ಅದಾನಿ ಬಂದರು ವಿವಾದ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ-ಪ್ರಕರಣ ದಾಖಲು

ತಿರುವನಂತಪುರಂ: ಅದಾನಿ ಸಂಸ್ಥೆಯ ಬಂದರು ನಿರ್ಮಾಣ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸೆಗೆ ತಿರುಗಿದ್ದು, ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ 30 ಪೊಲೀಸರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ.

ಶತಕೋಟ್ಯಾಧಿಪತಿ ಗೌತಮ್ ಅದಾನಿ ಯೋಜಿತ ವಿಝಿಂಜಮ್ ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತವಾಡಿದೆ. ಬಂದರು ಪ್ರವೇಶದ್ವಾರದ ಮುಂದೆ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಬೆನ್ನಲ್ಲೇ, ಪ್ರತಿಭಟನಾಕಾರರು ವಿಝಿಂಜಮ್ ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಹಿಂಸಾಚಾರ ಸಂಭವಿಸಿದೆ. ಘಟನೆಯಲ್ಲಿ ಪೊಲೀಸರು ಗೊಯಗೊಂಡಿದ್ದಾರೆ. ಹತ್ತಿರದ ಮೀನುಗಾರಿಕಾ ಗ್ರಾಮಗಳಿಂದ ಪುರುಷರು ಮತ್ತು ಮಹಿಳೆಯರು ಈ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

2015 ರಿಂದ ನಿರ್ಮಾಣ ಹಂತದಲ್ಲಿರುವ ₹7,500 ಕೋಟಿ  ಬಂದರು ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಿದ್ದ ಸ್ಥಳೀಯ ಹಿಂದೂ ಗುಂಪುಗಳೊಂದಿಗೆ ಮೀನುಗಾರರು ವಾಗ್ವಾದಕ್ಕಿಳಿದು, ಪ್ರತಿಭಟನೆ ಹಿಂಸಾಚಾರದ ರೂಪ ತಳೆದಿತ್ತು.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಮೂರು ಸುತ್ತಿನ ಅಶ್ರುವಾಯಿ ಸಿಡಿಸಿದ್ದಾರೆ. ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಿಂದಲೂ ಪೊಲೀಸ್‌ ಪಡೆಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಪಟ್ಟಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿದೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ದಿನಗಳ ಕಾಲ ಮದ್ಯದಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಡಿಸೆಂಬರ್ 2015ರಿಂದ ಬಂದರಿನ ನಿರ್ಮಾಣವು ಕರಾವಳಿಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತಿದ್ದು, ಮೀನುಗಾರರ ಬದು ಅತಂತ್ರಕ್ಕೆ ಒಳಗಾಗಿವೆ. ಇದರಿಂದ ಸುಮಾರು 56,000 ಮೀನುಗಾರ ಸಮುದಾಯದ ಜೀವನೋಪಾಯವನ್ನು ನಾಶಪಡಿಸುವ ಸಾಧ್ಯತೆಯಿದೆ. ಸಮುದ್ರದ ಪರಿಸರ ವ್ಯವಸ್ಥೆಯ ಮೇಲೆ ಬಂದರಿನ ಅಭಿವೃದ್ಧಿಯ ಪ್ರಭಾವದ ಬಗ್ಗೆ ನಿರ್ಮಾಣ ಮತ್ತು ಸ್ವತಂತ್ರ ಅಧ್ಯಯನಗಳನ್ನು ಸ್ಥಗಿತಗೊಳಿಸಲು ಸರ್ಕಾರವು ಆದೇಶಿಸಬೇಕೆಂದು ಪ್ರತಿಭಟನಾಕಾರರ ಆಗ್ರಹವಾಗಿದೆ.

ಅದಾನಿ ಸಮೂಹ ಸಂಸ್ಥೆ ಬಂದರು ಯೋಜನೆ ವಿರುದ್ಧ ಕಳೆದ ಕೆಲವು ತಿಂಗಳಿನಿಂದ ಪ್ರತಿಭಟನೆಗಳು ನಡೆಯುತ್ತಿವೆ. ಬಹುತೇಕ ಕರಾವಳಿ ಗ್ರಾಮಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ಪ್ರತಿಭಟನಾಕಾರರು, ಕರಾವಳಿ ಪರಿಸರ ವ್ಯವಸ್ಥೆಗೆ ಧಕ್ಕೆ ತರುವ ಈ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಪ್ರತಿಭಟನಾಕಾರರ ವಿರುದ್ಧ ಕಠಿಣ ನಿಲುವು ತಳೆದಿರುವ ಸರ್ಕಾರ, ಪ್ರತಿಭಟನೆಯ ನೇತೃತ್ವ ವಹಿಸಿರುವ ಮೆಟ್ರೋಪಾಲಿಟನ್ ಆರ್ಚ್‍ ಬಿಷಪ್ ಥಾಮಸ್ ಜೆ.ನೆಟ್ಟೊ ಸೇರಿದಂತೆ ಲ್ಯಾಟೀನ್ ಚರ್ಚ್ ಧರ್ಮಗುರುಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಚರ್ಚ್ ಮುಖಂಡರು ಮತ್ತು ಪೊಲೀಸರ ನಡುವೆ ಮಾತುಕತೆ ನಡೆದಿದೆ. ಬಂಧಿತರಲ್ಲಿ ನಾಲ್ವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ, ಶೆಲ್ಟನ್ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ನೆಟ್ಟೋ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *