ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ), ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕ್ಯಾಪಿಟಲ್ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಇದೀಗ ಸುಮಾರು ರೂ. 3400 ಕೋಟಿ ಮೊತ್ತದಷ್ಟು ಸಾಲ ಮರು ಪಾವತಿಯಾಗದೆ ಸಂಕಷ್ಟ ಎದುರಾಗಿದೆ. ಹಾಗಾಗಿ, ಸಾಲದ ಖಾತೆಗಳನ್ನು ಮಾರಾಟ ಮಾಡಲು ಎಲ್ಐಸಿ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಾಲ ವಸೂಲಿಗೆ ಮುಂದಾದರೂ ಸಹ ಕೇವಲ 782 ಕೋಟಿ ರೂ. ಮಾತ್ರ ಮರುಪಾವತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾಲದ ಖಾತೆಗಳನ್ನೇ ಮಾರಾಟ ಮಾಡಲು ಎಲ್ಐಸಿ ಮುಂದಾಗಿದೆ ಎನ್ನಲಾಗಿದೆ.
ಭಾರತೀಯ ಜೀವಿ ವಿಮಾ ನಿಗಮವು ರಿಲಯನ್ಸ್ ಕ್ಯಾಪಿಟಲ್ ಸಾಲದ ಖಾತೆಗಳನ್ನು ಮಾರಾಟ ನಿರ್ಧರಿಸಿದರೂ ಸಹ ಭಾರೀ ನಷ್ಟ ಸಂಭವಿಸುವ ಸಾಧ್ಯತೆಗಳಿವೆ. ಎಸಿಆರ್ಇ ಎಸ್ಎಸ್ಜಿ ಸಾಲದ ಖಾತೆಯನ್ನು ಖರೀದಿಸುವ ಸಾಧ್ಯತೆ ಇದೆ. ಎಸಿಆರ್ಇ ಎಸ್ಎಸ್ಜಿಗೆ ಶೇಕಡ 73ರ ರಿಯಾಯಿತಿ ದರದಲ್ಲಿ ರಿಲಯನ್ಸ್ ಕ್ಯಾಪಿಟಲ್ ಸಾಲದ ಖಾತೆ ಮಾರಾಟ ಮಾಡಲು ಎಲ್ಐಸಿ ಮುಂದಾಗಿದೆ. ಇದರಿಂದಾಗಿ ದೊಡ್ಡ ಮೊತ್ತವನ್ನು ಎಲ್ಐಸಿ ಕಳೆದುಕೊಳ್ಳಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಸ್ವಿಸ್ ಚಾಲೆಂಜ್ ಬಿಡ್ಡಿಂಗ್ ವಿಧಾನವನ್ನು ಬಳಸಿಕೊಂಡು ಸಾಲದ ಖಾತೆಗಳನ್ನು ಮಾರಾಟ ಸಿದ್ಧತೆಗಳು ಆರಂಭವಾಗಿದೆ ಎನ್ನಲಾಗಿದೆ. ಈ ವಿಧಾನವನ್ನು ಅನುಸರಿಸಿದ್ದಲ್ಲಿ, ಸಾಲದ ಖಾತೆಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾಗುತ್ತದೆ. ಯಾರು ಬೇಕಾದರೂ ಬಿಡ್ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ವಿಧಾನದಲ್ಲಿ, ಮೊತ್ತ ಮೊದಲು ಬಿಡ್ ಸಲ್ಲಿಸಿದ ವ್ಯಕ್ತಿಯಿಂದ ಹೆಚ್ಚು ಮೊತ್ತಕ್ಕೆ ಬೇರೆ ಯಾರಾದರೂ ಬಿಡ್ ಸಲ್ಲಿಸಿದಲ್ಲಿ ಇಷ್ಟೇ ಮೊತ್ತದ ಬಿಡ್ ಸಲ್ಲಿಸಲು ಮೊದಲ ಗುತ್ತಿಗೆದಾರನಿಗೆ ಅವಕಾಶ ಒದಗಿಸಲಾಗುತ್ತದೆ. ಆದರೆ, ರಿಲಯನ್ಸ್ ಕ್ಯಾಪಿಟಲ್ ವಿಚಾರಕ್ಕೆ ಬಂದಾಗ ಬಿಡ್ ಸಲ್ಲಿಕೆಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ.
ರಿಲಯನ್ಸ್ ಕ್ಯಾಪಿಟಲ್ ಒಡೆತನದಲ್ಲಿ ಸುಮಾರು 20 ಹಣಕಾಸು ಸೇವಾ ಕಂಪನಿಗಳಿವೆ. ಇದರಲ್ಲಿ ಸೆಕ್ಯುರಿಟೀಸ್ ಬ್ರೋಕಿಂಗ್, ವಿಮಾ ಕಂಪನಿಗಳೂ ಸೇರಿವೆ. 2021ರ ನವೆಂಬರ್ 30ರಂದು ಆರ್ಬಿಐ ಭಾರೀ ಸಾಲದ ಸುಳಿಯಲ್ಲಿ ಸಿಲುಕಿರುವ ರಿಲಯನ್ಸ್ ಕ್ಯಾಪಿಟಲ್ ಆಡಳಿತ ಮಂಡಳಿಯನ್ನು ವಿಸರ್ಜಿಸಿತ್ತು.