರ ಬೆಲೆಗಳ ಏರಿಕೆಯ ಬೆಂಕಿ ಹೊತ್ತಿರುವಾಗ, ನಮ್ಮ ಜನಗಳ ಮೇಲಿನ ಹೊರೆಗಳು ತೀವ್ರವಾಗಿ ಹೆಚ್ಚುತ್ತವೆ ಎಂಬುದು ಸ್ಪಷ್ಟ. ಇಂತಹ ಸಂದರ್ಭದಲ್ಲಿ, ಜನತೆಯ ಆಂದೋಲನದ ಬಲದಿಂದ ಮಾತ್ರವೇ ಯುಪಿಎ-2 ಸರಕಾರ ತನ್ನ ವಿನಾಶಕಾರಿ ಧೋರಣೆಗಳನ್ನು ಕೈಬಿಡುವಂತೆ ಮಾಡಲು ಸಾಧ್ಯ. ನಮ್ಮ ಜನತೆಗೆ ಆಹಾರ ಭದ್ರತೆ, ದೇಶದ ಪ್ರತಿಯೊಂದು ಕುಟುಂಬಕ್ಕೆ(ಎಪಿಎಲ್ಗೂ , ಬಿಪಿಎಲ್ಗೂ) ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಗರಿಷ್ಟ 2ರೂ. ಕೆ.ಜಿ. ದರದಲ್ಲಿ 35 ಕೆ.ಜಿ. ಆಹಾರಧಾನ್ಯಗಳನ್ನು ಒದಗಿಸಿದರೆ ಮಾತ್ರ ಸಾಧ್ಯ.
0