ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮೈಸೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ. ಈ ಸ್ಮಾರಕವನ್ನು ಡಿಸೆಂಬರ್ ತಿಂಗಳಾಂತ್ಯದೊಳಗೆ ಅದ್ಧೂರಿ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕನ್ನಡ ಚಿತ್ರರಂಗದ ಜನಪ್ರಿಯ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೊಸ ಮನೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ವಿಷ್ಣುವರ್ಧನ್‌ ಸ್ಮಾರಕ ವಿಚಾರವನ್ನು ಪ್ರಸ್ತಾಪಿಸಿದರು.

ʻಸಾಹಸಸಿಂಹ ನಮ್ಮ ಅಚ್ಚುಮೆಚ್ಚಿನ ನಟ. ವಿಷ್ಣುವರ್ಧನ್ ಮನೆ ತುಂಬಾ ಸುಂದರವಾಗಿದೆ. ವಿಷ್ಣು ನಮ್ಮೆಲ್ಲರಿಗೂ ಮಾದರಿ ವ್ಯಕ್ತಿತ್ವ. ವಿಷ್ಣು ಘನತೆಯನ್ನ ಎತ್ತಿಹಿಡಿಯೋ ಮ್ಯೂಸಿಯಂ ಮಾಡ್ತೀವಿ’ ಎಂದರು.

ವಿಷ್ಣುವರ್ಧನ್ ಅವರಿದ್ದ ಮನೆಯನ್ನು ಭಾರತಿ ವಿಷ್ಣುವರ್ಧನ್‌ ಇನ್ನಷ್ಟು ಚಂದ ಮಾಡಿದ್ದಾರೆ. ನವೀಕರಣಗೊಂಡಿರುವ ಮನೆಯ ಹಿಂದೆ ಭಾರತಿ ವಿಷ್ಣುವರ್ಧನ್ ಅವರ ಪ್ರಯತ್ನ ಹಾಗೂ ಶ್ರಮ ಎದ್ದುಕಾಣುತ್ತಿದೆ. ವಿಷ್ಣುವರ್ಧನ್ ಅವರ ತ್ಯಾಗವನ್ನು ಈ ಮನೆಯಲ್ಲಿ ಅಳವಡಿಸಿದ್ದಾರೆ ಎನ್ನುವುದು ನನ್ನ ಭಾವನೆ. ಹೀಗಾಗಿ, ಅವರಿಗೆ ಶುಭ ಕೋರಲು ಇಲ್ಲಿಗೆ ಬಂದಿದ್ದೇನೆ ಎಂದರು.

ಮೈಸೂರು ಹೊರವಲಯದ ಎಚ್ ಡಿ ಕೋಟೆ ರಸ್ತೆಯ ಉದ್ಬೂರು ಬಳಿ ಹಾಲಾಳು ಗ್ರಾಮದಲ್ಲಿ ಸರ್ಕಾರದ 5 ಎಕರೆ ಪ್ರದೇಶದಲ್ಲಿ 11 ಕೋಟಿ ರೂಪಾಯಿ ವೆಚ್ಚದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗುತ್ತಿದೆ. ಎರಡು ವರ್ಷಗಳ ಹಿಂದೆ ಇದರ ಶಂಕುಸ್ಥಾಪನೆ ನೆರವೇರಿತು. ವಿಷ್ಣುವರ್ಧನ್ ಪ್ರತಿಮೆ, ಅವರ ಛಾಯಾಚಿತ್ರಗಳುಳ್ಳ ಗ್ಯಾಲರಿ, ರಂಗತರಬೇತಿ ಶಿಬಿರಗಳ ಆಯೋಜನೆಗೆ ಸ್ಥಳಾವಕಾಶ ಹೀಗೆ ಹಲವು ಈ ಸ್ಮಾರಕದಲ್ಲಿರುತ್ತದೆ.

ಡಾ. ವಿಷ್ಣುವರ್ಧನ್‌ ಅವರು ಬಾಳಿ ಬದುಕಿದ ಜಯನಗರದ ಮನೆಯ ಸ್ಥಳದಲ್ಲಿಯೇ ಮರುವಿನ್ಯಾಸಗೊಂಡು ಇಂದು (ನವೆಂಬರ್ 27) ಗೃಹ ಪ್ರವೇಶ ಕಂಡಿದೆ. ನಟಿ ಭಾರತಿ ವಿಷ್ಣುವರ್ಧನ್, ಮಗಳು-ಅಳಿಯ ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಸಮಾರಂಭ ನಡೆಸಿಕೊಟ್ಟರು. ಗೃಹ ಪ್ರವೇಶದ ಸಮಾರಂಭಕ್ಕೆ ಸಂಸದೆ ಸುಮಲತಾ ಅಂಬರೀಶ್ ಸೇರಿದಂತೆ ಸಿನಿಮಾ ರಂಗದ ಗಣ್ಯರು, ಅಭಿಮಾನಿಗಳು ಸೇರಿದಂತೆ ಅನೇಕರು ಹಾಜರಿದ್ದರು. ಬೆಳಗ್ಗೆಯಿಂದಲೇ ನಾನಾ ಧಾರ್ಮಿಕ ಕಾರ್ಯಗಳು ನಡೆದಿವೆ.

ನಟ ಜಗ್ಗೇಶ್ ಮಾತನಾಡಿ, ವಿಷ್ಣು ಮನೆಗೆ ಒಂದು ಸುಂದರವಾದ ಕಥೆಯಿದೆ. ವಿಷ್ಣು ಅವರಿಗೆ ಮೊದಲು ಯಾರೋ ಭಯ ಹುಟ್ಟಿಸಿದ್ದರು. ಜಯನಗರದ ಮನೆ ವಿಷ್ಣು ಸರ್ ಗೆ ಪ್ರಿಯವಾದ ಜಾಗ. ಮನೆಯಲ್ಲಿ ಒಂದೊಂದು ಜಾಗವು ಕಾಡುತ್ತೆ. ಭಾವನೆಗಳನ್ನ ಕೆದಕುತ್ತೆ. ಇದು ಮನೆಯಲ್ಲ, ನಮ್ಮ ಪಾಲಿಗೆ ದೇವಸ್ಥಾನ. ಅನಿರುದ್ದ್ ವಿಷ್ಣುವರ್ಧನ್ ಮಗನ ಸಮಾನ. ಅನಿರುದ್ದ್ ಪರವಾಗಿ ಈಗಲೂ ನಿಲ್ಲಬೇಕು ಎಂದರು.

Donate Janashakthi Media

Leave a Reply

Your email address will not be published. Required fields are marked *