ದೇಶದೊಳಗಿನ ಆತಂಕಕಾರಿ ಪ್ರವೃತ್ತಿಗಳನ್ನು ಸರಿಪಡಿಸದೆ ಜಿ-20 ಅಧ್ಯಕ್ಷತೆಯ ಘೋಷಿತ ಧ್ಯೇಯ ಈಡೇರದು – ಯೆಚುರಿ

ಜಿ-20ರ ಅಧ್ಯಕ್ಷತೆಯನ್ನು ವಹಿಸುವ ಸರದಿ ಈಗ ಭಾರತದ್ದಾಗಿದೆ.  ಪ್ರಧಾನ ಮಂತ್ರಿಗಳು   ಇದನ್ನು ಆಚರಿಸಲು “ಒಂದು ಭೂಮಿ- ಒಂದು ಕುಟುಂಬ- ಒಂದು ಭವಿಷ್ಯ” ಎಂಬ ವಿಷಯವಸ್ತುವಿನ ಮೇಲೆ ಒಂದು ಆಂತರಿಕ ರಾಜಕೀಯ ಅಭಿಯಾನವನ್ನು ಪ್ರಕಟಿಸಿದ್ದಾರೆ. ಈ ಸಂದರ್ಭದಲ್ಲಿ “ಭಾರತದ ಜಿ-20 ಅಧ್ಯಕ್ಷತೆ ಈ ಏಕತ್ವದ ಸಾರ್ವತ್ರಿಕ   ಪ್ರಜ್ಞೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ” ಎಂದು ಘೋಷಿಸಿದ್ದಾರೆ.

ಆದರೆ ಪ್ರಧಾನ ಮಂತ್ರಿಗಳ ಈ ಮಾತು ವಿಶ್ವಾಸಾರ್ಹ ಎನಿಸಬೇಕಾದರೆ,  ಇದು ಭಾರತದ ಸಂವಿಧಾನ ಘೋಷಿಸಿರುವಂತೆ  “ಜಾತಿ, ಧರ್ಮ ಅಥವಾ ಲಿಂಗದ ಬೇಧವಿಲ್ಲದೆ” ಎಲ್ಲರಿಗೂ ಸಮಾನತೆಯ ಆಧಾರದ ಮೇಲೆ ಒಂದು ಸಮಾಜವನ್ನು  ಮತ್ತು ರಾಜಕೀಯ ರಚನೆಯನ್ನು ರಚಿಸುವುದರ ಮೇಲೆ ನಿರ್ಣಾಯಕವಾಗಿ ಅವಲಂಬಿತವಾಗಿದೆ. ಅದು ಎಲ್ಲಾ ನಾಗರಿಕರಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯದ ವಿತರಣೆಯ ಮೇಲೆ ನಿಂತಿದೆ. ಆದರೆ ಭಾರತದೊಳಗೆ ಕಾಣುತ್ತಿರುವ ಪ್ರಸಕ್ತ ಕೋಮುವಾದಿ ಧ್ರುವೀಕರಣದ ಆತಂಕಕಾರಿ ಪ್ರವೃತ್ತಿಗಳನ್ನು ಸರಿಪಡಿಸದೆ ಈ ಗುರಿಯನ್ನು ಈಡೇರಿಸಲು ಸಾಧ್ಯವಿಲ್ಲ. ಆದ್ದರಿಂದ ಜಗತ್ತು ಭಾರತದ ಜಿ-20 ಅಧ್ಯಕ್ಷತೆಯ ಈ  ಉದ್ದೇಶಗಳಿಗೆ ಮನ್ನಣೆ ನೀಡಬೇಕಾದರೆ ಇಂತಹ ಸರಿಪಡಿಕೆ ಅಗತ್ಯ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.

ಅವರು ಭಾರತ ಜಿ-20ರ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಸಂದರ್ಭದಲ್ಲಿ ದೇಶದ  ವಿವಿಧ  ಸ್ಥಳಗಳಲ್ಲಿ 200 ಸಭೆಗಳನ್ನು ನಡೆಸುವ ಕೇಂದ್ರ ಸರಕಾರದ ಯೋಜನೆಗಳ ಕುರಿತು ತಿಳಿಸಲು ಕರೆದ  ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಧ್ಯಪ್ರವೇಶಿಸಿ ಮಾತಾಡುತ್ತಿದ್ದರು.

ಜಿ-20 ಅಧ್ಯಕ್ಷ ಸ್ಥಾನವು ಸರದಿ ಪ್ರಕಾರ ಸಿಗುವ  ಸ್ಥಾನವಾಗಿದೆ. ಜಿ-20  ರಲ್ಲಿರುವ ಪ್ರತಿಯೊಂದು ದೇಶವು ಅದರ ಸರದಿ ಬಂದಾಗ ತಂತಾನೇ ಇದರ ಅಧ್ಯಕ್ಷ ಸ್ಥಾನವನ್ನು ಪಡೆಯುತ್ತದೆ  ಎಂದು   ನೆನಪಿಸುವುದರೊಂದಿಗೇ,  ಯೆಚುರಿಯವರು ತಮ್ಮ ಭಾಷಣದಲ್ಲಿ, ಜಿ-20 ರಚನೆಗೊಂಡ ಸಂದರ್ಭವನ್ನು ಕೂಡ ನೆನಪಿಸಿದರು. ದಕ್ಷಿಣ ಏಷ್ಯಾದ ಆರ್ಥಿಕ ಬಿಕ್ಕಟ್ಟಿನ ನಂತರ 1999 ರಲ್ಲಿ ಇದರ ರಚನೆಯಾಯಿತು. ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ದಿಕ್ಕಿನಲ್ಲಿ ಸಾಗುವಾಗ  ಅದನ್ನು ಅನುಸರಿಸಿ ಅನಿವಾರ್ಯವಾಗಿ ಬರುವ  ಬಿಕ್ಕಟ್ಟಿನ ಹೊರೆಯನ್ನು ಹಂಚಿಕೊಳ್ಳಲು ಸಾಧ್ಯವಾಗುವಂತೆ  ಉದಯೋನ್ಮುಖ ಅರ್ಥವ್ಯವಸ್ಥೆಗಳನ್ನು ಸೆಳೆದುಕೊಳ್ಳಲು ಶ್ರೀಮಂತ ರಾಷ್ಟ್ರಗಳು ತಮ್ಮ ಜಿ-7ನ್ನು ಜಿ-20ಕ್ಕೆ ವಿಸ್ತರಿಸಿದವು.

ಮೊದಲಿಗೆ ಇದರ ಮಂತ್ರಿಮಟ್ಟದ ಸಮಾಲೋಚನೆಗಳು ನಡೆಯುತ್ತಿದ್ದವು. 2008 ರಲ್ಲಿ ಜಾಗತಿಕ ಹಣಕಾಸು ಕುಸಿತದ ನಂತರ ಆರಂಭಿಕ ಮಂತ್ರಿ ಮಟ್ಟದ ಸಮಾಲೋಚನೆಗಳನ್ನು ಸರ್ಕಾರಗಳ ಮುಖ್ಯಸ್ಥರುಗಳ ಶೃಂಗಸಭೆಗಳಾಗಿ ಪರಿವರ್ತಿಸಲಾಯಿತು. ಅಂದಿನಿಂದ, ಈ ಸರದಿ ಅಧ್ಯಕ್ಷತೆಯ ವಿಧಾನವನ್ನು ಅಂಗೀಕರಿಸಲಾಯಿತು. ಆದ್ದರಿಂದ ಜಿ-20ರ ಅಧ್ಯಕ್ಷತೆ ಸಿಗುವುದಕ್ಕೂ, ಸಂಬಂಧಪಟ್ಟ  ದೇಶದ  ಅರ್ಥವ್ಯವಸ್ಥೆ ಮತ್ತು  ಅಥವಾ ಸಾಮಾಜಿಕ-ರಾಜಕೀಯ ಪರಿಸ್ಥಿತಿಗೂ ಏನೇನೂ ಸಂಬಂಧವಿಲ್ಲ ಎಂಬ ಸಂಗತಿಯನ್ನು  ಕೂಡ ಯೆಚುರಿ ನೆನಪಿಸಿದರು.

ಗೌರವಾನ್ವಿತ ಪ್ರಧಾನ ಮಂತ್ರಿಗಳು ಭಾರತದ ಜಿ-20 ಅಧ್ಯಕ್ಷತೆ “ಒಂದು ಭೂಮಿ- ಕುಟುಂಬ- ಒಂದು ಭವಿಷ್ಯ” ಎಂಬ ಏಕತ್ವದ ಸಾರ್ವತ್ರಿಕ   ಪ್ರಜ್ಞೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ” ಎಂದು ಘೋಷಿಸಿದ್ದಾರೆ.

ಆದರೆ  ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಯೆಂದರೆ  ಏಕರೂಪತೆಯನ್ನು ಹೇರುವುದು ಎಂದರ್ಥವಲ್ಲ. ಅದು ಸಮಾನತೆ ಮತ್ತು ಘನತೆಯ ಆಧಾರದ ಮೇಲೆ ಎಲ್ಲಾ ವೈವಿಧ್ಯತೆಗಳನ್ನು ಪರಿಗಣಿಸುವ ಮೂಲಕ ಸಾಮಾಜಿಕ ಬಹುತ್ವಗಳನ್ನು ಆಚರಿಸುವ ಒಂದು ಜಾಗತಿಕ ಕುಟುಂಬಕ್ಕೆ ಕೊಡುವ ಮನ್ನಣೆಯಾಗಿದೆ. ಅಂತಹ ಒಂದು ಜಾಗತಿಕ ಕುಟುಂಬವು ಪ್ರತಿ ದೇಶದಲ್ಲಿ ಸ್ಥಾಪಿಸಲಾದ ಅಂತಹ ಸಮಾಜಗಳ ಮೇಲೆ ಆಧಾರಿತವಾಗಿದೆ.

ಅಂದರೆ ಅವರ ಈ ಘೋಷವಾಕ್ಯ ವಿಶ್ವಾಸಾರ್ಹವಾಗಬೇಕಾದರೆ,  ಅದು ಭಾರತದ ಸಂವಿಧಾನವು ಘೋಷಿಸಿರುವಂತೆ “ಜಾತಿ, ಧರ್ಮ ಅಥವಾ ಲಿಂಗದ ಭೇದವಿಲ್ಲದೆ” ಎಲ್ಲರಿಗೂ ಸಮಾನತೆಯ ಆಧಾರದ ಮೇಲೆ ಸಮಾಜ ಮತ್ತು ರಾಜಕೀಯ ಸಂರಚನೆಯನ್ನು ರಚಿಸುವುದರ ಮೇಲೆ ನಿರ್ಣಾಯಕವಾಗಿ ಅವಲಂಬಿತವಾಗಿದೆ. ಇದು ಎಲ್ಲಾ ನಾಗರಿಕರಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯದ ವಿತರಣೆಯನ್ನು ಆಧರಿಸಿದೆ ಎಂದು ಯೆಚುರಿಯವರು ಹೇಳಿದರು.

ಈಗ ದೇಶದಲ್ಲಿ ಕಾಣುತ್ತಿರುವ ದ್ವೇಷ, ಭಯೋತ್ಪಾದನೆ ಮತ್ತು ಹಿಂಸಾಚಾರದ ದುಷ್ಟ ಪ್ರಚಾರಗಳ ಮೇಲೆ ನಿಂತಿರುವ ಕೋಮು ಧ್ರುವೀಕರಣದ ಆತಂಕಕಾರಿ ಮಟ್ಟಗಳು ಪ್ರಧಾನಿಯವರ  ಈ ಘೋಷಣೆಯ ಅಡಿಪಾಯವನ್ನೇ ನಾಶಪಡಿಸುವಂತವುಗಳು. ನಮ್ಮ ಆರ್ಥಿಕ  ನಿಧಾನಗತಿಯು  ಆತಂಕಕಾರಿಯಾಗಿ ಬೆಳೆಯುತ್ತಿರುವ ನಿರುದ್ಯೋಗ ಮತ್ತು ಬಡತನದೊಂದಿಗೆ ಆಳಕ್ಕೆ ಕುಸಿಯುತ್ತಿದೆ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಅಂಚಿನಲ್ಲಿರುವ  ವಿಭಾಗಗಳ ವಿರುದ್ಧ ಸಾಮಾಜಿಕ ಅನ್ಯಾಯಗಳು ಹಲವು ಪಟ್ಟು ಹೆಚ್ಚಾಗುತ್ತಿವೆ. ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಸಾಂವಿಧಾನಿಕ ಖಾತರಿಗಳನ್ನು ಭಿನ್ನಾಭಿಪ್ರಾಯದ ಎಲ್ಲಾ ಅಭಿವ್ಯಕ್ತಿಗಳನ್ನು ‘ರಾಷ್ಟ್ರ-ವಿರೋಧಿ’ ಎಂದು ಪರಿಗಣಿಸುವ ಮೂಲಕ ತೀವ್ರವಾಗಿ ಮೊಟಕುಗೊಳಿಸಲಾಗಿದೆ.

ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿನ ಈ ಪ್ರಸಕ್ತ  ಆತಂಕಕಾರಿ ಪ್ರವೃತ್ತಿಗಳನ್ನು ಸರಿಪಡಿಸಲಾಗುತ್ತದೆಯೇ ಮತ್ತು ನಮ್ಮ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಸ್ವರೂಪವನ್ನು ನಿರೂಪಿಸುವ  ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ನಮ್ಮ ಸಾಂವಿಧಾನಿಕ ಅಡಿಪಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆಯೇ ಎಂಬುದರ ಮೇಲೆಯೇ  ಸರ್ಕಾರವು ಘೋಷಿಸಿದ ಧ್ಯೇಯದ ಈಡೇರಿಕೆ ನಿರ್ಧಾರವಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸೀತಾರಾಂ ಯೆಚುರಿಯವರು  ಭಾರತದ ಜಿ-20 ಅಧ್ಯಕ್ಷತೆಯ  ಘೋಷಿತ ಉದ್ದೇಶಗಳಿಗೆ ಜಗತ್ತು ಮನ್ನಣೆ ನೀಡಬೇಕಾದರೆ ಸರ್ಕಾರವು ಇವನ್ನು  ಸಾಕಾರಗೊಳಿಸಲು ಕೆಲಸ ಮಾಡಬೇಕು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *